ಪದ್ಯ ೧೮: ಧೃತರಾಷ್ಟ್ರನ ಮನಸ್ಸು ಹೇಗೆ ಬದಲಾಯಿತು?

ಸೊಗಸು ತಳಿತುದು ತರಳಮನ ತಳ
ಮಗುಚಿದಂತಾಯ್ತವರೊಲವು ಕಾ
ಡಿಗೆಯ ಕೆಸರೊಳಗದ್ದ ನೀಲದ ಸರಿಗೆ ಸರಿಯಾಯ್ತು
ಮುಗುಳುಗಂಗಳ ಬಾಷ್ಪ ಬಿಂದುವ
ನುಗುರು ಕೊನೆಯಲಿ ಮಿಡಿದು ಕರ್ಣನ
ಹೊಗಳಿದನು ಬಳಿಕೇನು ಸಿಂಗಿಯಲುಂಟೆ ಸವಿಯೆಂದ (ಅರಣ್ಯ ಪರ್ವ, ೧೮ ಸಂಧಿ, ೧೮ ಪದ್ಯ)

ತಾತ್ಪರ್ಯ:
ಶಕುನಿ ಕರ್ಣರ ಮಾತುಗಳನ್ನು ಕೇಳಿ ಧೃತರಾಶ್ಟ್ರನ ಮನಸ್ಸಿನಲ್ಲಿದ್ದ ಕರುಣೆಯು ಪಾತ್ರೆಯನ್ನು ಬೋರಲು ಹಾಕಿದಾಗ ಎಲ್ಲವೂ ಹೊರಚೆಲ್ಲುವಂತೆ, ಅವನ ಒಲವು, ಪ್ರೀತಿಯು ಬಿದ್ದು ಹೋಯಿತು. ಪಾಂಡವರ ಮೇಲಿನ ಪ್ರೀತಿ ಕಾಡಿಗೆಯಲ್ಲಿ ಕಲಸಿದ ನೀಲಿಯ ನೂಲಿನಂತೆ ಕಪ್ಪಾಯಿತು. ಅರೆ ತೆರೆದ ಕಣ್ಣುಗಳಲ್ಲಿದ್ದ ಕಣ್ಣೀರನ್ನು ಬೆರಳ ತುದಿಯಿಂದ ಒರೆಸಿ, ಕರ್ಣನನ್ನು ನೀನು ಹೇಳುವುದೇ ಸರಿ. ಭಯಂಕರವಾದ ವಿಷವು ರುಚಿಯಾಗಬಹುದೇ ಎಂದು ಹೊಗಳಿದನು.

ಅರ್ಥ:
ಸೊಗಸು: ಅಂದ; ತಳಿತ: ಚಿಗುರಿದ; ತರಳ: ಚಂಚಲವಾದ; ತಳ: ಕೆಳಭಾಗ, ನೆಲ; ಮಗುಚು: ಅಡಿಮೇಲು ಮಾಡು; ಒಲವು: ಪ್ರೀತಿ; ಕಾಡಿಗೆ: ಅಂಜನ, ಕಪ್ಪು; ಕೆಸರು: ರಾಡಿ, ಪಂಕ; ಅದ್ದು: ಮುಳುಗಿಸು; ಸರಿಗೆ: ನೂಲು; ನೀಳ: ವಿಸ್ತಾರ, ಹರಹು; ಸರಿ: ಸಮಾನ; ಮುಗುಳು: ಮೊಗ್ಗು, ಚಿಗುರು; ಕಂಗಳು: ನಯನ; ಬಾಷ್ಪ: ನೀರು; ಬಿಂದು: ಹನಿ, ತೊಟ್ಟು; ಉಗುರು: ನಖ; ಕೊನೆ: ತುದಿ; ಮಿಡಿ: ತವಕಿಸು; ಹೊಗಳು: ಪ್ರಶಂಶಿಸು; ಬಳಿಕ: ನಂತರ; ಸಿಂಗಿ: ಒಂದು ಬಗೆಯ ಘೋರ ವಿಷ; ಸವಿ: ರುಚಿ, ಸ್ವಾದ;

