ಪದ್ಯ ೨೦: ಯುದ್ಧವನ್ನು ಯಜ್ಞಕ್ಕೆ ಹೇಗೆ ಹೋಲಿಸಬಹುದು?

ಸೆರೆನರದ ದರ್ಭೆಗಳ ಮಿದುಳಿನ
ಚರುವಿನೆಲುವಿನ ಸಮಿಧೆಗಳ ಬಿಲು
ದಿರುರವದ ಚತುರಂಗರಭಸದ ಸಾಮವೇದಿಗಳ
ಅರುಣಜಲದಾಜ್ಯದ ಸ್ರುವಾದಿಯ
ಶಿರಕಪಾಲದ ವೈರಿಪಶುಬಂ
ಧುರದ ಸಂಗರಯಜ್ಞ ದೀಕ್ಷೆಯ ಮೆರದಿರಕಟೆಂದ (ಗದಾ ಪರ್ವ, ೧ ಸಂಧಿ, ೨೦ ಪದ್ಯ)

ತಾತ್ಪರ್ಯ:
ನರಗಳೇ ದರ್ಭೆಗಳು, ಮಿದುಳುಗಳೇ ಚರು, ಎಲುಬುಗಳೇ ಸಮಿತ್ತುಗಳು, ಧನುಷ್ಟಂಕಾರ ಚತುರಂಗ ಬಲದ ಸದ್ದುಗಳೇ ಸಾಮ ವೇದದ ಘೋಷ, ರಕ್ತವೇ ತುಪ್ಪ, ಶತ್ರುಗಳ ತಲೆ ಬುರುಡೆಗಳೇ ಸ್ರಕ್ ಸ್ರುವಗಳು, ವೈರಿಗಳೇ ಪಶುಗಳು, ಇಂತಹ ಯುದ್ಧಯಜ್ಞದ ದೀಕ್ಷೆಯನ್ನು ಅಯ್ಯೋ ಮರೆತಿರಲ್ಲಾ ಎಂದು ದುರ್ಯೋಧನನು ಹೇಳಿದನು.

ಅರ್ಥ:
ಸೆರೆ: ಒಂದು ಕೈಯ ಬೊಗಸೆ; ನರ: ಮೆದುಳಿನಿಂದ ಅವಯವಗಳಿಗೆ ಸೂಚನೆಗಳನ್ನು ಒಯ್ಯುವ ತಂತು, ಸೆರೆ; ದರ್ಭೆ: ಮೊನಚಾದ ತುದಿ ಯುಳ್ಳ ಒಂದು ಬಗೆಯ ಹುಲ್ಲು, ಕುಶ; ಮಿದುಳು: ಮಸ್ತಿಷ್ಕ; ಚರು: ನೈವೇದ್ಯ, ಹವಿಸ್ಸು; ಎಲುಬು: ಮೂಳೆ; ಸಮಿಧೆ: ಸಮಿತೆ, ಯಜ್ಞಕ್ಕಾಗಿ ಬಳಸುವ ಉರುವಲು ಕಡ್ಡಿ; ಬಿಲು: ಬಿಲ್ಲು, ಚಾಪ; ರವ: ಶಬ್ದ; ಬಿಲುದಿರುರವ: ಧನುಷ್ಟಂಕಾರ; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ರಭಸ: ವೇಗ; ವೇದಿ: ಪಂಡಿತ, ವಿದ್ವಾಂಸ; ಅರುಣಜಲ: ರಕ್ತ; ಆಜ್ಯ: ತುಪ್ಪ, ಘೃತ; ಸ್ರುಕ್ ಸ್ರುವ: ಯಜ್ಞದಲ್ಲಿ ಬಳಸುವ ಸೌಟು; ಶಿರ: ತಲೆ; ಕಪಾಲ: ಕೆನ್ನೆ, ತಲೆಬುರುಡೆ; ವೈರಿ: ಶತ್ರು; ಪಶು: ಪ್ರಾಣಿ; ಬಂಧುರ: ಬಾಗಿರುವುದು; ಸಂಗರ: ಯುದ್ಧ, ಕಾಳಗ; ದೀಕ್ಷೆ: ವ್ರತ, ನಿಯಮ; ಮರೆ: ನೆನಪಿನಿಂದ ದೂರ ಮಾಡು; ಅಕಟ: ಅಯ್ಯೋ;

