ಪದ್ಯ ೨೯: ಭೀಮನು ಯಾವ ಉಡುಗೊರೆಯನ್ನು ಪಡೆಯಲು ಮುಂದಾದನು?

ಎಳೆಯ ಬಾಳೆಯ ಸುಳಿಗೆ ಸೀಗೆಯ
ಮೆಳೆಯೊಡನೆ ಸರಸವೆ ಕುಮಾರರ
ಬಲುಹ ನೋಡು ವಿಶೋಕ ತೊಡಗಿದರೆಮ್ಮೊಡನೆ ರಣವ
ಕಲಹದಲಿ ಮೈದೋರಿದಿವದಿರ
ತಲೆಗಳಿವು ವಾರಕದವಿವನರೆ
ಗಳಿಗೆಯಲಿ ತಾ ಕೊಂಬೆನೆಂದನು ನಗುತ ಕಲಿಭೀಮ (ದ್ರೋಣ ಪರ್ವ, ೧೨ ಸಂಧಿ, ೨೯ ಪದ್ಯ)

ತಾತ್ಪರ್ಯ:
ಭೀಮನು ವಿಶೋಕನೊಂದಿಗೆ ನುಡಿಯುತ್ತಾ, ಎಲೈ ವಿಶೋಕ, ಎಳೆಯ ಬಾಳೆಯ ಸುಳಿಯು ಸೀಗೆಯ ಮೆಳೆಯೊಡನೆ ಸರಸವಾಡಲು ಹೋದಂತೆ, ಈ ಕುಮಾರರು ನನ್ನೊಡನೆ ಯುದ್ಧಕ್ಕೆ ಬಂದರು. ಯುದ್ಧಕ್ಕೆ ಬಂದ ಇವರ ತಲೆಗಳು ನನಗೆ ಬಳುವಳಿಯಾಗಿ ಬಂದಿವೆ, ಈ ಮುಡಿಪನ್ನು ಇನ್ನು ಅರ್ಧಗಳಿಗೆಯಲ್ಲಿ ನಾನು ತೆಗೆದುಕೊಳ್ಳುತ್ತೇನೆ ಎಂದು ನಗುತ್ತಾ ಹೇಳಿದನು.

ಅರ್ಥ:
ಎಳೆ: ಚಿಕ್ಕ; ಬಾಳೆ: ಕದಳಿ; ಸುಳಿ: ಆವರಿಸು, ಮುತ್ತು; ಸೀಗೆ: ಒಂದು ಜಾತಿಯ ಮೆಳೆ ಮತ್ತು ಅದರ ಕಾಯಿ; ಮೆಳೆ: ದಟ್ಟವಾಗಿ ಬೆಳೆದ ಗಿಡಗಳ ಗುಂಪು; ಸರಸ: ಚೆಲ್ಲಾಟ, ವಿನೋದ; ಕುಮಾರ: ಪುತ್ರ; ಬಲು: ಶಕ್ತಿ; ನೋಡು: ವೀಕ್ಷಿಸು; ತೊಡಗು: ಅಡ್ಡಿ, ಅಡಚಣೆ; ರಣ: ಯುದ್ಧ; ಕಲಹ: ಯುದ್ಧ; ತೋರು: ಗೋಚರ; ಇವದಿರು: ಇಷ್ಟುಜನ; ತಲೆ: ಶಿರ; ವಾರುಕ: ಉಡುಗೊರೆ, ಪಾರಿತೋಷಕ; ಗಳಿಗೆ: ಸಮಯ; ಕೊಂಬೆ: ಕೊಲು; ನಗು: ಹರ್ಷ; ಕಲಿ: ಶೂರ;

ಪದವಿಂಗಡಣೆ:
ಎಳೆಯ +ಬಾಳೆಯ +ಸುಳಿಗೆ +ಸೀಗೆಯ
ಮೆಳೆಯೊಡನೆ +ಸರಸವೆ +ಕುಮಾರರ
ಬಲುಹ +ನೋಡು +ವಿಶೋಕ +ತೊಡಗಿದರ್+ಎಮ್ಮೊಡನೆ +ರಣವ
ಕಲಹದಲಿ +ಮೈದೋರಿದ್+ಇವದಿರ
ತಲೆಗಳಿವು +ವಾರಕದವ್+ಇವನ್+ಅರೆ
ಗಳಿಗೆಯಲಿ +ತಾ +ಕೊಂಬೆನ್+ಎಂದನು +ನಗುತ +ಕಲಿಭೀಮ

