ಪದ್ಯ ೨೨: ಶಲ್ಯನು ಮೊದಲು ಯಾರೊಡನೆ ಹೋರಾಟ ಮಾಡಿದನು?

ಆರಿವರು ಸಹದೇವ ನಕುಲರೆ
ಭಾರಿಯಾಳುಗಳಹಿರಲೇ ಬಿಲು
ಗಾರರಲ್ಲಾ ಕಳಶಸಿಂಧನ ಕೋಲ ಮಕ್ಕಳಲೇ
ಸೈರಿಸಿದರೊಪ್ಪುವುದಲೇ ಜ
ಜ್ಝಾರತನಕಾಭರಣವಹುದೆನು
ತಾರುಭಟೆಯಲಿ ಶಲ್ಯ ಹಳಚಿದನರ್ಜುನಾನುಜರ (ಶಲ್ಯ ಪರ್ವ, ೨ ಸಂಧಿ, ೨೨ ಪದ್ಯ)

ತಾತ್ಪರ್ಯ:
ಇವರು ಯಾರು? ನಕುಲ ಸಹದೇವರೇ? ಮಹಾವೀರರೋ? ಬಾಣವಿದ್ಯೆಯ ಗುರು ದ್ರೋಣನ ಶಿಷ್ಯರಲ್ಲವೇ? ಯುದ್ಧದಲ್ಲಿ ನನ್ನ ಹೊಡೆತವನ್ನು ತಡೆದುಕೊಂಡರೆ ಆಗ ನೀವು ವೀರರೆಂದು ಒಪ್ಪಬಹುದು. ನಿಮ್ಮ ಶೌರ್ಯಕ್ಕೆ ಭೂಷನವೆನಿಸೀತು, ಎನ್ನುತ್ತಾ ಶಲ್ಯನು ನಕುಲ ಸಹದೇವರೊಡನೆ ಹೋರಾಡಿದನು.

ಅರ್ಥ:
ಭಾರಿ: ದೊಡ್ಡ; ಆಳು: ಸೇವಕ, ವೀರ; ಬಿಲುಗಾರ: ಬಿಲ್ವಿದ್ಯೆಯಲ್ಲಿ ನುರಿತನಾದ; ಕಳಶಸಿಂಧ: ದ್ರೋಣ; ಕೋಲು: ಬಾಣ; ಮಕ್ಕಳು: ಸುತರು; ಸೈರಿಸು: ತಳು; ಒಪ್ಪು: ಸಮ್ಮತಿ; ಜಜ್ಝಾರ: ಪರಾಕ್ರಮಿ, ಶೂರ; ಆಭರಣ: ಒಡವೆ; ಆರುಭಟೆ: ಆರ್ಭಟ; ಹಳಚು: ತಾಗು, ಬಡಿ; ಅನುಜ: ತಮ್ಮ;

ಪದವಿಂಗಡಣೆ:
ಆರಿವರು +ಸಹದೇವ +ನಕುಲರೆ
ಭಾರಿ+ಆಳುಗಳಹಿರಲೇ+ ಬಿಲು
ಗಾರರಲ್ಲಾ +ಕಳಶಸಿಂಧನ+ ಕೋಲ +ಮಕ್ಕಳಲೇ
ಸೈರಿಸಿದರ್+ಒಪ್ಪುವುದಲೇ +ಜ
ಜ್ಝಾರತನಕ್+ಆಭರಣವಹುದ್+ಎನುತ್
ಆರುಭಟೆಯಲಿ +ಶಲ್ಯ +ಹಳಚಿದನ್+ಅರ್ಜುನ+ಅನುಜರ

ಅಚ್ಚರಿ:
(೧) ೪ ಸಾಲು ಒಂದೇ ಪದವಾಗಿ ರಚನೆ – ಜ್ಝಾರತನಕಾಭರಣವಹುದೆನು

ಪದ್ಯ ೪: ಯಾರೊಡನೆ ಯಾರು ಯುದ್ಧವನ್ನಾರಂಭಿಸಿದರು?

ಶಕುನಿ ಸಹದೇವನೊಳು ಶಲ್ಯನು
ನಕುಲನೊಳು ದುಶ್ಯಾಸನನು ಸಾ
ತ್ಯಕಿಯೊಡನೆ ಸೈಮ್ಧವನು ಕುಂತೀಭೋಜ ಭೂಪನೊಳು
ಸಕಲ ನಾಯಕರಂದು ಯುದ್ಧೋ
ದ್ಯುಕುತರಾದರು ಕೇಳು ನೃಪ ತಾ
ವಕರ ಕೌಂತೇಯರ ಸಮಗ್ರಾಹವದ ವಿಸ್ತರವ (ಭೀಷ್ಮ ಪರ್ವ, ೫ ಸಂಧಿ, ೪ ಪದ್ಯ)

ತಾತ್ಪರ್ಯ:
ಶಕುನಿ ಸಹದೇವನೊಡನೆ, ಶಲ್ಯನು ನಕುಲನೊಡನೆ ದುಶ್ಯಾಸನನು ಸಾತ್ಯಕಿಯೊಡನೆ ಸೈಂಧವನು ಕುಂತೀಭೋಜನೊಡನೆ ಯುದ್ಧವನ್ನು ಆರಂಭಿಸಿದರು. ಧೃತರಾಷ್ಟ್ರ ನಿನ್ನವರ ಮತ್ತು ಪಾಂಡವರ ಯುದ್ಧ ವಿವರವನ್ನು ಕೇಳು.

