ಪದ್ಯ ೪೯: ಯಕ್ಷರು ಭೀಮನಿಗೆ ಯಾರ ಬಳಿ ಹೋಗಲು ಹೇಳಿದರು?

ಐಸಲೇ ತಪ್ಪೇನು ನೀ ಯ
ಕ್ಷೇಶನಲ್ಲಿಗೆ ಪೋಗಿ ಬೇಡುವು
ದೀ ಸರೋರುಹವಾವ ಘನ ಧನಪತಿಯುದಾರನಲೆ
ಮೀಸಲಿನ ಸರಸಿಯಲಿ ದೃಷ್ಟಿಯ
ಸೂಸಬಹುದೇ ರಾಯನಾಜ್ಞೆಯ
ಭಾಷೆಯಿಲ್ಲದೆ ಬಗೆಯಲರಿದೆಂದುದು ಭಟಸ್ತೋಮ (ಅರಣ್ಯ ಪರ್ವ, ೧೧ ಸಂಧಿ, ೪೯ ಪದ್ಯ)

ತಾತ್ಪರ್ಯ:
ಭೀಮನ ಮಾತನ್ನು ಕೇಳಿದ ಕಾವಲಿನ ಯಕ್ಷರು ಅಷ್ಟೆ ತಾನೆ, ಯಕ್ಷರ ಒಡೆಯನಾದ ಕುಬೇರನ ಬಳಿಗೆ ಹೋಗಿ ಬೇಡಿಕೋ, ಕಮಲಪುಷ್ಪವೇನು ಹೆಚ್ಚಿನದು, ಕುಬೇರನು ಉದಾರಿ ಅವನು ಇದನ್ನು ನೀಡುತ್ತಾನೆ, ಈ ಸರೋವರವು ಅವನಿಗೆ ಮೀಸಲಾದ ಸರೋವರ, ಇತರರು ಇದನ್ನು ನೋಡಬಾರದು, ಅವನ ಅಪ್ಪಣೆಯಿಲ್ಲದೆ ಹೂವು ನಿನಗೆ ಸಿಕ್ಕಲಾರದು ಎಂದರು.

ಅರ್ಥ:
ಐಸಲೇ: ಅಷ್ಟೆ; ತಪ್ಪು: ಸರಿಯಿಲ್ಲದು; ಯಕ್ಷೇಶ: ಕುಬೇರ; ಪೋಗು: ಹೋಗು, ನಡೆ; ಬೇಡು: ಕೋರಿಕೊ; ಸರೋರುಹ: ಕಮಲ; ಘನ: ಶ್ರೇಷ್ಠ; ಧನಪತಿ: ಕುಬೇರ; ಉದಾರ: ದಾನ ಶೀಲನಾದ ವ್ಯಕ್ತಿ; ಮೀಸಲು: ಕಾಯ್ದಿಟ್ಟ; ಸರಸಿ: ಸರೋವರ; ದೃಷ್ಟಿ: ನೋಟ; ಸೂಸು: ಎರಚು, ಚಲ್ಲು; ರಾಯ: ರಾಜ; ಆಜ್ಞೆ: ಅಪ್ಪಣೆ; ಭಾಷೆ: ಮಾತು; ಬಗೆ: ಎಣಿಸು, ಲಕ್ಷಿಸು; ಅರಿ: ತಿಳಿ; ಭಟ: ಸೇವಕ; ಸ್ತೋಮ: ಗುಂಪು;

ಪದವಿಂಗಡಣೆ:
ಐಸಲೇ +ತಪ್ಪೇನು +ನೀ +ಯ
ಕ್ಷೇಶನಲ್ಲಿಗೆ+ ಪೋಗಿ +ಬೇಡುವುದ್
ಈ+ ಸರೋರುಹವ್+ಆವ+ ಘನ+ ಧನಪತಿ+ಉದಾರನಲೆ
ಮೀಸಲಿನ +ಸರಸಿಯಲಿ+ ದೃಷ್ಟಿಯ
ಸೂಸಬಹುದೇ +ರಾಯನ್+ಆಜ್ಞೆಯ
ಭಾಷೆಯಿಲ್ಲದೆ +ಬಗೆಯಲ್+ಅರಿದೆಂದುದು+ ಭಟಸ್ತೋಮ

ಅಚ್ಚರಿ:
(೧) ಯಕ್ಷೇಶ, ಧನಪತಿ – ಕುಬೇರನಿಗೆ ಬಳಸಿದ ಪದಗಳು

ಪದ್ಯ ೪೮: ಭೀಮನು ಯಕ್ಷರಿಗೆ ಏನು ಹೇಳಿದನು?

