ಪದ್ಯ ೬೪: ಶಕುನಿಯು ಕೌರವನನ್ನು ಹೇಗೆ ಸಂತೈಸಿದನು?

ಶಕುನಿ ಕಂಡನು ಕೌರವೇಂದ್ರನ
ನಕಟ ನೀನೇಕಾಂಗದಲಿ ಹೋ
ರಿಕೆಗೆ ಬಂದೈ ಗರುವ ಗುರುಸುತ ಭೋಜ ಗೌತಮರು
ಸಕಲಬಲ ನುಗ್ಗಾಯ್ತೆ ಸಮಸ
ಪ್ತಕರು ನಿನ್ನಯ ಮೂಲಬಲವಿದೆ
ವಿಕಳನಾಗದಿರೆಂದು ಸಂತೈಸಿದನು ಕುರುಪತಿಯ (ಗದಾ ಪರ್ವ, ೧ ಸಂಧಿ, ೬೪ ಪದ್ಯ)

ತಾತ್ಪರ್ಯ:
ಓಡಿ ಹೋಗುತ್ತಿದ್ದ ಕೌರವನನ್ನು ಕಂಡು ಶಕುನಿಯು, ಅಯ್ಯೋ ಕೌರವೇಂದ್ರ, ನೀನು ಒಬ್ಬೊಂಟಿಗನಾಗಿ ಏಕೆ ಯುದ್ಧಕ್ಕೆ ಬಂದೆ? ಅಶ್ವತ್ಥಾಮ, ಕೃತವರ್ಮ (ಭೋಜ), ಗೌತಮ(ಕೃಪಚಾರ್ಯ) ರಿದ್ದಾರಲ್ಲಾ, ಸೈನ್ಯವೆಲ್ಲವೂ ಸತ್ತುಹೋಯಿತೇ? ಸಂಶಪ್ತಕರಿದ್ದಾರೆ, ನಿನ್ನ ಮೂಲ ಸೈನ್ಯವಿದೆ, ಬೆದರಬೇಡ, ಖಿನ್ನನಾಗಬೇಡ ಎಂದು ಸಂತೈಸಿದನು.

ಅರ್ಥ:
ಅಕಟ: ಅಯ್ಯೋ; ಏಕಾಂಗ: ಒಬ್ಬನೆ; ಹೋರಿಕೆಗೆ: ಹೋರಾಡಲು; ಗರುವ: ಶ್ರೇಷ್ಠ; ಸುತ: ಮಗ; ಸಕಲ: ಎಲ್ಲಾ; ಬಲ: ಸೈನ್ಯ; ನುಗ್ಗು: ತಳ್ಳು; ಸಮಸಪ್ತಕ: ಪ್ರಮಾಣ ಮಾಡಿ ಯುದ್ಧ ಮಾಡುವವ; ಮೂಲ: ಕಾರಣ, ಉಗಮ; ಬಲ: ಸೈನ್ಯ; ವಿಕಳ: ಭ್ರಮೆ, ಭ್ರಾಂತಿ; ಸಂತೈಸು: ಸಾಂತ್ವನಗೊಳಿಸು;

ಪದವಿಂಗಡಣೆ:
ಶಕುನಿ +ಕಂಡನು +ಕೌರವೇಂದ್ರನನ್
ಅಕಟ +ನೀನ್+ಏಕಾಂಗದಲಿ +ಹೋ
ರಿಕೆಗೆ +ಬಂದೈ +ಗರುವ+ ಗುರುಸುತ +ಭೋಜ +ಗೌತಮರು
ಸಕಲಬಲ +ನುಗ್ಗಾಯ್ತೆ +ಸಮಸ
ಪ್ತಕರು +ನಿನ್ನಯ +ಮೂಲಬಲವಿದೆ
ವಿಕಳನಾಗದಿರ್+ಎಂದು +ಸಂತೈಸಿದನು +ಕುರುಪತಿಯ

ಅಚ್ಚರಿ:
(೧) ಧೈರ್ಯ ತುಂಬುವ ಪರಿ – ನಿನ್ನಯ ಮೂಲಬಲವಿದೆ ವಿಕಳನಾಗದಿರೆಂದು ಸಂತೈಸಿದನು ಕುರುಪತಿಯ
(೨) ಸಕಲಬಲ, ಮೂಲಬಲ – ಪದಗಳ ಬಳಕೆ

ಪದ್ಯ ೮೦: ಅರ್ಜುನನ ಧೈರ್ಯ ಹೇಗಿತ್ತು?

