ಪದ್ಯ ೬೩: ಯಾವ ರೂಪವನ್ನು ನೋಡಲು ಅರ್ಜುನನು ಇಚ್ಛಿಸಿದನು?

ಈ ದಿವಿಜರೀ ಚಂದ್ರ ಸೂರಿಯ
ರೀ ದಿಶಾವಳಿಯೀ ಗಗನವೀ
ಮೇದಿನೀತಳವೀ ಸಮೀರಣನೀ ಜಲಾನಲರು
ಈ ದನುಜರೀ ಮನುಜರೀ ನೀ
ನಾದಿಯಾಗಿಹ ಹರಹು ನಿನ್ನ ವಿ
ನೋದ ರೂಪಿನ ನಿರುಗೆಯನು ನೀ ತೋರಬೇಕೆಂದ (ಭೀಷ್ಮ ಪರ್ವ, ೩ ಸಂಧಿ, ೬೩ ಪದ್ಯ)

ತಾತ್ಪರ್ಯ:
ದೇವತೆಗಳು, ಚಂದ್ರ, ಸೂರ್ಯರು, ದಿಕ್ಕುಗಳು, ಆಕಾಶ, ಭೂಮಿ, ವಾಯು, ಅಗ್ನಿ, ಜಲ, ಮನುಷ್ಯರು, ದಾನವರು, ಇವರೆಲ್ಲರಿಗೂ ಮೊದಲಿಗನಾಗಿರುವ ನಿನ್ನ ಲೀಲಾ ವಿನೋದವಾಗಿರುವ ಹರಹಿನ ಇರುವಿಕೆಯನ್ನು ತೋರಿಸು.

ಅರ್ಥ:
ದಿವಿಜ: ದೇವತೆ; ಚಂದ್ರ: ಶಶಿ; ಸೂರಿಯ: ರವಿ; ದಿಶಾವಳಿ: ದಿಕ್ಕುಗಳು; ಗಗನ: ಆಗಸ; ಮೇದಿನಿ: ಭೂಮಿ; ಸಮೀರ: ವಾಯು; ಜಲ: ನೀರು; ಅನಲ: ಅಗ್ನಿ; ದನುಜ: ರಾಕ್ಷಸ; ಮನುಜ: ಮನುಷ್ಯ; ಆದಿ: ಮೊದಲಾದ; ಹರಹು: ವಿಸ್ತಾರ; ವಿನೋದ: ವಿಹಾರ, ಹಿಗ್ಗು; ರೂಪ: ಆಕಾರ; ತೋರು: ಗೋಚರಿಸು; ನಿರುಗೆ: ಕೋರಿಕೆ;

ಪದವಿಂಗಡಣೆ:
ಈ +ದಿವಿಜರ್+ಈ+ ಚಂದ್ರ +ಸೂರಿಯರ್
ಈ+ ದಿಶಾವಳಿ+ಈ+ಗಗನವ್+ಈ
ಮೇದಿನೀತಳವ್+ಈ+ ಸಮೀರಣನ್+ಈ+ ಜಲ+ಅನಲರು
ಈ +ದನುಜರ್+ಈ+ ಮನುಜರೀ+ ನೀನ್
ಆದಿಯಾಗಿಹ+ ಹರಹು+ ನಿನ್ನ+ ವಿ
ನೋದ +ರೂಪಿನ+ ನಿರುಗೆಯನು +ನೀ +ತೋರಬೇಕೆಂದ

ಅಚ್ಚರಿ:
(೧) ಯಾವ ರೂಪವನ್ನು ನೋಡಲಿಚ್ಛಿಸಿದನು – ನೀನಾದಿಯಾಗಿಹ ಹರಹು ನಿನ್ನ ವಿ
ನೋದ ರೂಪಿನ ನಿರುಗೆಯನು ನೀ ತೋರಬೇಕೆಂದ

ಪದ್ಯ ೨೩: ಯಾವುದರಲ್ಲಿ ಎಲ್ಲವೂ ಮುಳುಗಿತ್ತು?