ಪದವಿಂಗಡಣೆ:
ಸೆರೆ+ನರದ+ ದರ್ಭೆಗಳ +ಮಿದುಳಿನ
ಚರುವಿನ್+ಎಲುವಿನ +ಸಮಿಧೆಗಳ+ ಬಿಲು
ದಿರು+ರವದ +ಚತುರಂಗ+ರಭಸದ +ಸಾಮ+ವೇದಿಗಳ
ಅರುಣಜಲದ+ಆಜ್ಯದ+ ಸ್ರುವಾದಿಯ
ಶಿರ+ಕಪಾಲದ+ ವೈರಿ+ಪಶುಬಂ
ಧುರದ +ಸಂಗರ+ಯಜ್ಞ +ದೀಕ್ಷೆಯ +ಮೆರದಿರ್+ಅಕಟೆಂದ

ಅಚ್ಚರಿ:
(೧) ಯುದ್ಧವನ್ನು ಯಜ್ಞಕ್ಕೆ ಹೋಲಿಸುವ ಪರಿ

ಪದ್ಯ ೨೨: ಪಾಂಡುನಂದನರು ಯಾರನ್ನು ನೋಡಿದರು?

ಚೆಲ್ಲಿತೀ ಮುನಿಯೂಥ ದೆಸೆದೆಸೆ
ಗೆಲ್ಲ ಹರಿದುದು ಬಾಯ ಮೊರೆಗಳ
ಪಲ್ಲವದ ಪಾಣಿಗಳ ಸೂಸುವ ಸಮಿಧೆ ಬರ್ಹಿಗಳ
ತಲ್ಲಣದ ತೋಪಿನ ವಿಷಾದದ
ವಲ್ಲರಿಯ ಹೂದೊಡಬೆಗಳ ಹೊ
ಯ್ವಳ್ಳೆಗಳ ಮುನಿಜನವ ಕಂಡರು ಪಾಂಡುನಂದನರು (ಅರಣ್ಯ ಪರ್ವ, ೨೪ ಸಂಧಿ, ೨೨ ಪದ್ಯ)

ತಾತ್ಪರ್ಯ:
ಮುನಿಗಳು ಮೊರೆಯಿಡುತ್ತಾ ಕೈಯಲ್ಲಿ ಚಿಗುರು, ಸಮಿತ್ತು, ದರ್ಭೆಗಲನ್ನು ಹಿಡಿದು ತಲ್ಲಣಿಸುತ್ತಾ ಅಳ್ಳೆಗಳಲುಗಲು ದಿಕ್ಕು ದಿಕ್ಕಿಗೆ ಓಡಿದರು. ತಲ್ಲಣವೆಂಬ ತೋಪಿನಲ್ಲಿ ಬಿಟ್ಟ ವಿಷಾದದ ಹೂಗೊಂಚಲುಗಳಂತಿದ್ದ ಮುನಿಜನರನ್ನು ಪಾಂಡುನಂದನರು ಕಂಡರು.

ಅರ್ಥ:
ಚೆಲ್ಲು: ಹರಡು; ಮುನಿ: ಋಷಿ; ಯೂಥ: ಗುಂಪು; ದೆಸೆ: ದಿಕ್ಕು; ಹರಿ: ಹರಡು; ಮೊರೆ: ಕೂಗು; ಪಲ್ಲವ: ವಿಕಸಿಸು; ಪಾಣಿ: ಹಸ್ತ; ಸೂಸು: ಹರಡು; ಸಮಿಧೆ: ಸಮಿತೆ, ಯಜ್ಞಕ್ಕಾಗಿ ಬಳಸುವ ಉರುವಲು ಕಡ್ಡಿ; ಬರ್ಹಿ: ದರ್ಭೆ, ಕುಶ; ತಲ್ಲಣ: ಅಂಜಿಕೆ, ಭಯ, ಭೀತಿ; ತೋಪು: ಮರಗಳ – ಗುಂಪು, ಸಮೂಹ; ವಿಷಾದ: ದುಃಖ; ವಲ್ಲರಿ: ಬಳ್ಳಿ; ಹೂ: ಪುಷ್ಪ; ಹೊಯ್ವಳ್ಳೆ: ತೇಕುತ್ತಿರುವ ಪಕ್ಕೆಗಳು; ಜನ: ಮನುಷ್ಯರ ಗುಂಪು; ಕಂಡು: ನೋಡು; ನಂದನ: ಮಕ್ಕಳು;

