ಪದ್ಯ ೪೬: ಅರ್ಜುನನು ಯಾವುದನ್ನು ನೆನಪಿಸಲು ಹೇಳಿದನು?

ಅನಿಲಸುತ ಸಪ್ರಾಣಿಸಲಿ ರಿಪು
ಜನಪನೂರುವಿಭಂಗವೆ ಮು
ನ್ನಿನ ಪ್ರತಿಜ್ಞೆಯಲಾ ಸಭಾಮಧ್ಯದಲಿ ಕುರುಪತಿಯ
ನೆನಸಿಕೊಡಿ ಸಾಕಿನ್ನು ಬೇರೊಂ
ದನುನಯವು ತಾನೇನು ವಿಜಯಾಂ
ಗನೆಗೆ ದ್ರುಪದಕುಮಾರಿ ತಪ್ಪದೆ ಸವತಿಯಹಳೆಂದ (ಗದಾ ಪರ್ವ, ೭ ಸಂಧಿ, ೪೬ ಪದ್ಯ)

ತಾತ್ಪರ್ಯ:
ಅರ್ಜುನನು ನುಡಿಯುತ್ತಾ, ಭೀಮನು ಪ್ರಾಣ ಸಹಿತನಾಗಲಿ, ವೈರಿಯ ತೊಡೆಯನ್ನು ಮುರಿವೆನೆಂಬುದೇ ಪ್ರತಿಜ್ಞೆಯಲ್ಲವೇ? ಸಭೆಯ ನಡುವೆ ಭೀಮನು ಶಪಥಮಾಡಲಿಲ್ಲವೇ? ಅದನ್ನು ಭೀಮನಿಗೆ ನೆನಪಿಸಿರಿ. ದ್ರೌಪದಿಗೆ ವಿಜಯಲಕ್ಷ್ಮಿಯು ಸವತಿಯಾಗುತ್ತಾಳೆ ಎಂದನು.

ಅರ್ಥ:
ಅನಿಲಸುತ: ಭೀಮ; ಸಪ್ರಾಣಿ: ಪ್ರಾಣ ಸಹಿತ; ರಿಪು: ವೈರಿ; ಜನಪ: ರಾಜ; ನೂರು: ಶತ; ಭಂಗ: ಮುರಿಯುವಿಕೆ; ಮುನ್ನಿನ: ಮುಂಚೆ; ಪ್ರತಿಜ್ಞೆ: ಶಪಥ, ಪಣ; ಸಭೆ: ಪರಿಷತ್ತು, ಗೋಷ್ಠಿ; ಮಧ್ಯ: ನಡುವೆ; ನೆನಸು: ಜ್ಞಾಪಿಸಿಕೋ; ಸಾಕು: ತಡೆ; ಅನುನಯ: ನಯವಾದ ಮಾತುಗಳಿಂದ ಮನವೊಲಿಸುವುದು, ಪ್ರೀತಿ; ಕುಮಾರಿ: ಪುತ್ರಿ; ಸವತಿ: ತನ್ನ ಗಂಡನ ಇನ್ನೊ ಬ್ಬಳು ಹೆಂಡತಿ, ಸಪತ್ನಿ;

ಪದವಿಂಗಡಣೆ:
ಅನಿಲಸುತ +ಸಪ್ರಾಣಿಸಲಿ +ರಿಪು
ಜನಪನ್+ಊರು+ವಿಭಂಗವೆ +ಮು
ನ್ನಿನ +ಪ್ರತಿಜ್ಞೆಯಲಾ +ಸಭಾಮಧ್ಯದಲಿ+ ಕುರುಪತಿಯ
ನೆನಸಿಕೊಡಿ +ಸಾಕಿನ್ನು+ ಬೇರೊಂದ್
ಅನುನಯವು +ತಾನೇನು +ವಿಜಯಾಂ
ಗನೆಗೆ +ದ್ರುಪದಕುಮಾರಿ +ತಪ್ಪದೆ+ ಸವತಿಯಹಳೆಂದ

ಅಚ್ಚರಿ:
(೧) ಗೆಲ್ಲಲಿ ಎಂದು ಹೇಳುವ ಪರಿ – ವಿಜಯಾಂಗನೆಗೆ ದ್ರುಪದಕುಮಾರಿ ತಪ್ಪದೆ ಸವತಿಯಹಳೆಂದ

ಪದ್ಯ ೪೦: ಆನೆ ವೈದ್ಯರು ಏನು ಮಾಡಿದರು?