ಈ ನೆಲನನೀ ಚಂದ್ರ ಸೂರ್ಯ ಕೃ
ಶಾನು ತೇಜವನೀ ಸಮೀರಣ
ನೀನಭವ ನಾ ಕಾಣೆನೊಂದೇ ಸಲಿಲ ಸೃಷ್ಟಿಯಲಿ
ಏನು ಹೇಳುವೆನೆನ್ನ ಚಿತ್ತ
ಗ್ಲಾನಿಯನು ಬಲುತೆರೆಯ ಹೊಯ್ಲಿನೊ
ಳಾನು ಮುಳುಗುತ್ತೇಳುತಿರ್ದೆನು ಭೂಪ ಕೇಳೆಂದ (ಅರಣ್ಯ ಪರ್ವ, ೧೫ ಸಂಧಿ, ೨೩ ಪದ್ಯ)

ತಾತ್ಪರ್ಯ:
ಯುಧಿಷ್ಥಿರ ಕೇಳು, ಈ ಭೂಮಿ, ಸೂರ್ಯ, ಚಂದ್ರ, ಅಗ್ನಿ, ವಾಯು, ಆಕಾಶಗಳೊಂದೂ ಆ ನೀರಿನ ದೆಸೆಯಿಂದ ಕಾಣಲಿಲ್ಲ. ನನ್ನ ಚಿತ್ತದ ಚಿಂತೆಯನ್ನು ಏನೆಂದು ಹೇಳಲಿ, ಆ ನೀರಿನಲ್ಲಿ ಮುಳುಗುತ್ತಾ ಏಳುತ್ತಾ ನಾನು ಸಂಕಟ ಪದುತ್ತಿದ್ದೆನು ಹಲುಬುತ್ತಿದ್ದೆನು ಎಂದು ಮುನಿಗಳು ತಿಳಿಸಿದರು.

ಅರ್ಥ:
ನೆಲ: ಭೂಮಿ; ಚಂದ್ರ: ಶಶಿ; ಸೂರ್ಯ: ರವಿ; ಕೃಶಾನು: ಅಗ್ನಿ, ಬೆಂಕಿ; ತೇಜ: ಕಾಂತಿ, ಪ್ರಕಾಶ; ಸಮೀರ: ವಾಯು; ಕಾಣು: ತೋರು; ಸಲಿಲ: ಜಲ; ಸೃಷ್ಟಿ: ಉತ್ಪತ್ತಿ, ಹುಟ್ಟು; ಚಿತ್ತ: ಮನಸ್ಸು; ಗ್ಲಾನಿ: ಬಳಲಿಕೆ, ದಣಿವು; ಬಲು: ಬಹಳ; ತೆರೆ: ತೆರೆಯುವಿಕೆ, ಬಿಚ್ಚುವಿಕೆ; ಹೊಯ್ಲು: ಏಟು, ಹೊಡೆತ; ಮುಳುಗು: ಮಿಂದು; ಏಳು: ಮೇಲೇಳು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಈ +ನೆಲನನ್+ಈ+ ಚಂದ್ರ +ಸೂರ್ಯ +ಕೃ
ಶಾನು +ತೇಜವನ್+ಈ+ ಸಮೀರಣನ್
ಈ+ನಭವ+ ನಾ+ ಕಾಣೆನ್+ಒಂದೇ +ಸಲಿಲ+ ಸೃಷ್ಟಿಯಲಿ
ಏನು +ಹೇಳುವೆನ್+ಎನ್ನ +ಚಿತ್ತ
ಗ್ಲಾನಿಯನು +ಬಲುತೆರೆಯ+ ಹೊಯ್ಲಿನೊಳ್
ಆನು+ ಮುಳುಗುತ್+ಏಳುತಿರ್ದೆನು+ ಭೂಪ +ಕೇಳೆಂದ