ಅರ್ಥ:
ಭೂಪ: ರಾಜ; ಸಕಲ: ಎಲ್ಲಾ; ನಾಯಕ: ಒಡೆಯ; ಯುದ್ಧ: ಕಾಳಗ; ಉದ್ಯುಕ್ತ: ತೊಡಗುವವನು; ಕೇಳು: ಆಲಿಸು; ನೃಪ: ರಾಜ; ತಾವಕ: ತಮ್ಮವನು, ಆತ್ಮೀಯ; ಸಮಗ್ರ: ಎಲ್ಲಾ; ಆಹವ: ಯುದ್ಧ; ವಿಸ್ತರ: ಹಬ್ಬುಗೆ, ವಿಸ್ತಾರ; ಕುಂತೀಭೋಜ: ಕುಂತಿಯ ಸಾಕು ತಂದೆ;

ಪದವಿಂಗಡಣೆ:
ಶಕುನಿ +ಸಹದೇವನೊಳು +ಶಲ್ಯನು
ನಕುಲನೊಳು +ದುಶ್ಯಾಸನನು+ ಸಾ
ತ್ಯಕಿಯೊಡನೆ +ಸೈಂಧವನು +ಕುಂತೀಭೋಜ +ಭೂಪನೊಳು
ಸಕಲ+ ನಾಯಕರಂದು +ಯುದ್ಧೋ
ದ್ಯುಕುತರಾದರು+ ಕೇಳು+ ನೃಪ +ತಾ
ವಕರ +ಕೌಂತೇಯರ +ಸಮಗ್ರ+ಆಹವದ +ವಿಸ್ತರವ

ಅಚ್ಚರಿ:
(೧) ನೃಪ, ಭೂಪ – ಸಮನಾರ್ಥಕ ಪದ
(೨) ಕೌರವರು ಪಾಂಡವರು ಎಂದು ಹೇಳಲು – ತಾವಕರ, ಕೌಂತೇಯರ ಪದದ ಬಳಕೆ

ಪದ್ಯ ೧೫: ದ್ವಾರಕೆಯ ಸೈನ್ಯದ ಗಾತ್ರವೇನು?

ಅವರೊಳೊಂದಕ್ಷೋಹಿಣಿಯದು ಮಾ
ಧವನ ಮನೆಯದು ಧೃಷ್ಟಕೇತು
ಪ್ರವರನಾತನು ಚೈದ್ಯನಂದನನವರ ಕಂಡಿಹನು
ಅವರ ಹೊರೆಯಲಿ ವೀರಸೇನಾ
ನಿವಹದೊಳು ಸಹದೇವನಾತನ
ಸವಹರೆಯ ನಕುಲಾಂಕನಿವರಾಹವ ಧುರಂಧರರು (ಭೀಷ್ಮ ಪರ್ವ, ೨ ಸಂಧಿ, ೧೫ ಪದ್ಯ)

ತಾತ್ಪರ್ಯ:
ಅವರ ಬಳಿ ಒಂದು ಅಕ್ಷೋಹಿಣಿ ಸೈನ್ಯವಿದೆ, ಅದು ಕೃಷ್ಣನ ಮನೆಯಾದ ದ್ವಾರಕೆಯದು, ಧೃಷ್ಟಕೇತು, ಚೈದ್ಯನ ಮಗ ಅಲ್ಲಿದ್ದಾರೆ, ಅವರ ಬಳಿ ಯುದ್ಧದಲ್ಲಿ ಧುರಂಧರರಾದ ಸಹದೇವ ನಕುಲರಿದ್ದಾರೆ.

ಅರ್ಥ:
ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಮಾಧವ: ಕೃಷ್ಣ; ಮನೆ: ಆಲಯ; ಪ್ರವರ: ಪ್ರಧಾನ ವ್ಯಕ್ತಿ; ನಂದನ: ಮಗ; ಹೊರೆ: ಸಮೀಪ; ವೀರ: ಪರಾಕ್ರಮ; ಸೇನ: ಸೈನ್ಯ; ನಿವಹ: ಗುಂಪು; ಹರೆ: ವಿಸ್ತಾರ; ಆಹವ: ಯುದ್ಧ; ಧುರಂಧರ: ಪರಾಕ್ರಮಿ;

ಪದವಿಂಗಡಣೆ:
ಅವರೊಳ್+ಒಂದಕ್ಷೋಹಿಣಿಯದು+ ಮಾ
ಧವನ +ಮನೆಯದು +ಧೃಷ್ಟಕೇತು
ಪ್ರವರನ್+ಆತನು +ಚೈದ್ಯ+ನಂದನನ್+ಅವರ+ ಕಂಡಿಹನು
ಅವರ+ ಹೊರೆಯಲಿ +ವೀರ+ಸೇನಾ
ನಿವಹದೊಳು +ಸಹದೇವನ್+ಆತನ
ಸವಹರೆಯ +ನಕುಲಾಂಕನಿವರ+ಆಹವ +ಧುರಂಧರರು

ಅಚ್ಚರಿ:
(೧) ದ್ವಾರಕೆ ಎಂದು ಹೇಳಲು – ಮಾಧವನ ಮನೆ ಪದದ ಬಳಕೆ

ಪದ್ಯ ೧೬: ಧರ್ಮಜನು ಯಾರನ್ನು ಮತ್ತೆ ಕಳುಹಿಸಿದನು?

