ಪದ್ಯ ೪೯: ಶಬರಪತಿಯು ಭೀಮನಲ್ಲಿ ಏನೆಂದು ಕೇಳಿದನು?

ತಂದ ಮಾಂಸದ ಕಂಬಿಗಳು ಪು
ಳಿಂದರೊಪ್ಪಿಸಿ ಭೀಮಸೇನನ
ಮಂದಿರವ ಸಾರಿದರು ಕಂಡರು ಜನದ ಕಳವಳವ
ಇಂದಿನೀ ಸಂಗ್ರಾಮಜಯದಲಿ
ಬಂದ ಜಾಡ್ಯವಿದೇನು ಬಿನ್ನಹ
ವೆಂದು ಸಲುಗೆ ಶಬರಪತಿ ನುಡಿಸಿದನು ಪವನಜನ (ಗದಾ ಪರ್ವ, ೪ ಸಂಧಿ, ೪೯ ಪದ್ಯ)

ತಾತ್ಪರ್ಯ:
ಮಾಂಸದ ಕಂಬಿಗಲನ್ನಿಳಿಸಿ ಬೇಟೆಗಾರರು ಭೀಮನ ಮನೆಗೆ ಹೋಗಿ ಜನರು ಕಳವಳಿಸುತ್ತಿದ್ದುದನ್ನು ಕಂಡರು. ಭೀಮನಲ್ಲಿ ಸಲಿಗೆಯಿಂದಿದ್ದ ಶಬರಪತಿಯು ಒಡೆಯ, ನೀವು ಇಂದಿನ ಯುದ್ಧದಲ್ಲಿ ಜಯಶಾಲಿಗಳಾಗಿದ್ದೀರಿ, ಇಂತಹ ಸಂತೋಷದ ಸಮಯದಲ್ಲಿ ಈ ಕಳವಳದ ಜಾಡ್ಯವೇಕೆ ಎಂದು ಕೇಳಿದನು.

ಅರ್ಥ:
ಮಾಂಸ: ಅಡಗು; ಕಂಬಿ: ಲೋಹದ ತಂತಿ; ಪುಳಿಂದ: ಬೇಡ; ಒಪ್ಪಿಸು: ನೀಡು; ಮಂದಿರ: ಮನೆ; ಸಾರು: ಬಳಿ ಸೇರು, ಹತ್ತಿರಕ್ಕೆ ಬರು; ಕಂಡು: ನೋಡು; ಜನ: ಮನುಷ್ಯರ ಗುಂಪು; ಕಳವಳ: ಗೊಂದಲ; ಸಂಗ್ರಾಮ: ಯುದ್ಧ; ಜಯ: ಗೆಲುವು; ಜಾಡ್ಯ: ನಿರುತ್ಸಾಹ; ಬಿನ್ನಹ: ಕೋರಿಕೆ; ಸಲುಗೆ: ಸದರ, ಅತಿ ಪರಿಚಯ; ಶಬರಪತಿ: ಬೇಟೆಗಾರರ ಒಡೆಯ; ನುಡಿಸು: ಮಾತಾದು; ಪವನಜ: ಭೀಮ;

ಪದವಿಂಗಡಣೆ:
ತಂದ +ಮಾಂಸದ +ಕಂಬಿಗಳು +ಪು
ಳಿಂದರ್+ಒಪ್ಪಿಸಿ +ಭೀಮಸೇನನ
ಮಂದಿರವ +ಸಾರಿದರು +ಕಂಡರು +ಜನದ +ಕಳವಳವ
ಇಂದಿನ್+ಈ+ ಸಂಗ್ರಾಮ+ಜಯದಲಿ
ಬಂದ +ಜಾಡ್ಯವಿದೇನು +ಬಿನ್ನಹ
ವೆಂದು +ಸಲುಗೆ +ಶಬರಪತಿ+ ನುಡಿಸಿದನು +ಪವನಜನ

ಅಚ್ಚರಿ:
(೧) ಸಂತೋಷವಾಗಿಲ್ಲ ಎಂದು ಹೇಳುವ ಪರಿ – ಇಂದಿನೀ ಸಂಗ್ರಾಮಜಯದಲಿ ಬಂದ ಜಾಡ್ಯವಿದೇನು

ಪದ್ಯ ೩೯: ಭೀಷ್ಮರು ಕರ್ಣನನ್ನು ಹೇಗೆ ಜರೆದರು?

