ಪದ್ಯ ೩೮: ಭೀಮನೊಡನೆ ಯಾರು ಯುದ್ಧಕ್ಕಿಳಿದರು?

ಭೀಮನಿನ್ನ ರೆಘಳಿಗೆಯಲಿ ನಿ
ರ್ನಾಮನೋ ತಡವಿಲ್ಲ ದಮ್ತಿಯ
ತಾಮಸಿಕೆ ಘನ ತೆಗಿಯಿ ತಮ್ಮನನೆನುತ ಕಳವಳಿಸೆ
ಭೂಮಿಪತಿ ಕೈ ಕೊಂಡನೊಡನೆ ಸ
ನಾಮರೈದಿತು ನಕುಲ ಸಾತ್ಯಕಿ
ಭೀಮಸುತನಭಿಮನ್ಯು ದ್ರುಪದ ಶಿಖಂಡಿ ಕೈಕೆಯರು (ದ್ರೋಣ ಪರ್ವ, ೩ ಸಂಧಿ, ೩೮ ಪದ್ಯ)

ತಾತ್ಪರ್ಯ:
ಭೀಮನು ಇನ್ನು ಅರೆಗಳಿಗೆಯಲ್ಲಿ ನಿರ್ನಾಮನಾಗುತ್ತಾನೆ. ಹೆಚ್ಚು ಹೊತ್ತು ಬೇಕಾಗಿಲ್ಲ. ಆನೆಯ ಬಲ ಕೋಪಗಳು ಅತಿಶಯವಾಗಿವೆ. ಅವನನ್ನು ಯುದ್ಧದಿಂದ ಹಿಂದಕ್ಕೆ ತೆಗೆಸಿ ಎನ್ನುತ್ತಾ ಧರ್ಮಜನು ಯುದ್ಧಕ್ಕೆ ಮುಂದಾಗಲು, ನಕುಲ, ಸಾತ್ಯಕಿ, ಘಟೋತ್ಕಚ, ಅಭಿಮನ್ಯು, ದ್ರುಪದ, ಶಿಖಂಡಿ, ಕೈಕೆಯರು ಅವನೊಡನೆ ಯುದ್ಧಕ್ಕಿಳಿದರು.

ಅರ್ಥ:
ಅರೆ: ಅರ್ಧ; ಘಳಿಗೆ: ಸಮಯ; ನಿರ್ನಾಮ: ನಾಶ; ತಡ: ನಿಧಾನ; ದಂತಿ: ಆನೆ; ತಾಮಸ: ಜಾಡ್ಯ, ಜಡತೆ; ಘನ: ಶ್ರೇಷ್ಠ; ತೆಗೆ: ಹೊರತರು; ತಮ್ಮ: ಸಹೋದರ; ಕಳವಳ: ಗೊಂದಲ; ಭೂಮಿಪತಿ: ರಾಜ; ಒಡನೆ: ಕೂಡಲೆ; ಸನಾಮ: ಪ್ರಸಿದ್ಧವಾದ ಹೆಸರುಳ್ಳ; ಐದು: ಬಂದು ಸೇರು; ಸುತ: ಮಗ;

ಪದವಿಂಗಡಣೆ:
ಭೀಮನ್+ಇನ್ನ್+ಅರೆ+ಘಳಿಗೆಯಲಿ +ನಿ
ರ್ನಾಮನೋ +ತಡವಿಲ್ಲ+ ದಂತಿಯ
ತಾಮಸಿಕೆ +ಘನ +ತೆಗಿಯಿ +ತಮ್ಮನನ್+ಎನುತ +ಕಳವಳಿಸೆ
ಭೂಮಿಪತಿ +ಕೈ +ಕೊಂಡನೊಡನೆ +ಸನಾಮರ್
ಐದಿತು +ನಕುಲ +ಸಾತ್ಯಕಿ
ಭೀಮಸುತನ್+ಅಭಿಮನ್ಯು +ದ್ರುಪದ +ಶಿಖಂಡಿ +ಕೈಕೆಯರು

ಅಚ್ಚರಿ:
(೧) ಭೀಮ – ೧, ೬ ಸಾಲಿನ ಮೊದಲ ಪದ

ಪದ್ಯ ೩: ಯುದ್ಧಕ್ಕೆ ಯಾರು ಸಿದ್ಧರಾದರು?