ಅಚ್ಚರಿ:
(೧) ಉಪಮಾನದ ಪ್ರಯೋಗ – ಎಳೆಯ ಬಾಳೆಯ ಸುಳಿಗೆ ಸೀಗೆಯ ಮೆಳೆಯೊಡನೆ ಸರಸವೆ

ಪದ್ಯ ೧೨: ಸೂರ್ಯೋದಯವನ್ನು ಹೇಗೆ ವರ್ಣಿಸಬಹುದು?

ಹರೆದುದೋಲಗವಿತ್ತ ಭುವನದೊ
ಳಿರುಳಡವಿಗಡಿತಕ್ಕೆ ಹರಿದವು
ಕಿರಣ ತೆತ್ತಿದವಭ್ರದಲಿ ತಾರಕೆಯ ತೇರುಗಳು
ಹರಿವ ಮಂಜಿನ ನದಿಯ ಹೂಳ್ದವು
ಸರಸವಾಯಿತು ಗಗನತಳ ತಾ
ವರೆಯ ಸಖ ನಿಜರಥವ ನೂಕಿದನುದಯಪರ್ವತಕೆ (ದ್ರೋಣ ಪರ್ವ, ೪ ಸಂಧಿ, ೧೨ ಪದ್ಯ)

ತಾತ್ಪರ್ಯ:
ರಾತ್ರಿಯ ಓಲಗ ಸಮಾಪ್ತವಾಯಿತು. ರಾತ್ರಿಯೆಂಬ ಅರಣ್ಯವನ್ನು ಕಡಿಯಲು ಕಿರಣಗಳು ಬಂದವು. ಆಕಾಶದಲ್ಲಿ ನಕ್ಷತ್ರದ ತೇರುಗಳು ಓಡಿಹೋದವು. ಮಬ್ಬಿನ ನದಿಯನ್ನು ಬೆಳಕಿನ ಕಿರಣಗಳು ಹೂಳಿಹಾಕಿದವು. ಸೂರ್ಯನ ತೇರು ಉದಯಪರ್ವತಕ್ಕೆ ಬಂದಿತು.

ಅರ್ಥ:
ಹರೆದು: ಹೊರಟುಹೋಗು, ವ್ಯಾಪಿಸು; ಓಲಗ: ದರ್ಬಾರು; ಭುವನ: ಭೂಮಿ; ಇರುಳು: ರಾತ್ರಿ; ಅಡವಿ: ಕಾಡು, ಅರಣ್ಯ; ಕಡಿತ: ಕತ್ತರಿಸುವಿಕೆ; ಹರಿ: ಹರಡು, ಕಡಿ, ಕತ್ತರಿಸು; ಕಿರಣ: ರಶ್ಮಿ; ತೆತ್ತು: ಕೂಡಿಸು ; ಅಭ್ರ: ಆಗಸ; ತಾರಕೆ: ನಕ್ಷತ್ರ; ತೇರು: ರಥ, ಬಂಡಿ; ಮಂಜು: ಹಿಮ; ನದಿ: ಸರೋವರ; ಹೂಳು: ಹೂತು ಹಾಕು, ಮುಳುಗುವಂತೆ ಮಾಡು; ಸರಸ: ಚೆಲ್ಲಾಟ, ವಿನೋದ; ಗಗನತಳ: ಆಗಸ, ಬಾನು; ತಾವರೆ: ಕಮಲ; ಸಖ: ಮಿತ್ರ; ನಿಜ: ತನ್ನ; ರಥ: ಬಂಡಿ; ನೂಕು: ತಳ್ಳು; ಉದಯ: ಹುಟ್ಟು; ಪರ್ವತ: ಬೆಟ್ಟ;

