ಪದ್ಯ ೫೮: ಜಗತ್ತು ಯಾರ ಲೀಲೆಯ ಸೃಷ್ಟಿ?

ಮರುಳೆ ಫಲುಗುಣ ಕೇಳು ಸಚರಾ
ಚರವೆನಿಪ ಜಗವೆನ್ನ ಲೀಲಾ
ಚರಿತದಲಿ ತೋರುವುದು ಹರೆವುದು ನನ್ನ ನೇಮದಲಿ
ನಿರುತ ನೀ ಕೇಳುವರೆ ತಿರ್ಯಕ್
ನರ ಸುರಾದಿಗಳೆಂಬ ಸಚರಾ
ಚರವಿದಾನಲ್ಲದೆ ವಿಚಾರಿಸಲನ್ಯವಿಲ್ಲೆಂದ (ಭೀಷ್ಮ ಪರ್ವ, ೩ ಸಂಧಿ, ೫೮ ಪದ್ಯ)

ತಾತ್ಪರ್ಯ:
ಸಚರಾಚರವಾದ ಈ ಜಗತ್ತು ನನ್ನ ಲೀಲೆಯಿಂದ ತೋರುತ್ತದೆ, ಅಡಗುತ್ತದೆ. ದೇವ, ಮಾನವ, ತಿರ್ಯಕ್ ಯೋನಿಗಳೂ ಜಗತ್ತೂ ನಾನೇ ಹೊರತು ಬೇರೆಯಲ್ಲ. ಇದು ಕ್ರಮಬದ್ಧ ವಿಚಾರದಿಂದ ತಿಳಿಯುತ್ತದೆ. ವಿವೇಕ ವಿಚಾರಗಳಿಲ್ಲದವರಿಗೆ ಇದು ತಿಳಿಯುವುದಿಲ್ಲ.

ಅರ್ಥ:
ಮರುಳೆ: ಮೂಢ; ಕೇಳು: ಆಲಿಸು; ಚರಾಚರ: ಚಲಿಸುವ-ಚಲಿಸದಿರುವ; ಜಗ: ಪ್ರಪಂಅ; ಲೀಲೆ: ಆನಂದ, ಸಂತೋಷ; ಚರಿತ: ಇತಿಹಾಸ, ನಡಿಗೆ; ತೋರು: ಗೋಚರಿಸು; ಹರೆವು: ಚಲಿಸು; ನೇಮ: ನಿಯಮ; ನಿರುತ: ದಿಟ, ಸತ್ಯ, ನಿಶ್ಚಯ; ತಿರ್ಯಕ್: ಪಶುಪಕ್ಷಿ ಮುಂತಾದ ಪ್ರಾಣಿವರ್ಗ; ನರ: ಮನುಷ್ಯ; ಸುರ: ದೇವತೆ; ಆದಿ: ಮುಂತಾದ; ವಿಚಾರ: ವಿಮರ್ಶೆ; ಅನ್ಯ; ಬೇರೆ;

ಪದವಿಂಗಡಣೆ:
ಮರುಳೆ+ ಫಲುಗುಣ +ಕೇಳು +ಸಚರಾ
ಚರವೆನಿಪ +ಜಗವೆನ್ನ +ಲೀಲಾ
ಚರಿತದಲಿ +ತೋರುವುದು +ಹರೆವುದು +ನನ್ನ +ನೇಮದಲಿ
ನಿರುತ +ನೀ +ಕೇಳುವರೆ +ತಿರ್ಯಕ್
ನರ +ಸುರ+ಆದಿಗಳೆಂಬ +ಸಚರಾ
ಚರವಿದಾನಲ್ಲದೆ +ವಿಚಾರಿಸಲ್+ಅನ್ಯವಿಲ್ಲೆಂದ

ಅಚ್ಚರಿ:
(೧) ಸಚರಾಚರ – ೨, ೫ ಆಲಿನ ಕೊನೆಯ ಪದ
(೨) ಜಗತ್ತಿನ ಸೃಷ್ಟಿ – ಜಗವೆನ್ನ ಲೀಲಾ ಚರಿತದಲಿ ತೋರುವುದು ಹರೆವುದು ನನ್ನ ನೇಮದಲಿ

ಪದ್ಯ ೨೪: ದ್ರೌಪದಿಯು ಕೃಷ್ಣನನ್ನು ಹೇಗೆ ಆರಾಧಿಸಿದಳು?

