ಪದ್ಯ ೨೯: ವಂಧಿ ಮಾಗಧರು ಭೀಮನನ್ನು ಹೇಗೆ ಹೊಗಳಿದರು?

ಭಾಪು ಮಝರೇ ಭೀಮ ಕೌರವ
ಭೂಪವಿಲಯಕೃತಾಂತ ಕುರುಕುಲ
ದೀಪಚಂಡಸಮೀರ ಕುರುನೃಪತಿಮಿರಮಾರ್ತಾಂಡ
ಕೋಪನಪ್ರತಿಪಕ್ಷಕುಲನಿ
ರ್ವಾಪಣೈಕಸಮರ್ಥ ಎನುತಭಿ
ರೂಪನನು ಹೊಗಳಿದರು ವಂದಿಗಳಬುಧಿ ಘೋಷದಲಿ (ಗದಾ ಪರ್ವ, ೭ ಸಂಧಿ, ೨೯ ಪದ್ಯ)

ತಾತ್ಪರ್ಯ:
ಭೀಮಾ, ಭಲೇ, ಭೇಷ್, ಕೌರವ ರಾಜರಿಗೆ ಕಾಲಯಮ! ಕೌರವ ಕುಲದೀಪಕ್ಕೆ ಚಂಡಮಾರುತ!, ಕೌರವರೆಂಬ ಕತ್ತಲೆಗೆ ಸೂರ್ಯ!, ಅತಿಕೋಪದ ವೈರಿ ಕುಲವನ್ನು ನಾಶಮಾಡಲು ಸಮರ್ಥನಾದವನೇ ಎಂದು ವಂದಿ ಮಾಗಧರು ಭೀಮನನ್ನು ಹೊಗಳಿದರು.

ಅರ್ಥ:
ಭಾಪು: ಭಲೇ; ಮಝರೇ: ಭೇಷ್; ಭೂಪ: ರಾಜ; ವಿಲಯ: ನಾಶ, ಪ್ರಳಯ; ಕೃತಾಂತ: ಯಮ; ದೀಪ: ದೀವಿಗೆ, ಜೊಡರು; ಚಂಡಸಮೀರ: ಚಂಡಮಾರುತ; ನೃಪತಿ: ರಾಜ; ತಿಮಿರ: ಕತ್ತಲು, ಅಂಧಕಾರ; ಮಾರ್ತಾಂಡ: ಸೂರ್ಯ; ಕೋಪ: ಮುಳಿ, ಕುಪಿತ; ಪ್ರತಿಪಕ್ಷ: ಎದುರಾಳಿ; ಕುಲ: ವಂಶ; ನಿರ್ವಾಪಣ: ನಾಶಮಾಡಲು; ಸಮರ್ಥ: ಯೋಗ್ಯ; ಅಭಿರೂಪ: ಅನುರೂಪವಾದ; ಹೊಗಳು: ಪ್ರಶಂಶಿಸು; ವಂದಿ: ಹೊಗಳುಭಟ್ಟ; ಅಬುಧಿ: ಸಾಗರ; ಘೋಷ: ಕೂಗು;

ಪದವಿಂಗಡಣೆ:
ಭಾಪು +ಮಝರೇ +ಭೀಮ +ಕೌರವ
ಭೂಪ+ವಿಲಯ+ಕೃತಾಂತ +ಕುರುಕುಲ
ದೀಪ+ಚಂಡಸಮೀರ +ಕುರುನೃಪ+ತಿಮಿರ+ಮಾರ್ತಾಂಡ
ಕೋಪನ+ಪ್ರತಿಪಕ್ಷಕುಲ+ನಿ
ರ್ವಾಪಣೈಕ+ಸಮರ್ಥ+ ಎನುತ್+ಅಭಿ
ರೂಪನನು +ಹೊಗಳಿದರು +ವಂದಿಗಳ್+ಅಬುಧಿ +ಘೋಷದಲಿ

ಅಚ್ಚರಿ:
(೧) ಭೀಮನನ್ನು ಹೊಗಳುವ ಪರಿ – ಕೌರವ ಭೂಪವಿಲಯಕೃತಾಂತ; ಕುರುಕುಲ ದೀಪ ಚಂಡಸಮೀರ; ಕುರುನೃಪತಿಮಿರಮಾರ್ತಾಂಡ

ಪದ್ಯ ೨೩: ಕರ್ಣನನ್ನು ಭೀಮನು ಹೇಗೆ ಆಕ್ರಮಣ ಮಾಡಿದನು?

ದೇವ ದಾನವ ಭಟರು ನುಗ್ಗೆಂ
ದಾವು ಬಗೆದಿಹೆವುಳಿದ ಮರ್ತ್ಯರು
ನೀವು ತಾವೇಸರ ಸಮರ್ಥರು ಕರ್ಣ ಗಳಹದಿರು
ಡಾವರಿಗತನವಾರ ಕೂಡೆ ವೃ
ಥಾ ವಿಲಾಸಿಗಳೆಲವೊ ಸುಭಟರೆ
ನೀವೆನುತ ಹದಿನೈದು ಶರದಿಂದೆಚ್ಚನಿನಸುತನ (ದ್ರೋಣ ಪರ್ವ, ೧೩ ಸಂಧಿ, ೨೩ ಪದ್ಯ)

ತಾತ್ಪರ್ಯ:
ದೇವ ದೈತ್ಯರ ಸೈನಿಕರು ನುಗ್ಗಿದವು ಎಂದು ನಾವು ಭಾವಿಸಿದೆವು, ಇನ್ನು ನೀವು ಮನುಷ್ಯರು, ತಾವು ಎಂತಹ ಸಮರ್ಥರಿದ್ದೀರಿ? ಕರ್ಣ ವ್ಯರ್ಥವಾಗಿ ಮಾತಾಡಬೇಡ. ಯಾರ ಹತ್ತಿರ ನಿನ್ನ ಪ್ರತಾಪವನ್ನು ತೋರಿಸುವೆ? ನೀವು ವಿಲಾಸ ಜೀವಿಗಳೇ ಹೊರತು ಸಮರ್ಥ ಯೋಧರಲ್ಲ. ಹೀಗೆ ಹೇಳಿ ಭೀಮನು ಹದಿನೈದು ಬಾಣಗಳಿಂದ ಕರ್ಣನನ್ನು ಹೊಡೆದನು.