ಪದವಿಂಗಡಣೆ:
ಹರೆದುದ್+ಓಲಗವಿತ್ತ +ಭುವನದೊಳ್
ಇರುಳ್+ಅಡವಿ+ಕಡಿತಕ್ಕೆ+ ಹರಿದವು
ಕಿರಣ+ ತೆತ್ತಿದವ್+ಅಭ್ರದಲಿ +ತಾರಕೆಯ +ತೇರುಗಳು
ಹರಿವ +ಮಂಜಿನ +ನದಿಯ +ಹೂಳ್ದವು
ಸರಸವಾಯಿತು +ಗಗನತಳ +ತಾ
ವರೆಯ +ಸಖ +ನಿಜರಥವ +ನೂಕಿದನ್+ಉದಯ+ಪರ್ವತಕೆ

ಅಚ್ಚರಿ:
(೧) ಸೂರ್ಯನನ್ನು ತಾವರೆಯಸಖ ಎಂದು ಕರೆದಿರುವುದು
(೨) ಸೂರ್ಯೋದಯವನ್ನು ಬಹು ಸೊಗಸಾಗಿ ವರ್ಣಿಸಿರುವ ಪದ್ಯ

ಪದ್ಯ ೫೫: ದ್ರೋಣರು ದ್ರುಪದನಿಗೆ ಹೇಗೆ ಉತ್ತರಿಸಿದರು?

ಗಿರಿಯ ಮಕ್ಕಳು ನೆರೆದು ವಜ್ರವ
ಸರಸವಾಡುವ ಕಾಲವಾಯಿತೆ
ಹರಹರತಿ ವಿಸ್ಮಯವೆನುತ ಹೊಗರೇರಿ ಖತಿ ಮಸಗಿ
ತಿರುವ ಕಾರಿಸಿದನು ಕಠೋರದ
ಮೊರಹುಗಳ ಬಾಯ್ಧಾರೆಗಳ ಕಿಡಿ
ಹೊರಳಿಗಳ ಹೊರರಂಬು ಹೊಕ್ಕವು ಪಾಂಡು ಸೈನ್ಯದಲಿ (ದ್ರೋಣ ಪರ್ವ, ೨ ಸಂಧಿ, ೫೫ ಪದ್ಯ)

ತಾತ್ಪರ್ಯ:
ಪರ್ವತಗಳ ಮಕ್ಕಳು (ಚಿಕ್ಕ ಬೆಟ್ಟ, ಗುಡ್ಡ ಮುಂತಾದವು) ಗುಂಪುಗೂಡಿ ವಜ್ರಾಯುಧದೊಡನೆ ಸರಸವಾಡುವ ಕಾಲ ಬಂದಿತೇ ಶಿವ ಶಿವಾ ಎಂತಹ ಆಶ್ಚರ್ಯ ಎಂದುಕೊಂಡು ದ್ರೋಣನು ಕೋಪದಿಂದ ತಿರುವಿನಲ್ಲಿ ಹೂಡಿ ಬಾಣಗಳನ್ನು ಕಾರಿಸಿದನು. ಕಠೋರವಾದ ಸದ್ದುಮಾಡುತ್ತಾ ಬಾಯಲ್ಲಿ ಕಿಡಿಗಳ ಧಾರೆಗಳು ಸೂಸುತ್ತಿರಲು ಹೊಳೆಯುವ ಬಾಣಗಳು ಪಾಂಡವ ಸೈನ್ಯವನ್ನು ಮುತ್ತಿದವು.

ಅರ್ಥ:
ಗಿರಿ: ಬೆಟ್ಟ; ಮಕ್ಕಳು: ಸುತರು; ನೆರೆ: ಗುಂಪು; ವಜ್ರ: ಗಟ್ಟಿಯಾದ; ಸರಸ: ಚೆಲ್ಲಾಟ; ಕಾಲ: ಸಮಯ; ಹರಹರ: ಶಿವಶಿವಾ; ವಿಸ್ಮಯ: ಆಶ್ಚರ್ಯ; ಅತಿ: ಬಹಳ; ಹೊಗರು: ಕಾಂತಿ, ಪ್ರಕಾಶ; ಏರು: ಮೇಲೆ ಬಾ; ಖತಿ: ಕೋಪ; ಮಸಗು: ಹರಡು; ಕೆರಳು; ತಿರುವು: ಬಿಲ್ಲಿನ ಹಗ್ಗ, ಹೆದೆ, ಮೌರ್ವಿ; ಕಠೋರ: ಬಿರುಸಾದ; ಮೊರಹು: ಸದ್ದು; ಧಾರೆ: ವರ್ಷ; ಕಿಡಿ: ಬೆಂಕಿ; ಹೊರಳು: ಉರುಳು, ಜಾರು; ಹೊಗರು: ಕಾಂತಿ, ಪ್ರಕಾಶ; ಅಂಬು: ಬಾಣ; ಹೊಕ್ಕು: ಸೇರು; ಸೈನ್ಯ: ಸೇನೆ;