ಪದವಿಂಗಡಣೆ:
ಸೊಗಸು +ತಳಿತುದು +ತರಳಮನ+ ತಳ
ಮಗುಚಿದಂತಾಯ್ತ್+ಅವರ್+ಒಲವು +ಕಾ
ಡಿಗೆಯ +ಕೆಸರೊಳಗ್+ಅದ್ದ+ ನೀಲದ +ಸರಿಗೆ+ ಸರಿಯಾಯ್ತು
ಮುಗುಳು+ಕಂಗಳ +ಬಾಷ್ಪ +ಬಿಂದುವನ್
ಉಗುರು +ಕೊನೆಯಲಿ +ಮಿಡಿದು +ಕರ್ಣನ
ಹೊಗಳಿದನು +ಬಳಿಕೇನು+ ಸಿಂಗಿಯಲುಂಟೆ +ಸವಿಯೆಂದ

ಅಚ್ಚರಿ:
(೧) ಉಪಮಾನಗಳ ಪ್ರಯೋಗ – ಸಿಂಗಿಯಲುಂಟೆ ಸವಿ; ತರಳಮನ ತಳ
ಮಗುಚಿದಂತಾಯ್ತವರೊಲವು; ಕಾಡಿಗೆಯ ಕೆಸರೊಳಗದ್ದ ನೀಲದ ಸರಿಗೆ ಸರಿಯಾಯ್ತು
(೨) ಪಾಂಡವರ ಮೇಲಿನ ಪ್ರೀತಿ ಎಳ್ಳಷ್ಟು ಇಲ್ಲವೆಂದು ತೋರಿಸುವ ಪರಿ – ಮುಗುಳುಗಂಗಳ ಬಾಷ್ಪ ಬಿಂದುವ ನುಗುರು ಕೊನೆಯಲಿ ಮಿಡಿದು
(೩) ತ ಕಾರದ ತ್ರಿವಳಿ ಪದ – ತಳಿತುದು ತರಳಮನ ತಳಮಗುಚಿದಂತಾಯ್ತ
(೪) ಅಲಂಕಾರಗಳಿಂದ ತುಂಬಿರುವ ಸೊಗಸಾದ ರಚನೆ

ಪದ್ಯ ೬೨: ಕುಂತಿ ಹೇಗೆ ಮರುಗಿದಳು?

ವನದೊಳತ್ಯಾಯಾಸ ನೀವೆಂ
ತನುಭವಿಸುವಿರಿ ಪಾಪಿ ದುರ್ಯೋ
ಧನನ ದುರ್ಜನ ಸಂಗ ನಿಮಗಿದು ಸಿಂಗಿಯಾದುದಲೆ
ವನಿತೆ ನಿಮ್ಮೊಡನೆಂತು ತೊಳಲುವ
ಳನವರತ ಗಿರಿ ಗುಹೆಯ ಘಟ್ಟವ
ನೆನುತ ನುಡಿದಳು ಕುಟಿಲ ಗರ್ಭದ ಗುಣದ ಬೆಳವಿಗೆಯ (ಸಭಾ ಪರ್ವ, ೧೭ ಸಂಧಿ, ೬೨ ಪದ್ಯ)

ತಾತ್ಪರ್ಯ:
ಕುಂತಿಯು ತನ್ನ ಮಕ್ಕಳ ಸ್ಥಿತಿಯನ್ನು ಕಂಡು, ಪಾಪಿಯಾದ ದುರ್ಯೋಧನನ ಸಂಗವು ನಿಮಗೆ ವಿಷಪ್ರಾಯವಾಯಿತು, ನನುಗುನ್ನಿಯಂತೆ ಮೈಯುರಿಗೆ ಕಾರಣವಯಿತು. ನೀವು ಕಾಡಿನಲಿ ಹೆಚ್ಚಿನ ಆಯಾಸವನ್ನು ಹೇಗೆ ಅನುಭವಿಸುವಿರಿ? ದ್ರೌಪದಿಯು ಗುಡ್ಡ, ಗುಹೆ, ಘಟ್ಟಗಳಲ್ಲಿ ನಿಮ್ಮೊಡನೆ ಯಾವಾಗಲೂ ಹೇಗೆ ಅಲೆದಾಡುವಳು? ದುರ್ಜನರ ಕಪಟ ನಡತೆ, ಸಂಗದೋಷವು ನಿಮ್ಮ ಈ ಕಷ್ಟಕ್ಕೆ ಕಾರಣವಾಯಿತಲಾ ಎಂದು ಮರುಗಿದಳು.