ನಾವಲೇ ಕುಂತೀಕುಮಾರರು
ಭೂವಧೂವಲ್ಲಭರು ನಮ್ಮಯ
ದೇವಿಗಾದುದು ಬಯಕೆ ಸೌಗಂಧಿಕ ಸರೋರುಹದ
ಠಾವು ಕಾಣಿಸಿಕೊಂಡು ಬಹುದಾ
ತಾವರೆಯನೆನೆ ಬಂದೆವಿಲ್ಲಿಗೆ
ನೀವು ಕಾಹಿನಬಂಟರೆಂಬುದನರಿಯೆ ನಾನೆಂದ (ಅರಣ್ಯ ಪರ್ವ, ೧೧ ಸಂಧಿ, ೪೮ ಪದ್ಯ)

ತಾತ್ಪರ್ಯ:
ನಾವು ಕುಂತೀಕುಮಾರರು, ಭೂಮಿಯ ಒಡೆಯರು, ನಮ್ಮ ದೇವಿಯು ಸೌಗಂಧಿಕ ಪುಷ್ಪವನ್ನು ಬಯಸಿದಳು, ಈ ಕಮಲ ಪುಷ್ಪವನ್ನು ತೆಗೆದುಕೊಂಡು ಬಾ ಎಂದು ಆಕೆ ಕೋರಿದುದರಿಂದ ನಾವಿಲ್ಲಿಗೆ ಬಂದೆವು, ಈ ಸರೋವರವನ್ನು ಕಾಯಲು ನೀವಿಷ್ಟು ಜನರಿದ್ದೀರಿ ಎನ್ನುವುದು ನನಗೆ ತಿಳಿದಿರಲಿಲ್ಲ ಎಂದು ಭೀಮನು ನುಡಿದನು.

ಅರ್ಥ:
ಕುಮಾರ: ಮಕ್ಕಳು; ಭೂ: ಭೂಮಿ; ವಧು: ಹೆಣ್ಣು; ವಲ್ಲಭ: ಒಡೆಯ, ಪ್ರಭು; ಭೂವಧೂವಲ್ಲಭ: ರಾಜ; ದೇವಿ: ಸ್ತ್ರಿ, ಹೆಣ್ಣು; ಬಯಕೆ: ಆಸೆ; ಸರೋರುಹ: ಕಮಲ; ಠಾವು: ಸ್ಥಳ, ಜಾಗ; ಕಾಣಿಸು: ತೋರು; ಬಹುದಾ: ತೆಗೆದುಕೊಂಡು ಬಾ; ತಾವರೆ: ಕಮಲ; ಬಂದೆ: ಆಗಮಿಸು; ಕಾಹಿನ: ಕಾವಲು, ರಕ್ಷಣೆ; ಬಂಟ: ಸೇವಕ; ಅರಿ: ತಿಳಿ;

ಪದವಿಂಗಡಣೆ:
ನಾವಲೇ+ ಕುಂತೀ+ಕುಮಾರರು
ಭೂವಧೂವಲ್ಲಭರು+ ನಮ್ಮಯ
ದೇವಿಗಾದುದು +ಬಯಕೆ +ಸೌಗಂಧಿಕ+ ಸರೋರುಹದ
ಠಾವು +ಕಾಣಿಸಿಕೊಂಡು +ಬಹುದಾ
ತಾವರೆಯನೆನೆ+ ಬಂದೆವಿಲ್ಲಿಗೆ
ನೀವು +ಕಾಹಿನ+ಬಂಟರೆಂಬುದನ್+ಅರಿಯೆ +ನಾನೆಂದ

ಅಚ್ಚರಿ:
(೧) ರಾಜ ಎನ್ನಲು ಭೂವಧೂವಲ್ಲಭ ಪದದ ಬಳಕೆ
(೨) ಸರೋರುಹ, ತಾವರೆ – ಸಮನಾರ್ಥಕ ಪದ

ಪದ್ಯ ೪೬: ಸರೋವರವನ್ನು ಯಾರು ಕಾಯುತ್ತಿದ್ದರು?

