ಪದ್ಯ ೧೦: ಸಮಸಪ್ತಕರು ಏನೆಂದು ಗರ್ಜಿಸಿದರು?

ಒಳ್ಳಿತಿದು ಕಡುಭಾಷೆ ನಾಳಿನ
ಗೆಲ್ಲವೇ ಗೆಲವರ್ಜುನನು ಹೊ
ಕ್ಕಲ್ಲಿ ಹೊಗುವೆವು ತರುಬಿ ಕಾದುವೆವೆಮ್ಮ ಕಳನೊಳಗೆ
ಅಲ್ಲಿ ನೀನೊಲಿದಂತೆ ಮಾಡಿ
ನ್ನೆಲ್ಲವೇತಕೆಯೆನುತ ಸಾಹಸ
ಮಲ್ಲರೆದ್ದರು ವೀರ ಸಮಸಪ್ತಕರು ಗರ್ಜಿಸುತ (ದ್ರೋಣ ಪರ್ವ, ೪ ಸಂಧಿ, ೧೦ ಪದ್ಯ)

ತಾತ್ಪರ್ಯ:
ನಿನ್ನ ಪ್ರತಿಜ್ಞೆಗೆ ನಾವು ಒಪ್ಪಿದೆವು. ನಾಳಿನ ಗೆಲುವೇ ಗೆಲುವು. ನಾಳೆ ಅರ್ಜುನನು ಎಲ್ಲಿ ಹೊಕ್ಕರೂ ಅಲ್ಲಿ ಎದುರಾಗಿ ಹೋಗಿ ಅವನನ್ನು ತಡೆಯುತ್ತೇವೆ. ರಣರಂಗದಿಂದ ಹೊರಕ್ಕೆ ಬಿಡುವುದಿಲ್ಲ. ಇತ್ತ ನೀನು ಇಚ್ಛಿಸಿದಂತೆ ಮಾಡು, ಉಳಿದ ಮಾತೇಕೆ ಎಂದು ಸಾಹಸಿಗಳಾದ ಸಮಸಪ್ತಕರು ಗರ್ಜಿಸಿದರು.

ಅರ್ಥ:
ಒಳ್ಳಿತು: ಸರಿಯಾದುದು; ಕಡು: ವಿಶೇಷ, ಅಧಿಕ; ಭಾಷೆ: ನುಡಿ; ನಾಳೆ: ಮರುದಿನ; ಗೆಲುವು: ಜಯ; ಹೊಕ್ಕು: ಸೇರು; ಹೊಗು: ಸೇರು; ತರುಬು: ತಡೆ, ನಿಲ್ಲಿಸು; ಕಾದು: ಹೋರಾಡು; ಕಳ: ರಣರಂಗ; ಒಲಿದು: ಬಯಸು; ಸಾಹಸ: ಪರಾಕ್ರಮ; ಸಾಹಸಮಲ್ಲ: ಪರಾಕ್ರಮಿ; ವೀರ: ಶೂರ; ಸಮಸಪ್ತಕ: ಯುದ್ಧದಲ್ಲಿ ಶಪಥಮಾಡಿ ಹೋರಾಡುವವರು; ಗರ್ಜಿಸು: ಆರ್ಭಟ;

ಪದವಿಂಗಡಣೆ:
ಒಳ್ಳಿತಿದು +ಕಡುಭಾಷೆ +ನಾಳಿನ
ಗೆಲ್ಲವೇ +ಗೆಲವ್+ಅರ್ಜುನನು +ಹೊ
ಕ್ಕಲ್ಲಿ +ಹೊಗುವೆವು +ತರುಬಿ +ಕಾದುವೆವೆಮ್ಮ + ಕಳನೊಳಗೆ
ಅಲ್ಲಿ +ನೀನೊಲಿದಂತೆ +ಮಾಡಿನ್
ಎಲ್ಲವೇತಕೆ+ಎನುತ +ಸಾಹಸ
ಮಲ್ಲರ್+ಎದ್ದರು +ವೀರ +ಸಮಸಪ್ತಕರು +ಗರ್ಜಿಸುತ

ಅಚ್ಚರಿ:
(೧) ಪ್ರಮಾಣಕ್ಕೆ ಕಡುಭಾಷೆ ಎಂಬ ಪದದ ಪ್ರಯೋಗ

ಪದ್ಯ ೪೭: ಧರ್ಮಜನನ್ನು ರಕ್ಷಿಸಲು ದ್ರೋಣನೆದುರು ಯಾರು ಬಂದರು?