ಅರ್ಥ:
ದೇವ: ಭಗವಂತ, ಅಮರರು; ದಾನವ: ರಾಕ್ಷಸ; ಭಟ: ಸೈನಿಕ; ನುಗ್ಗು: ತಳ್ಳು; ಬಗೆ: ಆಲೋಚನೆ; ಉಳಿದ: ಮಿಕ್ಕ; ಮರ್ತ್ಯ: ಮನುಷ್ಯ; ಏಸರ: ಎಷ್ಟು; ಸಮರ್ಥ: ಬಲಶಾಲಿ, ಗಟ್ಟಿಗ; ಗಳಹ: ಅತಿಯಾಗಿ ಹರಟುವವ; ಡಾವರಿಗ: ಯೋಧ; ಕೂಡೆ: ಜೊತೆ; ವೃಥ: ಸುಮ್ಮನೆ; ವಿಲಾಸಿ: ಹುಡುಗಾಟಿಕೆಯ; ಸುಭಟ: ಪರಾಕ್ರಮಿ; ಶರ: ಬಾಣ; ಎಚ್ಚು: ಬಾಣ ಪ್ರಯೋಗ ಮಾಡು; ಇನಸುತ: ಸೂರ್ಯಪುತ್ರ;

ಪದವಿಂಗಡಣೆ:
ದೇವ+ ದಾನವ +ಭಟರು +ನುಗ್ಗೆಂದ್
ಆವು +ಬಗೆದಿಹೆವ್+ಉಳಿದ +ಮರ್ತ್ಯರು
ನೀವು +ತಾವ್+ಏಸರ +ಸಮರ್ಥರು +ಕರ್ಣ+ ಗಳಹದಿರು
ಡಾವರಿಗತನವ್+ಆರ +ಕೂಡೆ +ವೃ
ಥಾ +ವಿಲಾಸಿಗಳ್+ಎಲವೊ +ಸುಭಟರೆ
ನೀವೆನುತ +ಹದಿನೈದು +ಶರದಿಂದ್+ಎಚ್ಚನ್+ಇನಸುತನ

ಅಚ್ಚರಿ:
(೧) ಕರ್ಣನನ್ನು ಜರಿದ ಪರಿ – ಡಾವರಿಗತನವಾರ ಕೂಡೆ ವೃಥಾ ವಿಲಾಸಿಗಳೆಲವೊ ಸುಭಟರೆ ನೀವೆನುತ

ಪದ್ಯ ೬೧: ಜೀವಜಾತಕ್ಕೆ ಯಾರು ಒಡೆಯರೆಂದು ದ್ರೋಣರು ಹೇಳಿದರು?

ಕಾವಡೆನ್ನಳವಲ್ಲ ಮೇಣ್ ಗಾಂ
ಡೀವಿ ಕೊಲುವವನಲ್ಲ ಕೃಷ್ಣನು
ಕಾವರೆಯು ಕೊಲುವರೆ ಸಮರ್ಥನು ವೇದಸಿದ್ಧವಿದು
ಜೀವಜಾತಕ್ಕೊಡೆಯನಾ ರಾ
ಜೀವನಾಭನು ಬರಿಯಹಂಕಾ
ರಾವಲಂಬನದಿಂದ ಕೆಡುತಿಹುದಖಿಳ ಜಗವೆಂದ (ದ್ರೋಣ ಪರ್ವ, ೮ ಸಂಧಿ, ೬೧ ಪದ್ಯ)

ತಾತ್ಪರ್ಯ:
ಕಾಯುವ ಯೋಗ್ಯತೆ ನನಗಿಲ್ಲ. ಅರ್ಜುನನಿಗೆ ಕೊಲ್ಲುವ ಯೋಗ್ಯತೆಯೂ ಇಲ್ಲ. ಕಾಪಾಡಲೂ ಕೊಲ್ಲಲೂ ಶ್ರೀಕೃಷ್ಣನೊಬ್ಬನೇ ಸಮರ್ಥ. ಜೀವಜಾತಕ್ಕೆ ಅವನೇ ಒಡೆಯ. ಅಹಂಕರಿಸಿ ಈ ಜಗತ್ತು ಕೆಡುತ್ತಿದೆ ಎಂದು ದ್ರೋಣರು ಹೇಳಿದರು.