ಜಡಿಯಲೆರಡಳ್ಳೆಗಳು ಕೊರಳೈ
ಕುಡಿದನುದಕವನಬುಜದೆಲೆಯಲಿ
ಹಿಡಿದನನಿಬರಿಗಮಳ ಜಲವನು ಮರಳಿ ನಿಮಿಷದಲಿ
ತಡಿಯನಡರಿದು ಧೊಪ್ಪನವನಿಗೆ
ಕೆಡೆದು ಪರವಶನಾದನಿತ್ತಲು
ತಡೆದನೇಕೆಂದಟ್ಟಿದನು ಸಹದೇವನನು ನೃಪತಿ (ಅರಣ್ಯ ಪರ್ವ, ೨೬ ಸಂಧಿ, ೧೬ ಪದ್ಯ)

ತಾತ್ಪರ್ಯ:
ಎರಡು ಅಳ್ಳೆಗಳೂ ಜಡಿಯುವಂತೆ ಕೊರಳಿನವರೆಗೆ ನೀರನ್ನು ಕುಡಿದು, ಕಮಲದೆಲೆಯಲ್ಲಿ ಸಹೋದರರಿಗೆ ನೀರನ್ನು ತುಂಬಿಕೋಂಡು, ಹಿಂದಿರುಗಿ ದಡಕ್ಕೆ ಹತ್ತಿ ನಕುಲನು ಪರವಶನಾಗಿ ಮರಣಹೊಂದಿದನು. ನಕುಲನು ಬರುವುದು ತಡವಾಯಿತೆಂದು ಧರ್ಮಜನು ಸಹದೇವನನ್ನು ಕಳುಹಿಸಿದನು.

ಅರ್ಥ:
ಜಡಿ: ತುಂಬು; ಅಳ್ಳೆ: ಪಕ್ಕೆ; ಕೊರಳು: ಗಂಟಲು; ಕುಡಿ: ಪಾನಮಾಡು; ಉದಕ: ನೀರು; ಅಬುಜ: ತಾವರೆ; ಎಲೆ: ಪರ್ಣ; ಹಿಡಿದು: ಗ್ರಹಿಸು; ಅನಿಬರಿಗೆ: ಅಷ್ಟು ಜನರಿಗೆ; ಅಮಳ: ನಿರ್ಮಲ; ಜಲ: ನೀರು; ಮರಳಿ: ಹಿಂದಿರುಗು; ನಿಮಿಷ: ಕ್ಷಣಮಾತ್ರ; ತಡಿ: ದಡ; ಅಡರು: ಮೇಲಕ್ಕೆ ಹತ್ತು; ಧೊಪ್ಪನೆ: ಜೋರಾಗಿ; ಅವನಿ: ಭೂಮಿ; ಕೆಡೆ: ಬೀಳು, ಕುಸಿ; ಪರವಶ: ಮೂರ್ಛೆ; ತಡೆ: ತಡ, ವಿಳಂಬ; ಅಟ್ಟು: ಬೆನ್ನುಹತ್ತಿ ಹೋಗು; ನೃಪತಿ: ರಾಜ;

ಪದವಿಂಗಡಣೆ:
ಜಡಿಯಲ್+ಎರಡ್+ಅಳ್ಳೆಗಳು+ ಕೊರಳೈ
ಕುಡಿದನ್+ಉದಕವನ್+ಅಬುಜದ್+ಎಲೆಯಲಿ
ಹಿಡಿದನ್+ಅನಿಬರಿಗ್+ಅಮಳ +ಜಲವನು +ಮರಳಿ +ನಿಮಿಷದಲಿ
ತಡಿಯನ್+ಅಡರಿದು +ಧೊಪ್ಪನ್+ಅವನಿಗೆ
ಕೆಡೆದು +ಪರವಶನಾದನ್+ಇತ್ತಲು
ತಡೆದನ್+ಏಕೆಂದ್+ಅಟ್ಟಿದನು +ಸಹದೇವನನು +ನೃಪತಿ

ಅಚ್ಚರಿ:
(೧) ಉದಕ, ಜಲ – ಸಮನಾರ್ಥಕ ಪದ
(೨) ೨ನೇ ಸಾಲು ಒಂದೇ ಪದವಾಗಿರುವುದು – ಕುಡಿದನುದಕವನಬುಜದೆಲೆಯಲಿ

ಪದ್ಯ ೧೩: ನಕುಲನಿಗೆ ಸರೋವರದ ಕೃತಕ ನೋಟವು ತಿಳಿಯಿತೇ?

