ಪದ್ಯ ೩: ಸೂರ್ಯೋದಯವು ಹೇಗೆ ಕಂಡಿತು?

ಸರಸಿಜದ ಪರಿಮಳಕೆ ತುಂಬಿಯ
ಬರವ ಕೊಟ್ಟನು ಚಂದ್ರಕಾಂತಕೆ
ಬೆರಗನಿತ್ತನು ಜಕ್ಕವಕ್ಕಿಯ ಸೆರೆಯ ಬಿಡಿಸಿದನು
ಕೆರಳಿ ನೈದಿಲೆ ಸಿರಿಯ ಸೂರೆಯ
ತರಿಸಿದನು ರಿಪುರಾಯರಾಜ್ಯವ
ನೊರಸಿದನು ರವಿ ಮೂಡಣಾದ್ರಿಯೊಳಿತ್ತನೋಲಗವ (ವಿರಾಟ ಪರ್ವ, ೧೧ ಸಂಧಿ, ೩ ಪದ್ಯ)

ತಾತ್ಪರ್ಯ:
ಕಮಲದ ಪರಿಮಳಕ್ಕೆ ಉಡುಗೊರೆಯಾಗಿ ದುಂಬಿಯನ್ನು ಕಳಿಸಿದನು, ಶತ್ರು ಪಕ್ಷಕ್ಕೆ ಸೇರಿದ ಚಂದ್ರಕಾಂತ ಶಿಲೆಗೆ ಆಶ್ಚರ್ಯಕರವಾದ ಪರಾಭವವನ್ನು ಕೊಟ್ಟನು, ಚಕ್ರವಾಕ ಪಕ್ಷಿಗಳ ಬಂಧನವನ್ನು ಕೊನೆಗೊಳಿಸಿದನು, ಕೋಪದಿಂದ ಶತ್ರುರಾಜನ ಗೆಳತಿಯಾದ ಕನ್ನೈದಿಲೆಯ ಹರ್ಷವನ್ನು ಸೂರೆಗೊಂಡನು, ರಾತ್ರಿಯ ರಾಜ್ಯವನ್ನು ಕೊನೆಗೊಳಿಸಿ ಪೂರ್ವಪರ್ವತದ ಶಿಖರದ ಮೇಲೆ ಕುಳಿತು ಸೂರ್ಯನು ಓಲಗವನ್ನಿತ್ತನು.

ಅರ್ಥ:
ಸರಸಿಜ: ಕಮಲ; ಪರಿಮಳ: ಸುಗಂಧ; ತುಂಬಿ: ದುಂಬಿ; ಬರವ: ಆಗಮನ; ಕೊಡು: ನೀಡು; ಚಂದ್ರಕಾಂತ: ಶಶಿಕಾಂತ ಶಿಲೆ; ಬೆರಗು: ವಿಸ್ಮಯ, ಸೋಜಿಗ; ಜಕ್ಕವಕ್ಕಿ: ಎಣೆವಕ್ಕಿ, ಚಕ್ರವಾಕ; ಸೆರೆ: ಬಂಧನ; ಬಿಡಿಸು: ಕಳಚು, ಸಡಿಲಿಸು, ನಿವಾರಿಸು; ಕೆರಳು: ಕೋಪಗೊಳ್ಳು; ಸಿರಿ: ಐಶ್ವರ್ಯ; ಸೂರೆ: ಕೊಳ್ಳೆ, ಲೂಟಿ; ತರಿಸು: ಬರೆಮಾಡು; ರಿಪು: ವೈರಿ; ರಾಯ: ರಾಜ; ಒರಸು: ನಾಶಮಾಡು; ರವಿ: ಭಾನು; ಮೂಡಣ: ಪೂರ್ವ; ಅದ್ರಿ: ಬೆಟ್ಟ; ಓಲಗ: ಸೇವೆ, ದರ್ಬಾರು;