ನೇಮವಾಯಿತು ಸುಭಟರೊಳಗೆ ಸ
ನಾಮರೆದ್ದರು ಕರ್ಣ ಸೌಬಲ
ಭೂಮಿಪತಿಯನುಜಾತ ಬಾಹ್ಲಿಕ ಶಲ್ಯನಂದನರು
ಸೋಮದತ್ತನ ಮಗ ಕಳಿಂಗ ಸು
ಧಾಮ ಚಿತ್ರ ಮಹಾರಥಾದಿಮ
ಹಾಮಹಿಮರನುವಾಯ್ತು ಗಜಹಯರಥನಿಕಾಯದಲಿ (ಅರಣ್ಯ ಪರ್ವ, ೨೦ ಸಂಧಿ, ೩ ಪದ್ಯ)

ತಾತ್ಪರ್ಯ:
ಕೌರವನು ಅಪ್ಪಣೆ ಕೊಟ್ಟೊಡನೆ ಕರ್ಣ, ಶಕುನಿ, ದುಶ್ಯಾಸನ, ಬಾಹ್ಲಿಕ ಶಲ್ಯನ ಮಗ, ಸೋಮದತ್ತನ ಮಗ ಕಳಿಂಗ ಸುಧಾಮ ಚಿತ್ರ ಮೊದಲಾದ ಮಹಾರಥರು ಯುದ್ಧಕ್ಕೆ ಸಿದ್ಧರಾದರು. ಅವರ ಚತುರಂಗ ಸೈನ್ಯವೂ ಹೊರಟಿತು.

ಅರ್ಥ:
ನೇಮ: ವ್ರತ, ನಿಯಮ; ಭಟ: ಸೈನ್ಯ; ಸನಾಮ: ಪ್ರಸಿದ್ಧ; ಸೌಬಲ: ಶಕುನಿ; ಭೂಮಿಪತಿ: ರಾಜ; ಅನುಜಾತ: ತಮ್ಮ; ನಂದನ: ಮಗ; ಮಹಾರಥಿ: ಶೂರ, ಪರಾಕ್ರಮಿ; ಮಹಾಮಹಿಮ: ಶ್ರೇಷ್ಠ; ಅನುವು: ಸೊಗಸು; ಗಜ: ಆನೆ; ಹಯ: ಕುದುರೆ; ರಥ: ಬಂಡಿ; ನಿಕಾಯ: ಗುಂಪು;

ಪದವಿಂಗಡಣೆ:
ನೇಮವಾಯಿತು+ ಸುಭಟರೊಳಗೆ +ಸ
ನಾಮರೆದ್ದರು +ಕರ್ಣ +ಸೌಬಲ
ಭೂಮಿಪತಿ+ಅನುಜಾತ +ಬಾಹ್ಲಿಕ +ಶಲ್ಯ+ನಂದನರು
ಸೋಮದತ್ತನ+ ಮಗ +ಕಳಿಂಗ +ಸು
ಧಾಮ +ಚಿತ್ರ +ಮಹಾರಥಾದಿ+ಮ
ಹಾಮಹಿಮರ್+ಅನುವಾಯ್ತು +ಗಜ+ಹಯ+ರಥ+ನಿಕಾಯದಲಿ

ಅಚ್ಚರಿ:
(೧) ಮಹಾರಥರ ಹೆಸರು – ಕರ್ಣ, ಸೌಬಲ, ದುಶ್ಯಾಸನ, ಬಾಹ್ಲಿಕ, ಶಲ್ಯನಂದನ, ಕಳಿಂಗ, ಸುಧಾಮ, ಚಿತ್ರ,
(೨) ದುಶ್ಯಾಸನನನ್ನು ಭೂಮಿಪತಿಯನುಜಾತ ಎಂದು ಕರೆದ ಪರಿ

ಪದ್ಯ ೫೫: ದ್ವಾಪರದಲ್ಲಿ ಕಾಲನೇಮಿ ಯಾವ ರೂಪದಲ್ಲಿ ಕಾಣಿಸಿಕೊಂಡಿದ್ದನು?

