ಪದ್ಯ ೪೮: ದ್ರೋಣನು ಪಾಂಚಾಲ ಸೈನ್ಯವನ್ನು ಹೇಗೆ ನಾಶ ಮಾಡಿದನು?

ಆರ ನೆರವಿಯೊಳಂಧಕಾರದ
ಭಾರವನು ರವಿ ಗೆಲುವನಿನ್ನೀ
ವೈರಿಬಲಭಂಜನಕೆ ಗುರು ಹಂಗಹನೆ ಕೆಲಬಲಕೆ
ಭೂರಿ ರಿಪುಚತುರಂಗಬಲಸಂ
ಹಾರದಲಿ ಒರವೆದ್ದ ರಕುತದ
ಪೂರದಲಿ ಮುಳುಗಿದರು ಪಾಂಚಾಲಾದಿ ನಾಯಕರು (ದ್ರೋಣ ಪರ್ವ, ೧೮ ಸಂಧಿ, ೪೮ ಪದ್ಯ)

ತಾತ್ಪರ್ಯ:
ಸೂರ್ಯನು ಯಾರ ಸಹಾಯದಿಂದ ಕತ್ತಲನ್ನು ಗೆಲ್ಲುತ್ತಾನೆ? ಶತ್ರುಸೈನ್ಯ ಸಂಹಾರಕ್ಕೆ ದ್ರೋಣನು ಇನ್ನೊಬ್ಬರ ಹಂಗಿಗೊಳಗಾಗುವನೇ? ಪಾಂಚಾಲ ಸೈನ್ಯವನ್ನು ದ್ರೋಣನು ಸಂಹರಿಸಲು ರಕ್ತದ ತೊರೆ ಹರಿದು ಪಾಂಚಾಲ ನಾಯಕರು ಮುಳುಗಿ ಹೋದರು.

ಅರ್ಥ:
ನೆರವು: ಸಹಾಯ; ಅಂಧಕಾರ: ಕತ್ತಲೆ; ಭಾರ: ಹೊರೆ; ರವಿ: ಸೂರ್ಯ; ಗೆಲುವು: ಜಯ; ವೈರಿ: ಶತ್ರು; ಬಲ: ಸೈನ್ಯ; ಭಂಜನ: ನಾಶಕಾರಿ, ಒಡೆಯುವುದು; ಗುರು: ಆಚಾರ್ಯ; ಹಂಗು: ದಾಕ್ಷಿಣ್ಯ, ಆಭಾರ; ಕೆಲಬಲ: ಅಕ್ಕಪಕ್ಕ, ಎಡಬಲ; ಭೂರಿ: ಹೆಚ್ಚು, ಅಧಿಕ; ರಿಪು: ವೈರಿ; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಬಲ: ಸೈನ್ಯ; ಸಂಹಾರ: ನಾಶ, ಕೊನೆ; ಎದ್ದು: ಮೇಲೇಳು; ರಕುತ: ನೆತ್ತರು; ಪೂರ: ಭರ್ತಿ; ಮುಳುಗು: ನೀರಿನಲ್ಲಿ ಮೀಯು, ಕಾಣದಾಗು; ಆದಿ: ಮುಂತಾದ; ನಾಯಕ: ಒಡೆಯ;

ಪದವಿಂಗಡಣೆ:
ಆರ +ನೆರವಿಯೊಳ್+ಅಂಧಕಾರದ
ಭಾರವನು +ರವಿ +ಗೆಲುವನ್+ಇನ್ನೀ
ವೈರಿಬಲ+ಭಂಜನಕೆ +ಗುರು +ಹಂಗಹನೆ+ ಕೆಲಬಲಕೆ
ಭೂರಿ +ರಿಪು+ಚತುರಂಗ+ಬಲ+ಸಂ
ಹಾರದಲಿ +ಒರವೆದ್ದ+ ರಕುತದ
ಪೂರದಲಿ +ಮುಳುಗಿದರು +ಪಾಂಚಾಲಾದಿ +ನಾಯಕರು

ಅಚ್ಚರಿ:
(೧) ಉಪಮಾನದ ಪ್ರಯೋಗ – ಆರ ನೆರವಿಯೊಳಂಧಕಾರದ ಭಾರವನು ರವಿ ಗೆಲುವನ್
(೨) ಯುದ್ಧದ ಭೀಕರತೆ – ರಿಪುಚತುರಂಗಬಲಸಂಹಾರದಲಿ ಒರವೆದ್ದ ರಕುತದ ಪೂರದಲಿ ಮುಳುಗಿದರು

ಪದ್ಯ ೭೧: ಮಂತ್ರಿಯ ಲಕ್ಷಣಗಳೇನು?

