ಪದ್ಯ ೨೩: ಉತ್ತರೆಯ ಗರ್ಭವನ್ನು ಯಾವುದು ರಕ್ಷಿಸಲು ಅಣಿಯಾಯಿತು?

ಜಗವ ಹೂಡುವ ಮೇಣ್ ಚತುರ್ದಶ
ಜಗದ ಜೀವರನೂಡಿಯುಣಿಸುವ
ಜಗವನಂತರ್ಭಾವದಲಿ ಬಲಿಸುವ ಗುಣತ್ರಯದ
ಸೊಗಡು ತನ್ನ ಸಹಸ್ರಧಾರೆಯ
ಝಗೆಯೊಳೆನಿಪ ಮಹಾಸುದರ್ಶನ
ಬಿಗಿದು ಸುತ್ತಲು ವೇಢೆಯಾಯ್ತುತ್ತರೆಯ ಗರ್ಭದಲಿ (ಗದಾ ಪರ್ವ, ೧೦ ಸಂಧಿ, ೨೩ ಪದ್ಯ)

ತಾತ್ಪರ್ಯ:
ಜಗತ್ತನ್ನು ಸೃಷ್ಟಿಸಿ, ಹದಿನಾಲ್ಕು ಲೋಕಗಳ ಜೀವರನ್ನು ಸಲಹುವ, ಸಂಹರಿಸುವ ಮಾಯೆಯ ತ್ರಿಗುಣಗಲ ವಾಸನೆಯನ್ನು ತನ್ನ ಸಾವಿರ ಧಾರೆಗಳ ಬೆಳಕಿನಲ್ಲಿ ಧರಿಸುವ ಸುದರ್ಶನ ಚಕ್ರವು ಉತ್ತರೆಯ ಗರ್ಭವನ್ನಾವರಿಸಿ ರಕ್ಷಿಸಲನುವಾಯಿತು.

ಅರ್ಥ:
ಜಗ: ಜಗತ್ತು; ಹೂಡು: ಅಣಿಗೊಳಿಸು, ಸಿದ್ಧಪಡಿಸು; ಮೇಣ್: ಅಥವ; ಚತುರ್ದಶ: ಹದಿನಾಲ್ಕು; ಜೀವ: ಪ್ರಾಣ; ಊಡು: ಆಧಾರ, ಆಶ್ರಯ; ಉಣಿಸು: ತಿನ್ನಿಸು; ಭಾವ: ಭಾವನೆ, ಚಿತ್ತವೃತ್ತಿ; ಬಲಿಸು: ಗಟ್ಟಿಪಡಿಸು; ಗುಣ: ನಡತೆ, ಸ್ವಭಾವ; ತ್ರಯ: ಮೂರು; ಸೊಗಡು: ಕಂಪು, ವಾಸನೆ; ಸಹಸ್ರ: ಸಾವಿರ; ಧಾರೆ: ವರ್ಷ; ಝಗೆ: ಹೊಳಪು, ಪ್ರಕಾಶ; ಸುದರ್ಶನ: ವಿಷ್ಣುವಿನ ಕೈಯಲ್ಲಿರುವ ಆಯುಧಗಳಲ್ಲಿ ಒಂದು, ಚಕ್ರಾಯುಧ; ಬಿಗಿ: ಭದ್ರವಾಗಿರುವುದು; ಸುತ್ತಲು: ಎಲ್ಲಾ ಕಡೆ; ವೇಢೆ: ಆಕ್ರಮಣ; ಗರ್ಭ: ಹೊಟ್ಟೆ;

ಪದವಿಂಗಡಣೆ:
ಜಗವ +ಹೂಡುವ +ಮೇಣ್ +ಚತುರ್ದಶ
ಜಗದ +ಜೀವರನ್+ಊಡಿ+ಉಣಿಸುವ
ಜಗವನ್+ಅಂತರ್ಭಾವದಲಿ +ಬಲಿಸುವ +ಗುಣ+ತ್ರಯದ
ಸೊಗಡು +ತನ್ನ +ಸಹಸ್ರ+ಧಾರೆಯ
ಝಗೆಯೊಳೆನಿಪ+ ಮಹಾಸುದರ್ಶನ
ಬಿಗಿದು +ಸುತ್ತಲು +ವೇಢೆಯಾಯ್ತ್+ಉತ್ತರೆಯ +ಗರ್ಭದಲಿ