ಪದವಿಂಗಡಣೆ:
ಚೆಲ್ಲಿತೀ+ ಮುನಿಯೂಥ+ ದೆಸೆದೆಸೆ
ಗೆಲ್ಲ+ ಹರಿದುದು+ ಬಾಯ +ಮೊರೆಗಳ
ಪಲ್ಲವದ +ಪಾಣಿಗಳ +ಸೂಸುವ +ಸಮಿಧೆ+ ಬರ್ಹಿಗಳ
ತಲ್ಲಣದ +ತೋಪಿನ +ವಿಷಾದದ
ವಲ್ಲರಿಯ +ಹೂದೊಡಬೆಗಳ+ ಹೊ
ಯ್ವಳ್ಳೆಗಳ+ ಮುನಿಜನವ +ಕಂಡರು +ಪಾಂಡುನಂದನರು

ಅಚ್ಚರಿ:
(೧) ಉಪಮಾನದ ಪ್ರಯೋಗ – ತಲ್ಲಣದ ತೋಪಿನ ವಿಷಾದದವಲ್ಲರಿಯ ಹೂದೊಡಬೆಗಳ ಹೊ
ಯ್ವಳ್ಳೆಗಳ ಮುನಿಜನವ ಕಂಡರು

ಪದ್ಯ ೩೦: ರಾಜಸೂಯಯಾಗ ಮಂಟಪದಲ್ಲಿ ಯಾವ ಸಾಮಗ್ರಿಗಳಿದ್ದವು?

ಚರು ತಿಲದ ರಾಶಿಗಳ ಸುಕ್ ಸ್ರುವ
ಬರುಹಿಗಳ ಬಲು ಹೊರೆಗಳಾಜ್ಯೋ
ತ್ಕರದ ಪತ್ರಾವಳಿಯ ನಿರ್ಮಲ ಸಾರ ಸಮಿಧೆಗಳ
ಪರಿವಳೆಯದಾಮೀಕ್ಷೆಗಳ ಪರಿ
ಕರದ ವಿವಿಧ ದ್ರವ್ಯಮಯ ಬಂ
ಧುರದಲೆಸೆದುದು ಯಜ್ಞವಾಟಿಕೆ ರಾಜಸೂಯದಲಿ (ಸಭಾ ಪರ್ವ, ೮ ಸಂಧಿ, ೩೦ ಪದ್ಯ)

ತಾತ್ಪರ್ಯ:
ಹವಿಸ್ಸು, ಎಳ್ಳಿನ ರಾಶಿ, ಯಜ್ಞದಲ್ಲಿ ಬಳಸುವ ಸೌಟು, ದರ್ಭೆಗಳ ಹೊರೆ, ಪತ್ರೆಗಳ ಗುಡ್ಡೆ, ನಿರ್ಮಲವಾದ ಸಮಿತ್ತುಗಳು, ಪರಿಮಳದಿಂದ ಕೂಡಿದ ಸಿಹಿತಿಂಡಿಗಳ, ಯಾಗದ ಅನೇಕ ಅಗತ್ಯವಾದ ದ್ರವ್ಯಗಳಿಂದ ತುಂಬಿ ರಾಜಸೂಯದ ಯಾಗಶಾಲೆಯು ಮನೋಹರವಾಗಿ ಕಾಣಿಸುತ್ತಿತ್ತು.