ಗಳಹದಿರು ರಾಧೇಯ ನಿನ್ನಯ
ಕುಲವನೋಡದೆ ಮೇರೆದಪ್ಪುವ
ಸಲುಗೆಯಿದಲೇ ಸ್ವಾಮಿಸಂಪತ್ತಿನ ಸಗಾಢತನ
ಕಲಿಗಳುಳಿದಂತೆನ್ನ ಸರಿಸಕೆ
ನಿಲುವನಾವನು ದೇವದಾನವ
ರೊಳಗೆ ನಿನ್ನೊಡನೊರಲಿ ಫಲವೇನೆಂದನಾ ಭೀಷ್ಮ (ಭೀಷ್ಮ ಪರ್ವ, ೧ ಸಂಧಿ, ೩೯ ಪದ್ಯ)

ತಾತ್ಪರ್ಯ:
ಎಲೈ ಕರ್ಣ, ಬಾಯಿಗೆ ಬಂದಂತೆ ಒದರಬೇಡ. ನಿನ್ನ ಕುಲವನ್ನು ನೋಡಿಕೊಳ್ಳದೆ, ಸ್ವಾಮಿಗೆ ಆಪ್ತನೆಂಬ ಸಲಗೆಯಿಂದ ಹೀಗೆ ಹೇಳುತ್ತಿರುವೆ, ದೇವತೆಗಳು, ದಾನವರಲ್ಲಿ ನನಗೆ ಸರಿಸಮಾನನಾದ ವೀರನು ಯಾರು? ನಿನ್ನೊಡನೆ ಸುಮ್ಮನೆ ಅರಚುವುದರಿಂದ ಏನು ಪ್ರಯೋಜನ ಎಂದು ಭೀಷ್ಮನು ಹೇಳಿದನು.

ಅರ್ಥ:
ಗಳಹು: ಪ್ರಲಾಪಿಸು, ಹೇಳು; ರಾಧೇಯ: ಕರ್ಣ; ಕುಲ: ವಂಶ; ನೋಡು: ತೋರು, ವೀಕ್ಷಿಸು; ಮೇರೆ: ಎಲ್ಲೆ, ಗಡಿ; ತಪ್ಪು: ಸರಿಯಿಲ್ಲದ; ಸಲುಗೆ: ಸದರ; ಸ್ವಾಮಿ: ಒಡೆಯ; ಸಂಪತ್ತು: ಐಶ್ವರ್ಯ; ಸಗಾಢ: ಜೋರು, ರಭಸ; ಕಲಿ: ಪರಾಕ್ರಮಿ; ಉಳಿ: ಜೀವಿಸು; ಸರಿಸಕೆ: ಸಮಾನ; ನಿಲುವ: ಎದುರು ನಿಲ್ಲುವ; ದೇವ: ಸುರರು; ದಾನವ: ರಾಕ್ಷಸ; ಒರಲು: ಅರಚು, ಕೂಗಿಕೊಳ್ಳು; ಫಲ: ಪ್ರಯೋಜನ;

ಪದವಿಂಗಡಣೆ:
ಗಳಹದಿರು+ ರಾಧೇಯ +ನಿನ್ನಯ
ಕುಲವ+ನೋಡದೆ +ಮೇರೆ +ತಪ್ಪುವ
ಸಲುಗೆಯಿದಲೇ+ ಸ್ವಾಮಿ+ಸಂಪತ್ತಿನ+ ಸಗಾಢತನ
ಕಲಿಗಳ್+ಉಳಿದಂತ್+ಎನ್ನ +ಸರಿಸಕೆ
ನಿಲುವನ್+ಆವನು +ದೇವ+ದಾನವ
ರೊಳಗೆ +ನಿನ್ನೊಡನ್+ಒರಲಿ +ಫಲವೇನೆಂದನಾ +ಭೀಷ್ಮ

ಅಚ್ಚರಿ:
(೧) ಸ ಕಾರದ ಸಾಲು ಪದ – ಸಲುಗೆಯಿದಲೇ ಸ್ವಾಮಿಸಂಪತ್ತಿನ ಸಗಾಢತನ

ಪದ್ಯ ೨೩: ದುರ್ಯೋಧನನು ಧೃತರಾಷ್ಟ್ರನನ್ನು ಹೇಗೆ ಒಪ್ಪಿಸಿದರು?

