ಪದ್ಯ ೪: ಅರ್ಜುನನು ಬಂದಿರುವುದು ಹೇಗೆ ತಿಳಿಯಿತು?

ಬಿರಿಯಲಬುಜಭವಾಂಡವಿದೆ ಕಪಿ
ವರನ ಕಳಕಳ ದೇವದತ್ತದ
ಧರಧುರದ ದೆಖ್ಖಾಳವಿದೆ ಗಾಂಡಿವದ ಬೊಬ್ಬೆಯಿದೆ
ನರನ ನಿಷ್ಠುರ ಸಿಂಹರವವಿದೆ
ತುರಗ ದಳ್ಳಿರಿ ಸಾರುತಿದೆ ಸಂ
ಗರಕೆ ಸಾಹಸಮಲ್ಲ ಮೊಳಗಿದನೆಂದನಾ ದ್ರೋಣ (ವಿರಾಟ ಪರ್ವ, ೮ ಸಂಧಿ, ೪ ಪದ್ಯ)

ತಾತ್ಪರ್ಯ:
ಬ್ರಹ್ಮಾಂಡವು ಬಿರಿಯುವಂತೆ ಹನುಮಂತನು ಗರ್ಜಿಸಿದನು. ಅರ್ಜುನನ ಶಂಖವಾದ ದೇವದತ್ತದ ಆರ್ಭಟವು ಹಿರಿದಾಗಿದೆ, ಗಾಂಡಿವದ ಬೊಬ್ಬೆ ಕೇಳಿ ಬರುತ್ತಿದೆ, ಅರ್ಜುನನ ನಿಷ್ಠುರ ಸಿಂಹಗರ್ಜನೆ ಕೇಳುತ್ತಿದೆ, ಕುದುರೆಗಳ ಹೇಷಾರವದ ಸದ್ದು ಕೇಳಿ ಬರುತ್ತಿದೆ, ಮಹಾ ಪರಾಕ್ರಮಿಯಾದ ಅರ್ಜುನನು ಯುದ್ಧಕ್ಕೆ ಬಂದಿದ್ದಾನೆಂದು ದ್ರೋಣರು ಹೇಳಿದರು.

ಅರ್ಥ:
ಬಿರಿ: ಸೀಳು, ಕಠಿಣ; ಅಬುಜ: ಕಮಲ; ಅಬುಜಭವಾಂಡ: ಬ್ರಹ್ಮಾಂಡ; ಕಪಿ: ಹನುಮಂತ; ಕಳಕಳ: ಗೊಂದಲ; ಧರಧುರ: ಆರ್ಭಟ; ದೆಖ್ಖಾಳ: ಗೊಂದಲ, ಗಲಭೆ; ಬೊಬ್ಬೆ: ಆರ್ಭಟ; ನರ: ಅರ್ಜುನ; ನಿಷ್ಠುರ: ಕಠಿಣವಾದ; ಸಿಂಹ: ಕೇಸರಿ; ರವ: ಶಬ್ದ; ತುರಗ: ಕುದುರೆ; ದಳ್ಳುರಿ: ದೊಡ್ಡ ಉರಿ, ಬೆಂಕಿ; ಸಾರು: ಹರಡು; ಸಂಗರ: ಯುದ್ಧ; ಸಾಹಸಮಲ್ಲ: ಪರಾಕ್ರಮ; ಮೊಳಗು: ಧ್ವನಿ, ಸದ್ದು;

ಪದವಿಂಗಡಣೆ:
ಬಿರಿಯಲ್+ಅಬುಜಭವಾಂಡವಿದೆ +ಕಪಿ
ವರನ+ ಕಳಕಳ+ ದೇವದತ್ತದ
ಧರಧುರದ+ ದೆಖ್ಖಾಳವಿದೆ+ ಗಾಂಡಿವದ +ಬೊಬ್ಬೆಯಿದೆ
ನರನ +ನಿಷ್ಠುರ +ಸಿಂಹ+ರವವಿದೆ
ತುರಗ +ದಳ್ಳಿರಿ +ಸಾರುತಿದೆ+ ಸಂ
ಗರಕೆ +ಸಾಹಸಮಲ್ಲ+ ಮೊಳಗಿದನ್+ಎಂದನಾ +ದ್ರೋಣ

ಅಚ್ಚರಿ:
(೧) ಇದೆ ಪದದಿಂದ ಕೊನೆಗೊಳ್ಳುವ ಪದಗಳು – ಭವಾಂಡವಿದೆ, ದೆಖ್ಖಾಳವಿದೆ, ಬೊಬ್ಬೆಯಿದೆ, ರವವಿದೆ, ಸಾರುತಿದೆ
(೨) ದ ಕಾರದ ತ್ರಿವಳಿ ಪದ – ದೇವದತ್ತದ ಧರಧುರದ ದೆಖ್ಖಾಳವಿದೆ