ಅರ್ಥ:
ವನ: ಕಾಡು; ಅತಿ: ಬಹಳ; ಆಯಾಸ: ಬಳಲಿಕೆ, ಶ್ರಮ; ಅನುಭವಿಸು: ಕಷ್ಟಪಡು; ಪಾಪಿ: ದುಷ್ಟ; ದುರ್ಜನ: ಕೆಟ್ಟ ಜನ; ಸಂಗ: ಜೊತೆ; ಸಿಂಗಿ: ಒಂದು ಬಗೆಯ ಘೋರ ವಿಷ; ವನಿತೆ: ಹೆಣ್ಣು; ತೊಳಲು: ಬವಣೆ, ಸಂಕಟ; ಅನವರತ: ಯಾವಾಗಲು; ಗಿರಿ: ಬೆಟ್ಟ; ಗುಹೆ: ಗವಿ; ಘಟ್ಟ: ಬೆಟ್ಟಗಳ ಸಾಲು, ಪರ್ವತ ಪಂಕ್ತಿ; ನುಡಿ: ಮಾತಾಡು; ಕುಟಿಲ: ಮೋಸ; ಗರ್ಭ: ಬಸಿರು, ಕೂಸು; ಗುಣ: ನಡತೆ; ಬೆಳವಿಗೆ: ವೃದ್ಧಿ, ಬೆಳೆಯುವಿಕೆ;

ಪದವಿಂಗಡಣೆ:
ವನದೊಳ್+ಅತಿ+ಆಯಾಸ +ನೀವೆಂತ್
ಅನುಭವಿಸುವಿರಿ+ ಪಾಪಿ+ ದುರ್ಯೋ
ಧನನ +ದುರ್ಜನ +ಸಂಗ +ನಿಮಗಿದು+ ಸಿಂಗಿಯಾದುದಲೆ
ವನಿತೆ+ ನಿಮ್ಮೊಡನೆಂತು +ತೊಳಲುವಳ್
ಅನವರತ +ಗಿರಿ +ಗುಹೆಯ +ಘಟ್ಟವನ್
ಎನುತ +ನುಡಿದಳು+ ಕುಟಿಲ+ ಗರ್ಭದ +ಗುಣದ +ಬೆಳವಿಗೆಯ

ಅಚ್ಚರಿ:
(೧) ದುರ್ಯೋಧನನನ್ನು ಬಯ್ಯುವ ಪರಿ – ಪಾಪಿ ದುರ್ಯೋಧನನ ದುರ್ಜನ ಸಂಗ ನಿಮಗಿದು ಸಿಂಗಿಯಾದುದಲೆ; ಕುಟಿಲ ಗರ್ಭದ ಗುಣದ ಬೆಳವಿಗೆಯ

ಪದ್ಯ ೪೪: ದುರ್ಯೋಧನನು ಹೇಗೆ ಸಾಯುತ್ತೇನೆಂದು ಹೇಳಿದನು?

