ಪದ್ಯ ೭೭: ಸ್ವರ್ಗಕ್ಕೆ ಹೋಗುವವರ ಗುಣಗಳಾವುವು?

ಇತ್ತ ನೋಡೈ ಸ್ವಾಮಿ ಕಾರ್ಯಕೆ
ತೆತ್ತನೊಡಲನು ವರ ರಣಾಗ್ರದೊ
ಳಿತ್ತಲೈದನೆ ಭೂಮಿ ಕನ್ಯಾ ಗೋಧನಾವಳಿಯ
ಇತ್ತವನು ಸತ್ಪುತ್ರನನುತಾ
ಹೆತ್ತವನು ಗೋವಿಪ್ರಬಾಧೆಗೆ
ಸತ್ತವನ ನೆಲೆ ಪಾರ್ಥ ನೋಡುತ್ತಮ ವಿಮಾನದಲಿ (ಅರಣ್ಯ ಪರ್ವ, ೮ ಸಂಧಿ, ೭೭ ಪದ್ಯ)

ತಾತ್ಪರ್ಯ:
ಅರ್ಜುನ ವಿಮಾನದಲ್ಲಿ ಹೋಗುತ್ತಿರುವವರನ್ನು ಇತ್ತ ನೋಡು, ಇವನು ರಣರಂಗದಲ್ಲಿ ತನ್ನ ಒಡೆಯನಿಗಾಗಿ ಪ್ರಾಣವನ್ನು ಬಿಟ್ಟವನು, ಭೂದಾನ, ಕನ್ಯಾದಾನ, ಗೋದಾನಗಳನ್ನು ಕೊಟ್ಟವನಿವನು, ಇವನು ಸತ್ಪುತ್ರನನ್ನು ಪಡೆದವನು, ಇವನು ಗೋಗಳಿಗೆ ಬ್ರಾಹ್ಮಣರಿಗೆ ಬಾಧೆಯನ್ನು ಹೋಗಲಾಡಿಸಲು ಹೊರಟು ಸತ್ತವನು ಎಂದು ಮಾತಲಿಯು ಅರ್ಜುನನಿಗೆ ತೋರಿಸಿದನು.

ಅರ್ಥ:
ನೋಡು: ವೀಕ್ಷಿಸು; ಸ್ವಾಮಿ: ಒಡೆಯ; ಕಾರ್ಯ: ಕೆಲಸ; ತೆತ್ತ: ನೀಡು; ಒಡಲು: ಪ್ರಾಣ; ವರ: ಶ್ರೇಷ್ಠ; ರಣ: ಯುದ್ಧ; ಭೂಮಿ: ಧರಿತ್ರಿ; ಕನ್ಯ: ಹೆಣ್ಣು; ಗೋಧನ: ಗೋವು; ಆವಳಿ: ಗುಂಪು; ಸತ್ಪುತ್ರ: ಒಳ್ಳೆಯ ಮಗ; ಗೋ: ಗೋವು, ಹಸು; ವಿಪ್ರ: ಬ್ರಾಹ್ಮಣ; ಬಾಧೆ: ನೋವು; ಸತ್ತ: ಪ್ರಾಣ ಬಿಡು, ಅಳಿ; ನೆಲೆ: ಸ್ಥಾನ; ಉತ್ತಮ: ಶ್ರೇಷ್ಠ; ವಿಮಾನ: ಆಕಾಶದಲ್ಲಿ ಹಾರುವ ವಾಹನ;

ಪದವಿಂಗಡಣೆ:
ಇತ್ತ +ನೋಡೈ +ಸ್ವಾಮಿ +ಕಾರ್ಯಕೆ
ತೆತ್ತನ್+ಒಡಲನು +ವರ +ರಣಾಗ್ರದೊಳ್
ಇತ್ತಲೈದನೆ +ಭೂಮಿ +ಕನ್ಯಾ +ಗೋಧನ+ಆವಳಿಯ
ಇತ್ತವನು +ಸತ್ಪುತ್ರನನು+ತಾ
ಹೆತ್ತವನು +ಗೋ+ವಿಪ್ರ+ಬಾಧೆಗೆ
ಸತ್ತವನ +ನೆಲೆ +ಪಾರ್ಥ +ನೋಡ್+ಉತ್ತಮ +ವಿಮಾನದಲಿ

ಅಚ್ಚರಿ:
(೧) ಇತ್ತ, ತೆತ್ತ, ಸತ್ತ, ಹೆತ್ತ – ಪ್ರಾಸ ಪದಗಳು