ಹೊಳ್ಳುಗಳ ತೂರಿದೆವು ಹಿಡಿ ಹಿಡಿ
ಬಿಲ್ಲ ಸುರಿ ಸುರಿ ಶರವನಕಟಿ
ನ್ನೆಲ್ಲಿ ಹೊಗುವೈ ಕಂದ ಕುಮ್ತಿಯ ಜಠರವಲ್ಪವಲೆ
ನಿಲ್ಲು ನಿಲ್ಲೆನುತೈದಿ ಬರಲ
ಲ್ಲಲ್ಲಿ ಮರುಗಿತು ಸೇನೆ ಸಾಹಸ
ಮಲ್ಲನಡಹಾಯಿದನು ದ್ರುಪದನು ಧನುವನೊದರಿಸುತ (ದ್ರೋಣ ಪರ್ವ, ೨ ಸಂಧಿ, ೪೭ ಪದ್ಯ)

ತಾತ್ಪರ್ಯ:
ಜೊಳ್ಳುಗಳನ್ನು ಹೊಡೆದೋಡಿಸಿದುದಾಯಿತು. ಧರ್ಮಜ, ಬಿಲ್ಲನ್ನು ಹಿಡಿ ಹಿಡಿ, ಬಾಣಗಳನ್ನು ಬಿಡು, ಇನ್ನೆಲ್ಲಿ ಹೊಕ್ಕು ಉಳಿಯುವೇ? ಕುಂತಿಯ ಜಠರವು ಚಿಕ್ಕದ್ದು. ನಿಲ್ಲು ನಿಲ್ಲು ಎನ್ನುತ್ತಾ ದ್ರೋಣನು ಮುನ್ನುಗ್ಗಲು, ಸೈನ್ಯವು ದುಃಖಿಸಿತು. ಆಗ ದ್ರುಪದನು ಸಾಹಸದಿಂದ ಬಿಲ್ಲನ್ನು ಧ್ವನಿ ಮಾಡುತ್ತಾ ಅಡ್ಡಬಂದನು.

ಅರ್ಥ:
ಹೊಳ್ಳು: ಹುರುಳಿಲ್ಲದುದು; ತೂರು: ಎಸೆ, ಬೀಸು; ಹಿಡಿ: ಗ್ರಹಿಸು, ಬಂಧನ; ಸುರಿ: ಮೇಲಿನಿಂದ ಬೀಳು; ಶರ: ಬಾಣ; ಅಕಟ: ಅಯ್ಯೊ; ಹೊಗು: ಸೇರು, ಪ್ರವೇಶಿಸು; ಕಂದ: ಮಗ; ಜಠರ: ಹೊಟ್ಟೆ; ಅಲ್ಪ: ಚಿಕ್ಕದ್ದು; ನಿಲ್ಲು: ತಡೆ; ಐದು: ಬಂದು ಸೇರು; ಬರಲು: ಆಗಮಿಸು; ಮರುಗು: ತಳಮಳ; ಸೇನೆ: ಸೈನ; ಸಾಹಸ: ಪರಾಕ್ರಮ; ಸಾಹಸಮಲ್ಲ: ಪರಾಕ್ರಮಿ; ಅಡಹಾಯಿ: ಮಧ್ಯಬಂದು; ಧನು: ಬಿಲ್ಲು; ಒದರು: ಕೊಡಹು, ಜಾಡಿಸು;

ಪದವಿಂಗಡಣೆ:
ಹೊಳ್ಳುಗಳ +ತೂರಿದೆವು +ಹಿಡಿ +ಹಿಡಿ
ಬಿಲ್ಲ +ಸುರಿ +ಸುರಿ +ಶರವನ್+ಅಕಟಿ
ನ್ನೆಲ್ಲಿ +ಹೊಗುವೈ +ಕಂದ +ಕುಂತಿಯ +ಜಠರವ್+ಅಲ್ಪವಲೆ
ನಿಲ್ಲು +ನಿಲ್ಲೆನುತ್+ಐದಿ +ಬರಲ್
ಅಲ್ಲಲ್ಲಿ +ಮರುಗಿತು +ಸೇನೆ +ಸಾಹಸ
ಮಲ್ಲನ್+ಅಡಹಾಯಿದನು +ದ್ರುಪದನು +ಧನುವನ್+ಒದರಿಸುತ

ಅಚ್ಚರಿ:
(೧) ಹಿಡಿ ಹಿಡಿ, ಸುರಿ ಸುರಿ, ನಿಲ್ಲು ನಿಲ್ಲು – ಜೋಡಿ ಪದಗಳ ಬಳಕೆ
(೨) ಹಂಗಿಸುವ ಪರಿ – ಅಕಟಿನ್ನೆಲ್ಲಿ ಹೊಗುವೈ ಕಂದ ಕುಮ್ತಿಯ ಜಠರವಲ್ಪವಲೆ

ಪದ್ಯ ೨೬: ಕರ್ಣನು ಯಾರ ಕೊಬ್ಬನ್ನು ಮುರಿಯಲು ಮುಂದಾದನು?