ಅಚ್ಚರಿ:
(೧) ಪಂಚಭೂತಗಳು ನೀರಿನಲ್ಲಿ ಮುಳುಗಿದವು ಎಂದು ಹೇಳುವ ಪರಿ – ಈ ನೆಲನನೀ ಚಂದ್ರ ಸೂರ್ಯ ಕೃಶಾನು ತೇಜವನೀ ಸಮೀರಣ ನೀನಭವ ನಾ ಕಾಣೆನೊಂದೇ ಸಲಿಲ ಸೃಷ್ಟಿಯಲಿ

ಪದ್ಯ ೨೭: ದ್ರೌಪದಿಯು ದೇವತೆಗಳಲ್ಲಿ ಹೇಗೆ ಮೊರೆಯಿಟ್ಟಳು?

ಸೊಸೆಯಲಾ ದೇವೆಂದ್ರಯೆನ್ನಯ
ಘಸಣಿ ಯಾರದು ಹಿರಿಯ ಮಾವನ
ವಶವಲಾ ತ್ರೈಜಗದ ಜೀವರ ಜೀವ ವಿಭ್ರಮಣ
ಉಸುರು ನಿನ್ನಾಧೀನವೀ ದು
ರ್ವ್ಯಸನಿಗಳ ಕೊಂಡಾಡುವರೆ ಕರು
ಣಿಸು ಸಮೀರಣಯೆಂದು ಹಲುಬಿದಳಾಶ್ವಿನೇಯರಿಗೆ (ಸಭಾ ಪರ್ವ, ೧೬ ಸಂಧಿ, ೨೭ ಪದ್ಯ)

ತಾತ್ಪರ್ಯ:
ಪರಮಾತ್ಮರಲ್ಲಿ ಮೊರೆಯಿಟ್ಟ ದ್ರೌಪದಿ ನಂತರ ತನ್ನ ಮಾವನಾದ ಇಂದ್ರನಲ್ಲಿ ಬೇಡಿದಳು. ಹೇ ಇಂದ್ರದೇವ ನಾನು ನಿನಗೆ ಸೊಸೆಯಲ್ಲವೇ, ಈ ಕಷ್ಟದಿಂದ ನನ್ನನ್ನು ಪಾರು ಮಾಡುವವರು ಯಾರು, ಅದು ನಿನ್ನ ಕೆಲಸವಲ್ಲವೇ? ಹೇ ವಾಯುದೇವ, ಮೂರುಲೋಕಗಳಲ್ಲಿರುವ ಜೀವರಲ್ಲಿ ಜೀವವಾಗಿರುವ ಉಸಿರು ನಿನ್ನ ಅಧೀನವಲ್ಲವೇ? ಈ ದುರಾಚಾರಿಗಳನ್ನು ನೀನು ಸೈರಿಸಬಹುದೇ? ಹೇ ವಾಯುದೇವ ಕರುಣಿಸು, ಹೇ ಅಶ್ವಿನೀ ದೇವತೆಗಳೇ ನೀವಾದರೂ ನನ್ನನ್ನು ಕಷ್ಟದಿಂದ ಪಾರುಮಾಡಬಹುದಲ್ಲವೇ ಎಂದು ದ್ರೌಪದಿಯು ದೇವತೆಗಳಲ್ಲಿ ಮೊರೆಯಿಟ್ಟಳು.

