ಪದ್ಯ ೬೪: ಕೌರವರು ಯಾರ ಬಿಡಾರಕ್ಕೆ ಬಂದರು?

ಇವರು ಬಂದರು ದಕ್ಷಿಣದ ದೆಸೆ
ಗವರ ಪಾಳೆಯಕಾಗಿ ಸುತ್ತಲು
ಸವಡಿಗತ್ತಲೆಯಾಯ್ತು ಘನರೋಷಾಂಧಕಾರದಲಿ
ಇವರು ಮನದಲಿ ಕುಡಿದರಹಿತಾ
ರ್ಣವವರಿವರಿಗೆ ಗೋಚರವೆ ಪಾಂ
ಡವರು ಗದುಗಿನ ವೀರನಾರಾಯಣನ ಕರುಣದಲಿ (ಗದಾ ಪರ್ವ, ೮ ಸಂಧಿ, ೬೪ ಪದ್ಯ)

ತಾತ್ಪರ್ಯ:
ಆ ಮೂವರೂ ದಕ್ಷಿಣ ದಿಕ್ಕಿನೆಡೆಗೆ ಹೊರಟರು. ಪಾಂಡವರ ಪಾಳೆಯದ ಕಡೆಗೆ ನಡೆದರು. ಕತ್ತಲು ದಟ್ಟಯಿಸಿದಂತೆ ಇವರ ಘನರೋಷಾಂಧಕಾರವೂ ದಟ್ಟಯಿಸಿತು. ಪಾಂಡವಸೇನಾ ಸಮುದ್ರವನ್ನು ಇವರು ಮನಸ್ಸಿನಲ್ಲೇ ಕುಡಿದರು. ಆದರೆ ಶ್ರೀಕೃಷ್ಣನ ಕರುಣೆಯಿಂದ ಪಾಂಡವರು ಇವರಿಗೆ ಸಿಲುಕುವರೇ!

ಅರ್ಥ:
ಬಂದು: ಆಗಮಿಸು; ದೆಸೆ: ದಿಕ್ಕು; ಪಾಳೆಯ: ಬೀಡು; ಸುತ್ತಲು: ಬಳಸಿಕೊಂಡು; ಸವಡಿ: ಜೊತೆ, ಜೋಡಿ; ಕತ್ತಲೆ: ಅಂಧಕಾರ; ಘನ: ದೊಡ್ಡ, ಗಾಢ; ರೋಷ: ಕೋಪ; ಅಂಧಕಾರ: ಕತ್ತಲೆ; ಮನ: ಮನಸ್ಸು; ಕುದಿ: ಮರಳು, ಸಂಕಟಪಡು; ಕುಡಿ: ಪಾನಮಾಡು; ಅಹಿ: ವೈರಿ; ಆರ್ಣವ: ಯುದ್ಧ; ಗೋಚರ: ಕಾಣುವುದು, ಮಾಡಬಹುದಾದ; ಕರುಣೆ: ದಯೆ;

ಪದವಿಂಗಡಣೆ:
ಇವರು +ಬಂದರು +ದಕ್ಷಿಣದ +ದೆಸೆಗ್
ಅವರ+ ಪಾಳೆಯಕಾಗಿ +ಸುತ್ತಲು
ಸವಡಿ+ಕತ್ತಲೆಯಾಯ್ತು +ಘನ+ರೋಷಾಂಧಕಾರದಲಿ
ಇವರು +ಮನದಲಿ+ ಕುಡಿದರ್+ಅಹಿತ
ಅರ್ಣವವರ್+ಇವರಿಗೆ +ಗೋಚರವೆ +ಪಾಂ
ಡವರು +ಗದುಗಿನ +ವೀರನಾರಾಯಣನ +ಕರುಣದಲಿ

ಅಚ್ಚರಿ:
(೧) ರೂಪಕದ ಪ್ರಯೋಗ – ಸವಡಿಗತ್ತಲೆಯಾಯ್ತು ಘನರೋಷಾಂಧಕಾರದಲಿ

ಪದ್ಯ ೭: ಭೀಮನು ಕೌರವನನ್ನು ಹೇಗೆ ಹಂಗಿಸಿದ?