ಖಳರ ಸತ್ಯದವೋಲು ವಂಚಿಸಿ
ಗೆಲಿದುದಾತನ ಮನವ ಮಾಯೆಯ
ಚೆಲುವಿನಂತಿರೆ ಚದುರುಗೆಡಿಸಿತು ತಿಳಿಯಲರಿದೆನಿಸಿ
ಲಲನೆಯರ ಹೃದಯದವೊಲೀಕ್ಷಿಸೆ
ನೆಲೆಯನೀಯದ ಕೃತಕ ಸರಸಿಯ
ಸುಲಭತೆಗೆ ಸಹದೇವನಣ್ಣನು ಸೋತು ನಡೆತಂದ (ಅರಣ್ಯ ಪರ್ವ, ೨೬ ಸಂಧಿ, ೧೩ ಪದ್ಯ)

ತಾತ್ಪರ್ಯ:
ವಂಚಕರು ಸತ್ಯವೆಂದು ಮಾತಿನಂತೆ ಸರೋವರದ ಚೆಲುವು ನಕುಲನನ್ನು ವಂಚಿಸಿತು. ಮಾಯೆಯ ಚೆಲುವಿನಮ್ತೆ ತಿಳಿಯಲಸಾಧ್ಯವಾಗಿ ನಕುಲನ ಮನಸ್ಸನ್ನು ಮೋಹಿಸಿತು. ನೋಟದಿಂದ ಸ್ತ್ರೀ ಹೃದಯದ ನೆಲೆ ಹೇಗೆ ತಿಳಿಯುವುದಿಲ್ಲವೋ ಹಾಗೆ ಆ ಕೃತ್ರಿಮ ಸರೋವರದ ನಿಜವು ಅವನಿಗೆ ತಿಳಿಯಲಿಲ್ಲ. ತಾನು ಬಯಸಿದ್ದು ಸುಲಭವಾಗಿ ದೊರಕಿತೆಂದು ಭ್ರಮಿಸಿ ನಕುಲನು ಸರೋವರವನ್ನು ಪ್ರವೇಶಿಸಿದನು.

ಅರ್ಥ:
ಖಳ: ದುಷ್ಟ; ಸತ್ಯ: ನಿಜ; ವಂಚಿಸು: ಮೋಸಮಾಡು; ಗೆಲಿದು: ಜಯಗಳಿಸು; ಮನ: ಮನಸ್ಸು; ಮಾಯೆ: ಗಾರುಡಿ; ಚೆಲುವು: ಅಂದ; ಚದುರು: ಜಾಣತನ, ಕೌಶಲ; ಕೆಡಿಸು: ಹಾಳುಮಾದು; ತಿಳಿ: ಅರಿ; ಅರಿ: ತಿಳಿ; ಲಲನೆ: ಹೆನ್ಣು; ಹೃದಯ: ಎದೆ; ಈಕ್ಷಿಸು: ನೋಡು; ನೆಲೆ: ಆಶ್ರಯ, ಆಧಾರ; ಕೃತಕ: ಕಪಟ; ಸರಸಿ: ಸರೋವರ; ಸುಲಭ: ಸಲೀಸು; ಅಣ್ಣ: ಸಹೋದರ; ಸೋತು: ಪರಾಭವ; ನಡೆ

ಪದವಿಂಗಡಣೆ:
ಖಳರ +ಸತ್ಯದವೋಲು+ ವಂಚಿಸಿ
ಗೆಲಿದುದ್+ಆತನ +ಮನವ +ಮಾಯೆಯ
ಚೆಲುವಿನಂತಿರೆ+ ಚದುರು+ಕೆಡಿಸಿತು +ತಿಳಿಯಲರಿದೆನಿಸಿ
ಲಲನೆಯರ +ಹೃದಯದವೊಲ್+ಈಕ್ಷಿಸೆ
ನೆಲೆಯನೀಯದ +ಕೃತಕ+ ಸರಸಿಯ
ಸುಲಭತೆಗೆ +ಸಹದೇವನ್+ಅಣ್ಣನು+ ಸೋತು +ನಡೆತಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಲಲನೆಯರ ಹೃದಯದವೊಲೀಕ್ಷಿಸೆನೆಲೆಯನೀಯದ

ಪದ್ಯ ೧೧: ಧರ್ಮರಾಜನ ಕರೆಗೆ ಯಾರು ಮುಂದೆ ಬಂದರು?

ಹರಿಬದೋಲೆಯಕಾರರೋ ಮು
ಕ್ಕುರುಕಿದರೊ ಪವನಜನು ಸಿಕ್ಕಿದ
ದೊರೆಯ ಬಿಡಿಸೋ ನೂಕೆನುತ ಪಾಂಚಾಲ ಕೈಕೆಯರು
ವರ ನಕುಳ ಸಹದೇವ ಸಾತ್ಯಕಿ
ತುರುಕ ಬರ್ಬರ ಭೋಟ ಮಾಗಧ
ಮರುಪುಳಿಂದಾದಿಗಲು ಕವಿದುದು ನೃಪನ ಸನ್ನೆಯಲಿ (ಕರ್ಣ ಪರ್ವ, ೧೩ ಸಂಧಿ, ೧೧ ಪದ್ಯ)

ತಾತ್ಪರ್ಯ:
ಭೀಮನನ್ನು ಕೌರವ ಸೇನೆಯು ಆವರಿಸಿರುವುದನ್ನು ನೋಡಿದ ಧರ್ಮಜನು ಸನ್ನೆ ಮಾಡಲು ಪಾಂಚಲರು, ಕೈಕೆಯರು, ನಕುಲ, ಸಹದೇವ, ಸಾತ್ಯಕಿ, ತುರುಕರು, ಬರ್ಬರರು, ಭೋಟರು, ಮಾಗಧರು ಬಂದರು. ಕರ್ಣನ ಸೋಲಿನ ಸೇಡು ತೀರಿಸಿಕೊಳ್ಳಲು ವೀರರು ಮುತ್ತಿದರು. ಧರ್ಮರಾಯನು ಭೀಮನನ್ನು ಬಿಡಿಸಿರಿ ಎಂದು ವೈರಿಸೇನೆಯನ್ನಿರಿಸಿದರು.

