ಪದ್ಯ ೨೧: ಭೀಷ್ಮರು ದುರ್ಯೋಧನನಿಗೆ ಯಾವ ವಿಚಾರವನ್ನು ಹೇಳಿದರು?

ಜಗದಗುರುವಲ್ಲಾ ಮುರಾಂತಕ
ನಗಣಿತೋಪನು ಮಹಿಮನಲ್ಲಾ
ಸಗುಣ ನಿರ್ಗುಣನಾ ಮಹಾತ್ಮನನಂತ ರೂಪವನು
ವಿಗಡಿಸಲು ಜಯವಹುದೆ ಜಾಣರ
ಬಗೆಗೆ ಬಹುದೇ ನಿನ್ನ ಮತವೆಲೆ
ಮಗನೆ ಮರುಳಾದೈ ಮದಾಂಧರ ಮಾತುಗಳ ಕೇಳಿ (ಭೀಷ್ಮ ಪರ್ವ, ೧ ಸಂಧಿ, ೨೧ ಪದ್ಯ)

ತಾತ್ಪರ್ಯ:
ಭೀಷ್ಮ ದುರ್ಯೋಧನನನ್ನು ಉದ್ದೇಶಿಸು, ಮಗು ದುರ್ಯೋಧನ, ಶ್ರೀಕೃಷ್ಣನು ಜಗತ್ತಿಗೆ ಗುರುವಲ್ಲವೇ? ಅವನ ಮಹಿಮೆಯನ್ನು ಎಣಿಸಬಹುದೇ? ಅದಕ್ಕೆ ಹೋಲಿಕೆಯಾದರೂ ಇದೆಯೇ? ಅವನು ಸಗುಣನೂ ಹೌದು ನಿರ್ಗುಣನೂ ಹೌದು, ಅವನ ರೂಪವು ಅನಂತ, ಅವನನ್ನೆದುರಿಸಿದರೆ ಗೆಲ್ಲಬಹುದೇ ತಿಳಿದವರು ಮೆಚ್ಚುವರೇ? ನಿನ್ನ ಈ ಹವಣಿಕೆಯನ್ನು ಅವರು ಅನುಮೋದಿಸುವರೇ? ಮದಾಂಧರ ಮಾತುಗಳನ್ನು ಕೇಳಿ ನಿನ್ನ ಬುದ್ಧಿಗೆ ಹುಚ್ಚು ಹಿಡಿದಿದೆ ಎಂದು ದುರ್ಯೋಧನನಿಗೆ ಬುದ್ಧಿವಾದ ಹೇಳಿದರು.

ಅರ್ಥ:
ಜಗ: ಜಗತ್ತು; ಗುರು: ಆಚಾರ್ಯ; ಮುರಾಂತಕ: ಕೃಷ್ಣ; ಅಗಣಿತ: ಲೆಕ್ಕವಿಲ್ಲದಷ್ಟು; ಓಪ: ಸಂರಕ್ಷಿಸುವವ, ಪ್ರಿಯ; ಮಹಿಮ: ಹಿರಿಮೆ ಯುಳ್ಳವನು; ಸಗುಣ: ಯೋಗ್ಯಗುಣಗಳಿಂದ ಕೂಡಿದ; ನಿರ್ಗುಣ: ಗುಣವಿಲ್ಲದ; ಮಹಾತ್ಮ: ಶ್ರೇಷ್ಠ; ಅನಂತ: ಕೊನೆಯಿಲ್ಲದ; ರೂಪ: ಆಕಾರ; ವಿಗಡ: ಶೌರ್ಯ, ಸಾಹಸ; ಜಯ: ಗೆಲುವು; ಜಾಣ: ಬುದ್ಧಿವಂತ; ಬಗೆ: ಆಲೋಚನೆ; ಮತ: ವಿಚಾರ; ಮಗ: ಸುತ; ಮರುಳು: ಬುದ್ಧಿಭ್ರಮೆ, ಹುಚ್ಚು; ಮದಾಂಧ: ಮದದಿಂದ ಕುರುಡಾದ; ಮಾತು: ವಾಣಿ; ಕೇಳು: ಆಲಿಸು;

