ಪದ್ಯ ೯: ಯಾರು ಯಾರ ಮನೆಯನ್ನು ಸೇರಿದರು?

ಆ ಸುಯೋಧನನರಮನೆಯನವ
ನೀಶ ಹೊಕ್ಕನು ಪವನಸುತ ದು
ಶ್ಯಾಸನನ ಸದನವನು ಪಾರ್ಥಗೆ ಕರ್ಣಭವನದಲಿ
ವಾಸವಾದುದು ಯಮಳರಿಗೆ ದು
ಶ್ಯಾಸನಾನುಜರರಮನೆಗಳುಳಿ
ದೈಸುಮನೆ ಭಂಡಾರವಾದುದು ಭೂಪ ಕೇಳೆಂದ (ಗದಾ ಪರ್ವ, ೧೩ ಸಂಧಿ, ೯ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಯುಧಿಷ್ಠಿರನು ಸುಯೋಧನನ ಅರಮನೆಯನ್ನು ಹೊಕ್ಕನು, ಭೀಮನು ದುಶ್ಯಾಸನನ ಮನೆಯನ್ನೂ, ಅರ್ಜುನನು ಕರ್ಣನ ಭವನವನ್ನು, ನಕುಲಸಹದೇವರು ದುಶ್ಯಾಸನನಿಗಿಂದ ಚಿಕ್ಕವರಾದ ಕೌರವರ ಮನೆಗಳನ್ನು ಹೊಕ್ಕರು. ಉಳಿದೆಲ್ಲ ಅರಮನೆಗಳೂ ಭಂಡಾರ ಭವನಗಳಾದವು.

ಅರ್ಥ:
ಅರಮನೆ: ರಾಜರ ಆಲಯ; ಅವನೀಶ: ರಾಜ; ಹೊಕ್ಕು: ಸೇರು; ಪವನಸುತ: ಭೀಮ; ಪವನ: ಗಾಳಿ, ವಾಯು; ಸುತ: ಮಗ; ಸದನ: ಆಲಯ; ಭವನ: ಆಲಯ; ವಾಸ: ಜೀವಿಸು; ಯಮಳ: ಜೋಡಿ ಮಕ್ಕಳು, ಅವಳಿ; ಅನುಜ: ತಮ್ಮ; ಉಳಿದ: ಮಿಕ್ಕ; ಐಸು: ಎಲ್ಲ; ಭಂಡಾರ: ಬೊಕ್ಕಸ, ಖಜಾನೆ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಆ+ ಸುಯೋಧನನ್+ಅರಮನೆಯನ್+ಅವ
ನೀಶ +ಹೊಕ್ಕನು+ ಪವನಸುತ +ದು
ಶ್ಯಾಸನನ+ ಸದನವನು +ಪಾರ್ಥಗೆ +ಕರ್ಣ+ಭವನದಲಿ
ವಾಸವಾದುದು +ಯಮಳರಿಗೆ +ದು
ಶ್ಯಾಸನ+ಅನುಜರ್+ಅರಮನೆಗಳ್+ಉಳಿದ್
ಐಸು+ಮನೆ +ಭಂಡಾರವಾದುದು +ಭೂಪ +ಕೇಳೆಂದ

ಅಚ್ಚರಿ:
(೧) ಸದನ, ಮನೆ, ಅರಮನೆ, ಭವನ – ಸಾಮ್ಯಾರ್ಥ ಪದ
(೨) ಒಂದೇ ಪದವಾಗಿ ರಚನೆ: ಸುಯೋಧನನರಮನೆಯನವನೀಶ, ದುಶ್ಯಾಸನಾನುಜರರಮನೆಗಳುಳಿದೈಸುಮನೆ

ಪದ್ಯ ೩೫: ದುರ್ಯೋಧನನು ಯಾವ ರಹಸ್ಯವನ್ನು ಸಂಜಯನಿಗೆ ಹೇಳಿದನು?