ಅಚ್ಚರಿ:
(೧) ಜಗ – ೧-೩ ಸಾಲಿನ ಮೊದಲ ಪದ
(೨) ಸುದರ್ಶನದ ವಿವರ – ಸಹಸ್ರಧಾರೆಯ ಝಗೆಯೊಳೆನಿಪ ಮಹಾಸುದರ್ಶನ

ಪದ್ಯ ೫: ಆಲದ ಮರದಿಂದ ಕಾಗೆಗಳೇಕೆ ಬಿದ್ದವು?

ಭಾಗ ಬೀತುದು ರಜನಿಯಲಿ ಸರಿ
ಭಾಗವಿದ್ದುದು ಮೇಲೆ ತತ್ ಕ್ಷಣ
ಗೂಗೆ ಬಂದುದದೊಂದು ವಟಕುಜದಗ್ರಭಾಗದಲಿ
ಕಾಗೆಗಳ ಗೂಡುಗಳ ಹೊಯ್ದು ವಿ
ಭಾಗಿಸಿತು ತುಂಡದಲಿ ಬಿದ್ದವು
ಕಾಗೆ ಸುಭಟನ ಸಮ್ಮುಖದಲಿ ಸಹಸ್ರಸಂಖ್ಯೆಯಲಿ (ಗದಾ ಪರ್ವ, ೯ ಸಂಧಿ, ೫ ಪದ್ಯ)

ತಾತ್ಪರ್ಯ:
ಅರ್ಧರಾತ್ರಿಯಾಯಿತು. ಆಗ ಗೂಬೆಯೊಂದು ಆಲದ ಮರದ ಮೇಲೆ ಬಂದು ಕುಳಿತುಕೊಂಡಿತು. ಮರದಲ್ಲಿದ್ದ ಕಾಗೆಗಲ ಗೂಡುಗಲನ್ನು ಕೊಯ್ದು ಕಾಗೆಗಳನ್ನು ಕೊಕ್ಕಿನಿಂದ ಕುಕ್ಕಲು, ಕಾಗೆಗಳು ಸಹಸ್ರ ಸಂಖ್ಯೆಯಲ್ಲಿ ಕೆಳಗೆ ಬಿದ್ದವು.

ಅರ್ಥ:
ಭಾಗ: ಅಂಶ, ಪಾಲು; ಬೀತುದು: ಕಳೆದುದು; ರಜನಿ: ರಾತ್ರಿ; ಕ್ಷಣ: ಸಮಯ; ಗೂಗೆ: ಗೂಬೆ; ಬಂದು: ಆಗಮಿಸು; ವಟಕುಜ: ಆಲದ ಮರ; ಅಗ್ರ: ಮೇಲೆ; ಕಾಗೆ: ಕಾಕ; ಗೂಡು: ಮನೆ; ಹೊಯ್ದು: ಹೊಡೆ; ವಿಭಾಗಿಸು: ಒಡೆ, ಸೀಳು; ತುಂಡ: ಹಕ್ಕಿಗಳ ಕೊಕ್ಕು, ಚಂಚು; ಬಿದ್ದು: ಬೀಳು, ಕುಸಿ; ಸುಭಟ: ಪರಾಕ್ರಮಿ; ಸಹಸ್ರ: ಸಾವಿರ; ಸಂಖ್ಯೆ: ಎಣಿಕೆ;

ಪದವಿಂಗಡಣೆ:
ಭಾಗ +ಬೀತುದು +ರಜನಿಯಲಿ +ಸರಿ
ಭಾಗವಿದ್ದುದು +ಮೇಲೆ +ತತ್ +ಕ್ಷಣ
ಗೂಗೆ +ಬಂದುದದ್+ಒಂದು +ವಟಕುಜದ್+ಅಗ್ರ+ಭಾಗದಲಿ
ಕಾಗೆಗಳ +ಗೂಡುಗಳ +ಹೊಯ್ದು +ವಿ
ಭಾಗಿಸಿತು +ತುಂಡದಲಿ +ಬಿದ್ದವು
ಕಾಗೆ +ಸುಭಟನ +ಸಮ್ಮುಖದಲಿ +ಸಹಸ್ರ+ಸಂಖ್ಯೆಯಲಿ