ಪದವಿಂಗಡಣೆ:
ಜಗದ+ಗುರುವಲ್ಲಾ+ ಮುರಾಂತಕನ್
ಅಗಣಿತ+ಒಪನು +ಮಹಿಮನಲ್ಲಾ
ಸಗುಣ+ ನಿರ್ಗುಣನ್+ಆ+ ಮಹಾತ್ಮನ್+ಅನಂತ +ರೂಪವನು
ವಿಗಡಿಸಲು +ಜಯವಹುದೆ +ಜಾಣರ
ಬಗೆಗೆ +ಬಹುದೇ +ನಿನ್ನ +ಮತವ್+ಎಲೆ
ಮಗನೆ+ ಮರುಳಾದೈ +ಮದಾಂಧರ +ಮಾತುಗಳ+ ಕೇಳಿ

ಅಚ್ಚರಿ:
(೧) ಕೃಷ್ಣನ ಗುಣಗಾನ – ಜಗದಗುರುವಲ್ಲಾ ಮುರಾಂತಕನಗಣಿತೋಪನು ಮಹಿಮನಲ್ಲಾ ಸಗುಣ ನಿರ್ಗುಣನಾ ಮಹಾತ್ಮನನಂತ ರೂಪವನು
(೨) ಮ ಕಾರದ ಸಾಲು ಪದ – ಮಗನೆ ಮರುಳಾದೈ ಮದಾಂಧರ ಮಾತುಗಳ ಕೇಳಿ

ಪದ್ಯ೩೦: ಕೃಷ್ಣನ ಗುಣಗಾನವನ್ನು ಭೀಷ್ಮರು ಹೇಗೆ ಮಾಡಿದರು?

ಆ ಮಧುವನಾ ಕೈಟಭನ ಮುರಿ
ದೀ ಮಹಾತ್ಮಕನೊಡನೆ ವಾದಿಸು
ವೀ ಮರುಳನೇನೆಂಬೆನೈ ಶಿಶುಪಾಲ ಬಾಲಕನ
ಕಾಮರಿಪು ಕಲ್ಪಾಂತವಹ್ನಿ
ವ್ಯೋಮರೂಪನುದಾರ ಸಗುಣ ಸ
ನಾಮ ಚಿನ್ಮಯನೀತನೀತನನರಿವರಾರೆಂದ (ಸಭಾ ಪರ್ವ, ೧೦ ಸಂಧಿ, ೩೦ ಪದ್ಯ)

ತಾತ್ಪರ್ಯ:
ರಾಕ್ಷಸರಾದ ಮಧು ಕೈಟಭರನ್ನು ಸಂಹರಿಸಿದ ಈ ಮಹಾತ್ಮನನೊಡನೆ ವಾದಮಾಡುವ ಮೂರ್ಖತನ ತೋರಿದ ಶಿಶುಪಾಲ ಬಾಲಕನೆಂಬ ಹುಚ್ಚನಿಗೆ ಏನೆಂದು ಹೇಳಲಿ, ಕಲ್ಪಾಂತದಲ್ಲಿ ಶಿವನ ಹಣೆಗಣ್ಣುರಿಯೂ ಇವನೇ, ಆಕಾಶದಂತೆ ನಿರ್ಲೇಪನು ಈತ, ಭಕ್ತರಿಗಾಗಿ ಔದಾರ್ಯದಿಂದ ಸಗುಣರೂಪದಲ್ಲಿ ಅವತರಿಸುತ್ತಾನೆ, ಇವನು ಪ್ರಸಿದ್ಧ ಚಿನ್ಮಯನು, ಇಂತಹವನನ್ನು ತಿಳಿಯಬಲ್ಲವರಾರು ಎಂದು ಭೀಷ್ಮರು ತಿಳಿಸಿದರು.