ಇದೆ ಸರೋವರವೊಂದು ಹರಿದೂ
ರದಲಿ ಭುವನಖ್ಯಾತ ತನ್ಮ
ಧ್ಯದಲಿ ಮುಳುಗಿಹೆನೊಂದುದಿನ ಪರಿಯಂತ ಸಲಿಲದಲಿ
ಕದನದಲಿ ಕೌಂತೇಯರನು ಯಮ
ಸದನದಲಿ ತೋರುವೆನು ತಾನೆಂ
ಬುದು ರಹಸ್ಯವು ಜನನಿ ಜನಕಂಗರುಹು ನೀನೆಂದ (ಗದಾ ಪರ್ವ, ೩ ಸಂಧಿ, ೩೫ ಪದ್ಯ)

ತಾತ್ಪರ್ಯ:
ಸಂಜಯ, ನಡೆದುಕೊಂಡು ಹೋಗಿ ಮುಟ್ಟಬಲ್ಲ ದೂರದಲ್ಲಿ ಒಂದು ವಿಶ್ವವಿಖ್ಯಾತ ಸರೋವರವಿದೆ. ಅದರ ಮಧ್ಯದಲ್ಲಿ ಒಂದು ದಿನದವರೆಗೆ ನೀರಿನಅಲ್ಲಿರುತ್ತೇನೆ. ಆನಂತರ ಯುದ್ಧಮಾಡಿ ಕುಂತಿಯ ಮಕ್ಕಳಿಗೆ ಯಮಲೋಕವನ್ನು ತೋರಿಸುತ್ತೇನೆ, ಇದು ರಹಸ್ಯ. ಇದನ್ನು ನನ್ನ ತಂದೆ ತಾಯಿಗಳಿಗೆ ತಿಳಿಸು ಎಂದು ದುರ್ಯೋಧನನು ಸಂಜಯನಿಗೆ ಹೇಳಿದನು.

ಅರ್ಥ:
ಸರೋವರ: ಸರಸಿ; ಹರಿದೂರ: ನಡಿಗೆಯ ಅಂತರ; ಭುವನ: ಭೂಮಿ; ವಿಖ್ಯಾತ: ಪ್ರಸಿದ್ಧ; ಮಧ್ಯ: ನಡುವೆ; ಮುಳುಗು: ನೀರಿನಲ್ಲಿ ಮೀಯು; ಪರಿಯಂತ: ವರೆಗು; ಸಲಲಿ: ನೀರು; ಕದನ: ಯುದ್ಧ; ಕೌಂತೇಯ: ಪಾಂಡವ; ಯಮ: ಜವ; ಸದನ: ಮನೆ, ನಿವಾಸ; ತೋರು: ಗೋಚರಿಸು; ರಹಸ್ಯ: ಗುಟ್ಟು; ಜನನಿ: ತಾಯಿ; ಜನಕ: ತಂದೆ; ಅರುಹು: ತಿಳಿಸು;

ಪದವಿಂಗಡಣೆ:
ಇದೆ+ ಸರೋವರವೊಂದು +ಹರಿ+ದೂ
ರದಲಿ +ಭುವನ+ಖ್ಯಾತ +ತನ್
ಮಧ್ಯದಲಿ+ ಮುಳುಗಿಹೆನ್+ಒಂದುದಿನ +ಪರಿಯಂತ +ಸಲಿಲದಲಿ
ಕದನದಲಿ +ಕೌಂತೇಯರನು +ಯಮ
ಸದನದಲಿ +ತೋರುವೆನು +ತಾನೆಂ
ಬುದು +ರಹಸ್ಯವು +ಜನನಿ +ಜನಕಂಗ್+ಅರುಹು +ನೀನೆಂದ

ಅಚ್ಚರಿ:
(೧) ಸಾಯಿಸುವೆ ಎಂದು ಹೇಳುವ ಪರಿ – ಕೌಂತೇಯರನು ಯಮ ಸದನದಲಿ ತೋರುವೆನು

ಪದ್ಯ ೩೧: ಉತ್ತರನು ಯುದ್ಧದಲ್ಲಿ ಗೆದ್ದವನನ್ನು ಯಾವಗ ತೋರಿಸುತ್ತೇನೆಂದನು?