ಅರ್ಥ:
ಕಾವು: ಕಾಯು, ರಕ್ಷಿಸು; ಮೇಣ್: ಅಥವ; ಗಾಂಡೀವಿ: ಅರ್ಜುನ; ಕೊಲು: ಸಾಯಿಸು; ಸಮರ್ಥ: ಯೋಗ್ಯ; ಸಿದ್ಧ: ಸಾಧಿಸಿದವನು; ವೇದ: ಶೃತಿ; ಜೀವ: ಪ್ರಾಣ; ಒಡೆಯ: ರಾಜ; ರಾಜೀವನಾಭ: ನಾಭಿಯಲ್ಲಿ ಕಮಲವುಳ್ಳವ (ವಿಷ್ಣು); ಬರಿ: ಕೇವಲ; ಅಹಂಕಾರ: ಗರ್ವ; ಅವಲಂಬನ: ಆಶ್ರಯ; ಕೆಡು: ಹಾಳು; ಅಖಿಳ: ಎಲ್ಲಾ; ಜಗ: ಪ್ರಪಂಚ;

ಪದವಿಂಗಡಣೆ:
ಕಾವಡ್+ಎನ್ನಳವಲ್ಲ+ ಮೇಣ್ +ಗಾಂ
ಡೀವಿ +ಕೊಲುವವನಲ್ಲ +ಕೃಷ್ಣನು
ಕಾವರೆಯು +ಕೊಲುವರೆ +ಸಮರ್ಥನು +ವೇದಸಿದ್ಧವಿದು
ಜೀವಜಾತಕ್+ಒಡೆಯನಾ +ರಾ
ಜೀವನಾಭನು +ಬರಿ+ಅಹಂಕಾರ
ಅವಲಂಬನದಿಂದ +ಕೆಡುತಿಹುದ್+ಅಖಿಳ +ಜಗವೆಂದ

ಅಚ್ಚರಿ:
(೧) ಕೃಷ್ಣನ ಹಿರಿಮೆ – ಜೀವಜಾತಕ್ಕೊಡೆಯನಾ ರಾಜೀವನಾಭನು

ಪದ್ಯ ೩: ದುರ್ಯೋಧನನೇಕೆ ನಿಟ್ಟುಸಿರು ಬಿಟ್ಟನು?

ನುಡಿಯೆವಾವು ಸಮರ್ಥರೆಂದುದೆ
ಕಡು ನಿಧಾನವು ಸುಭಟರೋಟವೆ
ಕಡೆಗೆ ಪರವಹ ಧರ್ಮ ಪಾರ್ಥನು ಜಗದೊಳಗ್ಗಳನು
ನಡುಹೊಳೆಯ ಹರಿಗೋಲ ಮೂಲೆಯ
ಕಡಿದಿರಾದರೆ ನಮ್ಮ ಪುಣ್ಯದ
ಬಿಡುಗಡೆಯ ಕಾಲವು ಶಿವಾಯೆಂದರಸ ಬಿಸುಸುಯಿದ (ಭೀಷ್ಮ ಪರ್ವ, ೯ ಸಂಧಿ, ೩ ಪದ್ಯ)

ತಾತ್ಪರ್ಯ:
ಭೀಷ್ಮರ ಮಾತು ಕೇಳಿ ದುರ್ಯೋಧನನು, ನಾನು ಏನೂ ಹೇಳುವುದಿಲ್ಲ, ವೀರರು ಹೇಳಿದ್ದೇ ಮಾಡಿದ್ದೇ ಸರಿ, ಅವರು ಓಡಿ ಹೋಗುವುದೇ ಹೆಚ್ಚಿನ ಧರ್ಮ, ಈ ಲೋಕದಲ್ಲಿ ಅರ್ಜುನನೇ ಮಹಾವೀರ, ಯುದ್ಧಕ್ಕೆ ಆರಂಭಾವಿಗಿ ಹತ್ತು ದಿನಗಳಾಗಿವೆ, ಈಗ ನಡುಹೊಳೆಯಲ್ಲಿ ದೋಣಿಯ ಮೂಲೆ ಕೊರೆದರೆ, ನಮ್ಮ ಪುಣ್ಯ ಬಿಟ್ಟು ಹೋಗುವ ಕಾಲ ಎಂದುಕೊಳ್ಳಬೇಕಾಗಿದೆ, ನಾವು ಪುಣ್ಯಹೀನರು ಎಂದು ದುರ್ಯೋಧನನು ನಿಟ್ಟುಸಿರು ಬಿಟ್ಟನು.

ಅರ್ಥ:
ನುಡಿ: ಮಾತು; ಸಮರ್ಥ: ಬಲಶಾಲಿ, ಗಟ್ಟಿಗ; ಕಡು: ವಿಶೇಷ, ಅಧಿಕ; ನಿಧಾನ: ನಿಶ್ಚಯ, ಸಾವಕಾಶ; ಸುಭಟ: ಶೂರ; ಓಟ: ಧಾವಿಸು; ಕಡೆ: ಕೊನೆ; ಪರವಹ: ಶ್ರೇಷ್ಠವಾದ; ಧರ್ಮ: ಧಾರಣೆ ಮಾಡಿದುದು; ಜಗ: ಪ್ರಪಂಚ; ಅಗ್ಗ: ಶ್ರೇಷ್ಠ; ನಡುಹೊಳೆ: ಹೊಳೆಯ ಮಧ್ಯದಲ್ಲಿ; ಹೊಳೆ: ಸರೋವರ, ಸರಸಿ; ಹರಿಗೋಲು: ನಾವೆ, ದೋಣಿ; ಮೂಲೆ: ಕೊನೆ; ಕಡಿ: ಸೀಳು; ಪುಣ್ಯ: ಸದಾಚಾರ; ಬಿಡುಗಡೆ: ತೊರೆ; ಕಾಲ: ಸಮಯ; ಅರಸ: ರಾಜ; ಬಿಸುಸುಯ್: ನಿಟ್ಟುಸಿರು ಬಿಡು;

ಪದವಿಂಗಡಣೆ:
ನುಡಿಯೆವಾವು +ಸಮರ್ಥರ್+ಎಂದುದೆ
ಕಡು +ನಿಧಾನವು +ಸುಭಟರ್+ಓಟವೆ
ಕಡೆಗೆ +ಪರವಹ+ ಧರ್ಮ +ಪಾರ್ಥನು +ಜಗದೊಳ್+ಅಗ್ಗಳನು
ನಡುಹೊಳೆಯ +ಹರಿಗೋಲ+ ಮೂಲೆಯ
ಕಡಿದಿರಾದರೆ+ ನಮ್ಮ +ಪುಣ್ಯದ
ಬಿಡುಗಡೆಯ+ ಕಾಲವು +ಶಿವಾ+ ಎಂದ್+ಅರಸ+ ಬಿಸುಸುಯಿದ

