ಪದ್ಯ ೪೬: ಯುದ್ಧಕ್ಕೆ ಎಲ್ಲರೂ ಹೇಗೆ ಸಿದ್ಧರಾದರು?

ಹರಿಗೆ ಹರಿದವು ಮುಂದೆ ಬಿಲ್ಲಾ
ಳುರವಣಿಸಿದರು ಮೋಹರವ ಮಿ
ಕ್ಕುರುಬಿದರು ಸಬಳಿಗರು ಮುಂಚಿತು ರಣಕೆ ಖಡ್ಗಿಗಳು
ತುರಗ ಕವಿದವು ದಂತಿಘಟೆಗಳು
ತುರುಗಿದವು ರಥ ರಾಜಿ ಮುಂಗುಡಿ
ವರಿದುದವನೀಪತಿಯ ಚೂಣಿಯ ನೃಪರ ಜೋಕೆಯಲಿ (ದ್ರೋಣ ಪರ್ವ, ೧ ಸಂಧಿ, ೪೬ ಪದ್ಯ)

ತಾತ್ಪರ್ಯ:
ಗುರಾಣಿ ಹಿಡಿದ ಸೈನ್ಯ ಮುನ್ನುಗ್ಗಿತು. ಬಿಲ್ಲಾಳುಗಳು ವೇಗವಾಗಿ ಚಲಿಸಿದರು. ಇವರನ್ನು ಹಿಂದಿಟ್ಟು ಸಬಳಿಗರು ಮುಂದಾದರು. ಕತ್ತಿ ಹಿಡಿದವರು ಅವರನ್ನು ಹಿಂದಿಟ್ಟು ನಡೆದರು. ಆನೆ ಕುದುರೆ ರಥಗಳ ಮುಂಚೂಣಿ ದೊರೆಯ ನಿರ್ದೇಶನದಂತೆ ಯುದ್ಧರಂಗಕ್ಕೆ ಬಂದವು.

ಅರ್ಥ:
ಹರಿ: ದಾಳಿ ಮಾಡು, ಮುತ್ತಿಗೆ ಹಾಕು; ಮುಂದೆ: ಎದುರು, ಮುಂಚೂಣೀ; ಬಿಲ್ಲಾಳು: ಬಿಲ್ಲುಗಾರರು; ಉರವಣೆ: ರಭಸ; ಮೋಹರ: ಯುದ್ಧ, ಸೈನ್ಯ; ಮಿಕ್ಕು: ಉಳಿದ; ಉರುಬು: ಅತಿಶಯವಾದ ವೇಗ; ಸಬಳ: ಈಟಿ, ಭರ್ಜಿ; ರಣ: ಯುದ್ಧಭೂಮಿ; ಖಡ್ಗಿ: ಕತ್ತಿಯನ್ನು ಹಿಡಿದವ; ತುರಗ: ಕುದುರೆ; ಕವಿ: ಆವರಿಸು; ದಂತಿಘಟೆ: ಆನೆಯ ಗುಂಪು; ತುರುಗು: ಸಂದಣಿಸು; ರಥ: ಬಂಡಿ; ರಾಜಿ: ಪಂಕ್ತಿ, ಗುಂಪು; ಮುಂಗುಡಿ: ಮುಂದೆ; ಅವನೀಪತಿ: ರಾಜ; ಚೂಣಿ: ಮೊದಲು; ನೃಪ: ರಾಜ; ಜೋಕೆ: ಎಚ್ಚರಿಕೆ;

ಪದವಿಂಗಡಣೆ:
ಹರಿಗೆ +ಹರಿದವು +ಮುಂದೆ +ಬಿಲ್ಲಾಳ್
ಉರವಣಿಸಿದರು +ಮೋಹರವ+ ಮಿಕ್ಕ್
ಉರುಬಿದರು +ಸಬಳಿಗರು +ಮುಂಚಿತು +ರಣಕೆ +ಖಡ್ಗಿಗಳು
ತುರಗ +ಕವಿದವು +ದಂತಿಘಟೆಗಳು
ತುರುಗಿದವು +ರಥ +ರಾಜಿ +ಮುಂಗುಡಿ
ವರಿದುದ್+ಅವನೀಪತಿಯ +ಚೂಣಿಯ +ನೃಪರ +ಜೋಕೆಯಲಿ

ಅಚ್ಚರಿ:
(೧) ಅವನೀಪತಿ, ನೃಪ – ಸಮಾನಾರ್ಥಕ ಪದ
(೨) ಆನೆ ಕುದುರೆಗಳು ಸಜ್ಜಾದ ಪರಿ – ತುರಗ ಕವಿದವು ದಂತಿಘಟೆಗಳು
ತುರುಗಿದವು

ಪದ್ಯ ೨೨: ಕೌರವ ಸೈನ್ಯವು ಭೀಮನನ್ನು ಹೇಗೆ ತಡೆದರು?