ಅಚ್ಚರಿ:
(೧) ಭಾಗ, ಸರಿಭಾಗ, ವಿಭಾಗಿಸಿ, ಅಗ್ರಭಾಗ; – ಭಾಗ ಪದದ ಬಳಕೆ

ಪದ್ಯ ೪೪: ವೃದ್ಧಕ್ಷತ್ರನು ಹೇಗೆ ಮಡಿದನು?

ಏನಿದದ್ಭುತವೆನುತ ತಲೆಯನು
ತಾನೆ ಕೊಡಹಿದನಂಜಲಿಯನದ
ನೇನನೆಂಬೆನು ಕೃಷ್ಣರಾಯನ ಮಂತ್ರಶಕ್ತಿಯನು
ಆ ನರೇಂದ್ರನ ತಲೆ ಸಹಸ್ರವಿ
ಧಾನದಲಿ ಬಿರಿದುದು ಸುಯೋಧನ
ಸೇನೆ ಹರಿದುದು ಜರಿದುದರಿಭಟಧೈರ್ಯಗಿರಿನಿಕರ (ದ್ರೋಣ ಪರ್ವ, ೧೪ ಸಂಧಿ, ೪೪ ಪದ್ಯ)

ತಾತ್ಪರ್ಯ:
ಇದೇನಾಶ್ಚರ್ಯ ಎಂದುಕೊಂಡು ಆ ವೃದ್ಧಕ್ಷತ್ರನು ತಾನೇ ಬೊಗಸೆಯನ್ನು ಕೊಡವಿದನು. ಅದು ಕೆಳಕ್ಕೆ ಬಿದ್ದೊಡನೆ ಅವನ ತಲೆಯಲ್ಲಿ ಸಹಸ್ರ ಬಿರುಕುಗಳಾದವು. ವೃದ್ಧ ಕ್ಷತ್ರನೂ ಮಡಿದನು. ಕೃಷ್ಣನ ಉಪಾಯವು ಎಂಥದ್ದು! ಕೌರವ ಸೈನ್ಯ ಛಿದ್ರ ಛಿದ್ರವಾಯಿತು. ವೀರರು ಅಧೀನರಾದರು. ಪಡೆ ಹಿಮ್ಮೆಟ್ಟಿತ್ತು.

ಅರ್ಥ:
ಅದ್ಭುತ: ಆಶ್ಚರ್ಯ; ತಲೆ: ಶಿರ; ಕೊಡಹು: ತಳ್ಳು, ಬೀಳಿಸು; ಅಂಜಲಿ: ಕೈಬೊಗಸೆ; ರಾಯ: ರಾಜ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಶಕ್ತಿ: ಬಲ; ನರೇಂದ್ರ: ರಾಜ; ತಲೆ: ಶಿರ; ಸಹಸ್ರ: ಸಾವಿರ; ವಿಧಾನ: ಬಗೆ; ಬಿರಿ: ಸೀಳು; ಸೇನೆ: ಸೈನ್ಯ; ಹರಿ: ಚದುರು; ಜರಿ: ಅಳುಕು, ಹಿಂಜರಿ; ಅರಿ: ವೈರಿ; ಭಟ: ಸೈನ್ಯ; ಧೈರ್ಯ: ಎದೆಗಾರಿಕೆ, ಕೆಚ್ಚು; ಗಿರಿ: ಬೆಟ್ಟ; ನಿಕರ: ಗುಂಪು;

ಪದವಿಂಗಡಣೆ:
ಏನಿದ್+ಅದ್ಭುತವ್+ಎನುತ +ತಲೆಯನು
ತಾನೆ +ಕೊಡಹಿದನ್+ಅಂಜಲಿಯನ್+ಅದ
ನೇನನ್+ಎಂಬೆನು +ಕೃಷ್ಣರಾಯನ +ಮಂತ್ರ+ಶಕ್ತಿಯನು
ಆ +ನರೇಂದ್ರನ +ತಲೆ +ಸಹಸ್ರ+ವಿ
ಧಾನದಲಿ +ಬಿರಿದುದು +ಸುಯೋಧನ
ಸೇನೆ +ಹರಿದುದು +ಜರಿದುದ್+ಅರಿ+ಭಟ+ಧೈರ್ಯ+ಗಿರಿ+ನಿಕರ