ಅಚ್ಚರಿ:
(೧) ರೂಪಕದ ಪ್ರಯೋಗ – ನಡುಹೊಳೆಯ ಹರಿಗೋಲ ಮೂಲೆಯ ಕಡಿದಿರಾದರೆ ನಮ್ಮ ಪುಣ್ಯದ
ಬಿಡುಗಡೆಯ ಕಾಲವು

ಪದ್ಯ ೪೦: ಯಾವ ಆಯುಧಗಳನ್ನು ಉತ್ತರನು ಅರ್ಜುನನಿಗೆ ನೀಡಿದನು?

ಗಿರಿಯನೆತ್ತಲುಬಹುದು ಬಿಲುಗಳ
ತೆರಳಿಚುವೊಡಾರೆನು ಬೃಹನ್ನಳೆ
ಧರಿಸಲಾಪೈ ನೀ ಸಮರ್ಥನು ನಿನಗೆ ಶರಣೆನುತ
ಸರಳ ಹೊದೆಗಳ ದೇವ ದತ್ತವ
ಪರಶು ತೋಮರ ಕುಂತವಸಿ ಮು
ದ್ಗರ ಗದಾ ದಂಡಾದಿ ಶಸ್ತ್ರವ ತೆಗೆದು ನೀಡಿದನು (ವಿರಾಟ ಪರ್ವ, ೭ ಸಂಧಿ, ೪೦ ಪದ್ಯ)

ತಾತ್ಪರ್ಯ:
ಉತ್ತರನು ಬೆಟ್ತವನ್ನೆತ್ತಬಹುದು, ಈ ಬಿಲ್ಲುಗಳನ್ನು ಮಿಸುಕಿಸುವುದು ಅಸಾಧ್ಯ. ಹೀಗಿರಲು, ಬೃಹನ್ನಳೆ ನೀನು ಅನಾಯಾಸವಾಗಿ ಅವನನ್ನು ತೆಗೆದುಕೊಂಡೆ, ನೀನು ಸಮರ್ಥ ಎಂದು ಬಾಣಗಳು ದೇವದತ್ತ ಶಂಖ, ಗಂಡುಗೊಡಲಿ, ಕತ್ತಿ, ಕುಂತ, ಮುದ್ಗರ, ಗದೆ ಮುಂತಾದ ಆಯುಧಗಳನ್ನು ಅರ್ಜುನನಿಗೆ ನೀಡಿದನು.

ಅರ್ಥ:
ಗಿರಿ: ಬೆಟ್ಟ; ಬಿಲು: ಬಿಲ್ಲು, ಚಾಪ; ತೆರಳು: ಹಿಂಜರಿ, ಮುರುಟು; ಧರಿಸು: ಹೊರು; ಸಮರ್ಥ: ಬಲಶಾಲಿ, ಗಟ್ಟಿಗ; ಶರಣು: ನಮಸ್ಕಾರ; ಸರಳ: ಬಣ; ಹೊದೆ: ಬಾಣಗಳನ್ನಿಡುವ ಕೋಶ, ಬತ್ತಳಿಕೆ; ದತ್ತ: ಲಭ್ಯ, ಕೊಡಲ್ಪಟ್ಟ; ಪರಶು: ಕೊಡಲಿ, ಕುಠಾರ; ತೋಮರ: ಈಟಿಯಂತಿರುವ ಆಯುಧ; ಕುಂತ: ಈಟಿ, ಭರ್ಜಿ; ಮುದ್ಗರ: ಗದೆ; ದಂಡ:ಕೋಲು, ದಡಿ; ಶಸ್ತ್ರ: ಆಯುಧ; ತೆಗೆ: ಹೊರತರು; ಅಸಿ: ಕತ್ತಿ;

ಪದವಿಂಗಡಣೆ:
ಗಿರಿಯನ್+ಎತ್ತಲುಬಹುದು +ಬಿಲುಗಳ
ತೆರಳಿಚುವೊಡಾರೆನು+ ಬೃಹನ್ನಳೆ
ಧರಿಸಲಾಪೈ+ ನೀ +ಸಮರ್ಥನು +ನಿನಗೆ +ಶರಣೆನುತ
ಸರಳ +ಹೊದೆಗಳ +ದೇವದತ್ತವ
ಪರಶು +ತೋಮರ +ಕುಂತವ್+ಅಸಿ+ ಮು
ದ್ಗರ +ಗದಾ +ದಂಡ+ ಆದಿ+ ಶಸ್ತ್ರವ +ತೆಗೆದು +ನೀಡಿದನು

ಅಚ್ಚರಿ:
(೧) ಆಯುಧಗಳ ಹೆಸರು – ಸರಳ, ಪರಶು, ತೋಮರ, ಕುಂತ, ಅಸಿ, ಮುದ್ಗರ, ಗದಾ, ದಂಡ

ಪದ್ಯ ೩೭: ಕೀಚಕನು ದ್ರೌಪದಿಯನ್ನು ಏನೆಂದು ಬೇಡಿದನು?