ಹೂಣೆ ಹೊಗೆವವರೊಡನೆ ಸೆಣಸಿನ
ಸಾಣೆಯಿಕ್ಕೆವು ಮಸೆವ ಕದನವ
ಕಾಣೆವೆಮ್ಮರಿಕೆಯಲಿ ಸಲುಗೆಯ ಸಾಧು ಸಾಮದಲಿ
ರಾಣಿಯರ ರಹಿಯಿಂದ ರಂಜಿಸಿ
ಜಾಣಿನಲಿ ಬಹೆವರಸ ನಿಮ್ಮಡಿ
ಯಾಣೆಯೆಂದೊಡಬಡಿಸಿದರು ನೃಪ ಕರ್ಣ ಶಕುನಿಗಳು (ಅರಣ್ಯ ಪರ್ವ, ೧೮ ಸಂಧಿ, ೨೩ ಪದ್ಯ)

ತಾತ್ಪರ್ಯ:
ನಾವು ಅವರೊಡನೆ ಶಪಥ, ಕೋಪವನ್ನು ತಾಳುವುದಿಲ್ಲ. ಯುದ್ಧಕ್ಕೆ ಸಾಣೆ ಹಿಡಿಯುವುದಿಲ್ಲ. ಯುದ್ಧವು ನಮ್ಮ ಮನಸ್ಸಿನಲ್ಲೇ ಇಲ್ಲ. ಸ್ತ್ರೀಯರ ಸಂಗೀತಾದಿಗಳಿಂದ ಅವರ ಮನಸ್ಸನ್ನು ರಂಜಿಸಿ ಬರುತ್ತೇವೆ, ನಿಮ್ಮಾಣೆ ಎಂದು ದುರ್ಯೋಧನ, ಕರ್ಣ, ಶಕುನಿಗಳು ಧೃತರಾಷ್ಟ್ರನನ್ನು ಒಪ್ಪಿಸಿದರು.

ಅರ್ಥ:
ಹೂಣೆ: ಪ್ರತಿಜ್ಞೆ; ಹೊಗೆ: ಸಿಟ್ಟಿಗೇಳು; ಸೆಣಸು: ಹೋರಾಡು; ಸಾಣೆ: ಪರೀಕ್ಷಿಸುವ ಕಲ್ಲು; ಮಸೆ: ಉದ್ರೇಕ, ಆವೇಶ; ಕದನ: ಯುದ್ಧ; ಕಾಣೆ: ತೋರು; ಅರಿಕೆ: ವಿಜ್ಞಾಪನೆ; ಸಲುಗೆ: ಸದರ, ಪ್ರೀತಿಯ ನಡವಳಿಕೆ; ಸಾಧು: ಒಳ್ಳೆಯದು, ಸೌಮ್ಯವಾದುದು; ಸಾಮ: ಶಾಂತಗೊಳಿಸುವಿಕೆ; ರಾಣಿ: ಅರಸಿ; ರಹಿ: ಸಡಗರ, ಸಂಭ್ರಮ; ರಂಜಿಸು: ಸಂತೋಷಗೊಳಿಸು; ಜಾಣು: ಬುದ್ಧಿವಂತಿಕೆ; ಬಹೆ: ಬರುವೆವು, ಹಿಂದಿರುಗು; ಅರಸ: ರಾಜ; ನಿಮ್ಮಡಿ: ನಿಮ್ಮ ಚರಣ; ಆಣೆ: ಪ್ರಮಾಣ; ಒಡಬಡಿಸು: ಒಪ್ಪಿಸು;

ಪದವಿಂಗಡಣೆ:
ಹೂಣೆ +ಹೊಗೆವ್+ಅವರೊಡನೆ +ಸೆಣಸಿನ
ಸಾಣೆಯಿಕ್ಕೆವು+ ಮಸೆವ +ಕದನವ
ಕಾಣೆವ್+ಎಮ್ಮರಿಕೆಯಲಿ+ ಸಲುಗೆಯ+ ಸಾಧು +ಸಾಮದಲಿ
ರಾಣಿಯರ +ರಹಿಯಿಂದ +ರಂಜಿಸಿ
ಜಾಣಿನಲಿ +ಬಹೆವ್+ಅರಸ +ನಿಮ್ಮಡಿ
ಆಣೆಯೆಂದ್+ಒಡಬಡಿಸಿದರು +ನೃಪ +ಕರ್ಣ +ಶಕುನಿಗಳು

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸಲುಗೆಯ ಸಾಧು ಸಾಮದಲಿ
(೨) ರ ಕಾರದ ತ್ರಿವಳಿ ಪದ – ರಾಣಿಯರ ರಹಿಯಿಂದ ರಂಜಿಸಿ

ಪದ್ಯ ೨೪: ದ್ರೌಪದಿಯು ನೀವು ರಾಜರಾಗಿರೆಂದು ಏಕೆ ಹಂಗಿಸಿದಳು?