ಅಚ್ಚರಿ:
(೧) ರೂಪಕದ ಪ್ರಯೋಗ – ಸೈನ್ಯದ ಧೈರ್ಯದ ಬೆಟ್ಟ ಅಲುಗಾಡಿತು ಎಂದು ಹೇಳುವ ಪರಿ – ಜರಿದುದರಿಭಟಧೈರ್ಯಗಿರಿನಿಕರ

ಪದ್ಯ ೧೭: ಅಭಿಮನ್ಯುವನ್ನು ಕೌರವನು ಹೇಗೆ ಹೊಗಳಿದನು?

ತಂದೆ ಹಡೆಯನೆ ಮಗನನಹುದೋ
ಕಂದ ಕಲ್ಪಸಹಸ್ರ ನೋಂತಳೊ
ಇಂದುಧರನನು ನಿನ್ನ ತಾಯಿ ಸುಭದ್ರೆಯಲ್ಲದಡೆ
ಇಂದಿನೀ ಬಲವೀ ಸಮರ ಜಯ
ದಂದವೀ ಸೌರಂಭವೀ ಸರ
ಳಂದವೀ ತೆರಳಿಕೆಯದಾವಂಗೆಂದನವನೀಶ (ದ್ರೋಣ ಪರ್ವ, ೫ ಸಂಧಿ, ೧೭ ಪದ್ಯ)

ತಾತ್ಪರ್ಯ:
ನಿಜ, ತಂದೆ ಪಡೆದರೆ ಇಂತಹ ಮಗನನ್ನು ಪಡೆಯಬೇಕು. ನಿನ್ನ ತಾಯಿ ಸುಭದ್ರೆಯು ಸಹಸ್ರ ಕಲ್ಪಗಳ ಕಾಲ ಶಿವನನ್ನು ಆರಾಧಿಸಿ ಪಡೆದಿದ್ದಾಳೆ, ಇಲ್ಲದಿದ್ದರೆ ನೀನು ಇಂದು ತೋರಿಸುತ್ತಿರುವ ಶಕ್ತಿ, ಸಾಮರ್ಥ್ಯ ಯುದ್ಧವನ್ನು ಜಯಿಸುವ ಪರಿ, ಸಡಗರ ಬಾಣಪ್ರಯೋಗ ಇವೆಲ್ಲವು ಯಾರಿಗಿವೆ ಎಂದು ಕೌರವನು ಅಭಿಮನ್ಯುವಿನ ಸಾಹಸವನ್ನು ಮೆಚ್ಚಿದನು.

ಅರ್ಥ:
ತಂದೆ: ಪಿತ; ಹಡೆ: ಪಡೆ; ಮಗ: ಪುತ್ರ; ಕಂದ: ಪುತ್ರ; ಕಲ್ಪ: ಕಾಲದ ಪ್ರಮಾಣ, ಯುಗ; ಸಹಸ್ರ: ಸಾವಿರ; ನೋಂತ: ಆರಾಧನೆ, ನಿಯಮ; ಇಂದುಧರ: ಶಿವ; ಬಲ: ಶಕ್ತಿ; ಸಮರ: ಯುದ್ಧ; ಜಯ: ವಿಜಯ, ಗೆಲುವು; ಅಂದ: ಸೊಬಗು; ಸೌರಂಭ: ಸಂಭ್ರಮ, ಸಡಗರ; ಸರಳು: ಬಾಣ; ತೆರಳು: ಹೋಗು, ನಡೆ; ಅವನೀಶ: ರಾಜ;