ಒಡಲಿನೊಳು ಮುರಿದಿದ್ದ ಸಬಳವ
ನುಡಿಯಲೀಯದೆ ಕೀಳ್ವ ಮದ್ದನು
ಗಿಡಿವ ಜೇವಣಿಗೆಯೊಳು ಸಪ್ರಾಣಿಸುವ ದುವ್ರರ್ಣವ
ತೊಡೆದು ಕಟ್ಟುವ ಹಸ್ತಿವೈದ್ಯರ
ಗಡಣವುಭಯದೊಳೆಸೆವವಂತ್ಯದ
ಕಡಲ ರಭಸಕೆ ತೊಡಕನಿಕ್ಕಿತು ಬಹಳ ಬಲಜಲಧಿ (ಭೀಷ್ಮ ಪರ್ವ, ೫ ಸಂಧಿ, ೪೦ ಪದ್ಯ)

ತಾತ್ಪರ್ಯ:
ಆನೆ ವೈದ್ಯರು ಆನೆಗಳ ದೇಹದಲ್ಲಿ ನಟ್ಟಿದ್ದ ಈಟಿಗಳು ಒಳಗೆ ಮುರಿಯದಂತೆ ಕೀಳುವ ಔಷಧಗಳನ್ನು ದೇಹದ ಕುಳಿಗಳಿಗೆ ಹಾಕುವ ತಕ್ಕ ಆಹಾರವನ್ನು ಕೊಟ್ಟು ಆನೆಗಳನ್ನುಳಿಸುವ, ಕೆಟ್ಟ ಗಾಯಗಳಿಗೆ ಔಷಧಿಯನ್ನು ಹಾಕಿ ಕಟ್ಟುವ ಕೆಲಸದಲ್ಲಿ ತೊಡಗಿದ್ದರು. ಆಗ ಉಂಟಾದ ಕೋಲಾಹಲವು ಸಮುದ್ರದ ಮೊರೆತದಂತಿತ್ತು.

ಅರ್ಥ:
ಒಡಲು: ದೇಹ; ಮುರಿ: ಸೀಳು; ಸಬಳ: ಈಟಿ, ಭರ್ಜಿ; ಉಡಿ: ಮುರಿ; ಕೀಳು: ಕೆಳಮಟ್ಟ, ಹೀನ ಸ್ಥಿತಿ; ಮದ್ದು: ಔಷಧಿ; ಗಿಡಿ: ತುರುಕು; ಜೇವಣಿ: ತುತ್ತು, ಗ್ರಾಸ, ಭೋಜನ; ದುವ್ರರ್ಣ: ಕೆಟ್ಟ ಗಾಯ; ತೊಡೆ: ತೀಡು, ಸೋಕು, ಒರಸು; ಕಟ್ಟು: ನಿರ್ಮಿಸು; ಹಸ್ತಿ: ಆನೆ; ವೈದ್ಯ: ಪಂಡಿತ, ರೋಗ ಚಿಕಿತ್ಸೆ ಮಾಡುವವನು; ಗಡಣ: ಕೂಡಿಸು; ಉಭಯ: ಎರದು; ಎಸೆವ: ತೋರು; ಅಂತ್ಯ: ಕೊನೆ; ಕಡಲು: ಸಾಗರ; ರಭಸ: ವೇಗ; ತೊಡಕು: ಸಿಲುಕಿಕೊಳ್ಳು, ಕಷ್ಟ; ಬಹಳ: ತುಂಬ; ಬಲ: ಸೈನ್ಯ; ಜಲಧಿ: ಸಾಗರ;

ಪದವಿಂಗಡಣೆ:
ಒಡಲಿನೊಳು+ ಮುರಿದಿದ್ದ +ಸಬಳವನ್
ಉಡಿಯಲೀಯದೆ +ಕೀಳ್ವ +ಮದ್ದನು
ಗಿಡಿವ +ಜೇವಣಿಗೆಯೊಳು +ಸಪ್ರಾಣಿಸುವ+ ದುವ್ರರ್ಣವ
ತೊಡೆದು+ ಕಟ್ಟುವ +ಹಸ್ತಿ+ವೈದ್ಯರ
ಗಡಣ+ಉಭಯದೊಳ್+ಎಸೆವವ್+ಅಂತ್ಯದ
ಕಡಲ +ರಭಸಕೆ +ತೊಡಕನಿಕ್ಕಿತು +ಬಹಳ +ಬಲಜಲಧಿ

ಅಚ್ಚರಿ:
(೧) ಕಡಲು, ಜಲಧಿ – ಸಮನಾರ್ಥಕ ಪದ, ೬ ಸಾಲಿನ ಮೊದಲ ಮತ್ತು ಕೊನೆಯ ಪದ

ಪದ್ಯ ೨೧: ಕೀಚಕನು ದ್ರೌಪದಿಗೆ ಏನು ಬೇಡಿದನು?