ಸೋಲ ಗೆಲ್ಲವದೇಕೆ ಕುರುವಂ
ಶಾಳಿಯೊಳು ಸೋದರರು ನೀವ್ ಪಾಂ
ಚಾಲರಾವೇ ಹೊರಗು ನಿಮ್ಮೊಳು ಸಲುಗೆ ನಮಗೇಕೆ
ಮೇಳವೇ ಸಿರಿಗಳಿಸಲರಿದು ಜ
ನಾಳಿ ಹೆಂಡಿರಪೂರ್ವವೇ ಕ್ಷಿತಿ
ಪಾಲಕರು ನೀವಾಗಲೆಮಗದು ಪರಮ ಪರಿಣಾಮ (ಉದ್ಯೋಗ ಪರ್ವ, ೬ ಸಂಧಿ, ೨೪ ಪದ್ಯ)

ತಾತ್ಪರ್ಯ:
ಪಾಂಡವರು ಮತ್ತು ಕೌರವರಲ್ಲಿ ಯಾರೇ ಗೆದ್ದರೂ ಅಥವ ಸೋತರೂ ಏನು ವ್ಯತ್ಯಾಸವಿಲ್ಲ, ಏಕೆಂದರೆ ನೀವಿಬ್ಬರು ಕುರುವಂಶದ ಸೋದರರು, ಆದರೆ ನಾನು ಪಾಂಚಾಲಿ, ಹೊರಗಿನವಳು. ನಿಮ್ಮಲ್ಲಿ ನಮಗೆ ಸದರ ಬೇಡ. ಸಂಪತ್ತನ್ನು ಗಳಿಸುವುದು ಮಹಾಕಷ್ಟ. ಸಂಧಾನ ಮಾಡಿಕೊಂಡು ರಾಜರಾಗುವುದರಿಂದ ಐಶ್ವರ್ಯವು ಸುಲಭವಾಗಿ ಸಿಗುತ್ತದೆ. ರಾಜರೆಂದ ಮೇಲೆ ಜನರ ಬೆಂಬಲವೂ ಬರುತ್ತದೆ ಆದರೆ ಅದು ಹೆಂಡತಿಯರಿಗೆ ಬರುವುದಿಲ್ಲ. ನೀವು ರಾಜರಾಗುವುದು ನಮಗೆ ಬಹಳ ಸಂತೋಷ ಎಂದು ದ್ರೌಪದಿಯು ಹಂಗಿಸಿದಳು.

ಅರ್ಥ:
ಸೋಲು: ಪರಾಭವ; ಗೆಲ್ಲು: ಗೆಲುವು, ಜಯ; ವಂಶ: ಕುಲ; ಆಳಿ: ಸಾಲು; ಸೋದರ: ಅಣ್ಣ ತಮ್ಮಂದಿರು; ಹೊರಗೆ: ಆಚೆ, ಬಹಿರಂಗ; ಸಲುಗೆ: ಸದರ; ಮೇಳ: ಸೇರುವಿಕೆ; ಸಿರಿ: ಐಶ್ವರ್ಯ; ಅರಿ: ತಿಳಿ; ಜನಾಳಿ: ಜನರ ಗುಂಪು/ಬೆಂಬಲ; ಹೆಂಡಿರ: ಹೆಂಡತಿ, ಗರತಿ; ಪೂರ್ವ: ಹಿಂದೆ; ಕ್ಷಿತಿ: ಭೂಮಿ; ಪಾಲಕ: ನೋಡಿಕೊಳ್ಳುವವ; ಪರಮ: ಶ್ರೇಷ್ಠ; ಪರಿಣಾಮ: ಒಳಿತು, ಕ್ಷೇಮ, ಫಲಿತಾಂಶ;

ಪದವಿಂಗಡಣೆ:
ಸೋಲ +ಗೆಲ್ಲವದ್+ಏಕೆ +ಕುರುವಂ
ಶಾಳಿಯೊಳು +ಸೋದರರು +ನೀವ್ +ಪಾಂ
ಚಾಲರಾವೇ+ ಹೊರಗು +ನಿಮ್ಮೊಳು +ಸಲುಗೆ +ನಮಗೇಕೆ
ಮೇಳವೇ +ಸಿರಿಗಳಿಸಲ್+ಅರಿದು +ಜ
ನಾಳಿ +ಹೆಂಡಿರ+ಪೂರ್ವವೇ +ಕ್ಷಿತಿ
ಪಾಲಕರು+ ನೀವಾಗಲ್+ಎಮಗದು +ಪರಮ +ಪರಿಣಾಮ

ಅಚ್ಚರಿ:
(೧) ಹೆಣ್ಣು ಯಾವ ರೀತಿ ತನ್ನ ಅಭಿಪ್ರಾಯವನ್ನು ತಿಳಿಸಬಹುದೆಂದು ತೋರುವ ಪದ್ಯ
(೨) ವಂಶಾಳಿ, ಜನಾಳಿ – ಪ್ರಾಸ ಪದ