ತೋಳ ತೆಕ್ಕೆಯ ತೊಡಿಸಿ ಕಾಮನ
ಕೋಲ ತಪ್ಪಿಸು ಖಳನ ಕಗ್ಗೊಲೆ
ಯೂಳಿಗವ ಕೇಳ್ದುಸುರದಿಹರೆ ಸಮರ್ಥರಾದವರು
ಸೋಲಿಸಿದ ಗೆಲುವಿಂದ ಬಲುಮಾ
ತಾಳಿಯಿವನೆನ್ನದಿರು ಹರಣದ
ಮೇಲೆ ಸರಸವೆ ಕಾಯಬೇಹುದು ಕಾಂತೆ ಕೇಳೆಂದ (ವಿರಾಟ ಪರ್ವ, ೨ ಸಂಧಿ, ೩೭ ಪದ್ಯ)

ತಾತ್ಪರ್ಯ:
ಸೈರಂಧ್ರಿ, ನಿನ್ನ ತೋಳಿನ ತೆಕ್ಕೆಯಲ್ಲಿ ನನ್ನನ್ನು ಮುಚ್ಚಿ ಕಾಮಬಾಣಗಳು ತಾಗುವುದನ್ನು ತಪ್ಪಿಸು, ಆ ನೀಚನು ನನ್ನನ್ನು ಕೊಲ್ಲಲು ಬಂದಿರುವುದನ್ನು ಕೇಳಿಯೂ, ಕೊಲೆಯನ್ನು ತಪ್ಪಿಸಲು ಸಮರ್ಥಳಾದ ನೀನು ಸುಮ್ಮನಿರುವುದೇ? ನನ್ನನ್ನು ಸೋಲಿಸಿದೆನೆಂಬ ಬಿಂಕದಿಂದ ಇವನ ಮಾತು ಬಹಳವಾಯಿತೆನ್ನಬೇಡ, ನನ್ನ ಪ್ರಾಣದ ಪ್ರಶ್ನೆಯಿದು, ತರುಣಿ, ನನ್ನನ್ನು ಕಾಪಾಡು ಎಂದು ಕೀಚಕನು ಬೇಡಿದನು.

ಅರ್ಥ:
ತೋಳು: ಬಾಹು; ತೆಕ್ಕೆ: ಅಪ್ಪುಗೆ, ಆಲಿಂಗನ; ತೊಡಿಸು: ಧರಿಸು; ಕಾಮ: ಮನ್ಮಥ; ಕೋಲ: ಬಾಣ; ತಪ್ಪಿಸು: ದೂರಮಾಡು; ಖಳ: ದುಷ್ಟ; ಕಗ್ಗೊಲೆ: ಸಾವು; ಊಳಿಗ: ಕೆಲಸ, ಕಾರ್ಯ; ಕೇಳು: ಆಲಿಸು; ಉಸುರು: ಹೇಳು, ಪ್ರಾಣ; ಸಮರ್ಥ: ಬಲಶಾಲಿ, ಗಟ್ಟಿಗ; ಸೋಲಿಸು: ಪರಾಭವಗೊಳಿಸು; ಗೆಲುವು: ಜಯ; ಬಲು: ಹೆಚ್ಚು; ಮಾತಾಳಿ: ಬಾಯಿಬಡುಕ; ಹರಣ: ಜೀವ, ಪ್ರಾಣ; ಸರಸ: ಚೆಲ್ಲಾಟ; ಕಾಯು: ರಕ್ಷಿಸು; ಕಾಂತೆ: ಚೆಲುವೆ; ಕೇಳು: ಆಲಿಸು;

ಪದವಿಂಗಡಣೆ:
ತೋಳ +ತೆಕ್ಕೆಯ +ತೊಡಿಸಿ+ ಕಾಮನ
ಕೋಲ +ತಪ್ಪಿಸು +ಖಳನ+ ಕಗ್ಗೊಲೆ
ಯೂಳಿಗವ+ ಕೇಳ್ದ್+ಉಸುರದಿಹರೆ+ ಸಮರ್ಥರಾದವರು
ಸೋಲಿಸಿದ+ ಗೆಲುವಿಂದ +ಬಲು+ಮಾ
ತಾಳಿ+ಇವನೆನ್ನದಿರು +ಹರಣದ
ಮೇಲೆ +ಸರಸವೆ+ ಕಾಯಬೇಹುದು+ ಕಾಂತೆ +ಕೇಳೆಂದ

ಅಚ್ಚರಿ:
(೧) ತ ಕಾರದ ಪದಗಳು – ತೋಳ ತೆಕ್ಕೆಯ ತೊಡಿಸಿ ಕಾಮನ ಕೋಲ ತಪ್ಪಿಸು

ಪದ್ಯ ೧೭: ಅರ್ಜುನನು ಎಲ್ಲಿ ತಪಸ್ಸು ಮಾಡಲು ಹೇಳಿದರು?

ಪಾರ್ಥನೈದುವುದಿಂದ್ರಕೀಲದೊ
ಳರ್ಥಿಸಲಿ ಶಂಕರನನಖಿಳ
ಸ್ವಾರ್ಥಸಿದ್ಧಿಗೆ ಬೀಜವಿದು ಬೇರೊಂದ ಬಯಸದಿರು
ವ್ಯರ್ಥರವದಿರು ನಿನ್ನ ಹಗೆಯ ಕ
ದರ್ಥನದೊಳಿನ್ನೇನು ಜಗಕೆ
ಸಮರ್ಥನೊಬ್ಬನೆ ಶಂಭು ಕೃಪೆ ಮಾಡುವನು ನಿನಗೆಂದ (ಅರಣ್ಯ ಪರ್ವ, ೫ ಸಂಧಿ, ೧೭ ಪದ್ಯ)

