ಪದ್ಯ ೫: ರಾಕ್ಷಸ ಪುತ್ರರು ಯಾವ ವರವನ್ನು ಕೇಳಿದರು?

ರಚಿಸುವೆವು ಪುರಮೂರನಗ್ಗದ
ಖಚರ ಕಿನ್ನರ ಸಿದ್ಧ ನಿರ್ಜರ
ನಿಚಯವೆಮಗೋಲೈಸಿ ಹೋಗಲಿ ಹಲವು ಮಾತೇನು
ಉಚಿತದಲಿ ನಿಮ್ಮಡಿಗಳನು ಪರಿ
ರಚಿಸಲಾವೋಲೈಸುವೆವು ವರ
ವಚನ ನಿಮ್ಮದು ಕರುಣಿಸುವುದಮರತ್ವವನು ನಮಗೆ (ಕರ್ಣ ಪರ್ವ, ೬ ಸಂಧಿ, ೫ ಪದ್ಯ)

ತಾತ್ಪರ್ಯ:
ಆ ಮೂವರು ರಾಕ್ಷಸ ಪುತ್ರರು ನಾವು ಮೂರು ಊರುಗಳನ್ನು ರಚಿಸುತ್ತೇವೆ, ದೇವತೆಗಳು, ಕಿನ್ನರರು, ಸಿದ್ಧರು, ಮೊದಲಾದವರೆಲ್ಲರೂ ನಮಗೆ ಸೇವಕರಾಗಿರಬೇಕು, ಕೇಳಿದುದನ್ನು ಕೊಡುತ್ತೇವೆ ಎಂದಿರಿ, ಅದಕ್ಕಾಗಿ ಕೇಳುತ್ತಿದ್ದೇವೆ, ನಮಗೆ ಮರಣವೇ ಬರಬಾರದು ಎಂದು ಕೇಳಿದರು.

ಅರ್ಥ:
ರಚಿಸು: ನಿರ್ಮಿಸು; ಪುರ: ಊರು; ಮೂರು: ತ್ರಿ, ತ್ರಯ; ಅಗ್ಗ: ಶ್ರೇಷ್ಠ; ಖಚರ: ಗಂಧರ್ವ; ಕಿನ್ನರ: ದೇವತೆಗಳ ಒಂದುವರ್ಗ, ಕಿಂಪುರುಷ; ಸಿದ್ಧ:ದೇವತೆಗಳಲ್ಲಿ ಒಂದು ಪಂಗಡ; ನಿರ್ಜರ: ದೇವತೆಗಳು; ನಿಚಯ: ಗುಂಪು; ಓಲೈಸು: ಉಪಚರಿಸು; ಹಲವು: ಬಹಳ; ಮಾತು: ನುಡಿ; ಉಚಿತ: ಸರಿಯಾದ; ನಿಮ್ಮಡಿ: ನಿಮ್ಮ ಸೇವೆ; ಪರಿ: ರೀತಿ; ವರ: ಶ್ರೇಷ್ಠ; ವಚನ: ನುಡಿ; ಅಮರ: ಮರಣವಿಲ್ಲದ;

ಪದವಿಂಗಡಣೆ:
ರಚಿಸುವೆವು +ಪುರ+ಮೂರನ್+ಅಗ್ಗದ
ಖಚರ+ ಕಿನ್ನರ +ಸಿದ್ಧ +ನಿರ್ಜರ
ನಿಚಯವ್+ಎಮಗ್+ಓಲೈಸಿ +ಹೋಗಲಿ +ಹಲವು +ಮಾತೇನು
ಉಚಿತದಲಿ +ನಿಮ್ಮಡಿಗಳನು +ಪರಿ
ರಚಿಸಲಾವ್+ಓಲೈಸುವೆವು +ವರ
ವಚನ +ನಿಮ್ಮದು +ಕರುಣಿಸುವುದ್+ಅಮರತ್ವವನು +ನಮಗೆ

ಅಚ್ಚರಿ:
(೧) ರಚಿಸು – ೧, ೫ ಸಾಲಿನ ಮೊದಲ ಪದ
(೨) ದೇವತೆಗಳ ಗುಂಪುಗಳು: ಖಚರ, ಕಿನ್ನರ, ಸಿದ್ಧ
(೩) ಅಗ್ಗ, ವರ – ಸಾಮ್ಯಾರ್ಥಪದಗಳು

ಪದ್ಯ ೨೮: ಕೃಷ್ಣನ ರೋಮರೋಮಗಳಲ್ಲಿ ಯಾರು ಕಂಡರು?