ಶೂರ ಧೀರನುದಾರ ಧರ್ಮೋ
ದ್ಧಾರ ವಿವಿಧ ವಿಚಾರ ಸುಜನಾ
ಧಾರ ರಿಪು ಸಂಹಾರ ಚತುರೋಪಾಯ ಸಾಕಾರ
ಸಾರ ಮಂತ್ರವಿಚಾರ ಭುವನಾ
ಧಾರ ಸುಜನ ಸ್ವಾಮಿ ಕಾರ್ಯಾ
ಗಾರನೆನಿಸುವ ಮಂತ್ರಿಯುಂಟೇ ರಾಯ ನಿನಗೆಂದ (ಸಭಾ ಪರ್ವ, ೧ ಸಂಧಿ, ೭೧ ಪದ್ಯ)

ತಾತ್ಪರ್ಯ:
ಮಂತ್ರಿಯಾದವನ ಲಕ್ಷಣವನ್ನು ನಾರದರು ವಿವರಿಸುತ್ತಾ, ರಾಜನಿಗೆ ಮಂತ್ರಿಯಾಗಿರುವವನು, ಶೂರ, ಧೀರ, ಉದಾರ, ಧರ್ಮವನ್ನು ಎತ್ತಿಹಿಡಿಯುವವನು, ಸಮಸ್ತವಿಚಾರಗಳನ್ನರಿತವನು, ಸಜ್ಜನರಿಗೆ ಆಧಾರವಾಗಿರುವವನು, ಶತ್ರುಗಳನ್ನು ಸಂಹರಿಸುವವನು, ಸಾಮ, ದಾನ, ಭೇದ, ದಂಡ ಗಳೆಂಬ ಚತುರೋಪಾಯವನ್ನು ಬಲ್ಲವನು, ಮಂತ್ರಾಲೋಚನೆಯಲ್ಲಿ ಸಾರವತ್ತಾದಉದನ್ನು ಬಲ್ಲವನು, ಸಜ್ಜನ ರಾಜನ ಕಾರ್ಯಗಳನ್ನು ಮಾಡಲೆಂದೇ ಇರುವ ಮಂತ್ರಿ ನಿನಗಿರುವವನೇ ಎಂದು ಪ್ರಶ್ನಿಸಿದರು.

ಅರ್ಥ:
ಶೂರ: ಕಲಿ,ವೀರ; ಧೀರ: ಧೈರ್ಯ; ಉದಾರ: ಧಾರಾಳ ಸ್ವಭಾವದ; ಧರ್ಮ: ನಿಯಮ; ಉದ್ಧಾರ:ಮೇಲಕ್ಕೆ ಎತ್ತುವುದು; ವಿವಿಧ: ಹಲವಾರು; ವಿಚಾರ:ವಿಮರ್ಶೆ; ಸುಜನ: ಒಳ್ಳೆಯ ಜನ; ರಿಪು: ವೈರಿ; ಸಂಹಾರ: ನಾಶ, ಕೊನೆ; ಚತುರೋಪಾಯ: ಸಾಮ, ದಾನ, ಭೇದ, ದಂಡ ಎಂಬ ನಾಲ್ಕು ಉಪಾಯಗಳು; ಉಪಾಯ:ಯುಕ್ತಿ; ಸಾಕಾರ:ಆಕೃತಿ; ಸಾರ:ತಿರುಳು; ಮಂತ್ರ:ವಿಚಾರ; ಭುವನ: ಭೂಮಿ; ಆಧಾರ:ಆಶ್ರಯ, ಅವಲಂಬನೆ; ಸ್ವಾಮಿ: ದೊರೆ; ಕಾರ್ಯ: ಕೆಲಸ; ಮಂತ್ರಿ: ಸಚಿವ; ರಾಯ: ರಾಜ;

ಪದವಿಂಗಡಣೆ:
ಶೂರ +ಧೀರನ್+ಉದಾರ +ಧರ್ಮ
ಉದ್ಧಾರ+ ವಿವಿಧ+ ವಿಚಾರ +ಸುಜನ
ಆಧಾರ +ರಿಪು +ಸಂಹಾರ +ಚತುರೋಪಾಯ +ಸಾಕಾರ
ಸಾರ +ಮಂತ್ರವಿಚಾರ +ಭುವನ
ಆಧಾರ +ಸುಜನ +ಸ್ವಾಮಿ +ಕಾರ್ಯಾ
ಗಾರನ್+ಎನಿಸುವ +ಮಂತ್ರಿಯುಂಟೇ +ರಾಯ +ನಿನಗೆಂದ

ಅಚ್ದರಿ:
(೧) ಆಧಾರ – ೩, ೫ ಸಾಲಿನ ಮೊದಲ ಪದ
(೨) “ರ” ಕಾರದಿಂದ ಕೊನೆಗೊಳ್ಳುವ ಪದ: ಶೂರ, ಧೀರ, ಉದಾರ, ಉದ್ಧಾರ, ವಿಚಾರ, ಆಧಾರ, ಸಂಹಾರ, ಸಾಕಾರ, ಸಾರ, ಕಾರ್ಯಾಗಾರ
(೩) ೨, ೫ ಸಾಲಿನ ೨, ೩ ಪದಗಳು ಒಂದೆ ಅಕ್ಷರದ್ದು, ವಿವಿಧ ವಿಚಾರ, ಸುಜನ ಸ್ವಾಮಿ