ನಿಲ್ಲೆಲೆಗೆ ಸೈರಂಧ್ರಿ ಕಾಮನ
ಬಲ್ಲೆಹದ ಬಲುಗಾಯ ತಾಗಿತು
ಬಲ್ಲೆ ನೀನೌಷಧಿಯ ರಕ್ಷಿಸಿಕೊಂಬುದೆನ್ನೊಡಲ
ಮೆಲ್ಲನಡಿಯಿಡು ಮಾತ ಮನ್ನಿಸಿ
ಚೆಲ್ಲೆಂಗಂಗಳನೆನ್ನ ಮುಖದಲಿ
ಚೆಲ್ಲಿ ಸಪ್ರಾಣಿಸಲು ಬೇಹುದು ವಿಗತ ಜೀವನವ (ವಿರಾಟ ಪರ್ವ, ೨ ಸಂಧಿ, ೨೧ ಪದ್ಯ)

ತಾತ್ಪರ್ಯ:
ಸೈರಂಧ್ರಿ ಕಾಮನ ಭಲ್ಲೆಹದ ಗಾಯವಾಗಿದೆ. ನೀನು ನಿಲ್ಲು ಏಕೆಂದರೆ ಈ ಗಾಯಕ್ಕೆ ಜೌಷದಿ ನಿನಗೆ ಗೊತ್ತು, ನನ್ನ ದೇಹವನ್ನು ಉಲಿಸು, ಮೆಲ್ಲಗೆ ನಡೆ, ನನ್ನ ಮಾತನ್ನು ಮನ್ನಿಸು, ನೀಳವಾದ ನಿನ್ನ ಕಣ್ಣುಗಳ ವಿಲಾಸಮಯವಾದ ನೋಟವನ್ನು ನನ್ನ ಮುಖದತ್ತ ಬೀರಿ, ಹೊರಟು ಹೋಗಿರುವ ನನ್ನ ಪ್ರಾಣವನ್ನು ಉಳಿಸು ಎಂದು ಕೀಚಕನು ಬೇಡಿಕೊಂಡನು.

ಅರ್ಥ:
ನಿಲ್ಲು: ತಡೆ; ಕಾಮ: ಮನ್ಮಥ; ಬಲು: ತುಂಬ; ಗಾಯ: ಪೆಟ್ಟು; ತಾಗು: ಹೊಡೆತ, ಪೆಟ್ಟು; ಬಲ್ಲೆ: ತಿಳಿ; ಔಷಧಿ: ಮದ್ದು; ರಕ್ಷಿಸು: ಕಾಪಾಡು; ಒಡಲು: ದೇಹ; ಮೆಲ್ಲನಡಿ: ನಿಧಾನವಾಗಿ ನಡೆ; ಮಾತು: ನುಡಿ; ಮನ್ನಿಸು: ಗೌರವಿಸು; ಚೆಲ್ಲು: ಹರಡು; ಕಂಗಳು: ಕಣ್ಣು; ಮುಖ: ಆನನ; ಪ್ರಾಣ: ಜೀವ; ಬೇಹುದು: ಬೇಕು; ವಿಗತ: ಕಳೆದುಹೋದ; ಜೀವನ: ಪ್ರಾಣ;

ಪದವಿಂಗಡಣೆ:
ನಿಲ್ಲೆಲೆಗೆ +ಸೈರಂಧ್ರಿ +ಕಾಮನ
ಬಲ್ಲೆಹದ+ ಬಲುಗಾಯ +ತಾಗಿತು
ಬಲ್ಲೆ +ನೀನೌಷಧಿಯ +ರಕ್ಷಿಸಿಕೊಂಬುದ್+ಎನ್ನೊಡಲ
ಮೆಲ್ಲನ್+ಅಡಿಯಿಡು +ಮಾತ +ಮನ್ನಿಸಿ
ಚೆಲ್ಲೆ+ಕಂಗಳನ್+ಎನ್ನ +ಮುಖದಲಿ
ಚೆಲ್ಲಿ +ಸಪ್ರಾಣಿಸಲು +ಬೇಹುದು +ವಿಗತ +ಜೀವನವ

ಅಚ್ಚರಿ:
(೧) ಮ ಕಾರದ ತ್ರಿವಳಿ ಪದ – ಮೆಲ್ಲನಡಿಯಿಡು ಮಾತ ಮನ್ನಿಸಿ