ಪದ್ಯ ೪೬: ಅರ್ಜುನನು ಯಾವುದನ್ನು ನೆನಪಿಸಲು ಹೇಳಿದನು?

ಅನಿಲಸುತ ಸಪ್ರಾಣಿಸಲಿ ರಿಪು
ಜನಪನೂರುವಿಭಂಗವೆ ಮು
ನ್ನಿನ ಪ್ರತಿಜ್ಞೆಯಲಾ ಸಭಾಮಧ್ಯದಲಿ ಕುರುಪತಿಯ
ನೆನಸಿಕೊಡಿ ಸಾಕಿನ್ನು ಬೇರೊಂ
ದನುನಯವು ತಾನೇನು ವಿಜಯಾಂ
ಗನೆಗೆ ದ್ರುಪದಕುಮಾರಿ ತಪ್ಪದೆ ಸವತಿಯಹಳೆಂದ (ಗದಾ ಪರ್ವ, ೭ ಸಂಧಿ, ೪೬ ಪದ್ಯ)

ತಾತ್ಪರ್ಯ:
ಅರ್ಜುನನು ನುಡಿಯುತ್ತಾ, ಭೀಮನು ಪ್ರಾಣ ಸಹಿತನಾಗಲಿ, ವೈರಿಯ ತೊಡೆಯನ್ನು ಮುರಿವೆನೆಂಬುದೇ ಪ್ರತಿಜ್ಞೆಯಲ್ಲವೇ? ಸಭೆಯ ನಡುವೆ ಭೀಮನು ಶಪಥಮಾಡಲಿಲ್ಲವೇ? ಅದನ್ನು ಭೀಮನಿಗೆ ನೆನಪಿಸಿರಿ. ದ್ರೌಪದಿಗೆ ವಿಜಯಲಕ್ಷ್ಮಿಯು ಸವತಿಯಾಗುತ್ತಾಳೆ ಎಂದನು.

ಅರ್ಥ:
ಅನಿಲಸುತ: ಭೀಮ; ಸಪ್ರಾಣಿ: ಪ್ರಾಣ ಸಹಿತ; ರಿಪು: ವೈರಿ; ಜನಪ: ರಾಜ; ನೂರು: ಶತ; ಭಂಗ: ಮುರಿಯುವಿಕೆ; ಮುನ್ನಿನ: ಮುಂಚೆ; ಪ್ರತಿಜ್ಞೆ: ಶಪಥ, ಪಣ; ಸಭೆ: ಪರಿಷತ್ತು, ಗೋಷ್ಠಿ; ಮಧ್ಯ: ನಡುವೆ; ನೆನಸು: ಜ್ಞಾಪಿಸಿಕೋ; ಸಾಕು: ತಡೆ; ಅನುನಯ: ನಯವಾದ ಮಾತುಗಳಿಂದ ಮನವೊಲಿಸುವುದು, ಪ್ರೀತಿ; ಕುಮಾರಿ: ಪುತ್ರಿ; ಸವತಿ: ತನ್ನ ಗಂಡನ ಇನ್ನೊ ಬ್ಬಳು ಹೆಂಡತಿ, ಸಪತ್ನಿ;

ಪದವಿಂಗಡಣೆ:
ಅನಿಲಸುತ +ಸಪ್ರಾಣಿಸಲಿ +ರಿಪು
ಜನಪನ್+ಊರು+ವಿಭಂಗವೆ +ಮು
ನ್ನಿನ +ಪ್ರತಿಜ್ಞೆಯಲಾ +ಸಭಾಮಧ್ಯದಲಿ+ ಕುರುಪತಿಯ
ನೆನಸಿಕೊಡಿ +ಸಾಕಿನ್ನು+ ಬೇರೊಂದ್
ಅನುನಯವು +ತಾನೇನು +ವಿಜಯಾಂ
ಗನೆಗೆ +ದ್ರುಪದಕುಮಾರಿ +ತಪ್ಪದೆ+ ಸವತಿಯಹಳೆಂದ

ಅಚ್ಚರಿ:
(೧) ಗೆಲ್ಲಲಿ ಎಂದು ಹೇಳುವ ಪರಿ – ವಿಜಯಾಂಗನೆಗೆ ದ್ರುಪದಕುಮಾರಿ ತಪ್ಪದೆ ಸವತಿಯಹಳೆಂದ

ಪದ್ಯ ೬೪: ಧೌಮ್ಯನು ವಿಷಾದದ ನಗೆಯನ್ನು ಏಕೆ ಬೀರಿದನು?

