ಪದ್ಯ ೧೨: ಮಹಾಭಾರತದ ಹಿರಿಮೆಯೇನು?

ಅರಸ ಕೇಳೈ ನಾರದಾದ್ಯರು
ಸರಸಿರುಹಸಂಭವನ ಸಭೆಯೊಳು
ವರಮಹಾಭಾರತವ ಕೊಂಡಾಡಿದರು ಭಕ್ತಿಯಲಿ
ವರಮಹತ್ವದಿ ಭಾರವತ್ವದಿ
ವರಮಹಾಭರತವಿದೊಂದೇ
ದುರಿತ ದುರ್ಗ ವಿಭೇದಕರವೀರೇಳು ಲೋಕದಲಿ (ಆದಿ ಪರ್ವ, ೨ ಸಂಧಿ, ೧೨ ಪದ್ಯ)

ತಾತ್ಪರ್ಯ:
ರಾಜನೇ ಕೇಳು, ನಾರದಾದಿ ಋಷಿಗಳು ಬ್ರಹ್ಮನ ಸಭೆಯಲ್ಲಿ ಮಹಾಭಾರತವು ಮಹತ್ವವನ್ನೂ, ಭಾರವತ್ವವನ್ನೂ ಹೊಂದಿರುವುದೆಂದು ಕೊಂಡಾಡಿದರು. ಹದಿನಾಲ್ಕು ಲೋಕಗಳಲ್ಲಿ ಪಾಪದ ಕೋಟೆಯನ್ನು ಒಡೆಯಲು ಮಹಾಭಾರತವೊಂದಕ್ಕೇ ಸಾಧ್ಯ ಎಂದು ಹೇಳಿದರು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಆದಿ: ಮೊದಲಾದ; ಸರಸಿರುಹಸಂಭವ: ಬ್ರಹ್ಮ; ಸರಸಿರುಹ: ಕಮಲ; ಸಂಭವ: ಹುಟ್ಟಿದ; ಸಭೆ: ದರಬಾರು; ವರ: ಶ್ರೇಷ್ಠ; ಕೊಂಡಾಡು: ಮೆಚ್ಚು, ಹೊಗಳು; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಮಹತ್ವ: ಮುಖ್ಯ; ದುರಿತ: ಪಾಪ; ದುರ್ಗ: ಕೋಟೆ; ವಿಭೇದ: ಒಡೆಯುವಿಕೆ; ಈರೇಳು: ಹದಿನಾಲ್ಕು; ಲೋಕ: ಜಗತ್ತು; ಭಾರವತ್ವ: ಭಾರ, ಹೊರೆ;

ಪದವಿಂಗಡಣೆ:
ಅರಸ+ ಕೇಳೈ +ನಾರದಾದ್ಯರು
ಸರಸಿರುಹಸಂಭವನ +ಸಭೆಯೊಳು
ವರ+ಮಹಾಭಾರತವ +ಕೊಂಡಾಡಿದರು +ಭಕ್ತಿಯಲಿ
ವರ+ಮಹತ್ವದಿ+ ಭಾರವತ್ವದಿ
ವರ+ಮಹಾಭರತವ್+ಇದೊಂದೇ
ದುರಿತ +ದುರ್ಗ +ವಿಭೇದಕರವ್+ಈರೇಳು +ಲೋಕದಲಿ

ಅಚ್ಚರಿ:
(೧) ಮಹಾಭಾರತದ ಹಿರಿಮೆ: ವರಮಹಾಭರತವಿದೊಂದೇದುರಿತ ದುರ್ಗ ವಿಭೇದಕರವೀರೇಳು ಲೋಕದಲಿ

ಪದ್ಯ ೬೯: ಮಂದೇಹರುಗಳೆಂಬುವರು ಯಾರು?

ವರಕುಮಾರಕ ನೀನು ಕೇಳೈ
ಪಿರಿಯಲೋಕಾಲೋಕವೆಂಬಾ
ಗಿರಿಯ ಬಳಸಿದ ಕಾಳಕತ್ತಲೆಯೊಳಗೆ ಮೆರೆದಿಪ್ಪ
ಧರೆಯೊಳರುಣದ್ವೀಪವದರೊಳು
ನೆರೆದ ಮಂದೇಹರುಗಳೆಂಬ
ಚ್ಚರಿಯದಲಿ ಸರಸಿರುಹ ಸಂಭವನಿಂದ ಜನಿಸಿದರು (ಅರಣ್ಯ ಪರ್ವ, ೮ ಸಂಧಿ, ೬೯ ಪದ್ಯ)

ತಾತ್ಪರ್ಯ:
ಎಲೈ ಶ್ರೇಷ್ಠನಾದ ಅರ್ಜುನನೇ ಕೇಳು, ದೊಡ್ಡದಾದ ಲೋಕಾಲೋಕವೆಂಬ ಗಿರಿಯತ್ತಣ ಕಾಳಕತ್ತಲೆಯಲ್ಲಿ ಅರುಣ ದ್ವೀಪವಿದೆ. ಅದರಲ್ಲಿ ಬ್ರಹ್ಮನಿಂದ ಜನಿಸಿದ ಮಂದೇಹರೆಂಬ ಆಶ್ಚರ್ಯಕರರಾದ ಅಸುರರಿದ್ದಾರೆ.

ಅರ್ಥ:
ವರ: ಶ್ರೇಷ್ಠ; ಕುಮಾರ: ಮಗ; ಕೇಳು: ಆಲಿಸು; ಪಿರಿಯ: ದೊಡ್ಡ; ಲೋಕ: ಜಗತ್ತು; ಗಿರಿ: ಬೆಟ್ಟ; ಬಳಸು: ಆವರಿಸು; ಕಾಳಕತ್ತಲೆ: ಅಂಧಕಾರ; ಮೆರೆ:ಹೊಳೆ, ಪ್ರಕಾಶಿಸು; ಧರೆ: ಭೂಮಿ; ಅರುಣ: ಕೆಂಪು; ದ್ವೀಪ: ನೀರಿನಿಂದ ಆವರಿಸಿದ ಭೂಮಿ; ನೆರೆದ: ಒಟ್ಟುಗೂಡು; ಅಚ್ಚರಿ: ಆಶ್ಚರ್ಯ; ಸರಸಿರುಹ: ಕಮಲ; ಸಂಭವ: ಹುಟ್ಟು; ಜನಿಸು: ಹುಟ್ಟು; ಸರಸಿರುಹಸಂಭವ: ಬ್ರಹ್ಮ;

ಪದವಿಂಗಡಣೆ:
ವರ+ಕುಮಾರಕ +ನೀನು +ಕೇಳೈ
ಪಿರಿಯ+ಲೋಕಾಲೋಕವೆಂಬಾ
ಗಿರಿಯ +ಬಳಸಿದ+ ಕಾಳಕತ್ತಲೆಯೊಳಗೆ +ಮೆರೆದಿಪ್ಪ
ಧರೆಯೊಳ್+ಅರುಣ+ದ್ವೀಪವ್+ಅದರೊಳು
ನೆರೆದ+ ಮಂದೇಹರುಗಳೆಂಬ್
ಅಚ್ಚರಿಯದಲಿ +ಸರಸಿರುಹ ಸಂಭವನಿಂದ +ಜನಿಸಿದರು

ಅಚ್ಚರಿ:
(೧) ಅರುಣ ದ್ವೀಪ, ಲೋಕಾಲೋಕ ಗಿರಿ – ಸ್ಥಳಗಳ ವಿವರ
(೨) ಬ್ರಹ್ಮನನ್ನು ಸರಸಿರುಹಸಂಭವ ಎಂದು ಕರೆದಿರುವುದು

ಪದ್ಯ ೬೦: ಭೂಮಿಯು ಹೇಗೆ ಶೋಭಿಸುತ್ತದೆ?

ಉರಗ ನಾಳಾಂಬುಜ ಕುಸುಮವೀ
ಧರಣಿ ಕರ್ಣಿಕೆ ಮೇರುಗಿರಿ ಕೇ
ಸರ ನಗಂಗಳು ಬಳಸಿ ಕೇಸರದಂತೆ ಸೊಗಯಿಪವು
ಸರಸಿರುಹಸಂಭವನು ಮಧ್ಯದೊ
ಳಿರಲು ಭೂತಲವೈದೆ ಮೆರೆವುದು
ಸಿರಿ ಮಹಾವಿಷ್ಣುವಿನ ನಾಭೀಕಮಲದಂದದಲಿ (ಅರಣ್ಯ ಪರ್ವ, ೮ ಸಂಧಿ, ೬೦ ಪದ್ಯ)

ತಾತ್ಪರ್ಯ:
ಆದಿಶೇಷವು (ಹಾವು) ನಾಳವಾಗಿ, ಈ ಭೂಮಿಯು ಮಹಾವಿಷ್ಣುವಿನ ನಾಭೀಕಮಲದಂತಿದೆ. ಭೂಮಿಯು ಕರ್ಣಿಕೆ, ಇದನ್ನು ಸುತ್ತಿರುವ ಪರ್ವತಗಳೇ ಕುಸುರು. ಬ್ರಹ್ಮನು ಮಧ್ಯದಲ್ಲಿರಲು ಭೂಮಿಯು ವಿಷ್ಣುವಿನ ನಾಭೀಕಮಲದಂತಿದೆ.

ಅರ್ಥ:
ಉರಗ: ಹಾವು; ನಾಳ: ಟೊಳ್ಳಾದ ಕೊಳವೆ, ನಳಿಕೆ; ಅಂಬುಜ: ತಾವರೆ; ಕುಸುಮ: ಹೂವು; ಧರಣಿ: ಭೂಮಿ; ಕರ್ಣಿಕೆ: ಮಲದ ಮಧ್ಯ ಭಾಗ, ಬೀಜಕೋಶ; ಮೇರುಗಿರಿ: ಮೇರು ಪರ್ವತ; ಕೇಸರ: ಹೂವಿನಲ್ಲಿರುವ ಕುಸುರು, ಎಳೆ; ನಗ: ಬೆಟ್ಟ, ಪರ್ವತ; ಬಳಸು: ಆವರಿಸು; ಸೊಗ: ಚೆಲುವು; ಸರಸಿರುಹ: ಕಮಲ; ಸರಸಿರುಹಸಂಭವ: ಬ್ರಹ್ಮ; ಮಧ್ಯ: ನಡುವೆ; ಭೂತಲ: ಭೂಮಿ; ಐದೆ: ಸೇರು; ಮೆರೆ: ಶೋಭಿಸು; ಸಿರಿ: ಐಶ್ವರ್ಯ; ನಾಭಿ: ಹೊಕ್ಕಳು; ಕಮಲ: ತಾವರೆ;

ಪದವಿಂಗಡಣೆ:
ಉರಗ +ನಾಳ+ಅಂಬುಜ +ಕುಸುಮವ್+ಈ+
ಧರಣಿ +ಕರ್ಣಿಕೆ +ಮೇರುಗಿರಿ+ ಕೇ
ಸರ +ನಗಂಗಳು+ ಬಳಸಿ+ ಕೇಸರದಂತೆ +ಸೊಗಯಿಪವು
ಸರಸಿರುಹಸಂಭವನು+ ಮಧ್ಯದೊಳ್
ಇರಲು +ಭೂತಲವ್+ಐದೆ+ ಮೆರೆವುದು
ಸಿರಿ+ ಮಹಾವಿಷ್ಣುವಿನ+ ನಾಭೀ+ಕಮಲದಂದದಲಿ

ಅಚ್ಚರಿ:
(೧) ಅಂಬುಜ, ಕಮಲ, ಸರಸಿರುಹ – ಸಮನಾರ್ಥಕ ಪದ