ಪದ್ಯ ೨: ಪಾಂಡವರ ಸಂತಸಕ್ಕೆ ಕಾರಣವೇನು?

ಮಾನನಿಧಿ ಸಾವಿತ್ರಿಯ ಉಅಪಾ
ಖ್ಯಾನವನು ಕೇಳಿದನು ಚಿತ್ತ
ಗ್ಲಾನಿಯನು ಬೀಳ್ಕೊಟ್ಟನಮಳೋತ್ಸಾಹ ಭಾವದಲಿ
ಕಾನನಾನುಭವಕ್ಕೆ ಕಡೆ ಯಿ
ನ್ನೇನು ನಮಗೆನುತತುಳ ಹರುಷಾ
ನೂನ ಕುಂತೀತನುಜರಿರ್ದರು ಪರ್ಣಶಾಲೆಯಲಿ (ಅರಣ್ಯ ಪರ್ವ, ೨೫ ಸಂಧಿ, ೨ ಪದ್ಯ)

ತಾತ್ಪರ್ಯ:
ಸಾವಿತ್ರಿಯ ಕಥೆಯನ್ನು ಕೇಳಿ, ಧರ್ಮಜನು ಮನಸ್ಸಿನ ವಿಷಾದವನ್ನು ಕಳೆದುಕೊಂಡು ಉತ್ಸಾಹಿತನಾದನು. ಇನ್ನೇನು ವನವಾಸ ಮುಗಿದು ಹೋಯಿತೆಂದು ಪಾಂಡವರು ಸಂತಸ ಭರಿತರಾಗಿದ್ದರು.

ಅರ್ಥ:
ಮಾನನಿಧಿ: ಮಾನವನ್ನೇ ಐಶ್ವರ್ಯವನ್ನಾಗಿಸಿದವ; ಉಪಾಖ್ಯಾನ: ಪೂರ್ವ ಕಥೆ; ಕೇಳು: ಆಲಿಸು; ಚಿತ್ತ: ಮನಸ್ಸು; ಗ್ಲಾನಿ: ಬಳಲಿಕೆ, ದಣಿವು; ಬೀಳ್ಕೊಡು: ತೊರೆ; ಅಮಳ: ನಿರ್ಮಲ; ಉತ್ಸಾಹ: ಹುರುಪು, ಆಸಕ್ತಿ; ಭಾವ: ಭಾವನೆ, ಚಿತ್ತವೃತ್ತಿ; ಕಾನನ: ಕಾಡು, ಅರಣ್ಯ; ಅನುಭವ: ಇಂದ್ರಿಯಗಳ ಮೂಲಕ ಬರುವ ಜ್ಞಾನ; ಕಡೆ: ಕೊನೆ; ನೂನ: ಕೊರತೆ, ನ್ಯೂನತೆ; ತನುಜ: ಮಕ್ಕಳು; ಪರ್ಣಶಾಲೆ: ಕುಟೀರ;

ಪದವಿಂಗಡಣೆ:
ಮಾನನಿಧಿ +ಸಾವಿತ್ರಿಯ +ಉಪಾ
ಖ್ಯಾನವನು +ಕೇಳಿದನು +ಚಿತ್ತ
ಗ್ಲಾನಿಯನು +ಬೀಳ್ಕೊಟ್ಟನ್+ಅಮಳ+ಉತ್ಸಾಹ +ಭಾವದಲಿ
ಕಾನನ+ಅನುಭವಕ್ಕೆ +ಕಡೆ+ ಯಿ
ನ್ನೇನು +ನಮಗೆನುತ್+ಅತುಳ +ಹರುಷಾ
ನೂನ +ಕುಂತೀ+ತನುಜರಿರ್ದರು+ ಪರ್ಣಶಾಲೆಯಲಿ

ಅಚ್ಚರಿ:
(೧) ಅಮಳೋತ್ಸಾಹ, ಅತುಳ ಹರುಷಾನೂನು – ಪದಗಳ ಬಳಕೆ

ಪದ್ಯ ೧: ಮಾರ್ಕಂಡೇಯ ಮುನಿಗಳು ಯಾವ ಕಥೆಗಳನ್ನು ಹೇಳಿದರು?