ಪದವಿಂಗಡಣೆ:
ಗಿರಿಯ +ಮಕ್ಕಳು +ನೆರೆದು +ವಜ್ರವ
ಸರಸವಾಡುವ +ಕಾಲವಾಯಿತೆ
ಹರಹರ್+ಅತಿ +ವಿಸ್ಮಯವೆನುತ +ಹೊಗರೇರಿ +ಖತಿ +ಮಸಗಿ
ತಿರುವ +ಕಾರಿಸಿದನು +ಕಠೋರದ
ಮೊರಹುಗಳ +ಬಾಯ್ಧಾರೆಗಳ+ ಕಿಡಿ
ಹೊರಳಿಗಳ +ಹೊರರ್+ಅಂಬು +ಹೊಕ್ಕವು +ಪಾಂಡು +ಸೈನ್ಯದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗಿರಿಯ ಮಕ್ಕಳು ನೆರೆದು ವಜ್ರವಸರಸವಾಡುವ ಕಾಲವಾಯಿತೆ ಹರಹರ
(೨) ಹ ಕಾರದ ತ್ರಿವಳಿ ಪದ – ಹೊರಳಿಗಳ ಹೊರರಂಬು ಹೊಕ್ಕವು

ಪದ್ಯ ೬೧: ಯುಧಿಷ್ಠಿರನು ದ್ರೋಣನ ರಥವನ್ನು ಹೇಗೆ ಮುಸುಕಿದನು?

ಅರಸ ಫಡ ಹೋಗದಿರು ಸಾಮದ
ಸರಸ ಕೊಳ್ಳದು ಬಿಲ್ಲ ಹಿಡಿ ಹಿಡಿ
ಹರನ ಮರೆವೊಗು ನಿನ್ನ ಹಿಡಿವೆನು ಹೋಗು ಹೋಗೆನುತ
ಸರಳ ಮುಷ್ಟಿಯ ಕೆನ್ನೆಯೋರೆಯ
ಗುರು ಛಡಾಳಿಸೆ ಧನುವನೊದರಿಸೆ
ಧರಣಿಪತಿ ಹಳಚಿದನು ಹೂಳಿದನಂಬಿನಲಿ ರಥವ (ದ್ರೋಣ ಪರ್ವ, ೧ ಸಂಧಿ, ೬೧ ಪದ್ಯ)

ತಾತ್ಪರ್ಯ:
ಎಲೈ ರಾಜನೇ, ಓಡಿ ಹೋಗಬೇಡ, ಇಲ್ಲಿ ಸಂಧಿಯ ಸರಸ ನಡೆಯುವುದಿಲ್ಲ, ಬಿಲ್ಲನ್ನು ಹಿಡಿ, ನೀನು ಶಿವನನ್ನು ಮೊರೆಹೊಕ್ಕರೂ ನಿನ್ನನ್ನು ಸೆರೆಹಿಡಿಯುತ್ತೇನೆ ಎನ್ನುತ್ತಾ ಬಾಣವನ್ನು ಕೆನ್ನೆಗೆಳೆದು ದ್ರೋಣನು ಆರ್ಭಟಿಸಲು, ಯುಧಿಷ್ಠಿರನು ಬಿಲ್ಲನ್ನೊದರಿಸಿ ದ್ರೋಣನ ರಥವನ್ನು ಬಾಣಗಳಿಂದ ಮುಚ್ಚಿದನು.