ಅರ್ಥ:
ಚರು: ಅಗ್ನಿಗೆ ಕೊಡುವ ಆಹುತಿ, ಹವಿಸ್ಸು; ತಿಲ: ಎಳ್ಳು; ರಾಶಿ: ಗುಂಪು; ಸುಕ್ ಸ್ರುವ: ಯಜ್ಞದಲ್ಲಿ ಬಳಸುವ ಸೌಟು; ಬರುಹಿ: ದರ್ಭೆ; ಬಲು: ಬಹಳ; ಉತ್ಕರ: ಸಮೂಹ; ಪತ್ರ: ಪತ್ರೆ; ಆವಳಿ: ಸಾಲು, ಗುಂಪು; ನಿರ್ಮಲ: ಶುದ್ಧ; ಸಾರ: ಸತ್ವ; ಸಮಿಧೆ: ಅರಳಿಕಡ್ಡಿ; ಪರಿವಳೆ: ಸುತ್ತಲಿರು; ಆಮೀಕ್ಷೆ: ಕಾದ ಹಾಲಿನಲ್ಲಿ ಮೊಸರು ಹಾಕಿ ಮಾಡಿದ ಹೆಪ್ಪು, ಒಂದು ಬಗೆಯ ಸಿಹಿ ತಿಂಡಿ; ಪರಿಕರ: ಸಾಮಗ್ರಿ; ವಿವಿಧ: ಬಹಳ; ದ್ರವ್ಯ: ಪದಾರ್ಥ; ಬಂಧುರ: ಸುಂದರವಾದ; ವಾಟಿಕೆ: ಆವರಣ, ಪ್ರಾಕಾರ;

ಪದವಿಂಗಡಣೆ:
ಚರು+ ತಿಲದ +ರಾಶಿಗಳ +ಸುಕ್ ಸ್ರುವ
ಬರುಹಿಗಳ +ಬಲು +ಹೊರೆಗಳ್+ಅಜ್ಯೋ
ತ್ಕರದ+ ಪತ್ರಾವಳಿಯ+ ನಿರ್ಮಲ +ಸಾರ +ಸಮಿಧೆಗಳ
ಪರಿವಳೆಯದ್+ಆಮೀಕ್ಷೆಗಳ+ ಪರಿ
ಕರದ+ ವಿವಿಧ+ ದ್ರವ್ಯಮಯ +ಬಂ
ಧುರದಲ್+ಎಸೆದುದು +ಯಜ್ಞವಾಟಿಕೆ+ ರಾಜಸೂಯದಲಿ

ಅಚ್ಚರಿ:
(೧) ಯಜ್ಞದಲ್ಲಿ ಬಳಸುವ ಹಲವಾರು ಸಾಮಗ್ರಿಗಳ ಪರಿಚಯ – ಚರು, ತಿಲ್, ಸುಕ್ ಸ್ರುವ, ಸಾರ, ಸಮಿಧೆ, ಆಮೀಕ್ಷೆ
(೨) ರಾಶಿ, ಆವಳಿ, ಉತ್ಕರ – ಗುಂಪು ಅರ್ಥವನ್ನು ಕೊಡುವ ಪದಗಳು
(೩) ಉತ್ಕರ, ಪರಿಕರ – ಪ್ರಾಸಪದಗಳು

ಪದ್ಯ ೮೫: ಅರಗಿನರಮನೆಯನ್ನು ಕಂಡ ಯಮಸೂನುವಿಗೆ ನಗಲು ಕಾರಣವೇನು?

ಸಮಿಧೆಗಳು ನಾವ್ ನಾಲ್ವರಯ್ಯನ
ರಮಣಿಯಾಹುತಿ ಭೀಮನೇ ಪಶು
ಕುಮತಿ ಕಟ್ಟಿಸಿದರಮನೆಯೆ ತಾನಗ್ನಿಕುಂಡವಿದು
ಎಮಗೆ ಸಂಶಯವಿಲ್ಲ ರಾಜೋ
ತ್ತಮನೊ ದುರ್ಯೋಧನನೊ ದೀಕ್ಷಾ
ಕ್ರಮವ ಧರಿಸಿದನಾವನೆಂದನು ನಗುತ ಯಮಸೂನು (ಆದಿ ಪರ್ವ, ೮ ಸಂಧಿ, ೮೫ ಪದ್ಯ)