ಅರ್ಥ:
ಸೊಸೆ: ಮಗನ ಹೆಂಡತಿ; ದೇವೇಂದ್ರ; ಇಂದ್ರ; ಘಸಣಿ: ತೊಂದರೆ; ಹಿರಿಯ: ದೊಡ್ಡವ; ಮಾವ: ಗಂಡನ ತಂದೆ; ವಶ: ಅಧೀನ, ಅಂಕೆ; ತ್ರೈಜಗ: ಮೂರುಲೋಕ; ಜೀವ: ಉಸಿರು; ವಿಭ್ರಮಣ: ಅಲೆಯುವಿಕೆ; ಉಸುರು: ವಾಯು; ಅಧೀನ: ವಶ, ಕೈಕೆಳಗಿರುವ; ದುರ್ವ್ಯಸನ: ಕೆಟ್ಟ ಚಟವುಳ್ಳ; ಕೊಂಡಾಡು: ಹೊಗಳು, ಆದರಿಸು; ಕರುಣಿಸು: ದಯಪಾಲಿಸು; ಸಮೀರ: ವಾಯು; ಹಲುಬು: ಗೋಳಿಡು, ಬೇಡಿಕೋ; ಅಶ್ವಿನಿ: ದೇವತೆಗಳ ಒಂದು ಗುಂಪು;

ಪದವಿಂಗಡಣೆ:
ಸೊಸೆಯಲಾ +ದೇವೆಂದ್ರ+ಎನ್ನಯ
ಘಸಣಿ +ಯಾರದು +ಹಿರಿಯ +ಮಾವನ
ವಶವಲಾ +ತ್ರೈಜಗದ+ ಜೀವರ +ಜೀವ +ವಿಭ್ರಮಣ
ಉಸುರು +ನಿನ್+ಅಧೀನವ್+ಈ+ ದು
ರ್ವ್ಯಸನಿಗಳ +ಕೊಂಡಾಡುವರೆ +ಕರು
ಣಿಸು +ಸಮೀರಣ+ಎಂದು +ಹಲುಬಿದಳ್+ಅಶ್ವಿನೇಯರಿಗೆ

ಅಚ್ಚರಿ:
(೧) ವಾಯುದೇವನನ್ನು ಹೊಗಳುವ ಪರಿ – ಜಗದ ಜೀವರ ಜೀವ ವಿಭ್ರಮಣ ಉಸುರು ನಿನ್ನಾಧೀನವೀ

ಪದ್ಯ ೨೯: ಉತ್ಪಾತಗಳು ಏನನ್ನು ಸೂಚಿಸುತ್ತವೆ ಎಂದು ವ್ಯಾಸರು ನುಡಿದರು?

ಇದು ಕಣಾ ಕುರುರಾಯ ವಂಶಾ
ಭ್ಯುದಯ ವಿಗ್ರಹಪೂರ್ವ ಸೂಚಕ
ವಿದು ಸುಯೋಧನ ನೃಪನ ಕತಿಪಯ ಕಾಲ ಸುಖಬೀಜ
ಇದು ಸಮಸ್ತ ಕ್ಷತ್ರ ಕುಲ ವಾ
ರಿದ ಘಟೋಚ್ಚಾಟನ ಸಮೀರಣ
ವಿದರ ಫಲ ನಿಮಗಪಜಯಾವಹವೆಂದನಾ ಮುನಿಪ (ಸಭಾ ಪರ್ವ, ೧೨ ಸಂಧಿ, ೨೯ ಪದ್ಯ)

ತಾತ್ಪರ್ಯ:
ವೇದವ್ಯಾಸರು, ಈ ಉತ್ಪಾತಗಳು ಕೌರವವಂಶದ ಅಭ್ಯುದಯಕ್ಕೆ ಬಂದೊದಗುವ ಕುತ್ತನ್ನು ಸೂಚಿಸುತ್ತವೆ. ದುರ್ಯೋಧನನು ಕೆಲವು ಕಾಲ ಸುಖದಿಮ್ದಿರುತ್ತಾನೆ, ಸಮಸ್ತ ಕ್ಷತ್ರಿಯ ಕುಲಗಳೆಂಬ ಮೋಡಗಳನ್ನು ಹಾರಿಸುವ ಬಿರುಗಾಳಿಯಿದು, ನಿಮಗೆ ಅಪಜಯವು ಕಾದಿದೆಯೆಂದು ಈ ಉತ್ಪಾತಗಳು ಸೂಚಿಸುತ್ತವೆ ಎಂದು ನುಡಿದರು.