ಅರ್ಥ:
ಅರಸ: ರಾಜ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಹೋಗು: ತೆರಳು; ಸಾಮ: ಶಾಂತಗೊಳಿಸುವಿಕೆ; ಸರಸ: ಚೆಲ್ಲಾಟ; ಕೊಳ್ಳು: ಪಡೆ; ಬಿಲ್ಲು: ಚಾಪ; ಹಿಡಿ: ಗ್ರಹಿಸು; ಹರ: ಶಿವ; ಮರೆ:ಆಶ್ರಯ; ಸರಳ: ಬಾಣ; ಮುಷ್ಟಿ: ಅಂಗೈ; ಕದಪು; ಓರೆ: ವಕ್ರ; ಕೆನ್ನೆಯೋರೆ: ಓರೆಯಾಗಿಟ್ಟುಕೊಂಡ ಕೆನ್ನೆ; ಗುರು: ಆಚಾರ್ಯ; ಛಡಾಳಿಸು: ಹೆಚ್ಚಾಗು, ಅಧಿಕವಾಗು; ಧನು: ಚಾಪ; ಒದರು: ಜಾಡಿಸು, ಗರ್ಜಿಸು; ಧರಣಿಪತಿ: ರಾಜ; ಹಳಚು: ತಾಗು, ಬಡಿ; ಹೂಳು: ಹೂತು ಹಾಕು, ಮುಳುಗುವಂತೆ ಮಾಡು; ಅಂಬು: ಬಾಣ; ರಥ: ಬಂಡಿ;

ಪದವಿಂಗಡಣೆ:
ಅರಸ +ಫಡ +ಹೋಗದಿರು +ಸಾಮದ
ಸರಸ +ಕೊಳ್ಳದು +ಬಿಲ್ಲ +ಹಿಡಿ +ಹಿಡಿ
ಹರನ +ಮರೆವೊಗು +ನಿನ್ನ +ಹಿಡಿವೆನು +ಹೋಗು +ಹೋಗೆನುತ
ಸರಳ +ಮುಷ್ಟಿಯ +ಕೆನ್ನೆ+ಓರೆಯ
ಗುರು +ಛಡಾಳಿಸೆ +ಧನುವನ್+ಒದರಿಸೆ
ಧರಣಿಪತಿ+ ಹಳಚಿದನು +ಹೂಳಿದನ್+ಅಂಬಿನಲಿ +ರಥವ

ಅಚ್ಚರಿ:
(೧) ಧರಣಿಪತಿ, ಅರಸ; ಬಿಲ್ಲ, ಧನು – ಸಮಾನಾರ್ಥಕ ಪದ
(೨) ಅರಸ, ಸರಸ – ಪ್ರಾಸ ಪದಗಳು

ಪದ್ಯ ೩೭: ಕೀಚಕನು ದ್ರೌಪದಿಯನ್ನು ಏನೆಂದು ಬೇಡಿದನು?

ತೋಳ ತೆಕ್ಕೆಯ ತೊಡಿಸಿ ಕಾಮನ
ಕೋಲ ತಪ್ಪಿಸು ಖಳನ ಕಗ್ಗೊಲೆ
ಯೂಳಿಗವ ಕೇಳ್ದುಸುರದಿಹರೆ ಸಮರ್ಥರಾದವರು
ಸೋಲಿಸಿದ ಗೆಲುವಿಂದ ಬಲುಮಾ
ತಾಳಿಯಿವನೆನ್ನದಿರು ಹರಣದ
ಮೇಲೆ ಸರಸವೆ ಕಾಯಬೇಹುದು ಕಾಂತೆ ಕೇಳೆಂದ (ವಿರಾಟ ಪರ್ವ, ೨ ಸಂಧಿ, ೩೭ ಪದ್ಯ)

ತಾತ್ಪರ್ಯ:
ಸೈರಂಧ್ರಿ, ನಿನ್ನ ತೋಳಿನ ತೆಕ್ಕೆಯಲ್ಲಿ ನನ್ನನ್ನು ಮುಚ್ಚಿ ಕಾಮಬಾಣಗಳು ತಾಗುವುದನ್ನು ತಪ್ಪಿಸು, ಆ ನೀಚನು ನನ್ನನ್ನು ಕೊಲ್ಲಲು ಬಂದಿರುವುದನ್ನು ಕೇಳಿಯೂ, ಕೊಲೆಯನ್ನು ತಪ್ಪಿಸಲು ಸಮರ್ಥಳಾದ ನೀನು ಸುಮ್ಮನಿರುವುದೇ? ನನ್ನನ್ನು ಸೋಲಿಸಿದೆನೆಂಬ ಬಿಂಕದಿಂದ ಇವನ ಮಾತು ಬಹಳವಾಯಿತೆನ್ನಬೇಡ, ನನ್ನ ಪ್ರಾಣದ ಪ್ರಶ್ನೆಯಿದು, ತರುಣಿ, ನನ್ನನ್ನು ಕಾಪಾಡು ಎಂದು ಕೀಚಕನು ಬೇಡಿದನು.