ಅವನಿಪತಿ ಕೇಳೀಚೆಯಲಿ ಕೌ
ರವನ ಹೊರಗೈತಂದು ನಿಂದನು
ಸವಡಿಗೈಗದೆಯಣಸುಗಲ್ಲದ ಗಾಢಗರ್ವದಲಿ
ಪವನಸುತ ನುಡಿಸಿದನಲೈ ನಿ
ನ್ನವನನೇನೈ ಭೂಪ ಕೊಡುವೈ
ನವಗೆ ನೆಲನರ್ಧವನು ನಾಚಿಕೆಯೇಕೆ ನುಡಿಯೆಂದ (ಗದಾ ಪರ್ವ, ೮ ಸಂಧಿ, ೭ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಇತ್ತ ಭೀಮನು ತನ್ನೆರಡು ಕೈಗಳಿಂದ ಗದೆಯನ್ನು ಹಿಡಿದು ಮಹಾಗರ್ವದಿಂದ ಕೌರವನ ಬಳಿಗೆ ಹೋಗಿ, ರಾಜಾ ಈಗ ನೀನೇನು ಹೇಳುತ್ತೀ? ನಮಗೆ ಅರ್ಧ ರಾಜ್ಯವನ್ನು ಕೊಡುವೆಯೋ ಹೇಗೆ ಎಂದು ಹಂಗಿಸಿದನು.

ಅರ್ಥ:
ಅವನಿಪತಿ: ರಾಜ; ಕೇಳು: ಆಲಿಸು; ಈಚೆ: ಈ ಭಾಗ; ಐತಂದು: ಬಂದು ಸೇರಿ; ನಿಂದು: ನಿಲ್ಲು; ಸವಡಿ: ಜೊತೆ, ಜೋಡಿ; ಕೈ: ಹಸ್ತ; ಗದೆ: ಮುದ್ಗರ; ಅಣಸು: ಹಂಗಿಸು; ಗಾಢ: ಬಹಳ; ಗರ್ವ: ಅಹಂಕಾರ; ಪವನಸುತ: ವಾಯುಪುತ್ರ (ಭೀಮ); ನುಡಿ: ಮಾತಾಡು; ಭೂಪ: ರಾಜ; ಕೊಡು: ನೀಡು; ನೆಲ: ಭೂಮಿ; ಅರ್ಧ: ವಸ್ತುವಿನ ಎರಡು ಸಮಪಾಲುಗಳಲ್ಲಿ ಒಂದು; ನಾಚಿಕೆ: ಲಜ್ಜೆ;

ಪದವಿಂಗಡಣೆ:
ಅವನಿಪತಿ +ಕೇಳ್+ಈಚೆಯಲಿ +ಕೌ
ರವನ +ಹೊರಗೈತಂದು +ನಿಂದನು
ಸವಡಿ+ಕೈ+ಗದೆ+ಅಣಸುಗಲ್ಲದ+ ಗಾಢ+ಗರ್ವದಲಿ
ಪವನಸುತ+ ನುಡಿಸಿದನಲೈ +ನಿ
ನ್ನವನನ್+ಏನೈ +ಭೂಪ +ಕೊಡುವೈ
ನವಗೆ+ ನೆಲನ್+ಅರ್ಧವನು +ನಾಚಿಕೆಯೇಕೆ +ನುಡಿಯೆಂದ

ಅಚ್ಚರಿ:
(೧) ನ ಕಾರದ ಸಾಲು ಪದಗಳು – ನೆಲನರ್ಧವನು ನಾಚಿಕೆಯೇಕೆ ನುಡಿಯೆಂದ
(೨) ಭೀಮನು ನಿಂತ ಪರಿ – ನಿಂದನು ಸವಡಿಗೈಗದೆಯಣಸುಗಲ್ಲದ ಗಾಢಗರ್ವದಲಿ

ಪದ್ಯ ೬: ಅರ್ಜುನನ ಮೇಲೆ ಯಾರು ಆಕ್ರಮಣ ಮಾಡಿದರು?