ಪದವಿಂಗಡಣೆ:
ಸರಸಿಜದ+ ಪರಿಮಳಕೆ +ತುಂಬಿಯ
ಬರವ +ಕೊಟ್ಟನು +ಚಂದ್ರಕಾಂತಕೆ
ಬೆರಗನಿತ್ತನು+ ಜಕ್ಕವಕ್ಕಿಯ +ಸೆರೆಯ +ಬಿಡಿಸಿದನು
ಕೆರಳಿ+ ನೈದಿಲೆ+ ಸಿರಿಯ +ಸೂರೆಯ
ತರಿಸಿದನು +ರಿಪುರಾಯ+ರಾಜ್ಯವನ್
ಒರಸಿದನು +ರವಿ+ ಮೂಡಣ+ಅದ್ರಿಯೊಳ್+ ಇತ್ತನ್+ಓಲಗವ

ಅಚ್ಚರಿ:
(೧) ಸೂರ್ಯೋದಯದ ಬಹು ಸೊಗಸಾದ ವರ್ಣನೆ
(೨) ನೈದಿಲೆಯು ಮುದುಡಿತು ಎಂದು ಹೇಳಲು – ಕೆರಳಿ ನೈದಿಲೆ ಸಿರಿಯ ಸೂರೆಯ ತರಿಸಿದನು
(೩) ರಾತ್ರಿಯನ್ನು ಹೋಗಲಾಡಿಸಿದನು ಎಂದು ಹೇಳಲು – ರಿಪುರಾಯರಾಜ್ಯವನೊರಸಿದನು
(೪) ಕಮಲವನ್ನು ಅರಳಿಸಿದನು ಎಂದು ಹೇಳಲು – ಸರಸಿಜದ ಪರಿಮಳಕೆ ತುಂಬಿಯ ಬರವ ಕೊಟ್ಟನು

ಪದ್ಯ ೧೯: ಸುರವಿಮಾನದಲ್ಲಿ ಯಾರು ಬಂದರು?

ಅರಸ ಕೇಳೈ ಹಿಮದ ಹೊಯ್ಲಿನ
ಸರಸಿಜಕೆ ರವಿಯಂತೆ ಶಿಶಿರದ
ಸರಿದಲೆಯ ವನದಲಿ ವಸಂತನ ಬರವಿನಂದದಲಿ
ಸುರವಿಮಾನ ಶ್ರೇಣಿಗಳ ನವ
ಪರಿಮಳದ ಪೂರದಲಿ ಭಾರತ
ವರುಷಕಿಳಿದನು ಪಾರ್ಥ ಬಂದನು ಧರ್ಮಜನ ಹೊರೆಗೆ (ಅರಣ್ಯ ಪರ್ವ, ೧೨ ಸಂಧಿ, ೧೯ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಹಿಮವರ್ಷದಿಂದ ನಲುಗಿದ ಕಮಲಕ್ಕೆ ಸೂರ್ಯನು ಗೋಚರವಾದಮ್ತೆ, ಶಿಶಿರದ ಚಳಿಯಿಂದ ನಲುಗಿದ ವನಕ್ಕೆ ವಸಂತ ಋತುವು ಬಂದಂತೆ, ದೇವತೆಗಳ ವಿಮಾನದ ಸುಗಂಧವು ಎಲ್ಲೆಡೆ ವ್ಯಾಪಿಸುತ್ತಿರಲು, ಅರ್ಜುನನು ಭಾರತ ವರ್ಷಕ್ಕಿಳಿದು ಧರ್ಮಜನ ಬಳಿಗೆ ಬಂದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಹಿಮ: ಮಂಜಿನ ಹನಿ; ಹೊಯ್ಲು: ಹೊಡೆತ; ಸರಸಿಜ: ಕಮಲ; ರವಿ: ಭಾನು; ಶಿಶಿರ: ಹಿಮ, ಮಂಜು, ಚಳಿಗಾಲ; ಸರಿ: ಹೋಗು, ಗಮಿಸು; ವನ: ಕಾಡು; ಬರವು: ಆಗಮನ; ಸುರ: ದೇವತೆ; ವಿಮಾನ: ಆಗಸದಲ್ಲಿ ಹಾರುವ ವಾಹನ; ಶ್ರೇಣಿ: ಪಂಕ್ತಿ, ಸಾಲು; ನವ: ಹೊಸ; ಪರಿಮಳ: ಸುಗಂಧ; ಪೂರ: ಪೂರ್ಣ, ತುಂಬ; ವರುಷ: ಭೂ ಮಂಡಲದ ಒಂಭತ್ತು ವಿಭಾಗಗಳಲ್ಲಿ ಒಂದು; ಇಳಿ: ಕೆಳಕ್ಕೆ ಬಾ; ಬಂದನು: ಆಗಮಿಸು; ಹೊರೆ: ಸಮೀಪ;