ಸುರರು ಖಚರರು ಕಿನ್ನರರು ಕಿಂ
ಪುರುಷರನುಪಮ ಸಿದ್ಧ ವಿದ್ಯಾ
ಧರರು ವಸುಗಳು ಮನುಗಳಾದಿತ್ಯರು ಭುಜಂಗಮಯ
ಗರುಡ ಗಂಧರ್ವಾಶ್ವಿನಿ ದೇ
ವರುಗಳಖಿಳಾಪ್ಸರಿಯರೆಸೆದರು
ಪರಮ ಪುರುಷನ ರೋಮರೋಮದ ಕುಳಿಯ ಚೌಕದೊಳು (ಉದ್ಯೋಗ ಪರ್ವ, ೧೦ ಸಂಧಿ, ೨೮ ಪದ್ಯ)

ತಾತ್ಪರ್ಯ:
ದೇವತೆಗಳು, ಕಿನ್ನರರು, ಕಿಂಪುರುಷರು, ಸಿದ್ಧರು, ವಿದ್ಯಾಧರರು, ವಸುಗಳು, ಮನುಗಳು, ಆದಿತ್ಯರು, ಉರಗರು, ಗರುಡ, ಗಂಧರ್ವರು, ಅಶ್ವಿನೀ ದೇವತೆಗಳು, ಅಪ್ಸರೆಯರು, ಇವರೆಲ್ಲರೂ ಕೃಷ್ಣನ ಆ ವಿಶ್ವರೂಪದ ರೋಮರೋಮಗಳಲ್ಲಿ ತೋರಿದರು.

ಅರ್ಥ:
ಸುರರು: ದೇವತೆಗಳು; ಖಚರ: ಗಂಧರ್ವ; ಕಿನ್ನರ:ದೇವತೆಗಳ ಒಂದುವರ್ಗ, ಕುಬೇರನ ಪ್ರಜೆ; ಕಿಂಪುರುಷ: ಕುದುರೆಯ ಮುಖ ಮತ್ತು ಮನುಷ್ಯನ ಶರೀರವನ್ನುಳ್ಳ ಒಂದು ದೇವತೆ; ಸಿದ್ಧ: ಸಾಧಿಸಿದವನು; ವಿದ್ಯಾಧರ: ದೇವತೆಗಳ ವರ್ಗ; ವಸು: ದೇವತೆಗಳ ಒಂದು ವರ್ಗ, ೮ರ ಸಂಕೇತ;
ಮನು: ಮನುಷ್ಯ ಕುಲದ ಮೂಲಪುರುಷ, ೧೪ರ ಸಂಕೇತ; ಆದಿತ್ಯ: ಸೂರ್ಯ; ಭುಜಂಗ: ಸರ್ಪ; ಗರುಡ: ವಿಷ್ಣುವಿನ ವಾಹನ, ಪಕ್ಷಿ, ಖಗ; ಗಂಧರ: ಗಂಧರ್ವರು; ಅಶ್ವಿನಿ: ದೇವತೆಗಳ ವರ್ಗ; ಅಖಿಳ: ಎಲ್ಲಾ; ಅಪ್ಸರೆ: ದೇವಕನ್ಯೆ; ಎಸೆ: ತೋರು; ಪರಮ: ಶ್ರೇಷ್ಠ; ಪುರುಷ: ಮನುಷ್ಯ; ರೋಮ: ಕೂದಲು; ಕುಳಿ:ಹಳ್ಳ; ಚೌಕ: ಕ್ರಮಬದ್ಧವಾದ, ಮೇರೆ; ಅನುಪಮ:ಉತ್ಕೃಷ್ಟವಾದುದು;