ಅರ್ಥ:
ತೋಳು: ಬಾಹು; ತೆಕ್ಕೆ: ಅಪ್ಪುಗೆ, ಆಲಿಂಗನ; ತೊಡಿಸು: ಧರಿಸು; ಕಾಮ: ಮನ್ಮಥ; ಕೋಲ: ಬಾಣ; ತಪ್ಪಿಸು: ದೂರಮಾಡು; ಖಳ: ದುಷ್ಟ; ಕಗ್ಗೊಲೆ: ಸಾವು; ಊಳಿಗ: ಕೆಲಸ, ಕಾರ್ಯ; ಕೇಳು: ಆಲಿಸು; ಉಸುರು: ಹೇಳು, ಪ್ರಾಣ; ಸಮರ್ಥ: ಬಲಶಾಲಿ, ಗಟ್ಟಿಗ; ಸೋಲಿಸು: ಪರಾಭವಗೊಳಿಸು; ಗೆಲುವು: ಜಯ; ಬಲು: ಹೆಚ್ಚು; ಮಾತಾಳಿ: ಬಾಯಿಬಡುಕ; ಹರಣ: ಜೀವ, ಪ್ರಾಣ; ಸರಸ: ಚೆಲ್ಲಾಟ; ಕಾಯು: ರಕ್ಷಿಸು; ಕಾಂತೆ: ಚೆಲುವೆ; ಕೇಳು: ಆಲಿಸು;

ಪದವಿಂಗಡಣೆ:
ತೋಳ +ತೆಕ್ಕೆಯ +ತೊಡಿಸಿ+ ಕಾಮನ
ಕೋಲ +ತಪ್ಪಿಸು +ಖಳನ+ ಕಗ್ಗೊಲೆ
ಯೂಳಿಗವ+ ಕೇಳ್ದ್+ಉಸುರದಿಹರೆ+ ಸಮರ್ಥರಾದವರು
ಸೋಲಿಸಿದ+ ಗೆಲುವಿಂದ +ಬಲು+ಮಾ
ತಾಳಿ+ಇವನೆನ್ನದಿರು +ಹರಣದ
ಮೇಲೆ +ಸರಸವೆ+ ಕಾಯಬೇಹುದು+ ಕಾಂತೆ +ಕೇಳೆಂದ

ಅಚ್ಚರಿ:
(೧) ತ ಕಾರದ ಪದಗಳು – ತೋಳ ತೆಕ್ಕೆಯ ತೊಡಿಸಿ ಕಾಮನ ಕೋಲ ತಪ್ಪಿಸು

ಪದ್ಯ ೪೭: ಭೀಷ್ಮಾದಿಗಳಿಗೆ ಕೃಷ್ಣನು ಯಾವ ಸಲಹೆ ನೀಡಿದನು?

ನಯದೊಳೇಕಾಂತದೊಳು ಸಲೆ ಕಾ
ರಿಯವ ನುಡಿದವನಾಶೆ ವಾಸಿಯ
ಬಯಸಲಾಗದು ಹಿತವನೇ ಬಯಸುವುದು ಕುರುಕುಲಕೆ
ನಿಯತವಿದು ಪಾಂಡವರೊಡನೆ ಸಂ
ಧಿಯೆ ಸರಸ ಸಮರಾಂಗವೀಯ
ನ್ವಯಕೆ ನಿರ್ಣಯವೆಂದು ನೀವಾತಂಗೆ ಸಾರುವುದು (ಉದ್ಯೋಗ ಪರ್ವ, ೧೦ ಸಂಧಿ, ೪೭ ಪದ್ಯ)