ಶ್ರೀ ರಮಾವರ ದೈತ್ಯಕುಲ ಸಂ
ಹಾರ ಹರಿ ಭವ ಜನನ ಮರಣಕು
ಠಾರ ನಿಗಮವಿದೂರ ಸಚರಾಚರ ಜಗನ್ನಾಥ
ಚಾರುಗುಣ ಗಂಭೀರ ಕರುಣಾ
ಕಾರ ವಿಹಿತ ವಿಚಾರ ಪಾರಾ
ವಾರ ಹರಿ ಮೈದೋರೆನುತ ಹಲುಬಿದಳು ಲಲಿತಾಂಗಿ (ಅರಣ್ಯ ಪರ್ವ, ೧೭ ಸಂಧಿ, ೨೪ ಪದ್ಯ)

ತಾತ್ಪರ್ಯ:
ಲಕ್ಷ್ಮೀ ದೇವಿಯ ಪತಿಯೇ, ರಾಕ್ಷಸ ಕುಲ ಸಂಹಾರಕನೇ, ಹುಟ್ತು ಸಾವಿನ ಚಕ್ರರೂಪವಾದ ಸಂಸಾರ ವೃಕ್ಷಕ್ಕೆ ಕೊಡಲಿಯಾದವನೇ, ವೇದಗಳಿಗೆ ನಿಲುಕದವನೇ, ಸಮಸ್ತ ಜೀವಿಸುವ ಮತ್ತು ನಿರ್ಜೀವ ವಸ್ತುಗಳ ಜಗತ್ತಿನ ಈಶ್ವರನೇ, ಕಲ್ಯಾಣ ಗುಣಗುಂಭೀರನೇ, ಕರುಣೆಯೇ ಮೂರ್ತಿಯಾದಂತಿರುವವನೇ, ಸಕ್ರಮ ವಿಚಾರದ ಎಲ್ಲೆಯಲ್ಲಿ ದೊರಕುವವನೇ, ಶ್ರೀಕೃಷ್ಣನು ಪ್ರತ್ಯಕ್ಷನಾಗು ಎಂದು ದ್ರೌಪದಿ ಬೇಡಿದಳು.

ಅರ್ಥ:
ರಮಾವರ: ಲಕ್ಷಿಯ ಪಿತ; ದೈತ್ಯ: ರಾಕ್ಷಸ; ಕುಲ: ವಂಶ; ಸಂಹಾರ: ನಾಶ; ಭವ: ಇರುವಿಕೆ, ಅಸ್ತಿತ್ವ; ಜನನ: ಹುಟ್ಟು; ಮರಣ: ಸಾವು; ಕುಠಾರ: ಕೊಡಲಿ; ನಿಗಮ: ಶೃತಿ, ವೇದ; ವಿದೂರ: ನಿಲುಕದವ; ಚರಾಚರ: ಜೀವವಿರುವ ಮತ್ತು ಇಲ್ಲದಿರುವ; ಜಗನ್ನಾಥ: ಜಗತ್ತಿನ ಒಡೆಯ; ಚಾರು: ಸುಂದರ; ಗುಣ: ಸ್ವಭಾವ; ಗಂಭೀರ: ಆಳವಾದ, ಗಹನವಾದ; ಕರುಣ: ದಯೆ; ವಿಹಿತ: ಯೋಗ್ಯ; ವಿಚಾರ: ವಿಷಯ, ಸಂಗತಿ; ಪಾರಾವಾರ: ಸಮುದ್ರ, ಕಡಲು, ಎಲ್ಲೆ; ಮೈದೋರು: ಕಾಣಿಸಿಕೋ, ಪ್ರತ್ಯಕ್ಷನಾಗು; ಹಲುಬು: ಬೇಡು; ಲಲಿತಾಂಗಿ: ಬಳ್ಳಿಯಂತೆ ದೇಹವುಳ್ಳವಳು, ಸುಂದರಿ (ದ್ರೌಪದಿ)

ಪದವಿಂಗಡಣೆ:
ಶ್ರೀ+ ರಮಾವರ +ದೈತ್ಯಕುಲ +ಸಂ
ಹಾರ +ಹರಿ +ಭವ +ಜನನ +ಮರಣ+ಕು
ಠಾರ +ನಿಗಮವಿದೂರ +ಸಚರಾಚರ +ಜಗನ್ನಾಥ
ಚಾರುಗುಣ+ ಗಂಭೀರ +ಕರುಣಾ
ಕಾರ +ವಿಹಿತ +ವಿಚಾರ +ಪಾರಾ
ವಾರ +ಹರಿ +ಮೈದೋರೆನುತ +ಹಲುಬಿದಳು +ಲಲಿತಾಂಗಿ

ಅಚ್ಚರಿ:
(೧) ಸಂಹಾರ, ಕುಠಾರ, ಪಾರಾವಾರ – ಪ್ರಾಸಪದ
(೨) ಕೃಷ್ಣನ ಗುಣಗಾನ – ದೈತ್ಯಕುಲ ಸಂಹಾರ, ನಿಗಮವಿದೂರ, ಚಾರುಗುಣ, ಗಂಭೀರ, ವಿಹಿತ ವಿಚಾರ, ಪಾರಾವಾರ

ಪದ್ಯ ೭೨: ಕಾಲವೆಂಬುದೇನು?

