ಪದ್ಯ ೬೩: ಸೂರ್ಯನ ದಾರಿ ಯಾವುದು?

ಹರಿವ ಗಾಲಿಯ ನಾಭಿ ಮೂಲ
ಕ್ಕುರುವ ಚಾತುರ್ಮಾಸಗಳು ಘನ
ತರದ ಷಡುರುತುವಯನ ಚಕ್ರವು ಚಾರುಚತುರಯುಗ
ತರವಿಡಿದ ಸಂವತ್ಸರವು ಘನ
ತರದ ಪರಿವತ್ಸರ ವಿಡಾವ
ತ್ಸರವು ವಿದ್ವತ್ಸರವು ವತ್ಸರವೆಂದು ಮೊಳೆಯಾಯ್ತು (ಅರಣ್ಯ ಪರ್ವ, ೮ ಸಂಧಿ, ೬೩ ಪದ್ಯ)

ತಾತ್ಪರ್ಯ:
ಸೂರ್ಯನ ರಥದ ಚಕ್ರವೆಂದರೆ ನಾಲ್ಕು ಯುಗಗಳು. ಅದರ ಗುಂಬವು ಚಾತುರ್ಮಾಸಗಳು, ಆರು ಋತುಗಳೇ ಅದರ ದರಿ, ಸಂವತ್ಸರ, ಪರಿವತ್ಸರ, ಇಡಾವತ್ಸರ, ವಿದ್ವತ್ಸರ, ವತ್ಸರಗಳೆಂಬುವು ಮೊಳೆಗಳು.

ಅರ್ಥ:
ಹರಿ: ಚಲಿಸು; ಗಾಲಿ: ಚಕ್ರ; ನಾಭಿ: ಹೊಕ್ಕಳು; ಮೂಲ: ಬುಡ; ಉರುವ: ಶ್ರೇಷ್ಠ; ಮಾಸ: ತಿಂಗಳು; ಘನ: ಗಟ್ಟಿ, ಭಾರ ಷಡುರುತು: ೬ ಋತುಗಳು; ಚಕ್ರ: ಗಾಲಿ; ಚಾರು: ಸುಂದರ; ಚತುರ: ನಾಲ್ಕು; ಯುಗ: ದೀರ್ಘವಾದ ಕಾಲಾವಧಿ; ತರ: ಸಾಲು; ಸಂವತ್ಸರ: ವರ್ಷ; ಮೊಳೆ: ಕುಡಿ, ಮೊಳಕೆ;

ಪದವಿಂಗಡಣೆ:
ಹರಿವ +ಗಾಲಿಯ +ನಾಭಿ +ಮೂಲ
ಕ್ಕುರುವ +ಚಾತುರ್ಮಾಸಗಳು +ಘನ
ತರದ +ಷಡುರುತುವಯನ +ಚಕ್ರವು +ಚಾರು+ಚತುರಯುಗ
ತರವಿಡಿದ +ಸಂವತ್ಸರವು +ಘನ
ತರದ+ ಪರಿವತ್ಸರ +ವಿಡಾವ
ತ್ಸರವು +ವಿದ್ವತ್ಸರವು +ವತ್ಸರವೆಂದು +ಮೊಳೆಯಾಯ್ತು

ಅಚ್ಚರಿ:
(೧) ಸಂವತ್ಸರ, ಪರಿವತ್ಸರ, ವತ್ಸರ – ಸಮನಾರ್ಥಕ ಪದಗಳು

ಪದ್ಯ ೩೩: ಮತ್ತೆ ಹಸ್ತಿನಾಪುರಕ್ಕೆ ಬಂದಾಗ ಧರ್ಮರಾಜನ ವಯಸ್ಸೆಷ್ಟು?

ವೀತಭಯರನ್ಯೋನ್ಯ ಪರಮ
ಪ್ರೀತಿಗಳ ಬೆಳವಿಗೆಯಲಿದ್ದರು
ಭೂತಳಾಧಿಪರೈದು ಸಂವತ್ಸರಗಳೊಂದಾಗಿ
ಖ್ಯಾತವಿದು ಪಾಂಚಾಲಪುರದೊಳ
ತೀತವಾಯಿತ್ತೊಂದು ವರುಷವ
ಭೀತಿ ಧರ್ಮಸುತಂಗೆ ಮೂವತ್ತಾರು ಸಮಯವಾಯ್ತು (ಆದಿ ಪರ್ವ, ೧೭ ಸಂಧಿ, ೩೩ ಪದ್ಯ)

ತಾತ್ಪರ್ಯ:
ಪಾಂಡವರು ಅನ್ಯೋನ್ಯ ಪ್ರೀತಿಯಿಂದ ಭಯರಹಿತವಾಗಿ ಐದು ವರ್ಷಗಳನ್ನು ಕೌರವರೊಡನೆ ಕಳೆದರು. ಪಾಂಚಾಲನಗರದಲ್ಲಿ ಪಾಂಡವರು ಒಂದು ವರ್ಷ ಕಳೆದಿದ್ದರು, ಈ ಸಮಯಕ್ಕೆ ಧರ್ಮರಾಜನಿಗೆ ಮೂವತ್ತಾರು ವರ್ಷಗಳಾಗಿದ್ದವು.

ಅರ್ಥ:
ವೀತ: ಕಳೆದ; ಅಭಯ: ನಿರ್ಭೀತಿ;ಅನ್ಯೋನ್ಯ: ಪರಸ್ಪರ ಪ್ರೀತಿ, ಸ್ನೇಹ; ಪರಮ: ಶ್ರೇಷ್ಠ; ಪ್ರೀತಿ: ಮಮತೆ; ಬೆಳವಿಗೆ:ಬೆಳವೆಣಿಗೆ, ಅಭಿವೃದ್ಧಿ; ಭೂತಳಾಧಿಪ: ರಾಜ; ಸಂವತ್ಸರ: ವರ್ಷ; ಖ್ಯಾತ: ಪ್ರಸಿದ್ದ; ಅತೀತ:ಮೀರಿದ; ಭೀತ:ಕಳೆದ; ಸುತ: ಮಗ;

ಪದವಿಂಗಡಣೆ:
ವೀತ್ +ಅಭಯರ್+ಅನ್ಯೋನ್ಯ +ಪರಮ
ಪ್ರೀತಿಗಳ+ ಬೆಳವಿಗೆಯಲ್+ಇದ್ದರು
ಭೂತಳಾಧಿಪರ್+ಐದು +ಸಂವತ್ಸರಗಳ್+ಒಂದಾಗಿ
ಖ್ಯಾತವಿದು+ ಪಾಂಚಾಲ+ಪುರದೊಳ್
ಅತೀತ+ವಾಯಿತ್+ಒಂದು +ವರುಷವ
ಭೀತಿ+ ಧರ್ಮಸುತಂಗೆ+ ಮೂವತ್ತಾರು+ ಸಮಯವಾಯ್ತು

ಅಚ್ಚರಿ:
(೧) ವೀತ, ಭೀತ – ೧, ೬ ಸಾಲಿನ ಮೊದಲ ಪದ, (ಪ್ರಾಸ)
(೨) ಐದು ಸಂವತ್ಸರ, ಒಂದು ವರುಷ, ಮೂವತ್ತಾರು ಸಮಯ – ವರ್ಷವನ್ನು (ಕಾಲ) ಸೂಚಿಸುವ ಪದ