ಅದಟುತನವೆನಗುಂಟೆ ಬೆಂದುದ
ಬೆದಕಿ ನೋಯಿಸಬೇಡ ಹಗಲಿನ
ಕದನವನು ಗೆಲಿದಾತ ಬೇರಿಹ ಬೊಪ್ಪ ನುಡಿಯದಿರು
ಉದಯದಲಿ ಗೆಲಿದಾತನನು ನಿ
ಮ್ಮಿದಿರಿನಲಿ ತೋರುವೆನು ಬೀಳ್ಕೊಡಿ
ಸದನಕೆಂದು ಕುಮಾರ ಕಳುಹಿಸಿದ್ಕೊಂಡನರಮನೆಗೆ (ವಿರಾಟ ಪರ್ವ, ೧೦ ಸಂಧಿ, ೩೧ ಪದ್ಯ)

ತಾತ್ಪರ್ಯ:
ಅಪ್ಪನ ಮಾತನ್ನು ಕೇಳಿ, ಎಲೈ ತಂದೆ ನನಗೆಲ್ಲಿಯ ಪರಾಕ್ರಮ, ಬೆಂದು ಹೋದ ನನ್ನನ್ನು ಮತ್ತೆ ಬೆದಕಬೇಡ, ಹಗಲಿನಲ್ಲಾದ ಯುದ್ಧವನ್ನು ಗೆದ್ದವನೇ ಬೇರೆ, ಅವನನ್ನು ನಾಳೆ ಮುಂಜಾನೆ ತೋರಿಸುತ್ತೇನೆ, ನನ್ನನ್ನು ಈಗ ನನ್ನ ಅರಮನೆಗೆ ತೆರಳಲು ಬೀಳ್ಕೊಡು ಎಂದು ಬೇಡಿದನು.

ಅರ್ಥ:
ಅದಟು: ಪರಾಕ್ರಮ, ಶೌರ್ಯ; ಬೆಂದು: ಸಂಕಟಕ್ಕೊಳಗಾಗು, ದಹಿಸು; ಬೆದಕು: ಕೆದಕು, ಹುಡುಕು, ಶೋಧಿಸು; ನೋಯಿಸು: ನೋವು, ಬೇನೆ; ಹಗಲು: ಬೆಳಗ್ಗೆ; ಕದನ: ಯುದ್ಧ; ಗೆಲಿ: ಜಯಿಸು; ಬೇರೆ: ಅನ್ಯ; ಬೊಪ್ಪ: ತಂದೆ; ನುಡಿ: ಮಾತಾಡು; ಉದಯ: ಹುಟ್ಟು; ಇದಿರು: ಎದುರು; ತೋರು: ಕಾಣಿಸು; ಬೀಳ್ಕೊಡು: ತೆರಳು; ಸದನ: ಆಲಯ; ಕಳುಹಿಸು: ಬೀಳ್ಕೊಡು; ಅರಮನೆ: ರಾಜಾಲಯ;

ಪದವಿಂಗಡಣೆ:
ಅದಟುತನವ್+ಎನಗುಂಟೆ +ಬೆಂದುದ
ಬೆದಕಿ +ನೋಯಿಸಬೇಡ +ಹಗಲಿನ
ಕದನವನು +ಗೆಲಿದಾತ +ಬೇರಿಹ+ ಬೊಪ್ಪ +ನುಡಿಯದಿರು
ಉದಯದಲಿ +ಗೆಲಿದಾತನನು +ನಿ
ಮ್ಮಿದಿರಿನಲಿ+ ತೋರುವೆನು +ಬೀಳ್ಕೊಡಿ
ಸದನಕೆಂದು +ಕುಮಾರ +ಕಳುಹಿಸಿಕೊಂಡನ್+ಅರಮನೆಗೆ

ಅಚ್ಚರಿ:
(೧) ಸದನ, ಅರಮನೆ – ಸಾಮ್ಯಾರ್ಥ ಪದಗಳು
(೨) ಗೆಲಿದಾತ – ೩, ೪ ಸಾಲಿನ ೨ ಪದ