ತಾತ್ಪರ್ಯ:
ಯುಧಿಷ್ಠಿರ, ಅರ್ಜುನನು ಇಂದ್ರಕೀಲ ಪರ್ವತಕ್ಕೆ ಹೋಗಿ ಶಿವನನ್ನು ಬೇಡಿಕೊಳ್ಳಲಿ, ನಿನ್ನ ಎಲ್ಲಾ ಬಯಕೆಗಳು ತೀರುವುದಕ್ಕೆ ಇದೇ ಮೂಲ ಮಂತ್ರ. ಬೇರೊಂದನ್ನು ಬಯಸಬೇಡ. ಕೌರವರು ವ್ಯರ್ಥವಾಗಿ ಬಾಳುವವರು, ಇನ್ನು ಹೇಚ್ಚೇನೂ ಹೇಳಬೇಕಾದುದಿಲ್ಲ. ಜಗತ್ತಿನಲ್ಲಿ ಶಿವನೊಬ್ಬನೇ ಸಮರ್ಥ, ಅವನು ನಿನಗೆ ಕೃಪೆ ಮಾಡುತ್ತಾನೆ ಎಂದು ವ್ಯಾಸರು ಹೇಳಿದರು.

ಅರ್ಥ:
ಐದು: ಹೋಗಿಸೇರು; ಅರ್ಥಿ: ಬೇಡುವವನು; ಶಂಕರ: ಶಿವ; ಅಖಿಳ: ಎಲ್ಲಾ; ಸ್ವಾರ್ಥ: ತನ್ನ ಪ್ರಯೋಜನ, ಸ್ವಹಿತ; ಸಿದ್ಧಿ: ಸಾಧನೆ, ಗುರಿಮುಟ್ಟುವಿಕೆ; ಬೀಜ: ಕಾರಣ, ಹೇತು; ಬೇರೆ: ಅನ್ಯ; ಬಯಸು: ಇಚ್ಛಿಸು; ವ್ಯರ್ಥ: ಪ್ರಯೋಜನವಿಲ್ಲದ; ಅವದಿರು: ಅವರು; ಹಗೆ: ವೈರಿ; ಕದರ್ಥ: ನಿಷ್ಪ್ರಯೋಜಕ; ಜಗ: ಜಗತ್ತು, ಪ್ರಪಂಚ; ಸಮರ್ಥ: ಬಲಶಾಲಿ; ಶಂಭು: ಶಿವ; ಕೃಪೆ: ದಯೆ;

ಪದವಿಂಗಡಣೆ:
ಪಾರ್ಥನ್+ಐದುವುದ್+ಇಂದ್ರಕೀಲದೊಳ್
ಅರ್ಥಿಸಲಿ +ಶಂಕರನನ್+ಅಖಿಳ
ಸ್ವಾರ್ಥಸಿದ್ಧಿಗೆ+ ಬೀಜವಿದು+ ಬೇರೊಂದ +ಬಯಸದಿರು
ವ್ಯರ್ಥರ್+ಅವದಿರು+ ನಿನ್ನ +ಹಗೆಯ +ಕ
ದರ್ಥನದೊಳ್+ಇನ್ನೇನು +ಜಗಕೆ
ಸಮರ್ಥನೊಬ್ಬನೆ+ ಶಂಭು +ಕೃಪೆ +ಮಾಡುವನು +ನಿನಗೆಂದ

ಅಚ್ಚರಿ:
(೧) ಶಿವನ ಮಹಿಮೆ – ಜಗಕೆ ಸಮರ್ಥನೊಬ್ಬನೆ ಶಂಭು
(೨) ಪಾರ್ಥ, ಸ್ವಾರ್ಥ, ಕದರ್ಥ, ಸಮರ್ಥ, ವ್ಯರ್ಥ – ಪ್ರಾಸ ಪದಗಳು

ಪದ್ಯ ೧೩: ಶಿಶುಪಾಲನು ಕೃಷ್ಣನನ್ನು ಹೇಗೆ ಹೀಯಾಳಿಸಿದನು?

ಇವನು ಗಡ ಚಿಕ್ಕಂದು ಮೊಲೆಗೂ
ಟ್ಟವಳ ಹಿಂಡಿದ ಗಂಡ ಬಂಡಿಯ
ಜವಳಿಗಾಲಲಿ ಮುರಿದನೈ ಮಾಮಾ ಸಮರ್ಥನಲೆ
ಸವಡಿ ಮರ ನೆಗ್ಗಿದವು ಗಡ ಮೈ
ಯವುಚಿದರೆ ಬಲುಗತ್ತೆ ಗೂಳಿಯ
ನಿವ ವಿಭಾಡಿಸಿದನೆ ಮಹಾದ್ಭುತವೆಂದನಾ ಚೈದ್ಯ (ಸಭಾ ಪರ್ವ, ೧೧ ಸಂಧಿ, ೧೩ ಪದ್ಯ)

ತಾತ್ಪರ್ಯ:
ಶಿಶುಪಾಲನು ಭೀಷ್ಮರನ್ನು ಜರೆದ ನಂತರ ಕೃಷ್ಣನನ್ನು ಹಂಗಿಸಲು ಶುರುಮಾಡಿದ, ಇವನಲ್ಲವೇ ಮಗುವಾಗಿದ್ದಾಗ ಹಾಲುಣಿಸಲು ಬಂದವಳನ್ನು ಕೊಂದವನು? ಆಹಾ ಎಂಥ ಗಂಡಸಿವನು! ಬಂಡಿಯನು ಎರಡು ಕಾಲಿಂದ ಮುರಿದ ಬಲು ಸಮರ್ಥನೋ? ಇವನು ನಡುವೆ ಹೋದರೆ ಜೋಡಿಮರಗಳು ಮುರಿದವೋ? ಕತ್ತೆ ಗೂಳಿಗಳನ್ನು ಇವನು ಕೊಂದನೋ, ಆಹಾ ಎಂತಹ ಅದ್ಭುತ ಎಂದು ಕೃಷ್ಣನನ್ನು ಹಂಗಿಸಿದನು.

