ಪದ್ಯ ೨೨: ಗಣಿಕೆಯರು ಹೇಗೆ ಚಲಿಸಿದರು?

ಬಲುಮೊಲೆಗಳಳ್ಳಿರಿಯಲೇಕಾ
ವಳಿಗಳನು ಕೆಲಕೊತ್ತಿ ಮೇಲುದ
ಕಳಚಿ ನಡುಗಿಸಿ ನಡುವನಂಜಿಸಿ ಜಘನ ಮಂಡಲವ
ಆಳಕನಿಕರವ ಕುಣಿಸಿ ಮಣಿಕುಂ
ಡಲವನಲುಗಿಸಿ ಹಣೆಯ ಮುತ್ತಿನ
ತಿಲಕವನು ತನಿಗೆದರಿ ನಡೆದುದು ಕೂಡೆ ಸತಿನಿವಹ (ಅರಣ್ಯ ಪರ್ವ, ೧೯ ಸಂಧಿ, ೨೨ ಪದ್ಯ)

ತಾತ್ಪರ್ಯ:
ಗಣಿಕೆಯರ ತುಂಬಿರುವ ಸ್ತನಗಳು ಅಲ್ಲಾಡುತ್ತಿರಲು, ಒಂದೆಳೆಯ ಸರಳನ್ನು ಪಕ್ಕಕ್ಕೆ ಸರಿಸಿ, ಅವರ ಮೇಲಿದ್ದೆ ಸೆರಗು ಕಳಚಿ ಬೀಳಲು, ನಿತಂಬವನ್ನು ಕುಣಿಸಿ, ನದುವು ಹೆದರಲು, ಮುಂಗುರುಳುಗಳು ಕುಣಿಯುತ್ತಿರಲು, ಮಣಿಕುಂಡಲಗಳು ಅಲುಗಾಡುತ್ತಿರಲು, ಹಣೆಯ ಮುತ್ತು ತಿಲಕವು ಕೆದರಲು ತರುಣಿಯರು ನಡೆದರು.

ಅರ್ಥ:
ಬಲು: ಗಟ್ಟಿ, ದೊಡ್ಡದಾದ; ಮೊಲೆ: ಸ್ತನ; ಅಳ್ಳಿರಿ: ಅಲುಗಾಡು; ಏಕಾವಳಿ: ಒಂದೆಳೆಯಸರ, ಒಂದು ಮುತ್ತಿನ ಸರ; ಕೆಲಕೊತ್ತು: ಪಕ್ಕಕ್ಕೆ ಇಡು; ಮೇಲುದು: ಸೆರಗು; ಕಳಚು: ಬಿಚ್ಚು; ನಡುಗು: ಅಲ್ಲಾಡು; ನಡು: ಮಧ್ಯಭಾಗ; ಅಂಜಿಸು: ಹೆದರಿಸು; ಜಘ: ನಿತಂಬ, ಕಟಿ; ಮಂಡಲ: ಗುಂಡಾಗಿರುವ ಪ್ರದೇಶ; ಅಳಕ: ಗುಂಗುರು ಕೂದಲು, ಮುಂಗುರುಳು; ನಿಕರ: ಗುಂಪು; ಕುಣಿಸು: ನರ್ತಿಸು; ಮಣಿ: ರತ್ನ; ಕುಂಡಲ: ಕಿವಿಯ ಆಭರಣ; ಅಲುಗಿಸು: ಅಲ್ಲಾಡಿಸು; ಹಣೆ: ಲಲಾಟ; ಮುತ್ತು: ರತ್ನ; ತಿಲಕ: ಹಣೆಯಲ್ಲಿಡುವ ಬೊಟ್ಟು; ತನಿ: ಚೆನ್ನಾಗಿ ಬೆಳೆದ, ಅತಿಶಯವಾದ; ಕೆದರು: ಹರಡು; ನಡೆ: ಚಲಿಸು; ಕೂಡೆ: ಜೊತೆ; ಸತಿ: ಹೆಣ್ಣು; ನಿವಹ: ಗುಂಪು;

ಪದವಿಂಗಡಣೆ:
ಬಲು+ಮೊಲೆಗಳ್+ಅಳ್ಳಿರಿಯಲ್+ಏಕಾ
ವಳಿಗಳನು +ಕೆಲಕ್+ಒತ್ತಿ +ಮೇಲುದ
ಕಳಚಿ +ನಡುಗಿಸಿ+ ನಡುವನ್+ಅಂಜಿಸಿ +ಜಘನ+ ಮಂಡಲವ
ಆಳಕ+ನಿಕರವ +ಕುಣಿಸಿ +ಮಣಿ+ಕುಂ
ಡಲವನಲುಗಿಸಿ ಹಣೆಯ ಮುತ್ತಿನ
ತಿಲಕವನು+ ತನಿಗೆದರಿ+ ನಡೆದುದು +ಕೂಡೆ +ಸತಿ+ನಿವಹ

ಅಚ್ಚರಿ:
(೧) ಹೆಣ್ಣಿನ ಸೌಂದರ್ಯವನ್ನು ತೋರುವ ಪದ್ಯ – ಬಲುಮೊಲೆಗಳಳ್ಳಿರಿಯಲೇಕಾ
ವಳಿಗಳನು ಕೆಲಕೊತ್ತಿ ಮೇಲುದಕಳಚಿ ನಡುಗಿಸಿ ನಡುವನಂಜಿಸಿ ಜಘನ ಮಂಡಲವ