ಕೇಳು ಜನಮೇಜಯ ಧರಿತ್ರೀ
ಪಾಲ ರಾಮಾಯಣವನಾ ಮುನಿ
ಹೇಳಿದನು ಹೂಳಿದನು ಭೂಪನ ಮಾನಸ ವ್ಯಥೆಯ
ಹೇಳಿದನು ಸಾವಿತ್ರಿಯುನ್ನತ
ಶೀಲವನು ಪತಿಭಕ್ತಿಯಿಂದವೆ
ಕಾಲನುಂಗಿದ ಪತಿಯ ತಾ ಮರಳಿಸುತ ತಂದುದನು (ಅರಣ್ಯ ಪರ್ವ, ೨೫ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಮಾಯಣದ ಕಥೆಯನ್ನು ಮಾರ್ಕಂಡೇಯನು ಧರ್ಮಜನ ಮನಸ್ಸಿನ ವ್ಯಥೆಯನ್ನು ಕಳೆದನು. ಬಳಿಕ ಸಾವಿರಿಯು ತನ್ನ ಪಾತಿವ್ರತ್ಯ ಶೀಲದಿಂದ, ಮರಣ ಹೊಂದಿದ್ದ ತನ್ನ ಪತಿಯನ್ನು ಮರಳಿ ತಂದ ಕಥೆಯನ್ನು ವಿವರಿಸಿದನು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರೀ: ಭೂಮಿ; ಮುನಿ: ಋಷಿ; ಹೂಳು: ಮುಚ್ಚು; ಭೂಪ: ರಾಜ; ಮಾನಸ: ಮನಸ್ಸು; ವ್ಯಥೆ: ನೋವು; ಹೇಳು: ತಿಳಿಸು; ಉನ್ನತ: ಶ್ರೇಷ್ಠ; ಶೀಲ: ಗುಣ; ಪತಿ: ಗಂಡ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಕಾಲ: ಯಮ; ನುಂಗು: ಕಬಳಿಸು; ಮರಳಿಸು: ಹಿಂದಿರುಗಿಸು; ತಂದು: ಬರೆಮಾಡು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ರಾಮಾಯಣವನ್+ಆ+ ಮುನಿ
ಹೇಳಿದನು +ಹೂಳಿದನು +ಭೂಪನ +ಮಾನಸ +ವ್ಯಥೆಯ
ಹೇಳಿದನು +ಸಾವಿತ್ರಿ+ಉನ್ನತ
ಶೀಲವನು +ಪತಿಭಕ್ತಿಯಿಂದವೆ
ಕಾಲನುಂಗಿದ+ ಪತಿಯ+ ತಾ +ಮರಳಿಸುತ +ತಂದುದನು

ಅಚ್ಚರಿ:
(೧) ಧರಿತ್ರೀಪಾಲ, ಭೂಪ – ಸಮನಾರ್ಥಕ ಪದ
(೨) ಹೇಳಿದನು ಹೂಳಿದನು – ಪ್ರಾಸ ಪದಗಳು

ಪದ್ಯ ೪೮: ದ್ರೌಪದಿಯು ಹೇಗೆ ಶೋಭಿಸುತ್ತಿದ್ದಳು?

ಸಕಲ ಶಕ್ತಿಪರೀತ ವಿಮಳಾಂ
ಬಿಕೆಯವೋಲ್ವರಮಂತ್ರ ದೇವೀ
ನಿಕರ ಮಧ್ಯದಿ ಶೋಭಿಸುವ ಸಾವಿತ್ರಿಯಂದದಲಿ
ವಿಕಟ ರಶ್ಮಿನಿಬದ್ಧ ರತ್ನ
ಪ್ರಕರ ಮಧ್ಯದ ಕೌಸ್ತುಭದವೋ
ಲ್ಚಕಿತ ಬಾಲಮೃಗಾಕ್ಷಿ ಮೆರೆದಳು ಯುವತಿ ಮಧ್ಯದಲಿ (ಸಭಾ ಪರ್ವ, ೧೫ ಸಂಧಿ, ೪೮ ಪದ್ಯ)