ಅರ್ಥ:
ಹರಿಬ: ಯುದ್ಧ; ಓಲೆಯಕಾರ: ಸೇವಕ; ಮುಕ್ಕುರು: ಕವಿ, ಮುತ್ತು, ಆವರಿಸು; ಪವನಜ: ಭೀಮ; ಸಿಕ್ಕು: ಪಡೆ; ದೊರೆ: ರಾಜ; ಬಿಡಿಸು: ಬಂಧಮುಕ್ತಗೊಳಿಸು; ನೂಕು: ತಳ್ಳು; ವರ: ಶ್ರೇಷ್ಠ; ಆದಿ: ಮುಂತಾದ; ಕವಿ: ಆವರಿಸು; ನೃಪ: ರಾಜ; ಸನ್ನೆ: ಸಂಕೇತ;

ಪದವಿಂಗಡಣೆ:
ಹರಿಬದ್+ಓಲೆಯಕಾರರೋ+ ಮು
ಕ್ಕುರುಕಿದರೊ +ಪವನಜನು+ ಸಿಕ್ಕಿದ
ದೊರೆಯ+ ಬಿಡಿಸೋ +ನೂಕೆನುತ +ಪಾಂಚಾಲ +ಕೈಕೆಯರು
ವರ +ನಕುಳ +ಸಹದೇವ+ ಸಾತ್ಯಕಿ
ತುರುಕ +ಬರ್ಬರ +ಭೋಟ +ಮಾಗಧ
ಮರುಪುಳಿಂದಾದಿಗಲು +ಕವಿದುದು+ ನೃಪನ+ ಸನ್ನೆಯಲಿ

ಅಚ್ಚರಿ:
(೧) ಪಾಂಚಾಲ, ಕೈಕೆಯರು,ನಕುಳ, ಸಹದೇವ, ಸಾತ್ಯಕಿ, ತುರುಕ, ಬರ್ಬರ, ಭೋಟ, ಮಾಗಧ
ಪುಳಿಂದ – ಧರ್ಮಜನ ಕರೆಗೆ ಬಂದ ಸೈನ್ಯ ದಳ

ಪದ್ಯ ೧೭: ಕರ್ಣನೆದುರು ಎಷ್ಟು ಜನ ಉಳಿದಿದ್ದರು?

ತೆರಳಿದನು ಸಹದೇವ ನಸು ಪೈ
ಸರಿಸಿದನು ನಕುಳನು ಶಿಖಂಡಿಯ
ಕರಣ ತಲೆಕೆಳಕಾಯ್ತು ಕಾಣೆನು ಸಾತ್ಯಕಿಯ ರಥದ
ಮುರಿವ ಕಂಡೆನು ಭೀಮ ದುಗುಡದ
ಭರದಲಿದ್ದನು ಮಿಕ್ಕ ಬಲ ನಾ
ಲ್ಕೆರಡೊ ನಾಲ್ಕೊಂದೋ ನಿಧಾನಿಸಲರಿಯೆ ನಾನೆಂದ (ಕರ್ಣ ಪರ್ವ, ೧೧ ಸಂಧಿ, ೧೭ ಪದ್ಯ)

ತಾತ್ಪರ್ಯ:
ಕರ್ಣನ ಭಯಂಕರ ಸ್ವರೂಪದ ಯುದ್ಧವನ್ನು ಕಂಡು ಎಲ್ಲರೂ ಪೆಟ್ಟುತಿಂದರು. ಸಹದೇವ ಹಿನ್ನಡೆದನು, ನಕುಲನು ಸ್ವಲ್ಪಹೊತ್ತು ಹಿಮ್ಮೆಟ್ಟಿದನು, ಶಿಖಂಡಿಯ ಮನಸ್ಸು ಯುದ್ಧವನ್ನು ಬಿಟ್ಟು ತಲೆಕೆಳಗಾಯಿತು, ಸಾತ್ಯಕಿಯ ರಥ ಮುರಿಯಿತು, ಭೀಮನು ದುಃಖಾಕ್ರಾಂತನಾದನು. ಅಲ್ಲಿ ಐದೋ ಆರೋ ಜನರು ಮಾತ್ರ ಕರ್ಣನೆದುರು ನಿಂತಿದ್ದರು.