ಅರ್ಥ:
ಗಡ: ಅಲ್ಲವೆ; ಚಿಕ್ಕ: ಮರಿ, ಕೂಸು; ಮೊಲೆ: ಸ್ತನ; ಮೊಲೆಗೂಟ್ಟ: ಹಾಲನ್ನು ನೀಡಿದ; ಹಿಂಡು: ಹಿಸುಕು; ಗಂಡ: ಪರಾಕ್ರಮಿ; ಬಂಡಿ: ರಥ; ಜವಳಿ: ಜೋಡಿ, ಜೊತೆ; ಗಾಲಿ: ಚಕ್ರ; ಮುರಿ: ಸೀಳು; ಮಾಮಾ: ಆಹಾ!; ಸಮರ್ಥ: ಬಲಶಾಲಿ, ಗಟ್ಟಿಗ; ಸವಡಿ: ಜೊತೆ, ಜೋಡಿ; ಮರ: ತರು; ನೆಗ್ಗು: ಕುಗ್ಗು, ಕುಸಿ; ಮೈ: ತನು; ಅವುಚು: ಹಿಚುಕು; ಬಲು: ಬಹಳ; ಕತ್ತೆ: ಗಾರ್ಧಭ; ರಾಸಭ; ಗೂಳಿ: ಹೋರಿ; ವಿಭಾಡ: ನಾಶಮಾಡು, ಸೋಲಿಸು; ಅದ್ಭುತ: ಆಶ್ಚರ್ಯ; ಮಹಾ: ದೊಡ್ಡ; ಚೈದ್ಯ: ಶಿಶುಪಾಲ;

ಪದವಿಂಗಡಣೆ:
ಇವನು+ ಗಡ +ಚಿಕ್ಕಂದು +ಮೊಲೆಗೂ
ಟ್ಟವಳ+ ಹಿಂಡಿದ+ ಗಂಡ +ಬಂಡಿಯ
ಜವಳಿಗಾಲಲಿ +ಮುರಿದನೈ +ಮಾಮಾ +ಸಮರ್ಥನಲೆ
ಸವಡಿ+ ಮರ +ನೆಗ್ಗಿದವು +ಗಡ +ಮೈ
ಯವುಚಿದರೆ+ ಬಲು+ಕತ್ತೆ+ ಗೂಳಿಯನ್
ಇವ +ವಿಭಾಡಿಸಿದನೆ+ ಮಹಾದ್ಭುತವ್+ಎಂದನಾ +ಚೈದ್ಯ

ಅಚ್ಚರಿ:
(೧) ಮಾಮಾ, ಗಡ, ಗಂಡ – ಕೃಷ್ಣನನ್ನು ಹಂಗಿಸುವ ಪದಗಳ ಬಳಕೆ

ಪದ್ಯ ೪೬: ದುರ್ಯೋಧನನು ಏಕೆ ಹೊಗಳುವುದು ಬೇಡವೆಂದು ಕೃಷ್ಣನು ಹೇಳಿದನು?

ತುರುಗಳನು ಹಿಡಿದುಯ್ಯಲಾಕ್ಷಣ
ವರಸಿಬಂದನು ಒಂದು ರಥದೊಳು
ತುರುವ ಮರಳಿಚಿ ತರುಬಿ ನಿನ್ನುಮನೀ ಸಮರ್ಥರನು
ಮುರಿದು ಕೆಡಹಿದನೊಂದು ಬಾಣದೆ
ಕೊರೆದು ಕೊಂದನು ನಿನ್ನ ಬಲವನು
ಬರಿಯ ಹೆಮ್ಮೆಯ ಕೆದರುವರೆ ನಮ್ಮೊಡನೆ ಹೇಳೆಂದ (ಉದ್ಯೋಗ ಪರ್ವ, ೯ ಸಂಧಿ, ೪೬ ಪದ್ಯ)

ತಾತ್ಪರ್ಯ:
ಪಾಂಡವರನ್ನು ಸೆರೆಹಿಡಿಯಲು ಈ ಹಿಂದೆ ವಿರಾಟ ರಾಜನ ಗೋವುಗಳನ್ನು ಹಿಡಿದುಕೊಂಡು ಹೋದಾಗ ಆ ಕ್ಷಣದಲ್ಲೇ ಅರ್ಜುನನೊಬ್ಬನೇ ಒಂದೇ ರಥದಲ್ಲಿ ಬಂದು ತುರುಗಳನ್ನು ಬಿಡಿಸಿದನು. ನಿನ್ನನ್ನು ನಿನ್ನ ಸೈನ್ಯದಲ್ಲಿರುವ ಎಲ್ಲಾ ವೀರರನ್ನು ಒಂದೇ ಬಾಣದಿಂದ ಉರುಳಿಸಿದನು. ನನ್ನೆದುರಿಗೆ ನೀನು ಹೊಗಳಿಕೊಳ್ಳಬೇಡ ಎಂದು ಕೃಷ್ಣನು ದುರ್ಯೋಧನನಿಗೆ ಹೇಳಿದನು.

