ಪದ್ಯ ೨೬: ಕರ್ಣನು ಯಾವ ಹೆಸರಿನಿಂದ ಪ್ರಖ್ಯಾತನಾದ?

ಆದರಿಸಿದನು ರಾಧೆಯಲಿ ಮಗ
ನಾದನೆಂದುತ್ಸವದ ಮಾಡಿ ಮ
ಹೀದಿವಿಜರನು ದಾನಮಾನಂಗಲಲಿ ಸತ್ಕರಿಸಿ
ಆ ದಿನಂ ಮೊದಲಾಗಿ ಉದ್ಭವ
ವಾದುದವನೈಶ್ವರ್ಯ ಉನ್ನತ
ವಾದನಾ ರವಿನಂದನನು ರಾಧೇಯ ನಾಮದಲಿ (ಆದಿ ಪರ್ವ, ೩ ಸಂಧಿ, ೨೬ ಪದ್ಯ)

ತಾತ್ಪರ್ಯ:
ಸೂತನ ಹೆಂಡತಿಯ ಹೆಸರು ರಾಧೆ, ರಾಧೆಗೆ ಮಗನು ಜನಿಸಿದನೆಂದು ಉತ್ಸವವನ್ನು ಮಾಡಿ, ಬ್ರಾಹ್ಮಣರನ್ನು ದಾನಾದಿಗಳಿಂದ ಸತ್ಕರಿಸಿದನು. ಅಂದಿನಿಂದ ಸೂತನ ಐಶ್ವರ್ಯವು ಅಭಿವೃದ್ಧಿ ಹೊಂದಿತು ಸೂರನ ಪುತ್ರನಾದ ಆ ಮಗನು ರಾಧೇಯನೆಂಬ ಹೆಸರಿನಿಂದ ಪ್ರಸಿದ್ಧನಾದನು.

ಅರ್ಥ:
ಆದರ: ಗೌರವ; ಮಗ: ಸುತ; ಉತ್ಸವ: ಸಂಭ್ರಮ; ಮಹೀದಿವಿಜ: ಬ್ರಾಹ್ಮಣ; ಮಹೀ: ಭೂಮಿ; ದಾನ: ನೀಡು; ಸತ್ಕರಿಸು: ಗೌರವಿಸು; ದಿನ: ವಾರ; ಉದ್ಭವ: ಹುಟ್ಟು; ಐಶ್ವರ್ಯ: ಸಂಪತ್ತು; ಉನ್ನತ: ಹೆಚ್ಚು; ರವಿ: ಸೂರ್ಯ; ನಂದನ: ಮಗ; ನಾಮ: ಹೆಸರು;

ಪದವಿಂಗಡಣೆ:
ಆದರಿಸಿದನು+ ರಾಧೆಯಲಿ +ಮಗ
ನಾದನೆಂದ್+ಉತ್ಸವದ+ ಮಾಡಿ +ಮ
ಹೀ+ದಿವಿಜರನು +ದಾನ+ಮಾನಂಗಳಲಿ +ಸತ್ಕರಿಸಿ
ಆ +ದಿನಂ +ಮೊದಲಾಗಿ +ಉದ್ಭವ
ವಾದುದ್+ಅವನ್+ಐಶ್ವರ್ಯ+ ಉನ್ನತ
ವಾದನಾ +ರವಿನಂದನನು +ರಾಧೇಯ +ನಾಮದಲಿ

ಅಚ್ಚರಿ:
(೧) ಮಗ, ನಂದನ – ಸಮಾನಾರ್ಥಕ ಪದ
(೨) ಮ ಕಾರದ ಸಾಲು ಪದ – ಮಗನಾದನೆಂದುತ್ಸವದ ಮಾಡಿ ಮಹೀದಿವಿಜರನು

ಪದ್ಯ ೫೪: ಮುನಿವರ್ಯರು ಯಾರಿಗೆ ಕಾಣಿಸಿಕೊಂಡರು?