ಬೊಬ್ಬಿರಿದುದಾ ಸೇನೆ ಸೋಲದ
ಮಬ್ಬು ಮುಸುಕಿದುದೀ ಬಲವನೀ
ಯುಬ್ಬೆಯನು ಸೈರಿಸುತ ಸಾಹಸಮಲ್ಲ ತನಿಗೆದರಿ
ಇಬ್ಬರಿಗೆ ಫಡ ಹುಬ್ಬ ನಿಕ್ಕುವ
ಳೊಬ್ಬಳೇ ಜಯಲಕ್ಷ್ಮಿ ಬೊಡ್ಡಿಯ
ಕೊಬ್ಬ ನಿಲಿಸುವೆನೆನುತ ಖತಿಯಲಿ ಮಸಗಿದನು ಕರ್ಣ (ಕರ್ಣ ಪರ್ವ, ೨೩ ಸಂಧಿ, ೨೬ ಪದ್ಯ)

ತಾತ್ಪರ್ಯ:
ಅರ್ಜುನನ ಬಾಣ ವೈಖರಿಯನ್ನು ಕಂಡು ಪಾಂಡವ ಸೇನೆಯು ಉತ್ಸಾಹದಿಂದ ಜೋರಾಗಿ ಕೂಗಿತು. ಕುರುಸೇನೆಯಲ್ಲಿ ಸೋಲಿನ ಮಬ್ಬು ಕವಿಯಿತು. ಈ ಸಂಕಟವನ್ನು ಕರ್ಣನು ಸೈರಿಸಿ ಉತ್ಸಾಹದಿಂದುಬ್ಬಿ ಜಯಲಕ್ಷ್ಮಿಯೆಂಬ ಬೊಡ್ಡಿಯು ಇಬ್ಬರಿಗೂ ಕಣ್ಣು ಹೊಡೆಯುತ್ತಾಳೆ, ಇವಳ ಕೊಬ್ಬನ್ನು ಮುರಿಯುತ್ತೇನೆ ಎಂದು ಕೋಪದಿಂದ ಕೆರಳಿದನು.

ಅರ್ಥ:
ಬೊಬ್ಬಿರಿ: ಗರ್ಜಿಸು, ಆರ್ಭಟಿಸು; ಸೇನೆ: ಸೈನ್ಯ; ಸೋಲು: ಪರಾಭವ; ಮಬ್ಬು: ಮಂಕು, ಮಸುಕು; ಮುಸುಕು: ಆವರಿಸು; ಬಲ: ಶಕ್ತಿ, ಸೈನ್ಯ; ಉಬ್ಬು: ಹಿಗ್ಗು, ಗರ್ವಿಸು; ಸೈರಿಸು: ತಾಳು, ಸಹಿಸು; ಸಾಹಸಮಲ್ಲ: ಪರಾಕ್ರಮಿ; ತನಿ: ಹೊಸತಾದ, ಹೆಚ್ಚಾದ; ಕೆದರು: ಹರಡು; ತನಿಗೆದರು: ಉತ್ಸಾಹ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಪದ; ಹುಬ್ಬು: ಕಣ್ಣಿನ ಮೇಲಿನ ಕೂದಲಿನ ಸಾಲು; ಹುಬ್ಬನಿಕ್ಕು: ಕಣ್ಣು ಹೊಡೆ; ಜಯ: ವಿಜಯ, ಗೆಲುವು; ಬೊಡ್ಡಿ: ನೀಚಳು, ದುಷ್ಟಳು; ಕೊಬ್ಬು: ಅಹಂಕಾರ; ನಿಲಿಸು: ತಡೆ; ಖತಿ: ಕೋಪ; ಮಸಗು: ಹರಡು; ಕೆರಳು;

ಪದವಿಂಗಡಣೆ:
ಬೊಬ್ಬಿರಿದುದಾ +ಸೇನೆ +ಸೋಲದ
ಮಬ್ಬು+ ಮುಸುಕಿದುದ್+ಈ+ ಬಲವನ್+ಈ+
ಉಬ್ಬೆಯನು +ಸೈರಿಸುತ +ಸಾಹಸಮಲ್ಲ +ತನಿಗೆದರಿ
ಇಬ್ಬರಿಗೆ+ ಫಡ+ ಹುಬ್ಬ +ನಿಕ್ಕುವಳ್
ಒಬ್ಬಳೇ +ಜಯಲಕ್ಷ್ಮಿ +ಬೊಡ್ಡಿಯ
ಕೊಬ್ಬ +ನಿಲಿಸುವೆನೆನುತ +ಖತಿಯಲಿ +ಮಸಗಿದನು +ಕರ್ಣ

ಅಚ್ಚರಿ:
(೧) ಜಯಲಕ್ಷ್ಮಿಗೆ ಹೇಳಿದ ಕೋಪದ ನುಡಿ – ಹುಬ್ಬ ನಿಕ್ಕುವ ಳೊಬ್ಬಳೇ ಜಯಲಕ್ಷ್ಮಿ ಬೊಡ್ಡಿಯ
ಕೊಬ್ಬ ನಿಲಿಸುವೆ