ಪದ್ಯ ೫೮: ದುರ್ಯೋಧನನು ಅಶ್ವತ್ಥಾಮನಿಗೆ ಏನು ಹೇಳಿದ?

ಅನಿಮಿಷರು ಗಂಧರ್ವ ಯಕ್ಷರು
ಮುನಿದು ಮಾಡುವುದೇನು ಮಾಯದ
ಮನುಜರಿಗೆ ತಾ ಸಾಧ್ಯವಹನೇ ತನ್ನನರಿಯಿರಲಾ
ವಿನುತ ಸಲಿಲಸ್ತಂಭವಿದ್ಯೆಯೊ
ಳೆನಗಿರವು ಪಾತಾಳದಲಿ ಯಮ
ತನುಜನೇಗುವ ರೂಹುದೋರದೆ ಹೋಗಿ ನೀವೆಂದ (ಗದಾ ಪರ್ವ, ೪ ಸಂಧಿ, ೫೮ ಪದ್ಯ)

ತಾತ್ಪರ್ಯ:
ದುರ್ಯೋಧನನು ನುಡಿಯುತ್ತಾ, ದೇವತೆಗಳು, ಗಂಧರ್ವರು, ಯಕ್ಷರು ನನ್ನ ಮೇಲೆ ಮುನಿದು ಏನು ಮಾಡಬಲ್ಲರು? ಈ ಮನುಷ್ಯರ ಮೋಸಕ್ಕೆ ನಾನು ಸಿಲುಕುವವನೇ? ನನ್ನನ್ನು ನೀವು ಅರಿತಿಲ್ಲ. ಜಲಸ್ತಂಭ ವಿದ್ಯೆಯನ್ನವಲಂಬಿಸಿ ನಾನು ಪಾತಾಳಾದಲ್ಲಿರುತ್ತೇನೆ. ಈ ಯುಧಿಷ್ಠಿರನು ಏನು ಮಾಡಿಯಾನು? ನೀವು ಮಾತ್ರ ಅವರಿಗೆ ಕಾಣಿಸಿಕೊಳ್ಳದಂತೆ ದೂರಕ್ಕೆ ಹೋಗಿರಿ.

ಅರ್ಥ:
ಅನಿಮಿಷ: ದೇವತೆ; ಗಂಧರ್ವ: ಒಂದು ದೇವಜಾತಿ; ಯಕ್ಷ:ದೇವತೆಗಳಲ್ಲಿ ಒಂದು ವರ್ಗ; ಮುನಿ: ಋಷಿ; ಮಾಯ:ಗಾರುಡಿ; ಮನುಜ: ನರ; ಸಾಧ್ಯ: ಸಾಧಿಸಬಹುದಾದುದು; ಅರಿ: ತಿಳಿ; ವಿನುತ: ಹೊಗಳಲ್ಪಟ್ಟ, ಸ್ತುತಿಗೊಂಡ; ಸಲಿಲ: ನೀರು; ಸ್ತಂಭ: ಸ್ಥಿರವಾಗಿರುವಿಕೆ; ವಿದ್ಯೆ: ಜ್ಞಾನ; ಪಾತಾಳ: ಅಧೋ ಲೋಕ; ಯಮ: ಜವ; ತನುಜ: ಮಗ; ರೂಹು: ರೂಪ; ಹೋಗು: ತೆರಳು;

ಪದವಿಂಗಡಣೆ:
ಅನಿಮಿಷರು+ ಗಂಧರ್ವ +ಯಕ್ಷರು
ಮುನಿದು +ಮಾಡುವುದೇನು +ಮಾಯದ
ಮನುಜರಿಗೆ+ ತಾ +ಸಾಧ್ಯವಹನೇ+ ತನ್ನನ್+ಅರಿಯಿರಲಾ
ವಿನುತ +ಸಲಿಲ+ಸ್ತಂಭ+ವಿದ್ಯೆಯೊಳ್
ಎನಗ್+ಇರವು +ಪಾತಾಳದಲಿ+ ಯಮ
ತನುಜನ್+ಏಗುವ +ರೂಹು+ತೋರದೆ+ ಹೋಗಿ +ನೀವೆಂದ

ಅಚ್ಚರಿ:
(೧) ಮ ಕಾರದ ಸಾಲು ಪದ – ಮುನಿದು ಮಾಡುವುದೇನು ಮಾಯದ ಮನುಜರಿಗೆ