ಆ ಮಹಾಸುರ ಕಾಲನೇಮಿ ಸ
ನಾಮನೀ ಕಾಲದಲಿ ಯಾದವ
ಭೂಮಿಯಲಿ ಜನಿಸಿದನಲೇ ಕಂಸಾಭಿಧಾನದಲಿ
ಈ ಮರುಳು ಹವಣೇ ತದೀಯ
ಸ್ತೋಮ ಧೇನುಕ ಕೇಶಿ ವತ್ಸ ತೃ
ಣಾಮಯರು ಹಲರಿಹರು ದುಷ್ಪರಿವಾರ ಕಂಸನಲಿ (ಸಭಾ ಪರ್ವ, ೧೦ ಸಂಧಿ, ೫೫ ಪದ್ಯ)

ತಾತ್ಪರ್ಯ:
ಆ ಮಹಾದೈತ್ಯನಾದ ಕಾಲನೇಮಿಯು ದ್ವಾಪರ ಯುಗದಲ್ಲಿ ಯಾದವರ ಸೀಮೆಯಲ್ಲಿ ಕಂಸನೆಂಬ ಹೆಸರಿನಿಂದ ಹುಟ್ಟಿದನು. ಅವನ ದುಷ್ಟ ಪರಿವಾರದಲ್ಲಿ ಧೇನುಕ, ಕೇಶಿ, ವತ್ಸ, ತೃಣಾವರ್ತ ಮೊದಲಾದ ಹಲವರಿದ್ದರು. ಈ ಮೂಢನಾದ ಶಿಶುಪಾಲನು ಅವರಿಗೆ ಯಾವವಿಧದಲ್ಲೂ ಸಮಾನನಲ್ಲ ಎಂದು ಭೀಷ್ಮರು ನುಡಿದರು.

ಅರ್ಥ:
ಮಹ: ಹಿರಿಯ, ದೊಡ್ಡ; ಅಸುರ: ದಾನವ; ಸನಾಮ: ಹೆಸರಿನಿಂದ ಪ್ರಸಿದ್ಧವಾದ; ಕಾಲ: ಸಮಯ; ಭೂಮಿ: ಧರಣಿ; ಜನಿಸು: ಹುಟ್ಟು; ಅಭಿಧಾನ: ಹೆಸರು; ಮರುಳು: ಮೂಢ; ಹವಣು: ಅಳತೆ, ಪ್ರಮಾಣ; ತದೀಯ: ಅದಕ್ಕೆ ಸಂಬಂಧಪಟ್ಟ; ಸ್ತೋಮ: ಗುಂಪು; ಹಲರು: ಬಹಳ, ಮುಂತಾದ; ಇಹರು: ಇರುವರು; ದುಷ್ಪರಿವಾರ: ಕೆಟ್ಟ ಪರಿಜನ;

ಪದವಿಂಗಡಣೆ:
ಆ +ಮಹಾಸುರ+ ಕಾಲನೇಮಿ +ಸ
ನಾಮನ್+ಈ+ ಕಾಲದಲಿ +ಯಾದವ
ಭೂಮಿಯಲಿ +ಜನಿಸಿದನಲೇ+ ಕಂಸಾಭಿಧಾನದಲಿ
ಈ+ ಮರುಳು +ಹವಣೇ +ತದೀಯ
ಸ್ತೋಮ +ಧೇನುಕ +ಕೇಶಿ +ವತ್ಸ +ತೃ
ಣಾಮಯರು +ಹಲರಿಹರು+ ದುಷ್ಪರಿವಾರ+ ಕಂಸನಲಿ

ಅಚ್ಚರಿ:
(೧) ಕಂಸನ ಪರಿವಾರದವರು – ಕಂಸ, ಧೇನುಕ, ಕೇಶಿ, ವತ್ಸ, ತೃಣಾವರ್ತ
(೨) ಸನಾಮ, ಅಭಿಧಾನ – ಸಾಮ್ಯಾರ್ಥ ಪದಗಳು

ಪದ್ಯ೩೦: ಕೃಷ್ಣನ ಗುಣಗಾನವನ್ನು ಭೀಷ್ಮರು ಹೇಗೆ ಮಾಡಿದರು?