ವರಮುನೀಶ್ವರರವನಿಯಲಿ ಮೂ
ವರಿಗೆ ಗೋಚರವಾದರಿತ್ತಲು
ಮುರವಿರೋಧಿಗೆ ನರಗೆ ಕುರುಸೇನಾಧಿನಾಥಂಗೆ
ಅರಿಯರುಳಿದವರೀತನಿಂ ಸ
ತ್ಕರಿಸಿಕೊಂಡರು ನುಡಿದರಾ ಮುನಿ
ವರರು ಕಡಿದರು ಕೌರವಾನ್ವಯ ಕಲ್ಪಭೂರುಹವ (ದ್ರೋಣ ಪರ್ವ, ೧೮ ಸಂಧಿ, ೫೪ ಪದ್ಯ)

ತಾತ್ಪರ್ಯ:
ರಣಭೂಮಿಯಲ್ಲಿದವರಲ್ಲಿ ಮೂವರಿಗೆ ಮಾತ್ರ ಇವರು ಕಾಣಿಸಿಕೊಂಡರು. ಶ್ರೀಕೃಷ್ಣ, ಅರ್ಜುನ ಮತ್ತು ದ್ರೋಣರಿಗೆ. ಉಳಿದವರಿಗೆ ಇದು ತಿಳಿಯದು. ದ್ರೋಣನ ಸತ್ಕಾರವನ್ನು ಸ್ವೀಕರಿಸಿ ಅವನೊಡನೆ ಮಾತಾಡಿ ಅವರು ಕೌರವ ವಂಶವೆಂಬ ಕಲ್ಪವೃಕ್ಷವನ್ನು ಕಡಿದು ಹಾಕಿದರು.

ಅರ್ಥ:
ವರ: ಶ್ರೇಷ್ಠ; ಮುನಿ: ಋಷಿ; ಅವನಿ: ಭೂಮಿ; ಗೋಚರ: ಕಾಣು; ವಿರೋಧಿ: ವೈರಿ; ಮುರವಿರೋಧಿ: ಕೃಷ್ಣ; ನರ: ಅರ್ಜುನ; ಸೇನಾಧಿನಾಥ: ಸೇನಾಪತಿ; ಅರಿ: ತಿಳಿ; ಉಳಿದ: ಮಿಕ್ಕ; ಸತ್ಕರಿಸು: ಗೌರವಿಸು; ನುಡಿ: ಮಾತಾಡು; ಮುನಿ: ಋಷಿ; ಕಡಿ: ಸೀಳು; ಅನ್ವಯ: ವಂಶ; ಕಲ್ಪಭೂರುಹ: ಕಲ್ಪವೃಕ್ಷ;

ಪದವಿಂಗಡಣೆ:
ವರ+ಮುನೀಶ್ವರರ್+ಅವನಿಯಲಿ +ಮೂ
ವರಿಗೆ +ಗೋಚರವಾದರ್+ಇತ್ತಲು
ಮುರವಿರೋಧಿಗೆ +ನರಗೆ +ಕುರು+ಸೇನಾಧಿನಾಥಂಗೆ
ಅರಿಯರ್+ಉಳಿದವರ್+ಈತನಿಂ +ಸ
ತ್ಕರಿಸಿಕೊಂಡರು +ನುಡಿದರಾ +ಮುನಿ
ವರರು +ಕಡಿದರು +ಕೌರವಾನ್ವಯ +ಕಲ್ಪಭೂರುಹವ

ಅಚ್ಚರಿ:
(೧) ಕೃಷ್ಣನನ್ನು ಮುರವಿರೋಧಿ, ದ್ರೋಣರನ್ನು ಕುರುಸೇನಾಧಿನಾಥ ಎಂದು ಕರೆದಿರುವುದು
(೨) ಕ ಕಾರದ ತ್ರಿವಳಿ ಪದ – ಕಡಿದರು ಕೌರವಾನ್ವಯ ಕಲ್ಪಭೂರುಹವ

ಪದ್ಯ ೩: ರಾಜರು ಯಾರನ್ನು ಪ್ರಾರ್ಥಿಸಿ ಸ್ವಯಂವರಕ್ಕೆ ಮುನ್ನಡೆದರು?