ಅರ್ಥ:
ತೆರಳು: ಹೋಗು, ನಡೆ; ನಸು:ಕೊಂಚ, ಸ್ವಲ್ಪ; ಸೈರಿಸು: ತಾಳು, ಸಹಿಸು; ಕರಣ: ಮನಸ್ಸು; ತಲೆಕೆಳಗೆ: ಮೇಲೆ ಕೆಳಗೆ, ಉಲ್ಟ; ಕಾಣೆ: ತೋರದ; ರಥ: ಬಂಡಿ; ಮುರಿ: ಸೀಳು ದುಗುಡ: ದುಃಖ; ಭರ: ವೇಗ; ಮಿಕ್ಕ: ಉಳಿದ; ಬಲ: ಸೈನ್ಯ; ನಿಧಾನ: ತಾಳು; ಅರಿ: ತಿಳಿ;

ಪದವಿಂಗಡಣೆ:
ತೆರಳಿದನು+ ಸಹದೇವ +ನಸು +ಪೈ
ಸರಿಸಿದನು+ ನಕುಳನು +ಶಿಖಂಡಿಯ
ಕರಣ+ ತಲೆಕೆಳಕಾಯ್ತು +ಕಾಣೆನು +ಸಾತ್ಯಕಿಯ +ರಥದ
ಮುರಿವ+ ಕಂಡೆನು +ಭೀಮ +ದುಗುಡದ
ಭರದಲಿದ್ದನು +ಮಿಕ್ಕ +ಬಲ +ನಾ
ಲ್ಕೆರಡೊ +ನಾಲ್ಕೊಂದೋ +ನಿಧಾನಿಸಲ್+ಅರಿಯೆ +ನಾನೆಂದ

ಅಚ್ಚರಿ:
(೧) ೫, ೬ ಎಂದು ಹೇಳಲು – ನಾಲ್ಕೆರಡೊ ನಾಲ್ಕೊಂದೋ
(೨) ನ ಕಾರದ ಸಾಲು ಪದಗಳು – ನಾಲ್ಕೆರಡೊ ನಾಲ್ಕೊಂದೋ ನಿಧಾನಿಸಲರಿಯೆ ನಾನೆಂದ
(೩) ಭೀಮನ ಸ್ಥಿತಿಯನ್ನು ವಿವರಿಸಲು – ಭೀಮ ದುಗುಡದ ಭರದಲಿದ್ದನು
(೪) ಕಾಣೆ, ಕಂಡೆ ಪದಗಳ ಬಳಕೆ

ಪದ್ಯ ೪: ಕರ್ಣನನ್ನು ಶತ್ರುಸೇನೆ ಹೇಗೆ ಮುತ್ತಿತು?

ಒಂದು ಕಡೆಯಲಿ ಭೀಮ ಸಾತ್ಯಕಿ
ಯೊಂದು ಕಡೆಯಲಿ ನಕುಳ ದ್ರೌಪದ
ರೊಂದು ಕಡೆಯಲಿ ಚೇಕಿತಾನ ಶಿಖಂಡಿ ಸೃಂಜಯರು
ಒಂದು ಕಡೆ ಸಹದೇವನೀ ಪರಿ
ಹಿಂದೆ ಮುಂದಿಕ್ಕೆಲದೊಳೀತನ
ಸಂದಣಿಸಿ ಮುತ್ತಿದರು ಮುಕ್ಕುರಿಕಿತ್ತು ರಿಪುಸೇನೆ (ಕರ್ಣ ಪರ್ವ, ೧೧ ಸಂಧಿ, ೪ ಪದ್ಯ)

ತಾತ್ಪರ್ಯ:
ಧರ್ಮರಾಯನು ತನ್ನ ಸೈನ್ಯದೊಡನೆ ಭೀಮನ ಸಹಾಯಕ್ಕೆ ಹೊರಟನು. ಒಂದು ಕಡೆಯಿಂದ ಭೀಮ ಸಾತ್ಯಕಿ, ಇನ್ನೊಂದು ಕಡೆಯಿಂದ ನಕುಲ ಮತ್ತು ಉಪಪಾಂಡವರು, ಒಂದು ಕಡೆಯಿಂದ ಚೀಕಿತಾನ, ಶಿಖಂಡಿ, ಸೃಂಜಯರು, ಒಂದು ಕಡೆಯಿಂದ ಸಹದೇವ, ಹೀಗೆ ಹಿಂದೆ, ಮುಂದೆ ಎಡ ಬಲ ಎಲ್ಲಾ ದಿಕ್ಕುಗಳಲ್ಲಿಯು ವೈರಿ ಸೇನೆಯು ಕರ್ಣನನ್ನು ಮುತ್ತಿತು.

ಅರ್ಥ:
ಕಡೆ: ದಿಕ್ಕು, ಭಾಗ; ಪರಿ: ರೀತಿ; ಹಿಂದೆ: ಹಿಂಬದಿ; ಮುಂದೆ: ಮುಂಭಾಗ; ಸಂದಣಿ: ಗುಂಪು, ಸಮೂಹ; ಮುತ್ತು: ಆವರಿಸು; ಮುಕ್ಕುರು: ಆವರಿಸು; ರಿಪು: ವೈರಿ; ಸೇನೆ: ಸೈನ್ಯ; ಇಕ್ಕೆಲ: ಎರಡೂ ಕಡೆ;

