ಪದ್ಯ ೨೬: ಕೃಷ್ಣನು ಸಾಲ್ವ ರಾಜನನ್ನು ಹೇಗೆ ಸಂಹಾರಮಾಡಿದನು?

ಏನನೆಂಬೆನು ಸಾಲ್ವಪುರದ ನ
ವೀನ ಮಾಯಾರಚನೆಯನು ನಮ
ಗಾನಲಸದಳವುಳಿದ ಗೀರ್ವಾಣರಿಗೆ ಗೋಚರವೆ
ದಾನವನ ಮಾಯಾಪುರದ ಸಂ
ಸ್ಥಾನಮರ್ಮವನರಿದು ಶರ ಸಂ
ಧಾನದಲಿ ಸಂಹರಿಸಿದೆವು ಸಾಲ್ವಾದಿ ರಿಪುಭಟರ (ಅರಣ್ಯ ಪರ್ವ, ೨ ಸಂಧಿ, ೨೬ ಪದ್ಯ)

ತಾತ್ಪರ್ಯ:
ದ್ರೌಪದಿ ನಾನು ಏನೆಂದು ಹೇಳಲಿ, ಸಾಲ್ವ ನಗರದ ಮಾಯಾರಚನೆಯು ಅಮೋಘವಾಗಿತ್ತು, ನನಗೇ ಅದು ತಿಳಿಯಲಾಗಲಿಲ್ಲ, ಇನ್ನು ದೇವತೆಗಳಿಗೆ ಹೇಗೆ ತಿಳಿದೀತು? ನಾನು ಸಾಲ್ವನಗರದ ಮಾಯಾಮಯವಾದ ಹೊಂದಾಣಿಕೆಯ ಗುಟ್ಟನ್ನು ಕಂಡುಹಿಡಿದು ನಗರವನ್ನು ಗೆದ್ದು ಸಾಲ್ವನನ್ನು ಸಂಹರಿಸಿದೆನು.

ಅರ್ಥ:
ಪುರ: ಊರು; ನವೀನ: ಹೊಸ; ಮಾಯ: ಇಂದ್ರಜಾಲ; ರಚನೆ: ನಿರ್ಮಿಸು; ಅಸದಳ: ಅಸಾಧ್ಯ; ಉಳಿದ: ಮಿಕ್ಕ; ಗಿರ್ವಾಣ: ದೇವತೆ; ಗೋಚರ: ಕಾಣುವುದು; ದಾನವ: ರಾಕ್ಷಸ; ಸಂಸ್ಥಾನ: ರಾಜ್ಯ, ಪ್ರಾಂತ್ಯ; ಮರ್ಮ: ಒಳ ಅರ್ಥ, ಗುಟ್ಟು; ಸಂಹರಿಸು: ನಾಶಗೊಳಿಸು; ರಿಪು: ವೈರಿ; ಭಟ: ಸೈನ್ಯ; ಶರ: ಬಾಣ;

ಪದವಿಂಗಡಣೆ:
ಏನನೆಂಬೆನು +ಸಾಲ್ವ+ಪುರದ+ ನ
ವೀನ +ಮಾಯಾ+ರಚನೆಯನು +ನಮ
ಗಾನಲ್+ಅಸದಳವ್+ಉಳಿದ +ಗೀರ್ವಾಣರಿಗೆ+ ಗೋಚರವೆ
ದಾನವನ +ಮಾಯಾಪುರದ+ ಸಂ
ಸ್ಥಾನ+ಮರ್ಮವನ್+ಅರಿದು+ ಶರ+ ಸಂ
ಧಾನದಲಿ +ಸಂಹರಿಸಿದೆವು ಸಾಲ್ವಾದಿ ರಿಪುಭಟರ

ಅಚ್ಚರಿ:
(೧) ಸಾಲ್ವರಾಜನನ್ನು ಸಂಹರಿಸಿದ ಪರಿ – ಶರ ಸಂಧಾನದಲಿ ಸಂಹರಿಸಿದೆವು ಸಾಲ್ವಾದಿ ರಿಪುಭಟರ