ಅಂಜದಿರು ಕಲಿಯಾಗು ಸೂರ್ಯನ
ಮಂಜು ಮುಸುಕಿದೊಡೇನು ರಿಪುಬಲ
ಪುಂಜವನು ತತ್ ಕ್ಷಣದಿ ಜಯಿಸುವೆನೊಂದು ಬಾಣದೊಳು
ರಂಜಕರ ನುಡಿಯಲ್ಲವೆನುತೆ ಧ
ನಂಜಯನು ನುಡಿಯುತ್ತುಮಿರೆ ರಿಪು
ಭಂಜಕನ ಮುತ್ತಿದುದು ಕೌರವರಾಜ ಸಕಲಬಲ (ವಿರಾಟ ಪರ್ವ, ೯ ಸಂಧಿ, ೮೦ ಪದ್ಯ)

ತಾತ್ಪರ್ಯ:
ಉತ್ತರ, ಹೆದರದೆ ಧೈರ್ಯದಿಂದಿರು. ಈ ಶತ್ರು ಸೈನ್ಯದ ಜೋರು ಮಂಜಿನಂತೆ. ಮಂಜು ಸೂರ್ಯನನ್ನು ಮುಸುಕಿದರೇನು? ಇದು ಬಾಯ ಮಾತಲ್ಲ, ಈ ಸೇನೆಯನ್ನು ಒಂದು ಬಾಣದಿಂದ ಗೆಲ್ಲುತ್ತೇನೆ ಎಂದು ಅರ್ಜುನನು ಹೇಳುತ್ತಿರಲು ಕೌರವ ಬಲವು ಅರ್ಜುನನ ರಥವನ್ನು ಮುತ್ತಿತು.

ಅರ್ಥ:
ಅಂಜು: ಹೆದರು; ಕಲಿ: ಶೂರ; ಸೂರ್ಯ: ರವಿ; ಮಂಜು: ಹಿಮ; ಮುಸುಕು: ಆವರಿಸು; ರಿಪುಬಲ: ವೈರಿ ಸೈನ್ಯ; ಪುಂಜ: ಸಮೂಹ, ಗುಂಪು; ಕ್ಷಣ: ಸಮಯ; ಜಯಿಸು: ಗೆಲ್ಲು; ಬಾಣ: ಶರ; ರಂಜಕ: ಆಕರ್ಷಕವಾದುದು; ನುಡಿ: ಮಾತು; ಧನಂಜಯ: ಅರ್ಜುನ; ರಿಪು: ವೈರಿ; ಭಂಜಕ: ನಾಶಮಾಡುವ; ಮುತ್ತು: ಆವರಿಸು; ರಾಜ: ದೊರೆ; ಸಕಲಬಲ: ಎಲ್ಲಾ ಸೈನಿಕರು;

ಪದವಿಂಗಡಣೆ:
ಅಂಜದಿರು +ಕಲಿಯಾಗು +ಸೂರ್ಯನ
ಮಂಜು +ಮುಸುಕಿದೊಡೇನು+ ರಿಪುಬಲ
ಪುಂಜವನು +ತತ್+ ಕ್ಷಣದಿ+ ಜಯಿಸುವೆನ್+ಒಂದು +ಬಾಣದೊಳು
ರಂಜಕರ +ನುಡಿಯಲ್ಲವೆನುತೆ+ ಧ
ನಂಜಯನು +ನುಡಿಯುತ್ತುಮಿರೆ +ರಿಪು
ಭಂಜಕನ +ಮುತ್ತಿದುದು +ಕೌರವರಾಜ+ ಸಕಲಬಲ

ಅಚ್ಚರಿ:
(೧) ಅರ್ಜುನನನ್ನು ರಿಪುಭಂಜಕ, ಧನಂಜಯ ಎಂದು ಕರೆದಿರುವುದು
(೨) ಉಪಮಾನದ ಪ್ರಯೋಗ – ಸೂರ್ಯನಮಂಜು ಮುಸುಕಿದೊಡೇನು ರಿಪುಬಲ ಪುಂಜವನು ತತ್ ಕ್ಷಣದಿ ಜಯಿಸುವೆನೊಂದು ಬಾಣದೊಳು
(೩) ರಿಪುಬಲ, ರಿಪುಭಂಜಕ – ಪದಗಳ ಪ್ರಯೋಗ