ಆ ಮಧುವನಾ ಕೈಟಭನ ಮುರಿ
ದೀ ಮಹಾತ್ಮಕನೊಡನೆ ವಾದಿಸು
ವೀ ಮರುಳನೇನೆಂಬೆನೈ ಶಿಶುಪಾಲ ಬಾಲಕನ
ಕಾಮರಿಪು ಕಲ್ಪಾಂತವಹ್ನಿ
ವ್ಯೋಮರೂಪನುದಾರ ಸಗುಣ ಸ
ನಾಮ ಚಿನ್ಮಯನೀತನೀತನನರಿವರಾರೆಂದ (ಸಭಾ ಪರ್ವ, ೧೦ ಸಂಧಿ, ೩೦ ಪದ್ಯ)

ತಾತ್ಪರ್ಯ:
ರಾಕ್ಷಸರಾದ ಮಧು ಕೈಟಭರನ್ನು ಸಂಹರಿಸಿದ ಈ ಮಹಾತ್ಮನನೊಡನೆ ವಾದಮಾಡುವ ಮೂರ್ಖತನ ತೋರಿದ ಶಿಶುಪಾಲ ಬಾಲಕನೆಂಬ ಹುಚ್ಚನಿಗೆ ಏನೆಂದು ಹೇಳಲಿ, ಕಲ್ಪಾಂತದಲ್ಲಿ ಶಿವನ ಹಣೆಗಣ್ಣುರಿಯೂ ಇವನೇ, ಆಕಾಶದಂತೆ ನಿರ್ಲೇಪನು ಈತ, ಭಕ್ತರಿಗಾಗಿ ಔದಾರ್ಯದಿಂದ ಸಗುಣರೂಪದಲ್ಲಿ ಅವತರಿಸುತ್ತಾನೆ, ಇವನು ಪ್ರಸಿದ್ಧ ಚಿನ್ಮಯನು, ಇಂತಹವನನ್ನು ತಿಳಿಯಬಲ್ಲವರಾರು ಎಂದು ಭೀಷ್ಮರು ತಿಳಿಸಿದರು.

ಅರ್ಥ:
ಮುರಿ: ಸೀಳು; ಮಹಾತ್ಮ: ಶ್ರೇಷ್ಠ; ವಾದಿಸು: ಚರ್ಚಿಸು; ಮರುಳ: ಮೂಢ, ಹುಚ್ಚ; ಬಾಲಕ: ಶಿಶು; ಕಾಮರಿಪು: ಶಿವ; ಕಾಮ: ಮನ್ಮಥ; ರಿಪು: ವೈರಿ; ಕಲ್ಪ:ಬ್ರಹ್ಮನ ಒಂದು ದಿವಸ, ಸಹಸ್ರಯುಗ, ಪ್ರಳಯ; ಅಂತ: ಕೊನೆ; ವಹ್ನಿ: ಬೆಂಕಿ; ವ್ಯೋಮ:ಆಕಾಶ, ಗಗನ; ರೂಪ: ಆಕಾರ; ಸಗುಣ:ಯೋಗ್ಯಗುಣಗಳಿಂದ ಕೂಡಿದ; ಸನಾಮ: ಒಳ್ಳೆಯ ಹೆಸರು; ಚಿನ್ಮಯ: ಶುದ್ಧಜ್ಞಾನದಿಂದ ಕೂಡಿದ; ಅರಿ: ತಿಳಿ;

ಪದವಿಂಗಡಣೆ:
ಆ +ಮಧುವನ್+ಆ+ ಕೈಟಭನ+ ಮುರಿದ್
ಈ+ ಮಹಾತ್ಮಕನೊಡನೆ+ ವಾದಿಸುವ್
ಈ+ ಮರುಳನ್+ಏನೆಂಬೆನೈ +ಶಿಶುಪಾಲ +ಬಾಲಕನ
ಕಾಮರಿಪು+ ಕಲ್ಪಾಂತ+ವಹ್ನಿ
ವ್ಯೋಮ+ರೂಪನ್+ಉದಾರ+ ಸಗುಣ+ ಸ
ನಾಮ +ಚಿನ್ಮಯನ್+ಈತನ್+ಅರಿವರಾರೆಂದ

ಅಚ್ಚರಿ:
(೧) ಶಿಶುಪಾಲಕನನ್ನು ತೆಗಳುವ ಪರಿ – ಬಾಲಕ, ಮರುಳ
(೨) ಶಿವನನ್ನು ಕಾಮರಿಪು ಎಂದು ಕರೆದಿರುವುದು
(೩) ಕೃಷ್ಣನ ಗುಣಗಾನ: ಸಗುಣ, ಸನಾಮ, ಚಿನ್ಮಯ, ವಹ್ನಿ ವ್ಯೋಮ ರೂಪ, ಉದಾರ

ಪದ್ಯ ೩: ಕರ್ಣನ ಧ್ವಜವು ಬೀಳುವುದನ್ನು ನೋಡಿದವರಿಗೆ ಏನಾಯಿತು?

