ಪದ್ಯ ೮: ಧೃತರಾಷ್ಟ್ರನು ಹೇಗೆ ದುಃಖಿಸಿದನು?

ಘಾಸಿಯಾದೆನು ಮಗನ ಮೇಲಿ
ನ್ನಾಸೆ ಬೀತುದು ಬೆಂದ ಹುಣ್ಣಲಿ
ಸಾಸಿವೆಯ ಬಳಿಯದಿರು ಸಂಜಯ ನಿನಗೆ ದಯವಿಲ್ಲ
ಏಸು ಬಲುಹುಂಟಾದರೆಯು ಹಗೆ
ವಾಸುದೇವನ ಹರಿಬವೆಂದಾ
ನೇಸನೊರಲಿದೆನೇನ ಮಾಡುವೆನೆಂದನಂಧನೃಪ (ದ್ರೋಣ ಪರ್ವ, ೧ ಸಂಧಿ, ೮ ಪದ್ಯ)

ತಾತ್ಪರ್ಯ:
ಸಂಜಯ, ನಾನು ಬಹಳವಾಗಿ ನೊಂದಿದ್ದೇನೆ, ದುರ್ಯೋಧನನು ಉದ್ಧಾರವಾಗಬಹುದೆಂಬ ಆಶೆ ಬಿಟ್ಟುಹೋಗಿದೆ, ಸುಟ್ಟಗಾಯದ ಮೇಲೆ ಸಾಸಿವೆಯ ಪುಡಿಯನ್ನು ಬಳಿಯಬೇಡ, ನಿನಗೆ ದಯೆಯಿಲ್ಲ, ನಿಮಗೆ ಎಷ್ಟು ಬಲವಿದ್ದರೂ ಶ್ರೀಕೃಷ್ಣನ ವಿರೋಧಿಗಳಾಗಿದ್ದೀರಿ ಎಂದು ಎಷ್ಟು ಬಾರಿ ಎಷ್ಟು ಬಗೆಯಿಂದ ಹೇಳಿದರು ಕೇಳದೇ ಹೋದ ನನ್ನ ಮಗ, ನಾನೇನು ಮಾಡಲಿ ಎಂದು ನೊಂದುಕೊಂಡನು.

ಅರ್ಥ:
ಘಾಸಿ: ದಣಿವು, ಆಯಾಸ; ಮಗ: ಸುತ; ಆಸೆ: ಇಚ್ಛೆ; ಬೀತು: ಕಡಿಮೆಯಾಗು, ಬತ್ತು; ಬೆಂದು: ಪಕ್ವ; ಹುಣ್ಣು: ಗಾಯ; ಬಳಿ: ಹರಡು; ದಯೆ: ಕರುಣೆ; ಬಲುಹು: ಶಕ್ತಿ; ಹಗೆ: ವೈರ; ಹರಿಬ: ಕಾಳಗ; ಏಸು: ಎಷ್ಟು; ಒರಲು: ಹೇಳು ಅಂಧನೃಪ: ಕುರುಡ ರಾಜ (ಧೃತರಾಷ್ಟ್ರ);

ಪದವಿಂಗಡಣೆ:
ಘಾಸಿಯಾದೆನು +ಮಗನ +ಮೇಲಿನ್
ಆಸೆ +ಬೀತುದು +ಬೆಂದ +ಹುಣ್ಣಲಿ
ಸಾಸಿವೆಯ +ಬಳಿಯದಿರು +ಸಂಜಯ +ನಿನಗೆ +ದಯವಿಲ್ಲ
ಏಸು+ ಬಲುಹುಂಟಾದರೆಯು+ ಹಗೆ
ವಾಸುದೇವನ +ಹರಿಬವ್+ಎಂದಾನ್
ಏಸನ್+ಒರಲಿದೆನ್+ಏನ +ಮಾಡುವೆನ್+ಎಂದನ್+ಅಂಧನೃಪ

ಅಚ್ಚರಿ:
(೧) ಲೋಕ ನುಡಿ – ಬೆಂದ ಹುಣ್ಣಲಿ ಸಾಸಿವೆಯ ಬಳಿಯದಿರು