ಪದವಿಂಗಡಣೆ:
ತಂದೆ +ಹಡೆಯನೆ +ಮಗನನ್+ಅಹುದೋ
ಕಂದ +ಕಲ್ಪ+ಸಹಸ್ರ+ ನೋಂತಳೊ
ಇಂದುಧರನನು+ ನಿನ್ನ+ ತಾಯಿ +ಸುಭದ್ರೆ+ಅಲ್ಲದಡೆ
ಇಂದಿನ್+ಈ+ ಬಲವ್+ಈ+ ಸಮರ+ ಜಯದ್
ಅಂದವ್+ಈ+ ಸೌರಂಭವ್+ಈ+ ಸರಳ್
ಅಂದವ್+ಈ+ ತೆರಳಿಕೆಯದ್+ಆವಂಗ್+ಎಂದನ್+ಅವನೀಶ

ಅಚ್ಚರಿ:
(೧) ಶಿವನನ್ನು ಇಂದುಧರ ಎಂದು ಕರೆದಿರುವುದು
(೨) ಅಭಿಮನ್ಯುವನ್ನು ಹೊಗಳುವ ಪರಿ – ಇಂದಿನೀ ಬಲವೀ ಸಮರ ಜಯದಂದವೀ ಸೌರಂಭವೀ ಸರ
ಳಂದವೀ ತೆರಳಿಕೆಯದಾವಂಗೆದನವನೀಶ
(೩) ಅಭಿಮನ್ಯುವಂತಹ ಮಗನನ್ನು ಪಡೆಯುವ ಕಷ್ಟ – ಕಲ್ಪಸಹಸ್ರ ನೋಂತಳೊ ಇಂದುಧರನನು ನಿನ್ನ ತಾಯಿ ಸುಭದ್ರೆಯಲ್ಲದಡೆ

ಪದ್ಯ ೨೦: ಕೃಷ್ಣನ ಪರಿಚಯವನ್ನು ಭೀಷ್ಮರು ಹೇಗೆ ಮಾಡಿದರು?

ದೆಸೆ ಪರಿಚ್ಛೇದಿಸದ ನುಡಿ ಹವ
ಣಿಸದ ಕಲ್ಪ ಸಹಸ್ರ ಕೋಟಿಯೊ
ಳಸಮಸೆಯ ಮಾಡದ ಮಹತ್ವದೊಳುರು ಮಹತ್ವದಲಿ
ಎಸೆವನಣುವಿಂಗಣುವೆನಿ ನಿ
ರ್ಮಿಸಿ ವಿಭಾಡಿಸಿ ಬರವಳಿದು ಹೆ
ಚ್ಚಿಸಿ ಮುರಿದನೀ ಜಗವ ನೀ ಹರಿಯೆಂದನಾ ಭೀಷ್ಮ (ಸಭಾ ಪರ್ವ, ೧೦ ಸಂಧಿ, ೨೦ ಪದ್ಯ)

ತಾತ್ಪರ್ಯ:
ಇವನನ್ನು ದಿಕ್ಕುಗಳು ಬೇರ್ಪಡಿಸುವುದಿಲ್ಲ, ಮಾತಿನಲ್ಲಿ ಇವನನ್ನು ಹಿಡಿಯಲು ಸಾಧ್ಯವಿಲ್ಲ, ಸಹಸ್ರಕೋಟಿ ಕಲ್ಪಗಳು ಕಳೆದರೂ ಇವನು ಸ್ವಲ್ಪವೂ ಮುಕ್ಕಾಗುವುದಿಲ್ಲ. ಇವನು ಅಣುವಿಗಿಂಅ ಸೂಕ್ಷ್ಮ, ದೊಡ್ಡದಕ್ಕಿಂತ ದೊಡ್ಡವನು. ಇವನು ಜಗತ್ತನ್ನು ಸೃಷ್ಟಿಸಿ, ಬೆಳೆಸಿ, ಹೊಡೆದು ನಾಶಮಾಡಿದವನು ಎಂದು ಭೀಷ್ಮರು ಶ್ರೀಕೃಷ್ಣನ ಸ್ವರೂಪವನ್ನು ತಿಳಿಸಿದರು.