ತಾತ್ಪರ್ಯ:
ಎಲ್ಲರನ್ನು ಬೀಳ್ಕೊಡುತ್ತಾ ಕೃಷ್ನನು ಭೀಷ್ಮಾದಿಗಳನ್ನುದ್ದೇಶಿಸಿ, ನೀವು ಕೌರವನ ಆಶೆ ಛಲಗಳೆ ನಡೆಯುವುದನ್ನು ಒಪ್ಪಬಾರದು. ಅವನೊಡನೆ ಏಕಾಂತದಲ್ಲಿ ಮಾತಾಡಿ ಅವನು ಮಾಡಬೇಕಾದ ಕಾರ್ಯವನ್ನು ಒಪ್ಪಿಸಿರಿ. ನೀವೆಲ್ಲರು ಕುರುಕುಲಕ್ಕೆ ಹಿತವನ್ನು ಬಯಸಬೇಕು, ಅದಕ್ಕಿರುವುದು ಪಾಂಡವರೊಡನೆ ಸಂಧಿ ಮಾಡಿಕೊಳ್ಳುವುದು ಇದು ಒಳಿತು, ಯುದ್ಧದಿಂದ ಕೌರವ ಕುಲಕ್ಕೆ ನಾಶವೆ ಕಟ್ಟಿಟ್ಟ ಬುತ್ತಿ ಎಂದು ಕೃಷ್ಣನು ಹಿರಿಯರಿಗೆ ಸಲಹೆ ನೀಡಿದನು.

ಅರ್ಥ:
ನಯ: ನುಣುಪು, ಮೃದುತ್ವ; ಏಕಾಂತ: ಒಬ್ಬರೆ ಇರುವ ಸ್ಥಿತಿ; ಸಲೆ: ವಿಸ್ತೀರ್ಣ; ಕಾರಿಯ: ಕಾರ್ಯ; ನುಡಿ: ಮಾತು; ಆಶೆ: ಆಸೆ, ಇಚ್ಛೆ; ವಾಸಿ: ಶಪಥ, ಕ್ಷೇಮ, ಒಳಿತು; ಬಯಸು: ಇಷ್ಟಪಡು; ಹಿತ: ಒಳಿತು; ಕುಲ: ವಂಶ; ನಿಯತ: ನಿಶ್ಚಿತವಾದ; ಸಂಧಿ: ಸಂಯೋಗ, ಸಂಧಾನ; ಸರಸ: ಚೆಲ್ಲಾಟ, ವಿನೋದ; ಸಮರಾಂಗ: ಯುದ್ಧ; ಅನ್ವಯ:ಸಂಬಂಧ; ನಿರ್ಣಯ: ನಿರ್ಧಾರ; ಸಾರು: ಹೇಳು;

ಪದವಿಂಗಡಣೆ:
ನಯದೊಳ್+ಏಕಾಂತದೊಳು+ ಸಲೆ +ಕಾ
ರಿಯವ +ನುಡಿದ್+ಅವನಾಶೆ +ವಾಸಿಯ
ಬಯಸಲಾಗದು+ ಹಿತವನೇ +ಬಯಸುವುದು +ಕುರುಕುಲಕೆ
ನಿಯತವಿದು +ಪಾಂಡವರೊಡನೆ +ಸಂ
ಧಿಯೆ +ಸರಸ+ ಸಮರಾಂಗವ್+ಈ
ಅನ್ವಯಕೆ +ನಿರ್ಣಯವೆಂದು +ನೀವಾತಂಗೆ+ ಸಾರುವುದು

ಅಚ್ಚರಿ:
(೧) ಸಂಧಿಯೆ ಸರಸ ಸಮರಾಂಗನೆ – ಸ ಕಾರದ ತ್ರಿವಳಿ ಪದ
(೨) ನಿರ್ಣಯವೆಂದು ನೀವಾತಂಗೆ – ನ ಕಾರದ ಜೋಡಿ ಪದ
(೩) ಮೊಂಡರನ್ನು ದಾರಿಗೆ ತರುವ ಮಾರ್ಗ – ನಯದೊಳು, ಏಕಾಂತದೊಳು

ಪದ್ಯ ೧೬: ದುರ್ಯೋಧನನ ಕಟುವಾದ ಮಾತಾವುದು?