ಅರ್ಥ:
ಮುರಿ: ಸೀಳು; ಮಹಾತ್ಮ: ಶ್ರೇಷ್ಠ; ವಾದಿಸು: ಚರ್ಚಿಸು; ಮರುಳ: ಮೂಢ, ಹುಚ್ಚ; ಬಾಲಕ: ಶಿಶು; ಕಾಮರಿಪು: ಶಿವ; ಕಾಮ: ಮನ್ಮಥ; ರಿಪು: ವೈರಿ; ಕಲ್ಪ:ಬ್ರಹ್ಮನ ಒಂದು ದಿವಸ, ಸಹಸ್ರಯುಗ, ಪ್ರಳಯ; ಅಂತ: ಕೊನೆ; ವಹ್ನಿ: ಬೆಂಕಿ; ವ್ಯೋಮ:ಆಕಾಶ, ಗಗನ; ರೂಪ: ಆಕಾರ; ಸಗುಣ:ಯೋಗ್ಯಗುಣಗಳಿಂದ ಕೂಡಿದ; ಸನಾಮ: ಒಳ್ಳೆಯ ಹೆಸರು; ಚಿನ್ಮಯ: ಶುದ್ಧಜ್ಞಾನದಿಂದ ಕೂಡಿದ; ಅರಿ: ತಿಳಿ;

ಪದವಿಂಗಡಣೆ:
ಆ +ಮಧುವನ್+ಆ+ ಕೈಟಭನ+ ಮುರಿದ್
ಈ+ ಮಹಾತ್ಮಕನೊಡನೆ+ ವಾದಿಸುವ್
ಈ+ ಮರುಳನ್+ಏನೆಂಬೆನೈ +ಶಿಶುಪಾಲ +ಬಾಲಕನ
ಕಾಮರಿಪು+ ಕಲ್ಪಾಂತ+ವಹ್ನಿ
ವ್ಯೋಮ+ರೂಪನ್+ಉದಾರ+ ಸಗುಣ+ ಸ
ನಾಮ +ಚಿನ್ಮಯನ್+ಈತನ್+ಅರಿವರಾರೆಂದ

ಅಚ್ಚರಿ:
(೧) ಶಿಶುಪಾಲಕನನ್ನು ತೆಗಳುವ ಪರಿ – ಬಾಲಕ, ಮರುಳ
(೨) ಶಿವನನ್ನು ಕಾಮರಿಪು ಎಂದು ಕರೆದಿರುವುದು
(೩) ಕೃಷ್ಣನ ಗುಣಗಾನ: ಸಗುಣ, ಸನಾಮ, ಚಿನ್ಮಯ, ವಹ್ನಿ ವ್ಯೋಮ ರೂಪ, ಉದಾರ

ಪದ್ಯ ೨೭: ಶಿವನು ಯಾರನ್ನು ಪಶುಗಳೆಂದು ಕರೆದನು – ೨?

ಪಂಚವಿಂಶತಿ ತತ್ವರೂಪದ
ಸಂಚವರಿಯದೆ ನೀತಿಮುಖದಲಿ
ರಂಚೆಗಾಣದೆ ಸಗುಣಮಯ ನೀಹಾರದಲಿ ಮುಳುಗಿ
ಮಿಂಚುವೆಳಗಿನ ಬಳಕೆಯಲಿ ಮನ
ಮುಂಚಿ ಮೈಗೊಂಡಳಲುವಾತುಮ
ವಂಚಕರು ನೀವ್ ಪಶುಗಳೆಂದರೆ ಖೇದವೇಕೆಂದ (ಕರ್ಣ ಪರ್ವ, ೬ ಸಂಧಿ, ೨೭ ಪದ್ಯ)

