ಪದ್ಯ ೨೩: ದ್ರೌಪದಿಯು ಕೃಷ್ಣನನ್ನು ಹೇಗೆ ಭಜಿಸಿದಳು?

ಮುಗುದೆ ಮಿಗೆ ನಿಂದಿರ್ದು ಸಮಪದ
ಯುಗಳದಲಿ ಸೂರ್ಯನ ನಿರೀಕ್ಷಿಸಿ
ಮಗುಳೆವೆಯ ನೆರೆಮುಚ್ಚಿ ನಾಸಿಕದಗ್ರದಲಿ ನಿಲಿಸಿ
ನೆಗಹಿ ಪುಳಕಾಂಬುಗಳು ಮೈಯಲಿ
ಬಿಗಿದುವೊನಲಾಗಿರಲು ಹಿಮ್ಮಡಿ
ಗೊಗುವ ಕೇಶದ ಬಾಲೆ ಭಾವಿಸಿ ನೆನೆದಳುಚ್ಯುತನ (ಅರಣ್ಯ ಪರ್ವ, ೧೭ ಸಂಧಿ, ೨೩ ಪದ್ಯ)

ತಾತ್ಪರ್ಯ:
ದ್ರೌಪದಿಯು ಪಾದಗಳನ್ನು ಸಮವಾಗಿ ನಿಲ್ಲಿಸಿ, ಕಣ್ಣಿನ ರೆಪ್ಪೆಯನ್ನು ಸ್ವಲ್ಪ ಮುಚ್ಚಿ, ಸೂರ್ಯನನ್ನು ನೋಡಿ, ದೃಷ್ಟಿಯನ್ನು ಭ್ರೂಮಧ್ಯದಲ್ಲಿ ಕೇಂದ್ರೀಕರಿಸಿ, ರೋಮಾಂಚನದ ಜಲವು ಹರಿಯುತ್ತಿರಲು, ಹಿಮ್ಮಡಿಯನ್ನು ಮುಟ್ಟುವ ಕೇಷರಾಶಿಯ ಅಬಲೆಯು ಶ್ರೀಕೃಷ್ಣನನ್ನು ಸ್ಮರಿಸಿದಳು.

ಅರ್ಥ:
ಮುಗುದೆ: ಕಪಟವರಿಯದವಳು; ಮಿಗೆ: ಮತ್ತು, ಅಧಿಕವಾಗಿ; ನಿಂದಿರ್ದು: ನಿಲ್ಲು; ಸಮ: ಸಮನಾಗಿ; ಪದ: ಪಾದ, ಚರಣ; ಯುಗಳ: ಎರಡು; ಸೂರ್ಯ: ರವಿ; ನಿರೀಕ್ಷಿಸಿ: ನೋಡಿ; ಮಗುಳೆ: ಮತ್ತೆ, ಪುನಃ; ನೆರೆ: ಪಕ್ಕ, ಪಾರ್ಶ್ವ; ನಾಸಿಕ: ಮೂಗು; ನೆಗಹು: ಮೇಲೆತ್ತು; ಪುಳಕ: ರೋಮಾಂಚನ; ಅಂಬು: ನೀರು; ಮೈ: ತನು; ಬಿಗಿ: ಕಟ್ತು; ಹಿಮ್ಮಡಿ: ಹಿಂದಿನ ಪಾದ; ಒಗು: ಚೆಲ್ಲು, ಸುರಿ; ಕೇಶ: ಕೂದಲು; ಬಾಲೆ: ಅಬಲೆ, ಹೆಣ್ಣು; ಭಾವಿಸು: ತಿಳಿ, ಗೊತ್ತುಪಡಿಸಿಕೊಳ್ಳು; ಅಚ್ಯುತ: ಚ್ಯುತಿಯಿಲ್ಲದ (ಕೃಷ್ಣ);

ಪದವಿಂಗಡಣೆ:
ಮುಗುದೆ +ಮಿಗೆ +ನಿಂದಿರ್ದು +ಸಮಪದ
ಯುಗಳದಲಿ +ಸೂರ್ಯನ +ನಿರೀಕ್ಷಿಸಿ
ಮಗುಳೆವೆಯ +ನೆರೆಮುಚ್ಚಿ +ನಾಸಿಕದ್+ಅಗ್ರದಲಿ +ನಿಲಿಸಿ
ನೆಗಹಿ +ಪುಳಕಾಂಬುಗಳು+ ಮೈಯಲಿ
ಬಿಗಿದುವೊನಲಾಗಿರಲು +ಹಿಮ್ಮಡಿ
ಗೊಗುವ +ಕೇಶದ +ಬಾಲೆ +ಭಾವಿಸಿ+ ನೆನೆದಳ್+ಅಚ್ಯುತನ

ಅಚ್ಚರಿ:
(೧) ದ್ರೌಪದಿಯ ಕೇಶವನ್ನು ವಿವರಿಸುವ ಪರಿ – ಹಿಮ್ಮಡಿಗೊಗುವ ಕೇಶದ ಬಾಲೆ