ಪದ್ಯ ೪೫: ದ್ರೌಪದಿಗೆ ಸಂದೇಶವು ಹೇಗೆ ತಲುಪಿತು?

ಬಂದು ಬಾಗಿಲ ಕಾಹಿಗಳ ಕರೆ
ದೆಂದನರಸಿಗೆ ಬಿನ್ನವಿಸಿ ತಾ
ಬಂದ ಹದನನು ಕಾರ್ಯವುಂಟೆನೆ ಹಲವು ಬಾಗಿಲಲಿ
ಬಂದುದಲ್ಲಿಯದಲ್ಲಿಗರುಹಿಸ
ಲಿಂದುಮುಖಿ ಕೇಳಿದಳು ಬರಹೇ
ಳೆಂದರಾತನ ಹೊಗಿಸಿದರು ಹೊಕ್ಕನು ಸತೀ ಸಭೆಯ (ಸಭಾ ಪರ್ವ, ೧೫ ಸಂಧಿ, ೪೫ ಪದ್ಯ)

ತಾತ್ಪರ್ಯ:
ದುರ್ಯೋಧನನ ಆದೇಶವನ್ನು ಹೊತ್ತ ಪ್ರಾತಿಕಾಮಿಕನು ದ್ರೌಪದಿಯ ಅರಮನೆಯ ಬಾಗಿಲಿಗೆ ಬಂದು ಅಲ್ಲಿದ್ದ ಕಾವಲುಗಾರನನ್ನು ಕರೆದು ತಾನು ಬಂದಿರುವುದನ್ನು ರಾಣಿಗೆ ತಿಳಿಸಿ ಅವರ ಬಳಿ ನನಗೆ ಸ್ವಲ್ಪ ಕೆಲವಿದೆ ಎಂದು ಹೇಳಲು ತಿಳಿಸಿದನು. ಹೊರಬಾಗಿಲಿನ ಕಾವಲುಗಾರ ಎರಡನೆಯ ಬಾಗಿಲಿನವನಿಗೆ, ಎರಡನೆಯವ ಮೂರನೆಯವನಿಗೆ, ಹೀಗೆ ಹಲವು ಬಾಗಿಲನ್ನು ದಾಟಿ ಆ ಸುದ್ದಿಯು ದ್ರೌಪದಿಗೆ ತಿಳಿಯಿತು. ಅವನನ್ನು ಬರಹೇಳಿರೆಂದು ದ್ರೌಪದಿಯು ಹೇಳಲು, ಪಾತಿಕಾಮಿಕನನ್ನು ಒಳಗೆ ಹೋಗಲು ಬಿಡಲು ಅವನು ದ್ರೌಪದಿಯಿದ್ದ ಸ್ತ್ರಿಯರ ಸಭೆಗೆ ಬಂದನು.

ಅರ್ಥ:
ಬಂದು: ಆಗಮಿಸು; ಬಾಗಿಲು: ಕದ; ಕಾಹಿ: ಕಾಯುವವ; ಕರೆ: ಬರೆಮಾಡು; ಅರಸಿ: ರಾಣಿ; ಬಿನ್ನವಿಸು: ತಿಳಿಸು; ಹದನ: ಔಚಿತ್ಯ, ರೀತಿ; ಕಾರ್ಯ: ಕೆಲಸ; ಹಲವು: ಬಹಳ; ಅರುಹು:ತಿಳಿಸು, ಹೇಳು; ಇಂದುಮುಖಿ: ಚಂದ್ರನಂತ ಮುಖವುಳ್ಳವಳು (ದ್ರೌಪದಿ); ಕೇಳು: ಪ್ರಶ್ನಿಸು; ಹೊಗಿಸು: ಪ್ರವೇಶಕ್ಕೆ ಅನುಮತಿಯನ್ನು ಕೊಡು; ಹೊಕ್ಕು: ಸೇರು; ಸತೀ: ಸ್ತ್ರೀ; ಸಭೆ: ಓಲಗ;

ಪದವಿಂಗಡಣೆ:
ಬಂದು +ಬಾಗಿಲ +ಕಾಹಿಗಳ+ ಕರೆ
ದೆಂದನ್+ಅರಸಿಗೆ +ಬಿನ್ನವಿಸಿ +ತಾ
ಬಂದ +ಹದನನು +ಕಾರ್ಯವುಂಟ್+ಎನೆ +ಹಲವು +ಬಾಗಿಲಲಿ
ಬಂದುದ್+ಅಲ್ಲಿಯದ್+ಅಲ್ಲಿಗ್+ಅರುಹಿಸಲ್
ಇಂದುಮುಖಿ +ಕೇಳಿದಳು +ಬರಹೇ
ಳೆಂದರ್+ಆತನ +ಹೊಗಿಸಿದರು +ಹೊಕ್ಕನು +ಸತೀ +ಸಭೆಯ

ಅಚ್ಚರಿ:
(೧) ರಾಣಿಯರ ಅರಮನೆಯ ರಕ್ಷಣೆಯನ್ನು ವಿವರಿಸುವ ಪರಿ – ಹಲವು ಬಾಗಿಲಲಿ ಬಂದುದಲ್ಲಿಯದಲ್ಲಿ
(೨) ಜೋಡಿ ಪದಗಳು – ಹೊಗಿಸಿದರು ಹೊಕ್ಕನು; ಸತೀ ಸಭೆಯ