ಪದವಿಂಗಡಣೆ:
ಒಂದು +ಕಡೆಯಲಿ +ಭೀಮ +ಸಾತ್ಯಕಿ
ಯೊಂದು +ಕಡೆಯಲಿ +ನಕುಳ +ದ್ರೌಪದರ್
ಒಂದು+ ಕಡೆಯಲಿ +ಚೇಕಿತಾನ +ಶಿಖಂಡಿ +ಸೃಂಜಯರು
ಒಂದು +ಕಡೆ +ಸಹದೇವನ್+ಈ+ ಪರಿ
ಹಿಂದೆ +ಮುಂದ್+ಇಕ್ಕೆಲದೊಳ್+ಈತನ
ಸಂದಣಿಸಿ +ಮುತ್ತಿದರು +ಮುಕ್ಕುರಿಕಿತ್ತು +ರಿಪುಸೇನೆ

ಅಚ್ಚರಿ:
(೧) ಒಂದು ಕಡೆ – ೧-೪ ಸಾಲಿನ ಮೊದಲ ಪದ
(೨) ಭೀಮ, ಸಾತ್ಯಕಿ, ನಕುಳ, ದ್ರೌಪದ, ಚೀಕಿತಾನ, ಶಿಖಂಡಿ, ಸೃಂಜಯ, ಸಹದೇವ – ಕರ್ಣನನ್ನು ಆವರಿಸಿದ ಮಹಾರಥರು

ಪದ್ಯ ೩೧: ಕರ್ಣನನ್ನು ಮತ್ತೆ ಯಾರು ಮುತ್ತಿದರು?

ಮುರಿದು ಮತ್ತೆ ಮಹಾರಥರು ಸಂ
ವರಿಸಿಕೊಂಡು ಶಿಖಂಡಿ ಸಾತ್ಯಕಿ
ವರನಕುಲ ಸಹದೇವ ಧೃಷ್ಟಧ್ಯುಮ್ನ ಸೃಂಜಯರು
ಸರಳ ಬಿರುಬಿನ ಬಾಯ ಬೈಗುಳ
ಬಿರುದುಗಹಳೆಯ ಬಿಂಕದವರು
ಬ್ಬರಿಸಿ ಕವಿದರು ಕರ್ಣನಾವೆಡೆ ತೋರು ತೋರೆನುತ (ಕರ್ಣ ಪರ್ವ, ೧೦ ಸಂಧಿ, ೩೧ ಪದ್ಯ)

ತಾತ್ಪರ್ಯ:
ಕರ್ಣನ ಪರಾಕ್ರಮಕ್ಕೆ ಹಿಮ್ಮೆಟ್ಟಿದ್ದ ಮಹಾರಥರಾದ ಶಿಖಂಡಿ, ಸಾತ್ಯಕಿ, ನಕುಲ, ಸಹದೇವ, ಧೃಷ್ಟದ್ಯುಮ್ನ, ಸೃಂಜಯರು ಮತ್ತೆ ಗುಂಪುಗೂಡಿದರು. ಬಾಣಗಳನ್ನು ಬಿಲ್ಲಿನಲ್ಲಿ ಹೂಡಿ, ಬಾಯಲ್ಲಿ ಕರ್ಣನನ್ನು ಜರಿಯುತ್ತಾ, ತಮ್ಮ ಬಿರುದಿನ ಕಹಳೆಯನ್ನು ಸೊಕ್ಕಿನಿಂದ ಊದುತ್ತಾ ಕರ್ಣನೆಲ್ಲಿ ತೋರಿಸಿ ಎಂದು ಅಬ್ಬರಿಸುತ್ತಾ ಮುನ್ನಡೆದರು.

ಅರ್ಥ:
ಮುರಿ: ಸೀಳು; ಮತ್ತೆ: ಪುನಃ; ಮಹಾರಥ: ಶೂರ, ಪರಾಕ್ರಮಿ; ಸಂವರಿಸು: ಗುಂಪುಗೂಡು, ಸಜ್ಜುಮಾಡು; ಸರಳ: ಬಾಣ; ಬಿರುಬು: ಆವೇಶ; ಬೈಗುಳ: ಜರಿಯಿವಿಕೆ, ತೆಗಳುವಿಕೆ; ಬಿರುದು: ಸ್ಪರ್ಧೆಗೆ ನೀಡುವ ಆಹ್ವಾನ; ಕಹಳೆ:ಉದ್ದವಾಗಿ ಬಾಗಿರುವ ತುತ್ತೂರಿ; ಬಿಂಕ:ಸೊಕ್ಕು; ಉಬ್ಬರಿಸು:ಅತಿಶಯ, ಉದ್ವೇಗ; ಕವಿ: ಆವರಿಸು; ತೋರು: ಗೋಚರ;

ಪದವಿಂಗಡಣೆ:
ಮುರಿದು +ಮತ್ತೆ +ಮಹಾರಥರು +ಸಂ
ವರಿಸಿಕೊಂಡು +ಶಿಖಂಡಿ +ಸಾತ್ಯಕಿ
ವರ+ನಕುಲ +ಸಹದೇವ+ ಧೃಷ್ಟಧ್ಯುಮ್ನ +ಸೃಂಜಯರು
ಸರಳ+ ಬಿರುಬಿನ +ಬಾಯ +ಬೈಗುಳ
ಬಿರುದುಗಹಳೆಯ +ಬಿಂಕದವರ್
ಉಬ್ಬರಿಸಿ +ಕವಿದರು +ಕರ್ಣನ್+ಆವೆಡೆ+ ತೋರು +ತೋರೆನುತ

ಅಚ್ಚರಿ:
(೧) ಸಾಲು ಪದಗಳ ಬಳಕೆ: ಮುರಿದು ಮತ್ತೆ ಮಹಾರಥರು; ಬಿರುಬಿನ ಬಾಯ ಬೈಗುಳ
ಬಿರುದುಗಹಳೆಯ ಬಿಂಕದವರುಬ್ಬರಿಸಿ

ಪದ್ಯ ೫: ಸಾತ್ಯಕಿಯ ಸಹಾಯಕ್ಕೆ ಯಾರು ಬಂದರು?