ಪದವಿಂಗಡಣೆ:
ಅರಸ +ಕೇಳೈ + ಹಿಮದ +ಹೊಯ್ಲಿನ
ಸರಸಿಜಕೆ+ ರವಿಯಂತೆ +ಶಿಶಿರದ
ಸರಿದಲೆಯ +ವನದಲಿ+ ವಸಂತನ+ ಬರವಿನಂದದಲಿ
ಸುರ+ವಿಮಾನ +ಶ್ರೇಣಿಗಳ +ನವ
ಪರಿಮಳದ +ಪೂರದಲಿ +ಭಾರತ
ವರುಷಕಿಳಿದನು +ಪಾರ್ಥ +ಬಂದನು +ಧರ್ಮಜನ +ಹೊರೆಗೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಿಮದ ಹೊಯ್ಲಿನ ಸರಸಿಜಕೆ ರವಿಯಂತೆ; ಶಿಶಿರದ
ಸರಿದಲೆಯ ವನದಲಿ ವಸಂತನ ಬರವಿನಂದದಲಿ

ಪದ್ಯ ೪೩: ಭೀಮನು ಸಂತೋಷ ಪಡಲು ಕಾರಣವೇನು?

ಧರಣಿಪತಿ ಕೇಳ್ ಬಹಳ ವಿಪಿನಾಂ
ತರವನಂತವ ಕಳೆದು ಬರೆಬರೆ
ಸರಸಿಜದ ಮೋಹರದ ಮುಂದೈತಪ್ಪ ಪರಿಮಳದ
ಮೊರೆವ ತುಂಬಿಯ ಥಟ್ಟುಗಳ ತನಿ
ವರಿವ ತಂಪಿನ ತುರಗಲಿನ ತ
ತ್ಸರಸಿಯನು ದೂರದಲಿ ಕಂಡುಬ್ಬಿದನು ಕಲಿಭೀಮ (ಅರಣ್ಯ ಪರ್ವ, ೧೧ ಸಂಧಿ, ೪೩ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಭೀಮನು ಅನೇಕ ವನಗಳನ್ನು ದಾಟಿ ಮುನ್ನಡೆದು ಬರುತ್ತಿರಲು, ದೂರದಲ್ಲಿ ಕಮಲ ಪುಷ್ಪಗಳ ಸಮೂಹದ ಮೇಲೆ ಹಾದು ಬರುವ ಸುಗಂಧ, ಹೂಗಳಿಗೆ ಮುತ್ತುವ ದುಂಬಿಗಳ ದಂಡು ಮತ್ತು ತಂಪು ತುಂಬಿದ ಸೌಗಂಧಿಕ ಕುಸುಮ ಸರೋವರವನ್ನು ಕಂಡು ಸಂತೋಷದಿಂದ ಹಿಗ್ಗಿದನು.