ಅರ್ಥ:
ತುರು: ಗೋವು; ಹಿಡಿ: ಬಂಧಿಸು; ಆಕ್ಷಣ: ತಕ್ಷಣ; ಬಂದು: ಆಗಮಿಸು; ಅರಸು: ಹುಡುಕು; ರಥ: ಬಂಡಿ; ಮರಳು: ಹಿಂತಿರುಗು; ತರುಬು: ತಡೆ, ನಿಲ್ಲಿಸು; ಸಮರ್ಥ: ಬಲಶಾಲಿ; ಮುರಿ: ಸೋಲಿಸು, ಸೀಳು; ಕೆಡಹು: ಕೆಳಕ್ಕೆ ತಳ್ಳು; ಬಾಣ; ಅಂಬು; ಕೊರೆ:ಸೀಳು; ಕೋಂದು: ಸಾಯಿಸು; ಬಲ: ಸೈನ್ಯ; ಬರಿ: ಕೇವಲ; ಹೆಮ್ಮೆ: ಹೊಗಳಿಕೆ; ಕೆದರು:ಹರಡು; ಹೇಳು: ತಿಳಿಸು;

ಪದವಿಂಗಡಣೆ:
ತುರುಗಳನು +ಹಿಡಿದುಯ್ಯಲ್+ಆ+ಕ್ಷಣವ್
ಅರಸಿ+ಬಂದನು +ಒಂದು +ರಥದೊಳು
ತುರುವ +ಮರಳಿಚಿ+ ತರುಬಿ +ನಿನ್ನುಮನೀ +ಸಮರ್ಥರನು
ಮುರಿದು +ಕೆಡಹಿದನ್+ಒಂದು +ಬಾಣದೆ
ಕೊರೆದು +ಕೊಂದನು +ನಿನ್ನ +ಬಲವನು
ಬರಿಯ +ಹೆಮ್ಮೆಯ +ಕೆದರುವರೆ+ ನಮ್ಮೊಡನೆ +ಹೇಳೆಂದ

ಅಚ್ಚರಿ:
(೧) ಒಂದೇ ಅಕ್ಷರದ ಜೋಡಿ ಪದಗಳ ಬಳಕೆ – ಕೊರೆದು ಕೊಂದನು; ಬಲವನು ಬರಿಯ

ಪದ್ಯ ೬೪: ಯಾರು ಬ್ರಾಹ್ಮಣರಲ್ಲಿ ಸಮರ್ಥರು?

ಮಾಡುತಿಹ ಯಜ್ಞವನು ಪರರಿಗೆ
ಮಾಡಿಸುವ ವೇದಾಧ್ಯಯನವನು
ಮಾಡುತಿಹ ತದ್ವಿಷಯದಲಿ ಯೋಗ್ಯರನು ಮಾಡಿಸುವ
ಮಾಡುತಿಹ ದಾನವನು ಲೋಗರು
ನೀಡುತಿರಲೊಳಕೊಂಬ ಗುಣವನು
ಕೂಡಿಕೊಂಡಿಹನೇ ಸಮರ್ಥನು ವಿಪ್ರರೊಳಗೆಂದ (ಉದ್ಯೋಗ ಪರ್ವ, ೪ ಸಂಧಿ, ೬೪ ಪದ್ಯ)

ತಾತ್ಪರ್ಯ:
ಯಾವ ಬ್ರಾಹ್ಮಣನು ಯಜ್ಞವನು ಮಾಡುವನೋ, ತನ್ನ ಶಿಷ್ಯರಿಗೆ ಮಾಡುವ ವೇದಾಧ್ಯಯನದಿಂದ ಯೋಗ್ಯರಾದ ಶಿಷ್ಯರನ್ನು ತಯಾರಿಸಿ ಕಾಪಾಡುವನೋ, ದಾನ ನಿರತನೋ, ಇತರರು ಕೊಟ್ಟ ದಾನವನ್ನು ಸ್ವೀಕರಿಸಬಲ್ಲನೋ ಅಂತಹವನು ಬ್ರಾಹ್ಮಣರಲ್ಲಿ ಸಮರ್ಥನಾದವನು ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಮಾಡು: ನಿರ್ವಹಿಸು, ರಚಿಸು, ತಯಾರಿಸು; ಯಜ್ಞ: ಅರ್ಧ್ವ; ಪರರು: ಇತರರು; ವೇದ: ಶೃತಿ; ಅಧ್ಯಯನ: ಓದು, ಕಲಿ; ವಿಷಯ: ವಿಚಾರ, ಸಂಗತಿ; ಯೋಗ್ಯ: ಸಮರ್ಥ; ದಾನ: ಪರರಿಗೆ ಕೊಡುವ ವಸ್ತು; ಲೋಗರು: ಜನರು; ನೀಡು: ಕೊಡು; ಒಳಕೊಂಬ: ತೆಗೆದುಕೊಳ್ಳು; ಗುಣ: ನಡತೆ, ಸ್ವಭಾವ; ಕೂಡಿಕೊಂಡಿಹ: ಹೊಂದಿಸಿಕೊಂಡಿರುವ; ಸಮರ್ಥ: ಯೋಗ್ಯವಾದ, ತಕ್ಕ; ವಿಪ್ರ: ಬ್ರಾಹ್ಮಣ;

ಪದವಿಂಗಡಣೆ:
ಮಾಡುತಿಹ +ಯಜ್ಞವನು +ಪರರಿಗೆ
ಮಾಡಿಸುವ +ವೇದ+ಅಧ್ಯಯನವನು
ಮಾಡುತಿಹ +ತದ್ವಿಷಯದಲಿ +ಯೋಗ್ಯರನು +ಮಾಡಿಸುವ
ಮಾಡುತಿಹ+ ದಾನವನು +ಲೋಗರು
ನೀಡುತಿರಲ್+ಒಳಕೊಂಬ +ಗುಣವನು
ಕೂಡಿಕೊಂಡಿಹನೇ +ಸಮರ್ಥನು +ವಿಪ್ರರೊಳಗೆಂದ

ಅಚ್ಚರಿ:
(೧) ಮಾಡುತಿಹ – ೧, ೩, ೪ ಸಾಲಿನ ಮೊದಲ ಪದ
(೨) ಯೋಗ್ಯ, ಸಮರ್ಥ – ಸಮಾನಾರ್ಥಕ ಪದ