ಅರ್ಥ:
ರಾಯ: ರಾಜ; ವಂಶ: ಕುಲ; ಅಭ್ಯುದಯ: ಏಳಿಗೆ; ವಿಗ್ರಹ: ರೂಪ; ಪೂರ್ವ: ಮೊದಲು, ಹಿಂದೆ; ಸೂಚಕ: ಸೂಚನೆ; ನೃಪ: ರಾಜ; ಕತಿಪಯ: ಕೆಲವು; ಕಾಲ: ಸಮಯ; ಸುಖ: ಸಂತಸ, ನೆಮ್ಮದಿ; ಬೀಜ: ಮೂಲ; ಸಮಸ್ತ: ಎಲ್ಲಾ; ಕ್ಷತ್ರ: ಕ್ಷತ್ರಿಯ; ಕುಲ: ವಂಶ; ವಾರಿದ: ಮೋಡ; ಘಟ: ದೊಡ್ಡ; ಉಚ್ಚಾಟನ: ಹೊರಹಾಕು; ಸಮೀರ: ಗಾಳಿ, ವಾಯು; ಫಲ: ಪ್ರಯೋಜನ; ಅಪಜಯ: ಪರಾಭವ; ಆವಹಿಸು: ಕೂಗಿ ಕರೆ;

ಪದವಿಂಗಡಣೆ:
ಇದು+ ಕಣಾ +ಕುರುರಾಯ +ವಂಶ
ಅಭ್ಯುದಯ +ವಿಗ್ರಹ+ಪೂರ್ವ +ಸೂಚಕವ್
ಇದು +ಸುಯೋಧನ+ ನೃಪನ+ ಕತಿಪಯ+ ಕಾಲ +ಸುಖಬೀಜ
ಇದು+ ಸಮಸ್ತ +ಕ್ಷತ್ರ +ಕುಲ+ ವಾ
ರಿದ +ಘಟೋಚ್ಚಾಟನ+ ಸಮೀರಣವ್
ಇದರ+ ಫಲ+ ನಿಮಗ್+ಅಪಜಯ+ಆವಹವೆಂದನಾ +ಮುನಿಪ

ಅಚ್ಚರಿ:
(೧) ಉತ್ಪಾತದ ತೀವ್ರತೆ ಬಗ್ಗೆ ತಿಳಿಸಿದ ವ್ಯಾಸರು – ಇದು ಸಮಸ್ತ ಕ್ಷತ್ರ ಕುಲ ವಾ
ರಿದ ಘಟೋಚ್ಚಾಟನ ಸಮೀರಣ

ಪದ್ಯ ೧೧೬: ಕೃಷ್ಣನು ಭೀಮನಿಗೆ ಏನು ಹೇಳಿದನು?

ಎಲೆಲೆ ಪವನಜ ಮಾಗಧೇಶ್ವರ
ನಳವನರಿದಾ ನಿನ್ನ ತಂದೆಯ
ಬಲುಹಕೊಂಡೀ ರಿಪುವ ಮುರಿ ನೆನೆನೆನೆ ಸಮೀರಣನ
ಬಲುಮುಗಿಲ ಬಿರುಗಾಳಿಯೊಡ್ಡಿನೊ
ಳಳುಕದೇ ಫಡ ಬೇಗಮಾಡೆನೆ
ಕಲಿ ವೃಕೋದರನನಿಲರೂಪಧ್ಯಾನ ಪರನಾದ (ಸಭಾ ಪರ್ವ, ೨ ಸಂಧಿ, ಪದ್ಯ ೧೧೬)