ಕಾಲವೆಂಬುದು ರವಿಯ ಗಾಲಿಯ
ಕಾಲಗತಿಯೈ ಸಲೆ ಕೃತಾಂತಗೆ
ಲೀಲೆ ಸೃಷ್ಟಿ ಸ್ಥಿತಿಲಯವು ಸಚರಾಚರಗಳಲಿ
ಕಾಲ ಚಕ್ರದ ಖಚರ ಗತಿಯಲಿ
ಕಾಳಗತ್ತಲೆಯನು ನಿವಾರಿಸಿ
ಪಾಲಿಸುವ ಲೋಕಂಗಳಿನಿತುವ ಪಾರ್ಥ ನೋಡೆಂದ (ಅರಣ್ಯ ಪರ್ವ, ೮ ಸಂಧಿ, ೭೨ ಪದ್ಯ)

ತಾತ್ಪರ್ಯ:
ಪಾರ್ಥ ಕೇಳು, ಕಾಲವೆಂಬುದು ಸೂರ್ಯನ ರಥದ ಚಕ್ರದ ಚಲನೆ. ಇದು ಯಮನ ಲೀಲಾವಿನೋದ. ಚಲಿಸುವ ಮತ್ತು ಜಡವಸ್ತುಗಳ ಸೃಷ್ಟಿ, ಸ್ಥಿತಿ, ಲಯಗಳನ್ನು ಸೂರ್ಯನು ಆಕಾಶದಲ್ಲಿ ಚಲಿಸುತ್ತಾ ನಿಯಂತ್ರಿಸುತ್ತಾನೆ, ಕತ್ತಲೆಯನ್ನು ಕಳೆದು ಲೋಕಗಳನ್ನು ಪಾಲಿಸುತ್ತಾನೆ.

ಅರ್ಥ:
ಕಾಲ: ಸಮಯ; ರವಿ: ಸೂರ್ಯ; ಗಾಲಿ: ಚಕ್ರ; ಗತಿ: ಚಲನೆ, ವೇಗ; ಸಲೆ: ಒಂದೇ ಸಮನೆ; ಕೃತಾಂತ: ಯಮ; ಲೀಲೆ: ಆನಂದ, ಸಂತೋಷ; ಸೃಷ್ಟಿ: ಹುಟ್ಟು; ಸ್ಥಿತಿ: ಅವಸ್ಥೆ; ಲಯ; ನಾಶ; ಚರಾಚರ: ಚಲಿಸುವ-ಚಲಿಸದಿರುವ; ಚಕ್ರ: ಗಾಲಿ; ಖಚರ: ಸೂರ್ಯ; ಕಾಳಗತ್ತಲೆ: ಅಂಧಕಾರ; ನಿವಾರಿಸು: ಹೋಗಲಾಡಿಸು; ಪಾಲಿಸು: ರಕ್ಷಿಸು, ಕಾಪಾಡು; ಲೋಕ: ಜಗತ್ತು; ನೋಡು: ವೀಕ್ಷಿಸು;

ಪದವಿಂಗಡಣೆ:
ಕಾಲವೆಂಬುದು +ರವಿಯ +ಗಾಲಿಯ
ಕಾಲಗತಿಯೈ+ ಸಲೆ+ ಕೃತಾಂತಗೆ
ಲೀಲೆ +ಸೃಷ್ಟಿ +ಸ್ಥಿತಿ+ಲಯವು +ಸಚರಾಚರಗಳಲಿ
ಕಾಲ +ಚಕ್ರದ +ಖಚರ +ಗತಿಯಲಿ
ಕಾಳಗತ್ತಲೆಯನು +ನಿವಾರಿಸಿ
ಪಾಲಿಸುವ +ಲೋಕಂಗಳಿನಿತುವ+ ಪಾರ್ಥ +ನೋಡೆಂದ

ಅಚ್ಚರಿ:
(೧) ಕಾಲದ ವಿವರ – ಕಾಲವೆಂಬುದು ರವಿಯ ಗಾಲಿಯ ಕಾಲಗತಿಯೈ

ಪದ್ಯ ೫೦: ಯಾರನ್ನು ಪೂಜಿಸಬೇಕು?