ಪದವಿಂಗಡಣೆ:
ಸುರರು +ಖಚರರು +ಕಿನ್ನರರು+ ಕಿಂ
ಪುರುಷರ್+ಅನುಪಮ +ಸಿದ್ಧ +ವಿದ್ಯಾ
ಧರರು +ವಸುಗಳು +ಮನುಗಳ್+ಆದಿತ್ಯರು +ಭುಜಂಗಮಯ
ಗರುಡ+ ಗಂಧರ್ವ+ಅಶ್ವಿನಿ+ ದೇ
ವರುಗಳ್+ಅಖಿಳ+ಅಪ್ಸರಿಯರ್+ಎಸೆದರು
ಪರಮ +ಪುರುಷನ +ರೋಮರೋಮದ +ಕುಳಿಯ +ಚೌಕದೊಳು

ಅಚ್ಚರಿ:
(೧) ದೇವತೆಗಳ ವರ್ಗಗಳ ವಿವರ – ಸುರ, ಖಚರ, ಕಿನ್ನರ,ಕಿಂಪುರುಷ, ಸಿದ್ಧ, ವಿದ್ಯಾಧರ, ವಸು, ಮನು, ಆದಿತ್ಯ, ಭುಜಂಗ, ಗರುಡ, ಗಂಧರ್ವ, ಅಶ್ವಿನಿ ದೇವರು, ಅಪ್ಸರೆ

ಪದ್ಯ ೨೪: ದ್ರೌಪದಿಯ ಸ್ವಯಂವರವನ್ನು ಆಗಸದಿಂದ ಯಾರು ನೋಡುತ್ತಿದ್ದರು?

ಅರಸ ಕೇಳೈ ಮೇಲೆ ವಿದ್ಯಾ
ಧರ ಮಹೋರಗ ಯಕ್ಷರಾಕ್ಷಸ
ಗರುಡ ಕಿನ್ನರ ಸಿದ್ಧ ವಸುಗಂಧರ್ವ ಭೂತಗಣ
ವರಮರುದ್ಗಣ ರುದ್ರ ಮನು ಭಾ
ಸ್ಕರ ಸುಧಾಕರ ತಾರಕಾಗ್ರಹ
ಸುರಮುನಿಪ ದಿಕ್ಪಾಲತತಿ ನೆರೆದುದು ವಿಮಾನದಲಿ (ಆದಿ ಪರ್ವ, ೧೨ ಸಂಧಿ, ೨೪ ಪದ್ಯ)