ಅರ್ಥ:
ಧರಣಿಪತಿ: ರಾಜ; ಧರಣಿ: ಭೂಮಿ; ಪತಿ: ಒಡೆಯ; ಕೇಳ್: ಆಲಿಸು; ಬಹಳ: ತುಂಬ; ವಿಪಿನ: ಕಾಡು; ಅಂತರ: ದೂರ; ಅಂತ: ಕೊನೆ; ಕಳೆದು: ತೊರೆ, ನಿವಾರಣೆ; ಬರೆ: ಆಗಮಿಸು; ಸರಸಿಜ: ಕಮಲ ಮೋಹರ: ಗುಂಪು, ಸಮೂಹ; ತುಂಬು: ಭರ್ತಿ; ಥಟ್ಟು: ಗುಂಪು; ತನಿ: ಚೆನ್ನಾಗಿ ಬೆಳೆದುದು; ತಂಪು: ತಣಿವು, ಶೈತ್ಯ; ತುರಗ: ವೇಗವಾಗಿ ಚಲಿಸುವುದುತ; ಸರಸಿ: ಸರೋವರ; ದೂರ: ಬಹಳ ಅಂತರ; ಕಂಡು: ನೋಡಿ; ಉಬ್ಬು: ಹಿಗ್ಗು; ಕಲಿ: ಶೂರ; ಐತಪ್ಪ: ಬರುತ್ತಿರುವ;

ಪದವಿಂಗಡಣೆ:
ಧರಣಿಪತಿ +ಕೇಳ್ +ಬಹಳ+ ವಿಪಿನಾಂ
ತರವನ್+ಅಂತವ +ಕಳೆದು +ಬರೆಬರೆ
ಸರಸಿಜದ+ ಮೋಹರದ+ ಮುಂದ್+ಐತಪ್ಪ+ ಪರಿಮಳದ
ಮೊರೆವ+ ತುಂಬಿಯ +ಥಟ್ಟುಗಳ+ ತನಿ
ವರಿವ+ ತಂಪಿನ +ತುರಗಲಿನ +ತ
ತ್ಸರಸಿಯನು +ದೂರದಲಿ +ಕಂಡುಬ್ಬಿದನು+ ಕಲಿ+ಭೀಮ

ಅಚ್ಚರಿ:
(೧) ತ ಕಾರದ ಸಾಲು ಪದ – ತುಂಬಿಯ ಥಟ್ಟುಗಳ ತನಿವರಿವ ತಂಪಿನ ತುರಗಲಿನ ತತ್ಸರಸಿಯನು

ಪದ್ಯ ೬: ಭೀಮನು ದ್ರೌಪದಿಗೆ ಏನು ಹೇಳಿದನು?

ಹಿರಿದು ಸೊಗಸಾಯ್ತೆನಗಪೂರ್ವದ
ಪರಿಮಳದ ಕೇಳಿಯಲಿ ನೀನಾ
ಸರಸಿಜವ ತಂದಿತ್ತು ತನ್ನ ಮನೋಗತ ವ್ಯಥೆಯ
ಪರಿಹರಿಪುದೆನಲಬುಜವದನೆಯ
ಕುರುಳನಗುರಲಿ ತಿದ್ದಿದನು ತ
ತ್ಸರಸಿಜವ ತಹೆನೆನುತ ಕೊಂಡನು ನಿಜ ಗದಾಯುಧವ (ಅರಣ್ಯ ಪರ್ವ, ೧೧ ಸಂಧಿ, ೬ ಪದ್ಯ)

ತಾತ್ಪರ್ಯ:
ದ್ರೌಪದಿಯು ಭೀಮನ ಬಳಿ ಬಂದು, ಈ ಪುಷ್ಪದ ಅಪೂರ್ವ ಪರಿಮಳವು ನನಗೆ ಬಹಳ ಇಷ್ಟವಾಗಿದೆ. ಅದನ್ನು ತಂದು ಕೊಟ್ಟು ನನ್ನ ಮನಸ್ಸಿನ ಇಚ್ಛೆಯನ್ನು ಪೂರೈಸಲೆಂದು ಕೇಳಲು, ಭೀಮನು ಪ್ರೀತಿಯಿಂದ ತನ್ನು ಉಗುರಿನಿಂದ ಆಕೆಯ ಮುಂಗುರುಳನ್ನು ಸರಿಪಡಿಸಿ, ಆ ಪದ್ಮವನ್ನು ತರುವೆನೆಂದು ಹೇಳಿ ತನ್ನ ಗದೆಯನ್ನು ತೆಗೆದುಕೊಂಡು ಹೊರಟನು.