ಅರ್ಥ:
ದೆಸೆ: ದಿಕ್ಕು; ಪರಿಚ್ಛೇದ: ವಿಂಗಡಿಸಿದ ಪ್ರಕಾರ; ನುಡಿ: ಮಾತು; ಹವಣಿಸು: ಅಳತೆ ಮಾಡು, ತೂಗು; ಕಲ್ಪ: ಬ್ರಹ್ಮನ ಒಂದು ದಿವಸ, ಸಹಸ್ರಯುಗ; ಸಹಸ್ರ: ಸಾವಿರ; ಕೋಟಿ: ಲೆಕ್ಕವಿಲ್ಲದ; ಅಸಮ: ಸಮವಲ್ಲದ, ಅಸದೃಶವಾದ; ಮಹತ್ವ: ಮುಖ್ಯ; ಉರು: ಶ್ರೇಷ್ಠ; ಎಸೆ:ಶೋಭಿಸು; ಅಣು: ಅತ್ಯಂತ ಸೂಕ್ಷ್ಮವಾದ ಕಣ; ನಿರ್ಮಿಸು: ರಚಿಸು; ವಿಭಾಡ: ನಾಶಮಾಡುವವನು; ಅಳಿ: ನಾಶ; ಹೆಚ್ಚಿಸು: ಜಾಸ್ತಿ ಮಾಡು; ಮುರಿ: ಸೀಳು; ಜಗ: ಪ್ರಪಂಚ, ಜಗತ್ತು; ಹರಿ: ವಿಷ್ಣು;

ಪದವಿಂಗಡಣೆ:
ದೆಸೆ +ಪರಿಚ್ಛೇದಿಸದ+ ನುಡಿ +ಹವ
ಣಿಸದ +ಕಲ್ಪ +ಸಹಸ್ರ +ಕೋಟಿಯೊಳ್
ಅಸಮಸೆಯ+ ಮಾಡದ +ಮಹತ್ವದೊಳ್+ಉರು +ಮಹತ್ವದಲಿ
ಎಸೆವನ್+ಅಣುವಿಂಗ್+ಅಣುವೆನಿ+ ನಿ
ರ್ಮಿಸಿ +ವಿಭಾಡಿಸಿ +ಬರವಳಿದು +ಹೆ
ಚ್ಚಿಸಿ+ ಮುರಿದನೀ +ಜಗವ ನೀ ಹರಿಯೆಂದನಾ ಭೀಷ್ಮ

ಅಚ್ಚರಿ:
(೧) ಸಮಯದ ಅಗಾಧ ಗಣನೆ – ಕಲ್ಪ ಸಹಸ್ರ ಕೋಟಿ
(೨) ಮಹತ್ವದೊಳುರು ಮಹತ್ವದಲಿ ಎಸೆವನಣುವಿಂಗಣುವೆನಿ – ಶ್ರೀಕೃಷ್ಣನ ಪರಿಚಯ

ಪದ್ಯ ೧೬: ಪತ್ರ ಓದಿದ ರಾಜರು ಏನೆಂದು ಯೋಚಿಸಿದರು?

ಮಾಡಿದರೆ ಶತಯಾಗವನು ಕೈ
ಗೂಡುವಳು ಶಚಿ ಮಖ ಸಹಸ್ರವ
ಮಾಡಿ ಮೇಣ್ಜನಿಸಿದೊಡೆ ಬಹಳೇ ದ್ರೌಪದಾದೇವಿ
ನೋಡುವೆವು ನಡೆ ಜನ್ಮ ಶತದಲಿ
ಕೂಡಿ ಕೊಬ್ಬಿದ ಪುಣ್ಯಫಲಕೈ
ಗೂಡುವುದೊ ತಪ್ಪೇನೆನುತ ನೆರೆದುದು ನೃಪಸ್ತೋಮ (ಆದಿ ಪರ್ವ, ೧೧ ಸಂಧಿ, ೧೬ ಪದ್ಯ)