ಕವಿದವಾನೆಗಳಟ್ಟಿ ರಾವ್ತರು
ತಿವಿದರಂಬಿನ ಸರಿಯ ಸಾರದೊ
ಳವಘಡಿಸಿದರು ರಥಿಕರುರವಣಿಸಿದರು ಸಬಳಿಗರು
ಸವಗ ಖಂಡಿಸಲೊದಗಿದರು ಬಿ
ಲ್ಲವರು ಕಟ್ಟಿರಿಕಾರರಾತನ
ಜವಗೆಡಿಸಿದರು ಕಡಲುವಡಬನ ತಡೆದು ನಿಲುವಂತೆ (ಕರ್ಣ ಪರ್ವ, ೧೨ ಸಂಧಿ, ೨೨ ಪದ್ಯ)

ತಾತ್ಪರ್ಯ:
ಭೀಮನನ್ನು ತಡೆಯಲು ಕೌರವ ಸೇನೆಯು ಸಜ್ಜಾಯಿತು. ಆನೆಗಳು ಭೀಮನನ್ನು ಕವಿದವು, ರಾವುತರು ಮುನ್ನುಗ್ಗಿ ಅವನ ಮೇಲೆ ಬಾಣಗಳನ್ನು ಬಿಟ್ಟು ಅವನನ್ನು ಆಚೆ ಸರಿಸಲು ಯತ್ನಿಸಿದರು. ಸಬಳಿಗರು ಅವನನ್ನು ಇರಿದರು. ಬಿಲ್ಲುಗಾರರು ಬಾಣವನ್ನು ಜೋಡಿಸಿ ಬಿಟ್ಟು ಅವನ ವೇಗವನ್ನು ತಡೆದರು. ಸಮುದ್ರವು ಬಡಬಾಗ್ನಿಯನ್ನು ತಡೆದಂತಾಯಿತು.

ಅರ್ಥ:
ಕವಿದು: ಆವರಿಸು, ಮುಚ್ಚು; ಆನೆ: ಗಜ; ರಾವುತ: ಕುದುರೆ ಸವಾರ, ಅಶ್ವಾರೋಹಿ; ತಿವಿ: ಚುಚ್ಚು; ಅಂಬು: ಬಾಣ; ಸರಿ: ರಥಿಕ: ರಥದಲ್ಲಿ ಕುಳಿತು ಯುದ್ಧ ಮಾಡುವವನು, ರಥಿ; ಉರವಣಿಸು: ಆತುರಿಸು; ಸಬಳ: ಈಟಿ; ಸರಿ: ಸಮಾನ; ಸಾರ:ಬಳಿ; ಸವಗ: ಮೈಜೋಡು, ಕವಚ; ಖಂಡಿಸು:ಕಡಿ, ಕತ್ತರಿಸು; ಒದಗು: ಉಂಟಾಗು, ದೊರಕು; ಬಿಲ್ಲವ: ಬಿಲ್ಲನ್ನು ಹಿಡಿದವ; ಕಟ್ಟು: ಜೋಡಿಸು; ಇರಿ: ತಿವಿ, ಚುಚ್ಚು; ಜವ: ವೇಗ, ರಭಸ; ಕೆಡಿಸು: ಅಡ್ಡಿಮಾಡು; ಕಡಲು: ಸಾಗರ; ವಡಬನ: ಸಮುದ್ರದಲ್ಲಿರುವ ಬೆಂಕಿ; ತಡೆ: ಅಡ್ಡ; ನಿಲು: ನಿಲ್ಲಿಸು;

ಪದವಿಂಗಡಣೆ:
ಕವಿದವ್+ಆನೆಗಳ್+ಅಟ್ಟಿ +ರಾವ್ತರು
ತಿವಿದರ್+ಅಂಬಿನ +ಸರಿಯ +ಸಾರದೊಳ್
ಅವಘಡಿಸಿದರು +ರಥಿಕರ್+ಉರವಣಿಸಿದರು +ಸಬಳಿಗರು
ಸವಗ +ಖಂಡಿಸಲ್+ಒದಗಿದರು +ಬಿ
ಲ್ಲವರು+ ಕಟ್ಟ್+ಇರಿಕಾರರ್+ಆತನ
ಜವಗೆಡಿಸಿದರು +ಕಡಲು+ವಡಬನ +ತಡೆದು +ನಿಲುವಂತೆ

ಅಚ್ಚರಿ:
(೧) ರಾವ್ತರು, ರಥಿಕ, ಸಬಳಿ, ಬಿಲ್ಲವರು – ಭೀಮನನ್ನು ತಡೆದವರು