ಆ ಮಹಾಧ್ವಜ ದಂಡ ಪಾತದ
ಡಾಮರದ ದಳವುಳಕೆ ಹೆದರಿತು
ಹಾ ಮಹಾದೇವೇನ ಹೇಳುವೆನೈ ಮಹೀಪತಿಯೆ
ಧೂಮಚುಂಬಿತ ಚಿತ್ರದಂತೆ ಸ
ನಾಮರಿದ್ದುದು ಸೌಬಲಾಶ್ವ
ತ್ಥಾಮ ಕೃಪ ಕೃತವರ್ಮಕಾದಿಗಳೊಂದು ನಿಮಿಷದಲಿ (ಕರ್ಣ ಪರ್ವ, ೨೭ ಸಂಧಿ, ೩ ಪದ್ಯ)

ತಾತ್ಪರ್ಯ:
ಎಲೈ ಧೃತರಾಷ್ಟ್ರ ನಾನು ಏನೆಂದು ಹೇಳಲಿ, ಅರ್ಜುನನ ಬಾಣಗಳಿಂದ ಕರ್ಣನ ಧ್ವಜದಂಡವು ಮುರಿಯಲು ಸೈನ್ಯದಲ್ಲಿ ಭಯವು ಆವರಿಸಿತು, ಹಾ ಮಹಾದೇವ, ಪರಾಕ್ರಮಿಗಳಾದ ಶಕುನಿ, ಅಶ್ವತ್ಥಾಮ, ಕೃಪಚಾರ್ಯ, ಕೃತವರ್ಮ ಮುಂತಾದವರು ಒಂದು ನಿಮಿಷ ಸ್ತಬ್ಧರಾಗಿ ನಿಂತರು.

ಅರ್ಥ:
ಧ್ವಜ: ಬಾವುಟ; ಮಹಾ: ದೊಡ್ಡ, ಶ್ರೇಷ್ಠ; ದಂಡ: ಕೋಲು; ಪಾತ: ಬೀಳುವುದು, ಪತನ; ಡಾಮರ: ಭಯಂಕರವಾದ; ದಳ: ಸೈನ್ಯ; ಅಳುಕು: ಹೆದರು; ಹೆದರು: ಭಯಪಡು; ಹೇಳು: ತಿಳಿಸು; ಮಹೀಪತಿ: ರಾಜ; ಮಹೀ: ಭೂಮಿ; ಪತಿ: ಒಡೆಯ; ಧೂಮ: ಹೊಗೆ; ಚುಂಬಿತ: ಮುತ್ತಿದ; ಚಿತ್ರ: ಬರೆದ ಆಕೃತಿ; ಸನಾಮ: ಪ್ರಸಿದ್ಧ ವ್ಯಕ್ತಿ; ಸೌಬಲ: ಶಕುನಿ; ಆದಿ: ಮುಂತಾದ; ನಿಮಿಷ: ಕ್ಷಣಮಾತ್ರ, ಕಾಲಪ್ರಮಾಣ;

ಪದವಿಂಗಡಣೆ:
ಆ+ ಮಹಾಧ್ವಜ +ದಂಡ +ಪಾತದ
ಡಾಮರದ+ ದಳವುಳಕೆ +ಹೆದರಿತು
ಹಾ+ ಮಹಾದೇವ್+ಏನ +ಹೇಳುವೆನೈ+ ಮಹೀಪತಿಯೆ
ಧೂಮಚುಂಬಿತ +ಚಿತ್ರದಂತೆ +ಸ
ನಾಮರಿದ್ದುದು+ ಸೌಬಲ+ಅಶ್ವ
ತ್ಥಾಮ +ಕೃಪ +ಕೃತವರ್ಮಕಾದಿಗಳ್+ಒಂದು +ನಿಮಿಷದಲಿ

ಅಚ್ಚರಿ:
(೧) ಸ್ತಬ್ಧರಾದರು ಎಂದು ಹೇಳಲು – ಧೂಮಚುಂಬಿತ ಚಿತ್ರದಂತೆ ಸನಾಮರಿದ್ದುದು