ತಾತ್ಪರ್ಯ:
ಪತ್ರ ತಲುಪಿದ ನೃಪರು, ನೂರು ಅಶ್ವಮೇಧಯಾಗವನ್ನು ಮಾಡಿದರೆ ಇಂದ್ರ ಪದವಿ ದೊರಕಬಹುದು (ಶಚಿ – ಇಂದ್ರನ ಹೆಂಡತಿ)ಅಂತಹ ಸಹಸ್ರ ಯಾಗಗಳನ್ನು ಮಾಡಿದರೆ, ದ್ರೌಪದಿಯು ಸಿಕ್ಕಾಳೆ? ನಾವು ಹಿಂದಿನ ನೂರು ಜನ್ಮದಲ್ಲಿ ಮಾಡಿದ ಪುಣ್ಯವು ಈಗ ಫಲಿಸೀತು, ಸ್ವಯಂವರಕ್ಕೆ ಹೋಗಿ ನೋಡುವುದರಲ್ಲಿ ತಪ್ಪಿಲ್ಲ ಎಂದು ಕೊಂಡು ಪಾಂಚಾಲ ನಗರಕ್ಕೆ ಬಂದಿತು ರಾಜರ ದಂಡು.

ಅರ್ಥ:
ಮಾಡು: ನಿರ್ವಹಿಸು, ಕಾರ್ಯರೂಪಕ್ಕೆ ತರು; ಶತ: ನೂರು; ಯಾಗ: ಮಖ, ಯಜ್ನ; ಕೈಗೂಡು: ಫಲಿಸು; ಶಚಿ: ಇಂದ್ರಾಣಿ; ಮಖ: ಯಜ್ಞ; ಸಹಸ್ರ: ಸಾವಿರ; ಜನಿಸು: ಹುಟ್ಟು; ಬಹಳ: ಹೆಚ್ಚು, ಅಧಿಕ; ನಡೆ: ಮುನ್ನುಗ್ಗು, ಚಲಿಸು; ಜನ್ಮ: ಹುಟ್ಟು; ಕೂಡಿ: ಒಟ್ಟಾಗಿ; ಕೊಬ್ಬು: ಹೆಚ್ಚಾಗು, ಅಧಿಕ; ಪುಣ್ಯ: ಒಳ್ಳೆಯ; ಫಲ: ಲಾಭ, ಪ್ರಯೋಜನ; ತಪ್ಪು:ಅಪಚಾರ; ನೆರೆ: ಸೇರು, ಜೊತೆಗೂಡು, ಗುಂಪು; ಸ್ತೋಮ: ಗುಂಪು, ಸಮೂಹ; ನೃಪ: ರಾಜ;

ಪದವಿಂಗಡನೆ:
ಮಾಡಿದರೆ+ ಶತ+ಯಾಗವನು +ಕೈ
ಗೂಡುವಳು+ ಶಚಿ+ ಮಖ +ಸಹಸ್ರವ
ಮಾಡಿ +ಮೇಣ್+ಜನಿಸಿದೊಡೆ +ಬಹಳೇ +ದ್ರೌಪದಾ+ದೇವಿ
ನೋಡುವೆವು+ ನಡೆ+ ಜನ್ಮ+ ಶತದಲಿ
ಕೂಡಿ +ಕೊಬ್ಬಿದ +ಪುಣ್ಯ+ಫಲ+ಕೈ
ಗೂಡುವುದೊ +ತಪ್ಪೇನ್+ಎನುತ +ನೆರೆದುದು +ನೃಪಸ್ತೋಮ

ಅಚ್ಚರಿ:
(೧) ಕೈ- ೧, ೫ ಸಾಲಿನ ಕೊನೆ ಪದ; ಗೂಡು – ೨, ೬ ಸಾಲಿನ ಮೊದಲ ಪದ
(೨) ಮಾಡಿ – ೧, ೩ ಸಾಲಿನ ಮೊದಲ ಪದ
(೩) ಕೂಡಿ, ಮಾಡಿ – ಪ್ರಾಸ ಪದಗಳು
(೪) ಮಖ, ಯಾಗ – ಸಮಾನಾರ್ಥಕ ಪದ
(೫) ಶತ – ೨ ಬಾರಿ ಪ್ರಯೋಗ (೧, ೪ ಸಾಲು), ಸಹಸ್ರ – ಸಂಖ್ಯಾಸೂಚಕ ಪದಗಳ ಬಳಕೆ
(೬) ೫, ೬ ಸಾಲಿನ ಮೊದಲೆರಡು ಪದ ಒಂದೇ ಅಕ್ಷರದ್ದು, ನೋಡುವೆವು ನಡೆ; ಕೂಡಿ ಕೊಬ್ಬಿದ