ಹರಸಿಕೊಂಡರು ನಿಖಿಳ ಪೃಥ್ವೀ
ಶ್ವರರು ಮಾಯಾಪುರದ ಕಾಂಚೀ
ಪುರದ ಜಾಳಾಂಧರದ ವಿವಿಧ ಸ್ಥಾನ ದೇವರಿಗೆ
ಕರಿಮುಖನ ಕಜ್ಜಾಯದಲಿ ಸ
ತ್ಕರಿಸಿ ಸಂಶಯ ಭೇದವರ್ಗದ
ಹರುಷದಲಿ ಹೊರವಂಟರೊಬ್ಬರನೊಬ್ಬರುವವಣಿಸಿ (ಆದಿ ಪರ್ವ, ೧೩ ಸಂಧಿ, ೩ ಪದ್ಯ)

ತಾತ್ಪರ್ಯ:
ಎಲ್ಲಾ ಪ್ರಾಂತ್ಯದಿಂದ ಬಂದ ರಾಜರು, ಹರಿದ್ವಾರದ ಗಂಗೆಯನ್ನು, ಕಾಂಚೀಪುರದ ಕಾಮಾಕ್ಷಿಯನ್ನು, ಜಾಳಂಧರದ ವಿಷ್ಣುಮುಖಿ ದೇವಿಯರನ್ನು ಧ್ಯಾನಿಸಿ, ಗಣೇಶನಿಗೆ ಪ್ರಿಯವಾದ ಕಜ್ಜಾಯವನ್ನು ನೇವೇದ್ಯಮಾಡಿ, ದ್ರೌಪದಿ ದೊರಕುವಳೋ, ಏಕೆ ದೊರಕಬಾರದು ಎಂಬ ಇಬ್ಬಾಗ ಸಂಶಯದಲ್ಲಿ ಹರುಷದಿಂದಲೇ ಒಬ್ಬರಿಗಿಂತ ಒಬ್ಬರು ಮುಂದುವರೆದರು.

ಅರ್ಥ:
ಹರಸು:ಹರಕೆ ಹೊರು, ಬೇಡಿಕೊ, ಕೊಂಡಾಡು; ನಿಖಿಳ: ಎಲ್ಲಾ; ಪೃಥ್ವಿ: ಭೂಮಿ; ಪೃಥ್ವೀಶ್ವರ: ರಾಜ; ಪುರ: ಊರು; ಮಾಯಾಪುರ: ಹರಿದ್ವಾರ; ವಿವಿಧ: ಬಗೆಬಗೆ; ಸ್ಥಾನ: ಜಾಗ; ದೇವರು: ಭಗವಂತ; ಕರಿ: ಆನೆ; ಕರಿಮುಖ: ಗಣಪತಿ; ಸತ್ಕಾರ: ಗೌರವಿಸು, ಮನ್ನಣೆ; ಸಂಶಯ: ಗೊಂದಲ; ಭೇದ: ಒಡೆಯುವುದು; ಹರುಷ: ಸಂತೋಷ; ಉರವಣಿಸು: ರಭಸದಿಂದ ಮುನ್ನುಗ್ಗು;

ಪದವಿಂಗಡಣೆ:
ಹರಸಿಕೊಂಡರು +ನಿಖಿಳ+ ಪೃಥ್ವೀ
ಶ್ವರರು +ಮಾಯಾಪುರದ+ ಕಾಂಚೀ
ಪುರದ +ಜಾಳಾಂಧರದ+ ವಿವಿಧ +ಸ್ಥಾನ +ದೇವರಿಗೆ
ಕರಿಮುಖನ +ಕಜ್ಜಾಯದಲಿ +ಸ
ತ್ಕರಿಸಿ +ಸಂಶಯ +ಭೇದವರ್ಗದ
ಹರುಷದಲಿ+ ಹೊರವಂಟರ್+ಒಬ್ಬರನ್+ಒಬ್ಬರ್+ಉರವಣಿಸಿ

ಅಚ್ಚರಿ:
(೧) ಜೋಡಿ ಪದಗಳು: ಕರಿಮುಖನ ಕಜ್ಜಾಯದಲಿ, ಸತ್ಕರಿಸಿ ಸಂಶಯ, ಹರುಷದಲಿ ಹೊರವಂಟರ್
(೨) ಹರಸಿ, ಸತ್ಕರಿಸಿ – ದೇವರನ್ನು ಒಲಿಸುವ ಪರಿ
(೩) ಎಲ್ಲಾ ಜಾಗಗಳ ಹೆಸರು ದೀರ್ಘಸ್ವರದಿಂದ ಪ್ರಾರಂಭ: ಮಾಯಾಪುರ, ಕಾಂಚೀಪುರ, ಜಾಳಾಂಧರ