ಅರ್ಥ:
ಹಿರಿದು: ದೊಡ್ಡದು, ಶ್ರೇಷ್ಠ; ಸೊಗಸು: ಚೆಲುವು; ಪೂರ್ವ: ಮೂಡಣ; ಪರಿಮಳ: ಸುಗಂಧ; ಕೇಳಿ:ವಿನೋದ; ಸರಸಿಜ: ಕಮಲ; ತಂದು: ಪಡೆದು; ಮನೋಗತ: ಮನಸ್ಸಿನಲ್ಲಿರುವ, ಅಭಿಪ್ರಾಯ; ವ್ಯಥೆ: ಯಾತನೆ; ಪರಿಹರಿಸು: ನಿವಾರಿಸು; ಅಬುಜ: ಕಮಲ; ವದನ: ಮುಖ; ಕುರುಳ: ಮುಂಗುರುಳು; ಉಗುರು: ನಖ; ತಿದ್ದು: ಸರಿಪಡಿಸು; ಸರಸಿಜ: ಕಮಲ; ತಹೆ: ತರುವೆ; ಕೊಂಡು: ತೆಗೆದುಕೊ; ಗಧೆ: ಮುದ್ಗರ;

ಪದವಿಂಗಡಣೆ:
ಹಿರಿದು +ಸೊಗಸಾಯ್ತ್+ಎನಗ್+ಪೂರ್ವದ
ಪರಿಮಳದ+ ಕೇಳಿಯಲಿ +ನೀನ್ +ಆ
ಸರಸಿಜವ +ತಂದಿತ್ತು +ತನ್ನ +ಮನೋಗತ+ ವ್ಯಥೆಯ
ಪರಿಹರಿಪುದ್+ಎನಲ್+ಅಬುಜವದನೆಯ
ಕುರುಳನ್+ಉಗುರಲಿ +ತಿದ್ದಿದನು +ತತ್
ಸರಸಿಜವ +ತಹೆನೆನುತ +ಕೊಂಡನು +ನಿಜ +ಗದಾಯುಧವ

ಅಚ್ಚರಿ:
(೧) ಭೀಮನ ಪ್ರೀತಿಯನ್ನು ತೋರುವ ಪರಿ – ಅಬುಜವದನೆಯ ಕುರುಳನಗುರಲಿ ತಿದ್ದಿದನು
(೨) ಸರಸಿಜ, ಅಬುಜ – ಸಮನಾರ್ಥಕ ಪದ

ಪದ್ಯ ೪೨: ಅರ್ಜುನನ ಎಚ್ಚರಿಕೆ ಮಾತುಗಳು ಹೇಗಿದ್ದವು?