ಸಾರೆ ಬರೆ ಬರೆ ಕಂಡನಲ್ಲಿ ಕು
ಬೇರನಾಳಿದ್ದುದು ತದೀಯ ಸ
ರೋರುಹದ ಕಾಹಿನಲಿ ಯಕ್ಷರು ಲಕ್ಷಸಂಖ್ಯೆಯಲಿ
ಸಾರೆ ಚಾಚಿದ ಹರಿಗೆಗಳ ಬಲು
ಕೂರಲಗು ಹೊದೆಯಂಬು ಚಾಪ ಕ
ಠಾರಿ ಸೆಲ್ಲೆಯ ಸಬಳಗಳ ಸೋಪಾನ ಪಂಕ್ತಿಯಲಿ (ಅರಣ್ಯ ಪರ್ವ, ೧೧ ಸಂಧಿ, ೪೬ ಪದ್ಯ)

ತಾತ್ಪರ್ಯ:
ಭೀಮನು ಕಮಲದ ಸರೋವರದ ಹತ್ತಿರಕ್ಕೆ ಹೋದಗ ಆ ಸರೋವರದ ಮೆಟ್ಟಿಲುಗಳ ಮೇಲೆ ಕುಬೇರನ ಯೋಧರರಾದ ಯಕ್ಷರು ಲಕ್ಷ ಲಕ್ಷ ಸಂಖ್ಯೆಗಳಲ್ಲಿದ್ದುದನು ನೋಡಿದನು. ಕತ್ತಿ, ಗುರಾಣಿ, ಬಿಲ್ಲು ಬಾಣ, ಈಟಿ, ಭರ್ಜಿಗಳಿಂದ ಶಸ್ತ್ರಸನ್ನದ್ಧರಾಗಿ ಅವರು ಸರೋವರವನ್ನು ಕಾಯುತ್ತಿದ್ದರು.

ಅರ್ಥ:
ಸಾರೆ: ಹತ್ತಿರ, ಸಮೀಪ; ಬರೆ: ಆಗಮನ; ಕಂಡು: ನೋಡು; ಆಳು: ಸೇವಕ; ತದೀಯ: ಅದಕ್ಕೆ ಸಂಬಂಧಪಟ್ಟ; ಸರೋರುಹ: ಕಮಲ; ಕಾಹಿ: ರಕ್ಷಿಸುವ; ಸಂಖ್ಯೆ: ಎಣಿಕೆ; ಚಾಚು: ಹರಡು; ಹರಿಗೆ: ಚಿಲುಮೆ, ತಲೆಪೆರಿಗೆ; ಕೂರಲಗು: ಹರಿತವಾದ ಬಾಣ; ಹೊದೆ: ಬತ್ತಳಿಕೆ; ಅಂಬು: ಬಾಣ; ಚಾಪ: ಬಿಲ್ಲು; ಕಠಾರಿ: ಬಾಕು, ಚೂರಿ, ಕತ್ತಿ; ಸಬಲ: ಈಟಿ; ಸೋಪಾನ: ಮೆಟ್ಟಿಲು; ಸೆಲ್ಲೆ: ಉತರೀಯ; ಪಂಕ್ತಿ: ಗುಂಪು;

ಪದವಿಂಗಡಣೆ:
ಸಾರೆ +ಬರೆ +ಬರೆ +ಕಂಡನಲ್ಲಿ +ಕು
ಬೇರನ್+ಆಳ್+ಇದ್ದುದು +ತದೀಯ +ಸ
ರೋರುಹದ +ಕಾಹಿನಲಿ +ಯಕ್ಷರು +ಲಕ್ಷ+ಸಂಖ್ಯೆಯಲಿ
ಸಾರೆ +ಚಾಚಿದ +ಹರಿಗೆಗಳ +ಬಲು
ಕೂರಲಗು +ಹೊದೆ+ಅಂಬು +ಚಾಪ +ಕ
ಠಾರಿ +ಸೆಲ್ಲೆಯ +ಸಬಳಗಳ +ಸೋಪಾನ +ಪಂಕ್ತಿಯಲಿ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸೆಲ್ಲೆಯ ಸಬಳಗಳ ಸೋಪಾನ

ಪದ್ಯ ೧: ಸೂರ್ಯೊದಯವನ್ನು ಹೇಗೆ ವಿವರಿಸಬಹುದು?

ಮಗನು ದಳಪತಿಯಾದ ಗಡ ಕಾ
ಳಗವ ನೋಡುವೆನೆಂಬವೊಲು ಜಗ
ದಗಲದಲಿ ನೆರೆ ಕಡಿತವಿಕ್ಕಿತು ತಿಮಿರವನದೊಳಗೆ
ಹೊಗರು ಕುವಳಯ ಕಳಿಯೆ ಸೊಂಪಿನ
ನಗೆ ಸರೋರುಹಕೊಗೆಯ ವಿರಹದ
ಢಗೆ ರಥಾಂಗದೊಳಳಿಯೆ ರವಿಯುದಯಾಚಳಕೆ ಬಂದ (ಕರ್ಣ ಪರ್ವ, ೨ ಸಂಧಿ, ೧ ಪದ್ಯ)

ತಾತ್ಪರ್ಯ:
ಸೂರ್ಯನು ಉದಯವನ್ನು ಬಹು ಸೊಗಸಾಗಿ ವಿವರಿಸುವ ಪದ್ಯ. ತನ್ನ ಮಗನಾದ ಕರ್ಣನು ಸೇನಾಧಿಪತಿಯಾಗಿದ್ದಾನೆ ಅವನು ಯುದ್ಧ ಮಾಡುವ ರೀತಿಯನ್ನು ನೋಡಬೇಕೆನ್ನುವಂತೆ ಸೂರ್ಯೋದಯದ ಸಮಯವಾಯಿತು. ಕತ್ತಲಿನ ಕಾಡು ಕಡಿದು ಹೋಯಿತು, ಕನ್ನೈದಿಲಕಾಂತಿ ಕುಂದು ಹೋಗಿ ಕಮಲಗಳ ನಕ್ಕವು. ಚಕ್ರವಾಕಗಳ ವಿರಹವು ಕೊನೆಗೊಂಡಿತು, ಸೂರ್ಯನು ಉದಯಾಚಲಕ್ಕೇರಿದನು.

ಅರ್ಥ:
ಮಗ: ಪುತ್ರ; ದಳಪತಿ: ಸೇನಾಧಿಪತಿ; ಗಡ: ತ್ವರಿತವಾಗಿ; ಸಂತೋಷ; ಕಾಳಗ: ಯುದ್ಧ; ನೋಡು: ವೀಕ್ಷಿಸು; ಜಗ: ಜಗತ್ತು, ವಿಶ್ವ; ಅಗಲ: ವಿಸ್ತಾರ; ನೆರೆ: ಗುಂಪು; ಕಡಿತ: ಕಡಿಮೆ ಮಾಡು, ಕತ್ತರಿಸು; ತಿಮಿರ: ಕತ್ತಲು; ವನ: ಕಾಡು; ಹೊಗರು: ಕಾಂತಿ, ಪ್ರಕಾಶ; ಕುವಳಯ: ಕೆನ್ನೈದಿಲೆ; ಕಳಿ:ಸಾಯು, ಬಾಡು; ಸೊಂಪು: ಸೊಗಸು, ಚೆಲುವು; ನಗೆ: ಸಂತಸ; ಸರೋರುಹ: ಕಮಲ; ವಿರಹ: ಅಗಲಿಕೆ, ವಿಯೋಗ; ಢಗೆ: ಕಾವು, ದಗೆ; ರಥಾಂಗ: ಚಕ್ರವಾಕ ಪಕ್ಷಿ, ಜಕ್ಕವಕ್ಕಿ; ; ಅಳಿ: ಕೊನೆಗೊಳ್ಳು; ರವಿ: ಭಾನು; ಉದಯ: ಹುಟ್ಟು; ಅಚಲ: ಬೆಟ್ಟ; ಬಂದ: ಆಗಮಿಸು;

ಪದವಿಂಗಡಣೆ:
ಮಗನು+ ದಳಪತಿಯಾದ +ಗಡ +ಕಾ
ಳಗವ +ನೋಡುವೆನ್+ಎಂಬವೊಲು +ಜಗ
ದಗಲದಲಿ +ನೆರೆ+ ಕಡಿತವಿಕ್ಕಿತು +ತಿಮಿರ+ವನದೊಳಗೆ
ಹೊಗರು +ಕುವಳಯ +ಕಳಿಯೆ +ಸೊಂಪಿನ
ನಗೆ +ಸರೋರುಹಕೊಗೆಯ+ ವಿರಹದ
ಢಗೆ+ ರಥಾಂಗದೊಳ್+ಅಳಿಯೆ +ರವಿ+ಉದಯ+ಅಚಳಕೆ+ ಬಂದ

ಅಚ್ಚರಿ:
(೧) ಕತ್ತಲು ಕಡಿಮೆಯಾಯಿತು ಎನಲು – ಜಗದಗಲದಲಿ ನೆರೆ ಕಡಿತವಿಕ್ಕಿತು ತಿಮಿರವನದೊಳಗೆ
(೨) ಸೂರ್ಯೋದಯದ ಸಂಕೇತ – ಹೊಗರು ಕುವಳಯ ಕಳಿಯೆ; ಸೊಂಪಿನ ನಗೆ ಸರೋರುಹಕೊಗೆಯ; ವಿರಹದ ಢಗೆ ರಥಾಂಗದೊಳಳಿಯೆ
(೩) ಸೂರ್ಯನು ಬಂದ ಬಗೆ – ರವಿಯುದಯಾಚಳಕೆ ಬಂದ

ಪದ್ಯ ೧೬: ಭೀಮನು ಪುರುಷಾಮೃಗವನ್ನು ಹೇಗೆ ಸಂಧಿಸಿದನು?

ಇದುವೆ ಸಮಯ ಮಹಾನುಭಾವನ
ಪದಯುಗವ ಕಾಣುವೊಡೆನುತ ನಿಜ
ಗದೆಯನೆಡೆಗೈಯಿಂದ ಹಿಡಿದೀಕ್ಷಿಸಿದನಾ ಮೃಗವ
ವದನ ವಿಕಸಿತ ವರ ಸರೋರುಹ
ವೊದಗೆ ಮೆಯ್ಯೊಳು ಹರುಷಪುಳಕದ
ಹೊದರಿನಲಿ ಹೊರೆಯೇರೆ ನಡೆತರುತಿರ್ದನಾ ಭೀಮ (ಸಭಾ ಪರ್ವ, ೭ ಸಂಧಿ, ೧೬ ಪದ್ಯ)

ತಾತ್ಪರ್ಯ:
ಭೀಮನು ಮಾನಸಸರೋವರದಲ್ಲಿ ಶಿವನ ಧ್ಯಾನದಲ್ಲಿದ್ದ ಪುರುಷಾಮೃಗನನ್ನು ನೋಡಿ ಆ ಮಹಾನುಭಾವನ ಪಾದದ್ವಯವನ್ನು ನೋಡಲು ಇದೇ ಸಮಯವೆಂದು ತಿಳಿದು ತನ್ನ ಗದೆಯನ್ನು ಎಡಗೈಯಲ್ಲಿ ಹಿಡಿದು, ಆತನನ್ನು ನೋಡಲು ಭೀಮನ ಮುಖವು ಕಮಲದಂತೆ ಅರಳಿತು. ಸಂತೋಷದಿಂದ ರೋಮಾಂಚನಗೊಂಡ ಭೀಮನು ಅದರ ಬಳಿಗೆ ನಡೆದನು.

ಅರ್ಥ:
ಸಮಯ: ಕಾಲ; ಮಹಾನುಭಾವ: ಶ್ರೇಷ್ಠ; ಪದ: ಚರಣ; ಪದಯುಗ: ಪಾದದ್ವಯ; ಕಾಣು: ನೋಡು; ನಿಜ: ದಿಟ; ಗದೆ: ಮುದ್ಗರ; ಎಡ: ವಾಮ: ಕೈ: ಕರ; ಹಿಡಿದು: ಗ್ರಹಿಸು; ಈಕ್ಷಿಸು: ನೋಡು; ವದನ; ಮುಖ; ವಿಕಸಿತ: ಅರಳಿದ; ವರ: ಶ್ರೇಷ್ಠ; ಸರೋರುಹ: ಕಮಲ; ವೊದೆಗೆ: ರೀತಿ; ಮೆಯ್ಯೊಳು: ತನು; ಪುಳಕ: ಮೈನವಿರೇಳುವಿಕೆ; ಹೊದರು: ಪೊದೆ; ಹೊರೆ: ಹತ್ತಿರ, ಸಮೀಪ; ನಡೆ: ಮುಂದೆ ಹೋಗು;

ಪದವಿಂಗಡಣೆ:
ಇದುವೆ +ಸಮಯ +ಮಹಾನುಭಾವನ
ಪದಯುಗವ+ ಕಾಣುವೊಡ್+ಎನುತ +ನಿಜ
ಗದೆಯನ್+ಎಡೆಗೈಯಿಂದ +ಹಿಡಿದ್+ಈಕ್ಷಿಸಿದನಾ+ ಮೃಗವ
ವದನ+ ವಿಕಸಿತ+ ವರ+ ಸರೋರುಹ
ವೊದಗೆ+ ಮೆಯ್ಯೊಳು +ಹರುಷಪುಳಕದ
ಹೊದರಿನಲಿ+ ಹೊರೆಯೇರೆ +ನಡೆತರುತಿರ್ದನಾ +ಭೀಮ

ಅಚ್ಚರಿ:
(೧) “ಹ” ಕಾರದ ಜೋಡಿ ಪದಗಳ ಬಳಕೆ: ಹರುಷಪುಳಕದ ಹೊದರಿನಲಿ ಹೊರೆಯೇರೆ
(೨) ಮುಖವು ಅರಳಿತು ಎಂದು ವರ್ಣಿಸಲು – ವದನ ವಿಕಸಿತ ವರ ಸರೋರುಹವೊದಗೆ

ಪದ್ಯ ೫೮: ಶತ್ರುದೇಶವನ್ನು ವಿನಾಕಾರಣ ನಾಶಮಾಡಬಹುದೆ?

ದೇಶ ಹಗೆವನದೆಂದು ಕಡ್ಡಿಯ
ಘಾಸಿ ಮಾಡದೆ ಮಿಗೆ ವಿನೋದದ
ಲೈಸುಪಡೆ ನಡೆತಂದು ಬಿಟ್ಟುದು ಗಿರಿಯ ತಪ್ಪಲಲಿ
ಆ ಸರೋರುಹ ಬಂಧು ಚರಮಾ
ಶಾ ಸತಿಯ ಚುಂಬಿಸೆ ಗಿರಿವ್ರಜ
ದಾ ಶಿಖರವನು ಹತ್ತಿದರು ಹರಿಭೀಮ ಫಲುಗುಣರು (ಸಭಾ ಪರ್ವ, ೨ ಸಂಧಿ, ೫೮ ಪದ್ಯ)

ತಾತ್ಪರ್ಯ:
ಮಗಧರಾಜನನ್ನು ಸದೆಬಡೆಯಲು ಬಂದಿರುವ ಭೀಮಾರ್ಜುನರು, ಮಗಧ ದೇಶವು ಅವರ ವೈರಿರಾಜನ ದೇಶವಾಗಿದ್ದರೂ, ಆ ದೇಶದಲ್ಲಿ ಒಂದು ಕಡ್ಡಿಯನ್ನು ನಾಶಮಾಡಲಿಲ್ಲ, ಹಾಗೂ ಅಷ್ಟೂ ಸೈನ್ಯವನ್ನು ಬೆಟ್ಟದ ತಪ್ಪಲಲ್ಲಿ ಉಳಿಯಲು ಹೇಳಿ, ಸೂರ್ಯನು ಮುಳುಗಲು ಕೃಷ್ಣನ ಜೊತೆ ಭೀಮಾರ್ಜುನರು ಬೆಟ್ಟವನ್ನು ಹತ್ತಿದರು.