ಅವರು ನಮ್ಮೊಳು ಸರಸವಾಡುವ
ಹವಣಿದಲ್ಲದೆ ರಾಜಕಾರ್ಯವ
ನೆವಗೆ ಯೋಚಿಸಿ ಕಳುಹಿದಂದವೆ ಮೆಚ್ಚೆ ನಾನಿದನು
ಬವರ ಬೇಕೇ ಬೇಡಿಕೊಳ್ವುದು
ಅವನಿಗಿವನಿಯ ಮಾತ ನೀವಾ
ಡುವರೆ ಪಾಂಡವರೇಕೆ ನಾವೇಕೆಂದು ಖಳ ನುಡಿದ (ಉದ್ಯೋಗ ಪರ್ವ, ೯ ಸಂಧಿ, ೧೬ ಪದ್ಯ)

ತಾತ್ಪರ್ಯ:
ಪಾಂಡವರು ನಮ್ಮೊಳು ಸರಸ, ಚೆಲ್ಲಾಟವಾಡಲೆಂದೇ ನಿನ್ನನ್ನು ಸಂಧಿಯ ಸೋಗಿನಡಿ ಕಳುಹಿಸಿದ್ದಾರೆ. ರಾಜಕಾರ್ಯವನ್ನು ಸರಿಯಾಗಿ ಯೋಚಿಸಿ ನಿನ್ನನ್ನು ಕಳಿಸಿಲ್ಲ. ಇದನ್ನು ನಾನು ಮೆಚ್ಚುವುದಿಲ್ಲ. ಯುದ್ಧ ಬೇಕ್ಕಿದ್ದರೆ ಬೇಡಲಿ, ಭೂಮಿ ಗೀಮಿ ಕೊಡು ಎಂಬ ಮಾತನ್ನು ಆಡುವುದಾದರೆ ನಾವೇಕೆ ಪಾಂಡವರೇಕೆ ಎಂದು ದುರ್ಯೋಧನನು ನುಡಿದನು.

ಅರ್ಥ:
ಸರಸ:ಚೆಲ್ಲಾಟ, ವಿನೋದ; ಹವಣಿಸು: ಸಿದ್ಧಮಾಡು, ಪ್ರಯತ್ನಿಸು; ರಾಜಕಾರ್ಯ: ರಾಜಕಾರಣ; ಯೋಚಿಸು: ಚಿಂತಿಸು; ಕಳುಹು: ಹೋಗು; ಮೆಚ್ಚು: ಪ್ರಶಂಶಿಸು; ಬವರ: ಕಾಳಗ, ಯುದ್ಧ; ಬೇಡು: ಯಾಚಿಸು; ಅವನಿಯ: ಭೂಮಿಯ; ಮಾತು: ನುಡಿ; ಆಡು: ಮಾತಾಡು; ಖಳ: ದುಷ್ಟ; ನುಡಿ: ಮಾತು;

ಪದವಿಂಗಡಣೆ:
ಅವರು+ ನಮ್ಮೊಳು +ಸರಸವಾಡುವ
ಹವಣಿದಲ್ಲದೆ +ರಾಜಕಾರ್ಯವ
ನೆವಗೆ+ ಯೋಚಿಸಿ +ಕಳುಹಿದ್+ಅಂದವೆ +ಮೆಚ್ಚೆ +ನಾನಿದನು
ಬವರ +ಬೇಕೇ +ಬೇಡಿಕೊಳ್ವುದು
ಅವನಿ+ಗಿವನಿಯ +ಮಾತ +ನೀವಾ
ಡುವರೆ+ ಪಾಂಡವರೇಕೆ+ ನಾವೇಕೆಂದು +ಖಳ +ನುಡಿದ

ಅಚ್ಚರಿ:
(೧) ಅವನಿ ಗಿವನಿ – ಆಡು ಮಾತಿನ ಪ್ರಯೋಗ
(೨) ‘ಬ’ಕಾರದ ತ್ರಿವಳಿ ಪದಗಳ ಗುಂಪು – ಬವರ ಬೇಕೇ ಬೇಡಿಕೊಳ್ವುದು