ಮೆರೆವ ಸಚರಾಚರವಿದೆಲ್ಲವ
ನಿರುತ ತಾನೆಂದರಿತು ತನ್ನಿಂ
ದಿರವು ಬೇರಿಲ್ಲೆಂಬ ಕಾಣಿಕೆ ಯಾವನೊಬ್ಬನೊಳು
ಇರುತಿಹುದದಾವಗಮವನು ಸ
ತ್ಪುರುಷನಾತನ ಪೂಜಿಸುವುದಿಹ
ಪರದ ಸುಕೃತವ ಬಯಸುವವರವನೀಶ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೫೦ ಪದ್ಯ)

ತಾತ್ಪರ್ಯ:
ಸಮಸ್ತ ಚರಾಚರಗಳೆಲ್ಲವೂ ತಾನೇ ಎಂದು ಅರಿತು ತನ್ನನ್ನು ಬಿಟ್ಟು ಬೇರೆ ಯಾವುದೂ ಇಲ್ಲವೆಂದು ಯಾವನು ಯಾವಾಗಲೂ ಕಾಣುವನೋ ಅವನೇ ಸತ್ಪುರುಷ. ಇಹಪರದಲ್ಲಿ ಲೇಸನ್ನು ಬಯಸುವವರು ಅವನನ್ನು ಪೂಜಿಸಬೇಕು ಎಂದು ಸನತ್ಸುಜಾತರು ಹೇಳಿದರು.

ಅರ್ಥ:
ಮೆರೆ: ಹೊಳೆ, ಪ್ರಕಾಶಿಸು; ಚರಾಚರ: ಚಲಿಸುವ ಮತ್ತು ಚಲಿಸದ ವಸ್ತುಗಳು; ನಿರುತ: ಸತ್ಯವಾಗಿ; ತಾನೆಂದು: ನಾನು; ಅರಿತು: ತಿಳಿದು; ಇರವು: ಇರುವಿಕೆ, ವಾಸ; ಬೇರೆ: ಅನ್ಯ; ಕಾಣಿಕೆ: ಕೊಡುಗೆ; ಇರುತಿಹುದು: ಇದೆಯೋ; ಸತ್ಪುರುಷ: ಸಜ್ಜನ; ಪೂಜಿಸು: ಅರ್ಚಿಸು; ಇಹಪರ: ಈ ಲೋಕ ಮತ್ತು ಪರ ಲೋಕ; ಸುಕೃತ: ಒಳ್ಳೆಯ ಕೆಲಸ; ಬಯಸು: ಕೋರು; ಅವನೀಶ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಮೆರೆವ +ಸಚರಾಚರವ್+ಇದೆಲ್ಲವ
ನಿರುತ+ ತಾನೆಂದರಿತು +ತನ್ನಿಂದ್
ಇರವು +ಬೇರಿಲ್ಲೆಂಬ +ಕಾಣಿಕೆ +ಯಾವನೊಬ್ಬನೊಳು
ಇರುತಿಹುದ್+ಅದ್+ಆವಗಮ್+ಅವನು +ಸ
ತ್ಪುರುಷನ್+ಆತನ+ ಪೂಜಿಸುವುದ್+ಇಹ
ಪರದ +ಸುಕೃತವ +ಬಯಸುವವರ್+ಅವನೀಶ +ಕೇಳೆಂದ

ಅಚ್ಚರಿ:
(೧) ಸತ್ಪುರುಷನ ಲಕ್ಷಣ – ಮೆರೆವ ಸಚರಾಚರವಿದೆಲ್ಲವ ನಿರುತ ತಾನೆಂದರಿತು ತನ್ನಿಂದಿರವು ಬೇರಿಲ್ಲೆಂಬ ಕಾಣಿಕೆ ಯಾವನೊಬ್ಬನೊಳು ಇರುತಿಹುದದಾವಗಮವನು ಸತ್ಪುರುಷನು
(೨) ಸತ್ಪುರುಷ, ಸುಕೃತ, ಸಚರಾಚರ – ‘ಸ’ಕಾರದ ಪದಗಳ ಬಳಕೆ

ಪದ್ಯ ೯: ಕೃಷ್ಣನು ಎಲ್ಲಿರುವನು?