ತಾತ್ಪರ್ಯ:
ಕೃಷ್ಣನು ಜರಾಸಂಧನ ಬಲವು ಜಾರುವುದನ್ನು ಅರಿತು, ಭೀಮನಿಗೆ “ಎಲೈ ಭೀಮನೆ, ಜರಾಸಂಧನ ರೀತಿಯನ್ನು ತಿಳಿದುಕೊಂಡೆಯಾ? ನಿನ್ನ ತಂದೆಯಾದ ವಾಯುದೇವನನ್ನು ಆಹ್ವಾನಿಸಿ ಅವನ ಬಲವನ್ನು ತಂದುಕೊಂಡು ಶತ್ರುಸಂಹಾರ ಮಾಡು, ಮೋಡಗಳು ಎಷ್ಟು ದಟ್ಟವಾಗಿದ್ದರೂ ಗಾಳಿಯ ಹೊಡೆತಕ್ಕೆ ಚದುರಿ ಹೋಗುವುದಿಲ್ಲವೇ? ಹೆದರದೆ ಬೇಗ ನಾನು ಹೇಳಿದಂತೆ ಮಾಡು, ವಾಯುದೇವರನ್ನು ನೆನೆ” ಎಂದು ಕೃಷ್ಣನು ಹೇಳಲು ಭೀಮನು ವಾಯುದೇವರನ್ನು ಧ್ಯಾನಿಸಿದನು.

ಅರ್ಥ:
ಪವನ: ಗಾಳಿ, ವಾಯು; ಪವನಜ; ಭೀಮ; ಈಶ್ವರ: ಪ್ರಭು, ಒಡೆಯ; ಅರಿ: ತಿಳಿ; ತಂದೆ: ಪಿತ; ಬಲುಹ: ಬಲ; ರಿಪು: ವೈರಿ; ಕೊಂಡು: ತೆಗೆದುಕೊಳ್ಳು; ಮುರಿ: ನಾಶ; ಸಮೀರಣ:ವಾಯುದೇವರು; ನೆನೆ: ಜ್ಞಾಪಿಸಿಕೊ; ಮುಗಿಲು: ಆಗಸ; ಬಿರುಗಾಳಿ: ಜೋರಾದ ಗಾಳಿ; ಅಳುಕು: ಭಯ; ಫಡ:ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಬೇಗ:
ತ್ವರೆ; ಶೀಗ್ರ; ಕಲಿ: ಶೂರ; ವೃಕೋದರ: ಭೀಮ; ಉದರ: ಹೊಟ್ಟೆ; ಅನಿಲ: ಗಾಳಿ; ರೂಪ: ಆಕಾರ; ಪರ: ಕಡೆ, ಪಕ್ಷ;

ಪದವಿಂಗಡಣೆ:
ಎಲೆಲೆ +ಪವನಜ +ಮಾಗಧೇಶ್ವರನ್
ಅಳವನ್+ಅರಿದ್+ಆ+ ನಿನ್ನ+ ತಂದೆಯ
ಬಲುಹ+ಕೊಂಡ್+ಈ+ ರಿಪುವ +ಮುರಿ +ನೆನೆನೆನೆ +ಸಮೀರಣನ
ಬಲುಮುಗಿಲ +ಬಿರುಗಾಳಿಯೊಡ್ಡಿನೊಳ್
ಅಳುಕದೇ +ಫಡ +ಬೇಗಮಾಡ್+ಎನೆ
ಕಲಿ +ವೃಕೋದರನ್+ಅನಿಲರೂಪಧ್ಯಾನ +ಪರನಾದ

ಅಚ್ಚರಿ:
(೧) ಆಡು ಭಾಷೆಯ ಪ್ರಯೋಗ: ಎಲೆಲೆ, ನೆನೆನೆನೆ
(೨) ಪವನ, ಸಮೀರಣ, ಅನಿಲರೂಪ – ವಾಯುದೇವನ ಸಮನಾರ್ಥಕ ಪದಗಳ ಬಳಕೆ