ಅರ್ಥ:
ದೇಶ: ರಾಷ್ಟ್ರ; ಹಗೆ: ವೈರಿ; ಕಡ್ಡಿ: ಕಾಷ್ಠ, ಮರದತುಂಡು; ಘಾಸಿ: ನಾಶ; ಮಿಗೆ: ಅಧಿಕ, ಮತ್ತು; ವಿನೋದ: ಸಂತೋಷ; ಐಸು: ಅಷ್ಟು; ಪಡೆ: ಸೈನ್ಯ; ಗಿರಿ: ಬೆಟ್ಟ; ತಪ್ಪಲು: ಕೆಳಭಾಗ; ಬಿಟ್ಟುದು: ಉಳಿದು; ಸರೋರುಹ: ಕಮಲ; ಬಂಧು: ಸಂಬಂಧಿಕ; ಚರಮ, ಚರಮಾಶೆ: ಪಶ್ಚಿಮದಿಕ್ಕಿನ; ಚುಂಬಿಸು: ಮುತ್ತಿಟ್ಟು; ವ್ರಜ: ಗುಂಪು, ಸಮೂಹ; ಗಿರಿವ್ರಜ: ಬೆಟ್ಟಗಳ ಗುಂಪು; ಶಿಖರ: ತುದಿ; ಹತ್ತು: ಏರು; ಸತಿ: ಹೆಂಡತಿ;

ಪದವಿಂಗಡಣೆ:
ದೇಶ +ಹಗೆವನದ್+ಎಂದು +ಕಡ್ಡಿಯ
ಘಾಸಿ +ಮಾಡದೆ +ಮಿಗೆ +ವಿನೋದದಲ್
ಐಸು+ಪಡೆ +ನಡೆತಂದು+ ಬಿಟ್ಟುದು +ಗಿರಿಯ +ತಪ್ಪಲಲಿ
ಆ +ಸರೋರುಹ +ಬಂಧು +ಚರಮಾಶ
ಆ+ ಸತಿಯ +ಚುಂಬಿಸೆ +ಗಿರಿವ್ರಜದ
ಆ+ ಶಿಖರವನು+ ಹತ್ತಿದರು +ಹರಿ+ಭೀಮ +ಫಲುಗುಣರು

ಅಚ್ಚರಿ:
(೧) ವೈರಿರಾಷ್ಟ್ರವೆಂದರೆ ಮೊದಲು ನಾಶಮಾಡಬೇಕು ಎಂದು ನಾವು ತಿಳಿಯುತ್ತೇವೆ, ಆದರೆ ಇಲ್ಲಿ ವೈರಿರಾಷ್ಟ್ರದಲ್ಲಿ ಒಂದು ಕಡ್ಡಿಯನ್ನು ನಾಶಮಾಡಲಿಲ್ಲ ಎಂದು ಹೇಳುವ ಮೂಲಕ, ಆಗಿನ ಕಾಲದಲ್ಲಿದ್ದ ಮೌಲ್ಯಗಳ ತುಣುಕು ನೀಡಲಾಗಿದೆ. ಯುದ್ಧಕ್ಕೆ ಬಂದಿದ್ದರು, ಆ ದೇಶದ ಸಂಪತ್ತನ್ನು ಹಾಳುಮಾಡುವಹಾಗಿಲ್ಲ – ಎಂತಹ ಅತ್ಯುನ್ನತ ಯೋಚನೆ
(೨) ಸೂರ್ಯ ಮುಳುಗಿದ ನೆಂದು ಹೇಳಲು ಬಳಸಿರುವ ಕಲ್ಪನೆ- ಸರೋರುಹ ಅಂದರೆ ಕಮಲ, ಕಮಲದ ಬಂಧು – ಸೂರ್ಯ (ಸೂರ್ಯ ಉದಯಿಸಲು ಕಮಲ ಅರಳೂತ್ತದೆ), ಸೂರ್ಯನಿಗೆ ಇಬ್ಬರು ಹೆಂಡತಿಯರು, ಛಾಯ, ಸರಣ್ಯು (ಸಂಧ್ಯಾ, ಸಂಜನ ಎಂದು ಇತರ ಹೆಸರು), ಸೂರ್ಯನು ಪಶ್ಚಿಮ ದಿಕ್ಕಿನಲ್ಲಿ ಅವನ ಹೆಂಡತಿಯನ್ನು ಚುಂಬಿಸಿದ – ಎಂದು ಸೂರ್ಯನು ಮುಳುಗಿದನೆಂದು ಹೇಳುವ ಪರಿ