ಪದ್ಯ ೩೯: ಭೀಷ್ಮರು ಕರ್ಣನನ್ನು ಹೇಗೆ ಜರೆದರು?

ಗಳಹದಿರು ರಾಧೇಯ ನಿನ್ನಯ
ಕುಲವನೋಡದೆ ಮೇರೆದಪ್ಪುವ
ಸಲುಗೆಯಿದಲೇ ಸ್ವಾಮಿಸಂಪತ್ತಿನ ಸಗಾಢತನ
ಕಲಿಗಳುಳಿದಂತೆನ್ನ ಸರಿಸಕೆ
ನಿಲುವನಾವನು ದೇವದಾನವ
ರೊಳಗೆ ನಿನ್ನೊಡನೊರಲಿ ಫಲವೇನೆಂದನಾ ಭೀಷ್ಮ (ಭೀಷ್ಮ ಪರ್ವ, ೧ ಸಂಧಿ, ೩೯ ಪದ್ಯ)

ತಾತ್ಪರ್ಯ:
ಎಲೈ ಕರ್ಣ, ಬಾಯಿಗೆ ಬಂದಂತೆ ಒದರಬೇಡ. ನಿನ್ನ ಕುಲವನ್ನು ನೋಡಿಕೊಳ್ಳದೆ, ಸ್ವಾಮಿಗೆ ಆಪ್ತನೆಂಬ ಸಲಗೆಯಿಂದ ಹೀಗೆ ಹೇಳುತ್ತಿರುವೆ, ದೇವತೆಗಳು, ದಾನವರಲ್ಲಿ ನನಗೆ ಸರಿಸಮಾನನಾದ ವೀರನು ಯಾರು? ನಿನ್ನೊಡನೆ ಸುಮ್ಮನೆ ಅರಚುವುದರಿಂದ ಏನು ಪ್ರಯೋಜನ ಎಂದು ಭೀಷ್ಮನು ಹೇಳಿದನು.

ಅರ್ಥ:
ಗಳಹು: ಪ್ರಲಾಪಿಸು, ಹೇಳು; ರಾಧೇಯ: ಕರ್ಣ; ಕುಲ: ವಂಶ; ನೋಡು: ತೋರು, ವೀಕ್ಷಿಸು; ಮೇರೆ: ಎಲ್ಲೆ, ಗಡಿ; ತಪ್ಪು: ಸರಿಯಿಲ್ಲದ; ಸಲುಗೆ: ಸದರ; ಸ್ವಾಮಿ: ಒಡೆಯ; ಸಂಪತ್ತು: ಐಶ್ವರ್ಯ; ಸಗಾಢ: ಜೋರು, ರಭಸ; ಕಲಿ: ಪರಾಕ್ರಮಿ; ಉಳಿ: ಜೀವಿಸು; ಸರಿಸಕೆ: ಸಮಾನ; ನಿಲುವ: ಎದುರು ನಿಲ್ಲುವ; ದೇವ: ಸುರರು; ದಾನವ: ರಾಕ್ಷಸ; ಒರಲು: ಅರಚು, ಕೂಗಿಕೊಳ್ಳು; ಫಲ: ಪ್ರಯೋಜನ;

ಪದವಿಂಗಡಣೆ:
ಗಳಹದಿರು+ ರಾಧೇಯ +ನಿನ್ನಯ
ಕುಲವ+ನೋಡದೆ +ಮೇರೆ +ತಪ್ಪುವ
ಸಲುಗೆಯಿದಲೇ+ ಸ್ವಾಮಿ+ಸಂಪತ್ತಿನ+ ಸಗಾಢತನ
ಕಲಿಗಳ್+ಉಳಿದಂತ್+ಎನ್ನ +ಸರಿಸಕೆ
ನಿಲುವನ್+ಆವನು +ದೇವ+ದಾನವ
ರೊಳಗೆ +ನಿನ್ನೊಡನ್+ಒರಲಿ +ಫಲವೇನೆಂದನಾ +ಭೀಷ್ಮ

ಅಚ್ಚರಿ:
(೧) ಸ ಕಾರದ ಸಾಲು ಪದ – ಸಲುಗೆಯಿದಲೇ ಸ್ವಾಮಿಸಂಪತ್ತಿನ ಸಗಾಢತನ