ಜಲಧಿ ಮಧ್ಯದೊಳಿರವೊ ಗಗನ
ಸ್ಥಳವೊ ಮೇಣು ಮಹಾಂಧಕಾರದ
ಕಳಿವುಗಳ ವೈಕುಂಟವೋ ಮುನಿಜನದ ಹೃದ್ಗುಹೆಯೊ
ತಿಳಿಯೆ ಸಚರಾಚರದ ಚೇತನ
ದೊಳಗೆಯೋ ನೆಲೆಯಾವುದೆಂಬ
ಗ್ಗಳೆಯ ದೈವದ ನಿಲವ ಕಂಡೆನು ಪಾರ್ಥ ಭವನದಲಿ (ಆದಿ ಪರ್ವ, ೨೦ ಸಂಧಿ, ೯ ಪದ್ಯ)

ತಾತ್ಪರ್ಯ:
ಪರಮಾತ್ಮನಾದ ಕೃಷ್ಣನು ಎಲ್ಲಿರುವನೆಂದು ಹಲವರು ಪ್ರಶ್ನಿಸುತ್ತಾರೆ, ಅವನು ಕ್ಷೀರಸಾಗರದ ಮಧ್ಯೆಯೋ, ಆಕಾಶದಲ್ಲೋ, ಮಹಾಂಧಕಾರದ ಆಚೆಗೊ, ವೈಕುಂಟದಲ್ಲೋ, ಯೋಗಿಗಳ ಹೃದಯದಲ್ಲೋ, ಚಲಿಸುವ, ಸ್ಥಿರವಾಗಿರುವ, ಚೈತನ್ಯವಾಗಿರುವ ಸಮಸ್ತ ಜೀವರಾಶಿಗಳಲ್ಲೋ ಎಲ್ಲಿ ಅವನ ನೆಲೆ ಎಂದು ಪ್ರಶ್ನಿಸಿದರೆ, ಹಲವರು ಹಲವು ರೀತಿಯಲ್ಲಿ ಉತ್ತರಿಸುತ್ತಾರೆ, ಆದರೆ ಅವನಿರುವುದು ಅರ್ಜುನನ ಭವನದಲ್ಲಿ ಎಂದು ನಾನು ನೋಡಿದೆ ಎಂದು ವೈಶಂಪಾಯನರು ಜನಮೇಜಯನಿಗೆ ಹೇಳಿದರು.

ಅರ್ಥ:
ಜಲಧಿ: ಸಮುದ್ರ; ಮಧ್ಯ: ನಡು; ಇರವೊ: ಇರುವಿಕೆ, ವಾಸಸ್ಥಾನ; ಗಗನ: ಆಕಾಶ; ಮೇಣು: ಅಥವ; ಮಹಾಂಧಕಾರ: ಗಾಢಕತ್ತಲೆ; ಕಳಿವು: ಬರಡು; ಮುನಿ: ಋಷಿ; ಹೃದ್: ಎದೆ, ವಕ್ಷಸ್ಥಳ; ಗುಹೆ: ಗವಿ; ತಿಳಿಯೆ: ತಿಳಿಯದು; ಸಚರ: ಚಲನೆಯಲ್ಲಿರುವುದು; ಅಚರ: ಸ್ಥಿರ; ಚೇತನ:ಪ್ರಜ್ಞೆ; ನೆಲೆ: ಆಶ್ರಯ; ಅಗ್ಗ:ಶ್ರೇಷ್ಠತೆ; ದೈವ: ದೇವರು; ನಿಲವ: ವಾಸಸ್ಥಾನ; ಕಂಡು: ನೋಡು; ಭವನ: ಮನೆ;

ಪದವಿಂಗಡಣೆ:
ಜಲಧಿ +ಮಧ್ಯದೊಳ್+ಇರವೊ +ಗಗನ
ಸ್ಥಳವೊ+ ಮೇಣು +ಮಹ+ಅಂಧಕಾರದ
ಕಳಿವುಗಳ+ ವೈಕುಂಟವೋ +ಮುನಿಜನದ+ ಹೃದ್ಗುಹೆಯೊ
ತಿಳಿಯೆ +ಸಚರ+ಅಚರದ+ ಚೇತನ
ದೊಳಗೆಯೋ +ನೆಲೆ+ಯಾವುದ್+ಎಂಬ್
ಅಗ್ಗಳೆಯ+ ದೈವದ+ ನಿಲವ+ ಕಂಡೆನು +ಪಾರ್ಥ +ಭವನದಲಿ

ಅಚ್ಚರಿ: