ಪದ್ಯ ೬೧: ಮಾತಲಿಯು ಅರ್ಜುನನಿಗೆ ಯಾವುದರ ಬಗ್ಗೆ ತಿಳಿಸಲು ಮುಂದಾದನು?

ಧರೆಯ ವರುಷ ದ್ವೀಪ ಗಿರಿಗಳ
ಶರಧಿಗಳ ಸುರಶೈಲದಗ್ರದ
ಹರನ ಚತುರಾನನನ ಪಟ್ಟಣದಿರವ ತಿಳುಹಿದೆನು
ಸರಸಿರುಹ ಬಂಧುವಿನ ರಥವಿಹ
ಪರಿಯ ಚರಿಸುವ ಪಥವ ತಾರೆಗ
ಳಿರವ ನೀ ಕೇಳೆಂದು ಮಾತಲಿ ನುಡಿದನರ್ಜುನಗೆ (ಅರಣ್ಯ ಪರ್ವ, ೮ ಸಂಧಿ, ೬೧ ಪದ್ಯ)

ತಾತ್ಪರ್ಯ:
ಭೂಮಿಯು ದ್ವೀಪಗಳು, ವರ್ಷಗಳು, ಪರ್ವತಗಳು, ಸಮುದ್ರಗಳು ಮೇರು ಪರ್ವತದ ಮೇಲಿರುವ ಬ್ರಹ್ಮ, ಶಿವ ಇವರ ನಗರಗಳು ಇರುವುದನ್ನು ತಿಳಿಸಿದ್ದೇನೆ. ಈಗ ಸೂರ್ಯನ ರಥವಿರುವ ಪರಿ, ಅದು ಚಲಿಸುವ ದಾರಿ, ನಕ್ಷತ್ರಗಳು ಇವನ್ನು ಕುರಿತು ಹೇಳುತ್ತೇನೆ ಕೇಳು ಎಂದು ಮಾತಲಿಯು ಅರ್ಜುನನಿಗೆ ಹೇಳಿದನು.

ಅರ್ಥ:
ಧರೆ: ಭೂಮಿ; ವರುಷ: ಭೂಭಾಗ; ದ್ವೀಪ: ನೀರಿನಿಂದ ಆವರಿಸಿದ ಭೂಭಾಗ; ಗಿರಿ: ಬೆಟ್ಟ; ಶರಧಿ: ಸಮುದ್ರ; ಸುರ: ದೇವತೆ; ಸುರಶೈಲ: ದೇವಗಿರಿ; ಅಗ್ರ: ತುದಿ, ಶ್ರೇಷ್ಠ; ಹರ: ಶಿವ; ಚತುರಾನನ: ಬ್ರಹ್ಮ; ಆನನ: ಮುಖ; ಪಟ್ಟಣ: ಊರು; ತಿಳುಹು: ತಿಳಿಸು; ಸರಸಿರುಹ: ಕಮಲ; ಬಂಧು: ನೆಂಟ, ಸಂಬಂಧಿಕ; ರಥ: ತೇರು; ಪರಿ: ರೀತಿ; ಚರಿಸು: ಚಲಿಸು; ಪಥ: ಮಾರ್ಗ; ತಾರೆ: ನಕ್ಷತ್ರ; ಕೇಳು: ಆಲಿಸು; ನುಡಿ: ಮಾತಾಡು;

ಪದವಿಂಗಡಣೆ:
ಧರೆಯ+ ವರುಷ +ದ್ವೀಪ +ಗಿರಿಗಳ
ಶರಧಿಗಳ +ಸುರಶೈಲದ್+ಅಗ್ರದ
ಹರನ +ಚತುರಾನನನ +ಪಟ್ಟಣದಿರವ+ ತಿಳುಹಿದೆನು
ಸರಸಿರುಹ +ಬಂಧುವಿನ +ರಥವಿಹ
ಪರಿಯ +ಚರಿಸುವ +ಪಥವ +ತಾರೆಗಳ್
ಇರವ +ನೀ +ಕೇಳೆಂದು +ಮಾತಲಿ +ನುಡಿದನ್+ಅರ್ಜುನಗೆ

ಅಚ್ಚರಿ:
(೧) ಸೂರ್ಯನನ್ನು ಸರಸಿರುಹಬಂಧು ಎಂದು ಕರೆದಿರುವುದು
(೨) ಶೈಲ, ಗಿರಿ – ಸಮನಾರ್ಥಕ ಪದ