ತಾತ್ಪರ್ಯ:
ಶಿವನು ದೇವತೆಗಳನ್ನು ಪಶುಗಳಿಗೆ ಹೋಲಿಸಲು ಮತ್ತೊಂದು ಕಾರಣವನ್ನು ನೀಡುತ್ತಾನೆ. ಇಪ್ಪತ್ತೈದು ತತ್ವಗಳ ಸಂಚನ್ನು ತಿಳಿಯದೆ, ನೀತಿಮುಖದಲ್ಲಿ ರಕ್ಷಣೆ ಪಡೆಯದೆ, ಮಂಜಿನ ಮಬ್ಬಿನಲ್ಲಿ ಮುಳುಗಿ, ಮನಸ್ಸಿನೊಡನೆ ಚಂಚಲರಾಗಿ ಸೇರಿಕೊಂಡು ಅಳಲುವ ಆತ್ಮವಂಚಕರು ನೀವು, ನಿಮ್ಮನ್ನು ಪಶುಗಳೆಂದರೆ ನಿಮಗೇಕೆ ದುಃಖವಾಗುತ್ತದೆ ಎಂದು ಪ್ರಶ್ನಿಸಿದನು.

ಅರ್ಥ:
ಪಂಚವಿಂಶತಿ: ಇಪ್ಪತ್ತೈದು; ತತ್ವ: ಪರಮಾತ್ಮನ ಸ್ವರೂಪವೇ ಆಗಿರುವ ಆತ್ಮನ ಸ್ವರೂಪ; ರೂಪ: ಆಕಾರ; ಸಂಚು: ಯುಕ್ತಿ; ಅರಿ: ತಿಳಿ; ನೀತಿ: ಒಳ್ಳೆಯ ನಡತೆ, ಶಿಷ್ಟಾಚಾರ; ಮುಖ: ಆನನ; ರಂಚೆ:ರಕ್ಷಣೆ; ಸಗುಣ: ಒಳ್ಳೆಯ ನಡತೆ, ಸ್ವಭಾವ; ಮಯ: ತುಂಬಿದ, ವ್ಯಾಪ್ತವಾದ; ನೀಹಾರ: ಮಂಜಿನ ಮಬ್ಬು; ಮುಳುಗು: ನೀರಿನಲ್ಲಿ ಮೀಯು; ಮಿಂಚು: ಚಂಚಲ; ಬಳಕೆ: ಬಳಸುವಿಕೆ; ಮನ: ಮನಸ್ಸು; ಮೂಮ್ಚಿ: ಮೊದಲು; ಮೈಗೊಂಡು: ಸೇರಿಕೊಂಡು; ಅಳಲು: ದುಃಖ; ಆತ್ಮ: ಪರಬ್ರಹ್ಮ; ವಂಚಕ: ಮೋಸ ಮಾಡುವವನು, ಕಪಟಿ; ಪಶು: ಮೃಗ; ಖೇದ: ದುಃಖ;

ಪದವಿಂಗಡಣೆ:
ಪಂಚವಿಂಶತಿ+ ತತ್ವ+ರೂಪದ
ಸಂಚವರಿಯದೆ +ನೀತಿ+ಮುಖದಲಿ
ರಂಚೆಗಾಣದೆ +ಸಗುಣಮಯ +ನೀಹಾರದಲಿ +ಮುಳುಗಿ
ಮಿಂಚುವೆಳಗಿನ+ ಬಳಕೆಯಲಿ +ಮನ
ಮುಂಚಿ +ಮೈಗೊಂಡ್+ಅಳಲುವ್+ಆತುಮ
ವಂಚಕರು+ ನೀವ್ +ಪಶುಗಳೆಂದರೆ +ಖೇದವೇಕೆಂದ

ಅಚ್ಚರಿ:
(೧) ಶಿವನು ದೇವತೆಗಳನ್ನು ಬಯ್ಯುವ ಪರಿ – ಮಿಂಚುವೆಳಗಿನ ಬಳಕೆಯಲಿ ಮನ
ಮುಂಚಿ ಮೈಗೊಂಡಳಲುವಾತುಮವಂಚಕರು ನೀವ್