ಫಲಕುಜದ ಪಲ್ಲವದ ಪದ ಕರ
ತಳದ ವಿಪುಲ ತಮಾಲ ಪತ್ರದ
ಲಲಿತ ಕೇತಕಿ ನಖದ ದಾಡಿಮ ದಂತಪಂಕ್ತಿಗಳ
ನಳಿನ ನಯನದ ಮಧುಪ ಕುಲ ಕುಂ
ತಳದ ವನಸಿರಿ ಸವತಿಯಾದಳು
ಜಲಜಮುಖಿ ಪಾಂಚಾಲೆಗೆಂದನು ಧೌಮ್ಯಮುನಿ ನಗುತ (ಸಭಾ ಪರ್ವ, ೧೭ ಸಂಧಿ, ೬೪ ಪದ್ಯ)

ತಾತ್ಪರ್ಯ:
ಫಲಭರಿತವಾದ ಮರಗಳ, ಚಿಗುರಿನಂತಹ ಪಾದ, ದತ್ಟವಾಗಿ ಬೆಳೆದ ಹೊಂಗೆಯ ಮರದ ಕೈಗಳು, ಕೇದಗೆಯ ಉರುಗುರಳು, ದಾಳಿಂಬೆಯ ಹಲ್ಲುಗಳು, ಕಮಲದಂತ ಅಗಲವಾದ ಕಣ್ಣುಗಳು, ದುಂಬಿಗಳಂತಹ ಮುಂಗುರುಳುಗಳನ್ನುಳ್ಳ ವನಲಕ್ಷ್ಮಿಯು ದ್ರೌಪದಿಗೆ ಸವತಿಯಾದಳು ಎಂದು ಹೇಳಿ ವಿಷಾದದ ನಗೆಯನ್ನು ನಕ್ಕನು.

ಅರ್ಥ:
ಫಲ: ಹಣ್ಣು; ಕುಜ: ಗಿಡ, ಮರ; ಪಲ್ಲವ: ಚಿಗುರು; ಪದ: ಪಾದ, ಚರಣ; ಕರತಳ: ಹಸ್ತ; ವಿಪುಲ: ಹೆಚ್ಚು, ಜಾಸ್ತಿ; ತಮಾಲ: ಹೊಂಗೆಗಿಡ; ಪತ್ರ: ಎಲೆ; ಲಲಿತ: ಚೆಲುವು; ಕೇತಕಿ: ಕೇದಗೆ, ತಾಳೆಯ ಗಿಡ; ನಖ: ಉಗುರು; ದಾಡಿಮ: ದಾಳಿಂಬೆ; ದಂತ: ಹಲ್ಲು; ಪಂಕ್ತಿ: ಸಾಲು; ನಳಿನ: ಕಮಲ; ನಯನ: ಕಣ್ಣು; ಮಧುಪ: ದುಂಬಿ; ಕುಲ: ವಂಶ; ಕುಂತಳ: ಕೂದಲು; ವನಸಿರಿ: ವನಲಕ್ಷ್ಮಿ; ಸವತಿ: ತನ್ನ ಗಂಡನ ಇನ್ನೊಬ್ಬ ಹೆಂಡತಿ, ಸಪತ್ನಿ; ಜಲಜಮುಖಿ: ಕಮಲದಂತ ಮುಖವುಳ್ಳವಳು; ನಗು: ಹಸನ್ಮುಖಿ;

ಪದವಿಂಗಡಣೆ:
ಫಲಕುಜದ+ ಪಲ್ಲವದ +ಪದ +ಕರ
ತಳದ +ವಿಪುಲ +ತಮಾಲ +ಪತ್ರದ
ಲಲಿತ +ಕೇತಕಿ +ನಖದ +ದಾಡಿಮ +ದಂತ+ಪಂಕ್ತಿಗಳ
ನಳಿನ+ ನಯನದ +ಮಧುಪ+ ಕುಲ+ ಕುಂ
ತಳದ +ವನಸಿರಿ +ಸವತಿಯಾದಳು
ಜಲಜಮುಖಿ+ ಪಾಂಚಾಲೆಗೆಂದನು +ಧೌಮ್ಯಮುನಿ+ ನಗುತ

ಅಚ್ಚರಿ:
(೧) ಉಪಮಾನಗಳ ಬಳಕೆ – ಫಲಕುಜದ ಪಲ್ಲವದ ಪದ, ಕರತಳದ ವಿಪುಲ ತಮಾಲ ಪತ್ರದ
ಲಲಿತ, ಕೇತಕಿ ನಖದ, ದಾಡಿಮ ದಂತಪಂಕ್ತಿಗಳ, ನಳಿನ ನಯನದ, ಮಧುಪ ಕುಲ ಕುಂತಳದ
(೨) ನಿರಾಭರಣದಲ್ಲಿದ್ದರು ದ್ರೌಪದಿಯ ಚೆಲುವನ್ನು ವಿವರಿಸುವ ಪರಿ – ವನಸಿರಿ ಸವತಿಯಾದಳು
ಜಲಜಮುಖಿ ಪಾಂಚಾಲೆಗೆಂದನು ಧೌಮ್ಯಮುನಿ ನಗುತ

ಪದ್ಯ ೪೧: ಕರ್ಣನನ್ನು ಯಾರು ತಡೆಯಲು ಮುಂದೆ ಬಂದರು?