ತಾತ್ಪರ್ಯ:
ಜನಮೇಜಯ ಕೇಳು, ಆ ದ್ರೌಪದಿಯ ಸ್ವಯಂವರ ಭೂಮಿಜನಗಳನ್ನು ಆಕರ್ಷಿಸಿದಂತೆ ಆಗಸದಲ್ಲಿ ದೇವತೆಗಳನ್ನು ಆಕರ್ಷಿಸಿತ್ತು. ಆಕಾಶದಲ್ಲಿ, ವಿದ್ಯಾಧರರು, ಹಾವುಗಳು, ಯಕ್ಷರು, ರಾಕ್ಷಸರು, ಗರುಡರು, ಕಿನ್ನರರು, ಸಿದ್ಧರು, ವಸುಗಳು, ಗಂಧರ್ವರು, ಭೂತಗಳು, ಮರುದ್ಗಣ, ರುದ್ರರು, ಮನುಗಳು, ಸೂರ್ಯ, ಚಂದ್ರ, ನಕ್ಷತ್ರ, ಗ್ರಹಗಳು, ದೇವರ್ಷಿಗಳು, ದಿಕ್ಪಾಲಕರು, ಎಲ್ಲರೂ ತಮ್ಮ ವಿಮಾನಗಳಲ್ಲಿ ಕುಳಿತು ನೋಡುತ್ತಿದ್ದರು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಮೇಲೆ:ತುದಿ, ಅಗ್ರಭಾಗ; ವಿದ್ಯಾಧರ: ದೇವತೆಗಳ ಒಂದು ವರ್ಗ; ಮಹ: ದೊಡ್ಡ; ಉರಗ: ಹಾವು; ಯಕ್ಷ: ದೇವತೆಗಳ ಒಂದು ವರ್ಗ; ರಾಕ್ಷಸ: ರಕ್ಕಸ, ದನುಜ, ದೈತ್ಯ; ಗರುಡ: ವಿಷ್ಣುವಿನ ವಾಹನ; ಕಿನ್ನರ: ಕುದುರೆಯ ತಲೆ ಮನುಷ್ಯನ ಮುಖ ವಿರುವ ದೇವತೆ; ಸಿದ್ಧ: ಸಾಧಿಸಿದವನು, ದೇವತೆಗಳ ಒಂದು ವರ್ಗ; ವಸು: ದೇವತೆಗಳ ಒಂದು ವರ್ಗ;ಭೂತ: ಪಿಶಾಚಿ; ಗಣ: ಗುಂಪು; ಗಂಧರ್ವ: ದೇವಲೋಕದ ಸಂಗೀತಗಾರ; ಮರುದ್ಗಣ: ದೇವತೆಗಳ, ವಾಯುಗಳ ಸಮೂಹ; ರುದ್ರ: ಭಯಂಕರವಾದ, ಹನ್ನೊಂದು ಗಣದೇವತೆಗಳು; ಮನು: ಬ್ರಹ್ಮನ ಮಾನಸಪುತ್ರರಲ್ಲಿ ಒಬ್ಬ; ಭಾಸ್ಕರ: ಸೂರ್ಯ; ಸುಧಾಕರ: ಚಂದ್ರ; ತಾರಕ: ತಾರೆ, ನಕ್ಷತ್ರ; ಗ್ರಹ: ಹಿಡಿಯುವುದು, ಹಿಡಿತ, ನವಗ್ರಹಗಳನ್ನು ಸೂಚಿಸುವ ಪದ; ಸುರ: ದೇವತೆಗಳು; ಸುರಮುನಿ: ದೇವರ್ಷಿಗಳು; ದಿಕ್ಕು: ದಿಶೆ, ಎಂಟು ಎಂಬ ಸಂದೇಶ; ಪಾಲಕ: ಅಧಿಪತಿ; ನೆರೆದು: ಸೇರು; ವಿಮಾನ: ಹಾರಾಡುವ ಯಂತ್ರ;

ಪದವಿಂಗಡಣೆ:
ಅರಸ +ಕೇಳೈ +ಮೇಲೆ +ವಿದ್ಯಾ
ಧರ +ಮಹೋರಗ+ ಯಕ್ಷ+ರಾಕ್ಷಸ
ಗರುಡ+ ಕಿನ್ನರ +ಸಿದ್ಧ +ವಸು+ಗಂಧರ್ವ +ಭೂತಗಣ
ವರಮರುದ್ಗಣ +ರುದ್ರ+ ಮನು +ಭಾ
ಸ್ಕರ+ ಸುಧಾಕರ+ ತಾರಕಾ+ಗ್ರಹ
ಸುರ+ಮುನಿಪ+ ದಿಕ್ಪಾಲತತಿ +ನೆರೆದುದು +ವಿಮಾನದಲಿ

ಅಚ್ಚರಿ:
(೧) ಎಲ್ಲಾ ರೀತಿಯ ದೇವತೆಗಳ ಹೆಸರನ್ನು ಉಲ್ಲೇಖಿಸಿರುವುದು
(೨) ವಿಮಾನದ ಕಲ್ಪನೆ, ಈ ಹಿಂದೆ ಪದ್ಯ ೧೭ ರಲ್ಲಿ ರೊಬೋಟ್ ಕಲ್ಪನೆ ಇತ್ತು (ಯಂತ್ರಮಯ ಪುತ್ಥಳಿ)