ತಾತ್ಪರ್ಯ:
ಎಲ್ಲಾ ಶಕ್ತಿದೇವತೆಯರು ಸುತ್ತುವರೆದ ವಿಮಳಾಂಬಿಕೆಯಂತೆ, ಎಲ್ಲಾ ಮಂತ್ರಾದಿದೇವತೆಯರ ನಡುವೆ ಶೋಭಿಸುವ ಸಾವಿತ್ರಿ (ಗಾಯತ್ರಿ)ದೇವಿಯಂತೆ, ಥಳಥಳಿಸುವ ರಶ್ಮಿಗಳ ರತ್ನಗಳ ನದುವೆ ಶೋಭಿಸುವ ಕೌಸ್ತುಭರತ್ನದಂತೆ, ಜಿಂಕೆಯ ಮರಿಯ ಕಣ್ಣುಗಳಂತಿರುವ ಮನೋಹರವಾದ ನಯನಗಳಿಂದ ಶೋಭಿಸುವ ದ್ರೌಪದಿಯು ಆ ಚೆಲುವೆಯರ ನಡುವೆ ಕುಳಿತಿದ್ದಳು.

ಅರ್ಥ:
ಸಕಲ: ಎಲ್ಲಾ; ಶಕ್ತಿ: ಬಲ; ವಿಮಲ: ಶುದ್ಧವಾದ; ಅಂಬಿಕೆ: ತಾಯಿ, ದೇವತೆ; ವರ: ಶ್ರೇಷ್ಠ; ಮಂತ್ರ: ದೇವತಾಸ್ತುತಿಯ ವಾಕ್ಯ ಸಮೂಹ; ನಿಕರ: ಗುಂಪು; ಮಧ್ಯ: ನಡುವೆ; ಶೋಭಿಸು: ಪ್ರಜ್ವಲಿಸು; ಸಾವಿತ್ರಿ: ಗಾಯತ್ರಿ; ವಿಕಟ: ಚೆಲುವಾದ, ಅಂದವಾದ; ರಶ್ಮಿ: ಕಾಂತಿ; ನಿಬದ್ಧ:ಕಟ್ಟಿದ; ರತ್ನ: ಬೆಲೆಬಾಳುವ ಮಣಿ; ಪ್ರಕರ: ಗುಂಪು; ಕೌಸ್ತುಭ: ವಿಷ್ಣುವಿನ ಎದೆಯನ್ನು ಅಲಂಕರಿಸಿರುವ ಒಂದು ರತ್ನ;ಚಕಿತ: ವಿಸ್ಮಿತ; ಬಾಲ: ಚಿಕ್ಕ; ಮೃಗ: ಜಿಂಕೆ; ಅಕ್ಷಿ: ಕಣ್ಣು; ಮೆರೆ: ಹೊಳೆ, ಪ್ರಕಾಶಿಸು; ಯುವತಿ: ಹೆಣ್ಣು, ಸುಂದರಿ;

ಪದವಿಂಗಡಣೆ:
ಸಕಲ +ಶಕ್ತಿಪರೀತ+ ವಿಮಳಾಂ
ಬಿಕೆಯವೋಲ್+ವರ+ಮಂತ್ರ +ದೇವೀ
ನಿಕರ+ ಮಧ್ಯದಿ+ ಶೋಭಿಸುವ +ಸಾವಿತ್ರಿ+ಯಂದದಲಿ
ವಿಕಟ +ರಶ್ಮಿ+ನಿಬದ್ಧ +ರತ್ನ
ಪ್ರಕರ +ಮಧ್ಯದ +ಕೌಸ್ತುಭದವೋಲ್
ಚಕಿತ +ಬಾಲ+ಮೃಗಾಕ್ಷಿ+ ಮೆರೆದಳು+ ಯುವತಿ +ಮಧ್ಯದಲಿ

ಅಚ್ಚರಿ:
(೧) ವಿಮಳಾಂಬಿಕೆ, ಸಾವಿತ್ರಿ, ಕೌಸುಭ, ಬಾಲಮೃಗಾಕ್ಷಿ – ದ್ರೌಪದಿಯನ್ನು ಹೋಲಿಸುವ ಪರಿ
(೨) ದ್ರೌಪದಿ ಅನರ್ಘ್ಯ ರತ್ನ ವೆಂದು ಹೇಳುವ ಉಪಮಾನಗಳಿಂದ ಕೂಡಿರುವ ಪದ್ಯ