ಕವಿದುದಿದು ದುವ್ವಾಳಿಸುತ ರಥ
ನಿವಹ ಬಿಟ್ಟವು ಕುದುರೆ ಸೂಠಿಯ
ಲವಗಡಿಸಿ ತೂಳಿದವು ಹೇರಾನೆಗಳು ಸಂದಣಿಸಿ
ಸವಡಿವೆರಳಲಿ ಸೇದುವಂಬಿನ
ತವಕಿಗರು ತರುಬಿದರು ಬಲುಬಿ
ಲ್ಲವರು ಮೊನೆಮುಂತಾಗಿ ಮೋಹಿತು ಮಿಕ್ಕ ಸಬಳಿಗರು (ಗದಾ ಪರ್ವ, ೧ ಸಂಧಿ, ೬ ಪದ್ಯ)

ತಾತ್ಪರ್ಯ:
ಈ ಸೈನ್ಯವು ಅರ್ಜುನನ ಮೇಲೆ ಆಕ್ರಮಣ ಮಾಡಿತು. ರಥಗಳು ವೇಗದಿಂದ ನುಗ್ಗಿದವು. ಗಜಘಟೆಗಳು ಮುಂದಾದವು. ಜೋಡಿ ಬೆರಳುಗಳಿಂದ ಬಾಣವನ್ನೆಳೆದು ಬಿಲ್ಲುಗಾರರು ಅರ್ಜುನನ ಮೇಲೆ ಬಾಣಗಳನ್ನು ಬಿಟ್ಟು ಅವನ ಆಕ್ರಮಣವನ್ನು ತಡೆದರು. ಈಟಿಯನ್ನು ಹಿಡಿದವರು ಆಕ್ರಮಣ ಮಾಡಿದರು.

ಅರ್ಥ:
ಕವಿ: ಆವರಿಸು, ಮುತ್ತು; ದುವ್ವಾಳಿ: ತೀವ್ರಗತಿ, ಓಟ; ರಥ: ಬಂಡಿ; ನಿವಹ: ಗುಂಪು; ಬಿಡು: ತೊರೆ; ಕುದುರೆ: ಅಶ್ವ; ಸೂಠಿ: ವೇಗ; ಅವಗಡಿಸು: ಕಡೆಗಣಿಸು, ಸೋಲಿಸು; ತೂಳು: ಆವೇಶ, ಉನ್ಮಾದ; ಹೇರಾನೆ: ದೊಡ್ಡ ಆನೆ; ಸಂದಣಿಸು: ಗುಂಪುಗೂಡು; ಸವಡಿ: ಜೊತೆ, ಜೋಡಿ; ಸೇದು: ಸೆಳೆ, ದೋಚು; ಅಂಬು: ಬಾಣ; ತವಕ: ಬಯಕೆ, ಆತುರ; ತರುಬು: ತಡೆ, ನಿಲ್ಲಿಸು; ಬಲುಬಿಲ್ಲವರು: ಶ್ರೇಷ್ಠನಾದ ಬಿಲ್ಲುಗಾರ; ಮೊನೆ: ತುದಿ; ಮೋಹಿತ: ಆಕರ್ಷ್ತಿಸಲ್ಪಟ್ಟ; ಮಿಕ್ಕ: ಉಳಿದ; ಸಬಳಿಗ: ಈಟಿಯನ್ನು ಆಯುಧವಾಗುಳ್ಳವನು;

ಪದವಿಂಗಡಣೆ:
ಕವಿದುದಿದು +ದುವ್ವಾಳಿಸುತ +ರಥ
ನಿವಹ +ಬಿಟ್ಟವು +ಕುದುರೆ +ಸೂಠಿಯಲ್
ಅವಗಡಿಸಿ +ತೂಳಿದವು +ಹೇರಾನೆಗಳು +ಸಂದಣಿಸಿ
ಸವಡಿ+ಬೆರಳಲಿ +ಸೇದುವ್+ಅಂಬಿನ
ತವಕಿಗರು +ತರುಬಿದರು +ಬಲುಬಿ
ಲ್ಲವರು +ಮೊನೆ+ಮುಂತಾಗಿ +ಮೋಹಿತು +ಮಿಕ್ಕ +ಸಬಳಿಗರು

ಅಚ್ಚರಿ:
(೧) ಮ ಕಾರದ ಸಾಲು ಪದ – ಮೊನೆ ಮುಂತಾಗಿ ಮೋಹಿತು ಮಿಕ್ಕ
(೨) ಬಿಲ್ಲುಗಾರರನ್ನು ವಿವರಿಸುವ ಪರಿ – ಸವಡಿವೆರಳಲಿ ಸೇದುವಂಬಿನ ತವಕಿಗರು ತರುಬಿದರು