ಗರುಡಿಯಧಿಪತಿಯಾಣೆ ಕೃಷ್ಣನ
ಚರಣ ಸರಸಿಜದಾಣೆ ತ್ರಿಪುರವ
ನುರುಹಿದಭವನ ಪಾದ ಪಂಕಜದಾಣೆ ಮರೆಯೇಕೆ
ಸುರಪ ನೀನೇ ಕಳುಹದಿರ್ದೊಡೆ
ಪರಮ ಮುನಿ ದೂರ್ವಾಸ ನಿನ್ನನು
ನೆರಹಿದಂದವ ಮಾಡುವೆನು ಹರಿಕರುಣವುಂಟೆಮಗೆ (ಆದಿ ಪರ್ವ, ೨೧ ಸಂಧಿ, ೪೨ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ಬಯಕೆಯನ್ನು ಈಡೇರಿಸದಿದ್ದರೆ ಏನು ಮಾಡಬಲ್ಲೆ ಎಂಬ ಎಚ್ಚರಿಕೆಯನ್ನೂ ಇಂದ್ರನಿಗೆ ಪತ್ರದಲ್ಲಿ ಬರದಿದ್ದನು. ವಿದ್ಯೆಕಲಿಸಿದ ಗುರುಗಳಾದ ದ್ರೋಣರ ಮೇಲಾಣೆ, ಕೃಷ್ನನ ಪಾದಪದ್ಮಗಳ ಮೇಲಾಣೆ, ತ್ರಿಪುರಗಳನ್ನು ಸಂಹರಿಸಿದ ಈಶ್ವರನ ಪಾದಕಮಲಗಳ ಮೇಲಾಣೆ, ನೀನು ನಾನು ಕೇಳಿದ ವಸ್ತುಗಳನ್ನು ಕಳಿಸದಿದ್ದರೆ, ಹಿಂದೆ ದೂರ್ವಾಸರು ನಿನ್ನ ಐಶ್ವರ್ಯವನ್ನು ನೀರಿನಲ್ಲದ್ದಿದ್ದಂತೆ ಮಾಡುತ್ತೇನೆ, ಶ್ರೀಹರಿಯ ಕೃಪಾಕಟಾಕ್ಷ ನಮ್ಮಮೇಲಿದೆ, ಎಂದು ಬರೆದಿದ್ದನು.

ಅರ್ಥ:
ಗರುಡಿ: ವ್ಯಾಯಾಮ ಶಾಲೆ; ಅಧಿಪತಿ: ರಾಜ, ಮುಖ್ಯಸ್ಥ; ಗರುಡಿಯಧಿಪತಿ: ದ್ರೋಣಾಚಾರ್ಯ; ಚರಣ: ಪಾದ; ಸರಸಿಜ: ಕಮಲ; ಆಣೆ: ಪ್ರಮಾಣ; ಉರು: ಶ್ರೇಷ್ಠ; ಪಾದ: ಚರಣ; ಪಂಕಜ: ಕಮಲ; ಮರೆ: ಗುಟ್ಟು, ರಹಸ್ಯ; ಸುರಪ: ದೇವೇಂದ್ರ; ಕಳುಹು: ಕಳಿಸು; ಪರಮ: ಶ್ರೇಷ್ಠ; ಮುನಿ: ಋಷಿ; ನೆರ: ಸಹಾಯ; ಮಾಡು: ನೆರವೇರಿಸು; ಹರಿ: ವಿಷ್ಣು; ಕರುಣ: ಕೃಪೆ; ಎಮಗೆ: ನಮಗೆ;

ಪದವಿಂಗಡಣೆ:
ಗರುಡಿ+ಅಧಿಪತಿ+ಯಾಣೆ +ಕೃಷ್ಣನ
ಚರಣ +ಸರಸಿಜದಾಣೆ +ತ್ರಿಪುರವನ್
ಉರುಹಿದಭವನ +ಪಾದ +ಪಂಕಜದಾಣೆ +ಮರೆಯೇಕೆ
ಸುರಪ +ನೀನೇ +ಕಳುಹದಿರ್ದೊಡೆ
ಪರಮ +ಮುನಿ +ದೂರ್ವಾಸ +ನಿನ್ನನು
ನೆರಹಿದಂದವ +ಮಾಡುವೆನು +ಹರಿಕರುಣವುಂಟೆಮಗೆ

ಅಚ್ಚರಿ:
(೧) ಆಣೆ: ೩ ಬಾರಿ ಪ್ರಯೋಗ
(೨) ಸರಸಿಜ, ಪಂಕಜ; ಚರಣ, ಪಾದ – ಸಮನಾರ್ಥಕ ಪದ