ಸಿಂಗಿಯನು ಬಿತ್ತಿದೆನು ಪಾಂಡವ
ರಂಗದಲಿ ತತ್ಫಲದ ಬೆಳಸಿನ
ಸಿಂಗಿಯಲಿ ತಾ ಸಾವೆನಲ್ಲದೊಡಗ್ನಿ ಕುಂಡದಲಿ
ಭಂಗಿಸುವೆನಾ ಫಲದೊಳೆನ್ನನು
ನುಂಗಬೇಹುದು ವಹ್ನಿ ಮೇಣೀ
ಗಂಗೆಯಲಿ ಬಿದ್ದೊಡಲ ನೀಗುವೆನೆನುತ ಬಿಸುಸುಯ್ದ (ಸಭಾ ಪರ್ವ, ೧೩ ಸಂಧಿ, ೪೪ ಪದ್ಯ)

ತಾತ್ಪರ್ಯ:
ನಾನು ಪಾಂಡವರಿಗೆ ಘೋರವಾದ ವಿಷವನ್ನುಣಿಸಿದೆನು. ಅದರ ಫಲವು ಹಿರಿದಾಗಿ ಬೆಳೆದು ಆ ವಿಷದಿಂದಲೇ ನಾನು ಸಾಯುತ್ತೇನೆ. ಇಲ್ಲದಿದ್ದರೆ ಬೆಂಕಿಯ ಕುಂಡದಲ್ಲೋ ನೀರಿನಲ್ಲಿ ಬಿದ್ದೋ ಈ ದೇಹವನ್ನು ಬಿಡುತ್ತೇನೆ ಎಂದು ತನ್ನ ನೋವನ್ನು ತೋಡಿಕೊಂಡನು.

ಅರ್ಥ:
ಸಿಂಗಿ: ಒಂದು ಬಗೆಯ ಘೋರ ವಿಷ; ಬಿತ್ತು: ಉಂಟುಮಾಡು, ಪ್ರಚಾರ ಮಾಡು; ರಂಗ: ವೇದಿಕೆ; ಫಲ: ಪ್ರಯೋಜನ; ಬೆಳಸು: ವಿಕಸನಗೊಳ್ಳು; ಸಾವು: ಮರಣ; ಅಗ್ನಿ: ಬೆಂಕಿ; ಕುಂಡ: ಗುಣಿ, ಹೋಮದ ಗುಳಿ; ಭಂಗಿಸು: ಅಪಮಾನ ಮಾಡು, ನಾಶಮಾಡು, ಸೋಲಿಸು; ಫಲ: ಪ್ರಯೋಜನ; ನುಂಗು: ಸ್ವಾಹ ಮಾಡು; ವಹ್ನಿ: ಅಗ್ನಿ; ಮೇಣ್; ಅಥವ; ಗಂಗೆ: ನೀರು; ಬಿದ್ದು: ಬೀಳು; ನೀಗು: ಬಿಡು, ತೊರೆ, ತ್ಯಜಿಸು; ಬಿಸುಸುಯ್ದ: ನಿಟ್ಟುಸಿರು ಬಿಡು;

ಪದವಿಂಗಡಣೆ:
ಸಿಂಗಿಯನು +ಬಿತ್ತಿದೆನು +ಪಾಂಡವ
ರಂಗದಲಿ +ತತ್ಫಲದ +ಬೆಳಸಿನ
ಸಿಂಗಿಯಲಿ +ತಾ +ಸಾವೆನಲ್ಲದೊಡ್+ಅಗ್ನಿ +ಕುಂಡದಲಿ
ಭಂಗಿಸುವೆನಾ +ಫಲದೊಳ್+ಎನ್ನನು
ನುಂಗಬೇಹುದು +ವಹ್ನಿ +ಮೇಣ್
ಈ+ಗಂಗೆಯಲಿ +ಬಿದ್+ಒಡಲ +ನೀಗುವೆನ್+ಎನುತ +ಬಿಸುಸುಯ್ದ

ಅಚ್ಚರಿ:
(೧) ಸಾಯುವೆನು ಎನ್ನುವ ಪರಿ – ಭಂಗಿಸುವೆನಾ ಫಲದೊಳೆನ್ನನು ನುಂಗಬೇಹುದು ವಹ್ನಿ ಮೇಣೀ ಗಂಗೆಯಲಿ ಬಿದ್ದೊಡಲ ನೀಗುವೆನೆನುತ ಬಿಸುಸುಯ್ದ