ತಾತ್ಪರ್ಯ:
ಅರಗಿನರಮನೆಯನ್ನು ಕಂಡ ಧರ್ಮರಾಯನಿಗೆ, ನಾವು ನಾಲ್ವರು ಈ ಅಗ್ನಿಕುಂಡಕ್ಕೆ (ಈ ಅರಗಿನರಮನೆ) ಸಮಿತ್ತುಗಳು, ಕುಂತಿಯೆ ಆಹುತಿ, ಭೀಮನೆ ಪಶು, ಅರಮನೆಯ ಅಗ್ನಿಕುಂಡ, ಆದರೆ ನನಗೊಂದು ಸಂಶಯ, ಈ ಯಜ್ಞದೀಕ್ಷೆಯನ್ನು ಧೃತರಾಷ್ಟ್ರನೋ ಅಥವ ದುರ್ಯೋಧನನೋ ಕಟ್ಟಿಕೊಂಡಿರುವುದು ಎಂದು ಯೋಚಿಸುತ್ತಾ ನಕ್ಕನು.

ಅರ್ಥ:
ಸಮಿಧೆ: ಹೋಮಕ್ಕೆ ಉಪಯೋಗಿಸುವ ಹತ್ತಿ; ಅಯ್ಯ: ತಂದೆ; ರಮಣಿ: ಹೆಣ್ಣು, ಕನ್ಯೆ; ಆಹುತಿ: ಬಲಿ, ತುತ್ತು; ಪಶು: ಪ್ರಾಣಿ; ಕುಮತಿ: ಕೆಟ್ಟ ಬುದ್ಧಿ; ಅರಮನೆ: ರಾಜರ ವಾಸಸ್ಥಾನ; ಅಗ್ನಿ: ಶಿಖಿ; ಕುಂಡ: ಹೋಮಗಳಿಗೆ ನೆಲದಲ್ಲಿ ಮಾಡಿದ ಕುಣಿ;
ಸಂಶಯ: ಸಂದೇಹ, ಅನುಮಾನ; ದೀಕ್ಷೆ: ನಿಯಮ, ವ್ರತ; ಕ್ರಮ: ನಡೆಯುವಿಕೆ; ಧರಿಸು: ತೊಡು; ನಗು: ಹಾಸ್ಯವನ್ನು ವ್ಯಕ್ತಪಡಿಸುವ ಮುಖಭಾವ; ಸೂನು: ಮಗ; ರಾಜ: ಧರಣೀಪತಿ, ನೃಪ; ಉತ್ತಮ: ಶ್ರೇಷ್ಠ;

ಪದವಿಂಗಡನೆ:
ಸಮಿಧೆಗಳು +ನಾವ್ +ನಾಲ್ವರ್+ಅಯ್ಯನ
ರಮಣಿ+ಆಹುತಿ+ ಭೀಮನೇ +ಪಶು
ಕುಮತಿ+ ಕಟ್ಟಿಸಿದ್+ಅರಮನೆಯೆ+ ತಾನ್+ಅಗ್ನಿ+ಕುಂಡವಿದು
ಎಮಗೆ+ ಸಂಶಯವಿಲ್ಲ+ ರಾಜೋ
ತ್ತಮನೊ+ ದುರ್ಯೋಧನನೊ+ ದೀಕ್ಷಾ
ಕ್ರಮವ +ಧರಿಸಿದನ್+ಆವನೆಂದನು+ ನಗುತ +ಯಮಸೂನು

ಅಚ್ಚರಿ:
(೧) ಕುಂತಿ ಯನ್ನು ವಿವರಿಸಲು – ಅಯ್ಯನ ರಮಣಿ ಎಂದು ವರ್ಣಿಸಿರುವುದು
(೨) ಧೃತರಾಷ್ಟ್ರನನ್ನು ರಾಜೋತ್ತಮ ನೆಂದು ಕರೆದಿರುವುದು
(೩) ತಮ್ಮನ್ನು ಸುಡಲೆಂದೆ ನಿರ್ಮಿಸಿದ ಭವನವೆಂದು ತಿಳಿದ ಬಳಿಕವು ಇದನ್ನು ಕಂಡು ನಗುವ ಧರ್ಮರಾಯನ ಮನ:ಸ್ಥಿತಿಯನ್ನರಿಯಬಹುದು