ಹಳಚಿದವು ರಥವೆರಡು ಬಲುಗೈ
ಗಳಿಗೆ ಬಲಿದುದು ಬವರ ಕೌರವ
ಬಲದ ಭಟರಲಿ ಹತ್ತು ಸಾವಿರ ರಥಿಕರನುವಾಯ್ತು
ಒಳಹೊಗಿಸಿ ಸಾತ್ಯಕಿಯ ಸಿಕ್ಕಿಸಿ
ಗೆಲುವ ತವಕವ ಕಂಡು ಕೆಣಕಿದ
ರಳವಿಯಲಿ ಸಹದೇವ ನಕುಳರು ಕೌರವಾನುಜನ (ಕರ್ಣ ಪರ್ವ, ೪ ಸಂಧಿ, ೫ ಪದ್ಯ)

ತಾತ್ಪರ್ಯ:
ಎರಡು ರಥಗಳು ಒಂದಕ್ಕೊಂದು ಬಡಿದು ಯುದ್ಧವು ತೀಕ್ಷ್ಣವಾಯಿತು. ಕೌರವನ ಸೇನೆಯ ಹತ್ತು ಸಾವಿರ ರಥಿಕರು ದುಶ್ಯಾಸನನಿಗೆ ಬೆಂಬಲವಾಗಿ ಬರಲು ಸಿದ್ಧರಾದರು. ಸಾತ್ಯಕಿಯನ್ನು ಒಳಕ್ಕೆ ಕರೆದುಕೊಂಡು, ಸುತ್ತುವರಿದು ಸಿಕ್ಕಿಸಿಕೊಳ್ಳುವ ಸಿದ್ಧತೆಯನ್ನು ಕಂಡು ನಕುಲ ಸಹದೇವರು ದುಶ್ಯಾಸನನ್ನು ಕೆಣಕಿದರು.

ಅರ್ಥ:
ಹಳಚು: ತಾಗು, ಬಡಿ; ರಥ: ಬಂಡಿ; ಬಲ: ನೆರವು, ಸಹಾಯ; ಬಲುಗೈ: ಜೊತೆಯಾಗಿ ನಿಲ್ಲು, ಕೈಜೋಡಿಸು; ಬಲಿದುದು: ಹೆಚ್ಚು; ಬವರ: ಕಾಳಗ, ಯುದ್ಧ; ಬಲ: ಸೈನ್ಯ; ಭಟರು: ಸೈನಿಕರು; ರಥಿಕ: ರಥದ ಮೇಲೆ ಯುದ್ಧ ಮಾಡುವವ; ಅನುವು: ಅನುಕೂಲ, ಆಸ್ಪದ; ಒಳಹೊಗಿಸು: ಒಳಕ್ಕೆ ಕರೆದೊಯ್ದು; ಸಿಕ್ಕಿಸು: ಬಂಧನಕ್ಕೊಳಗಾಗು, ಸೆರೆಯಾಗು; ಗೆಲುವು: ವಿಜಯ; ತವಕ: ಬಯಕೆ, ಆತುರ; ಕಂಡು: ನೋಡಿ; ಕೆಣಕು:ರೇಗಿಸು, ಪ್ರಚೋದಿಸು; ಅಳವಿ: ಶಕ್ತಿ, ಯುದ್ಧ; ಅನುಜ: ತಮ್ಮ;

ಪದವಿಂಗಡಣೆ:
ಹಳಚಿದವು +ರಥವೆರಡು+ ಬಲುಗೈ
ಗಳಿಗೆ +ಬಲಿದುದು +ಬವರ +ಕೌರವ
ಬಲದ+ ಭಟರಲಿ+ ಹತ್ತು +ಸಾವಿರ +ರಥಿಕರ್+ಅನುವಾಯ್ತು
ಒಳಹೊಗಿಸಿ +ಸಾತ್ಯಕಿಯ+ ಸಿಕ್ಕಿಸಿ
ಗೆಲುವ+ ತವಕವ+ ಕಂಡು +ಕೆಣಕಿದರ್
ಅಳವಿಯಲಿ +ಸಹದೇವ +ನಕುಳರು +ಕೌರವ್+ಅನುಜನ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬಲುಗೈಗಳಿಗೆ ಬಲಿದುದು ಬವರ
(೨) ಸಾತ್ಯಕಿ, ನಕುಲ, ಸಹದೇವ, ದುಶ್ಯಾಸನ – ಈ ಪದ್ಯದಲ್ಲಿ ಬರುವ ಹೆಸರುಗಳು