ಪವನಸುತ ಮುಖದಿರುಹಿದನು ಯಾ
ದವನ ಕಂಡವರಾರು ಸೇನಾ
ನಿವಹಗಿವಹದ ಪಾಡೆ ಕರ್ಣನ ಖಾತಿ ಖೊಪ್ಪರಿಸೆ
ಬವರ ಮುರಿದುದು ವಿಜಯ ಲಕ್ಷ್ಮಿಯ
ಸವತಿ ಸೇರಿತು ಸುಭಟರಿಗೆ ಬಳಿ
ಕವನಿಪತಿಯೇ ತರುಬಿ ನಿಂದನು ಭಾನುನಂದನನ (ಕರ್ಣ ಪರ್ವ, ೧೧ ಸಂಧಿ, ೪೧ ಪದ್ಯ)

ತಾತ್ಪರ್ಯ:
ಕರ್ಣನ ಯುದ್ಧದ ಆರ್ಭಟಕ್ಕೆ ಭೀಮನು ಸರಿದು ಹೋದನು. ಸಾತ್ಯಕಿಯನ್ನು ನೋಡಿದವರೇ ಇಲ್ಲ. ಕರ್ಣನ ಕೋಪ ಗರಿಗೆಟ್ಟಿದರೆ ಸೇನೆಗೀನೆಗಳು ತಡೆದಾವೇ? ಯುದ್ಧದಲ್ಲಿ ಪಾಂಡವ ಸೇನೆಗೆ ವಿಜಯಲಕ್ಷ್ಮಿಯ ಸವತಿಯಾದ ಅಪಜಯಲಕ್ಷ್ಮಿ ದೊರೆಕಿದಳು ಎಂಬಂತೆ ತೋರುತ್ತಿದ್ದಾಗ ಯುಧಿಷ್ಠಿರನೇ ಕರ್ಣನನ್ನು ತಡೆದನು.

ಅರ್ಥ:
ಪವನಸುತ: ವಾಯುಪುತ್ರ (ಭೀಮ); ಮುಖ: ಆನನ; ಮುಖದಿರುಹು: ಒಪ್ಪಿಗೆಯಾಗದೆ ಹೋಗು; ಯಾದವ: ಸಾತ್ಯಕಿ; ಕಂಡು: ನೋಡು; ಸೇನ: ಸೈನ್ಯ; ನಿವಹ: ಗುಂಪು; ಪಾಡು: ಸ್ಥಿತಿ; ಖಾತಿ: ಕೋಪ, ಕ್ರೋಧ; ಖೊಪ್ಪರಿಸು: ಮೀರು, ಹೆಚ್ಚು; ಬವರ: ಕಾಳಗ, ಯುದ್ಧ; ಮುರಿ: ಸೀಳು; ವಿಜಯ: ಗೆಲುವು; ಸವತಿ: ವಿರೋಧಿಯಾದವಳು; ಸೇರು: ಜೊತೆಗೂಡು; ಸುಭಟ: ಸೈನಿಕರು; ಬಳಿಕ: ನಂತರ; ಅವನಿಪತಿ: ರಾಜ; ತರುಬು: ತಡೆ, ನಿಲ್ಲಿಸು; ನಿಂದು: ಎದುರು ನಿಲ್ಲು; ಭಾನುನಂದನ: ಸೂರ್ಯನ ಮಗ (ಕರ್ಣ);

ಪದವಿಂಗಡಣೆ:
ಪವನಸುತ +ಮುಖದಿರುಹಿದನು+ ಯಾ
ದವನ+ ಕಂಡವರಾರು +ಸೇನಾ
ನಿವಹಗಿವಹದ +ಪಾಡೆ +ಕರ್ಣನ +ಖಾತಿ +ಖೊಪ್ಪರಿಸೆ
ಬವರ+ ಮುರಿದುದು +ವಿಜಯ +ಲಕ್ಷ್ಮಿಯ
ಸವತಿ+ ಸೇರಿತು +ಸುಭಟರಿಗೆ +ಬಳಿಕ್
ಅವನಿಪತಿಯೇ +ತರುಬಿ +ನಿಂದನು +ಭಾನುನಂದನನ

ಅಚ್ಚರಿ:
(೧) ಸೋಲು ಎಂದು ವರ್ಣಿಸಲು – ವಿಜಯ ಲಕ್ಷ್ಮಿಯ ಸವತಿ ಸೇರಿತು
(೨) ಆಡು ಪದದ ಬಳಕೆ – ನಿವಹಗಿವಹ
(೩) ತ್ರಿವಳಿ ಪದಗಳು – ಕರ್ಣನ ಖಾತಿ ಖೊಪ್ಪರಿಸೆ; ಸವತಿ ಸೇರಿತು ಸುಭಟರಿಗೆ