ಪದ್ಯ ೫೮: ಭಾರಧ್ವಾಜರು ದ್ರೋಣರಿಗೆ ಏನನ್ನು ಉಪದೇಶಿಸಿದರು?

ಆದುದವಿವೇಕದಲಿ ಸತ್ಪಥ
ವೈದಿಕಾತಿಕ್ರಮಣವಿನ್ನು ಗ
ತೋದಕದಲುರೆ ಸೇತುಸಂಬಂಧದಲಿ ಫಲವೇನು
ಈ ದುರಾಗ್ರಹ ನಿಲಲಿ ಹಾಯಿಕು
ಕೈದುವನು ಸುಸಮಾಧಿ ಯೋಗದ
ಲೈದು ನಿಜವನು ದೇಹ ನಿಸ್ಪೃಹನಾಗು ನೀನೆಂದ (ದ್ರೋಣ ಪರ್ವ, ೧೮ ಸಂಧಿ, ೫೮ ಪದ್ಯ)

ತಾತ್ಪರ್ಯ:
ಅವಿವೇಕದಿಂದ ವೇದವು ವಿಧಿಸಿರುವ ಸನ್ಮಾರ್ಗವನ್ನು ಮೀರಿ ನಡೆದಿರುವೆ, ನೀರೆಲ್ಲಾ ಹರಿದು ಹೋದ ಮೇಲೆ ಕಟ್ಟೆಯನ್ನು ಕಟ್ಟಿದರೇನು ಫಲ. ಇದುವರೆಗೆ ಆದದ್ದೆಲ್ಲಾ ಆಯಿತು, ಇನ್ನಾದರೂ ಈ ದುರಾಗ್ರಹವನ್ನು ಬಿಡು, ಆಯುಧಗಳನ್ನೆಸೆದು, ಸಮಾಧಿಯೋಗದಿಮ್ದ ನಿನ್ನ ನಿಜವನ್ನು ನೀನು ಸಾಧಿಸು, ದೇಹವನ್ನು ಬಯಸಬೇಡ ಎಂದು ಭಾರಧ್ವಾಜರು ಉಪದೇಶಿಸಿದರು.

ಅರ್ಥ:
ಅವಿವೇಕ: ಯುಕ್ತಾಯುಕ್ತ ವಿಚಾರವಿಲ್ಲದ; ಪಥ: ಮಾರ್ಗ; ವೈದಿಕ: ವೇದಗಳನ್ನು ಬಲ್ಲವನು; ಅತಿಕ್ರಮಣ: ಕ್ರಮವನ್ನು ಉಲ್ಲಂಘಿಸುವುದು; ಗತ: ಕಳೆದ, ಆಗಿ ಹೋದ; ಉದಕ: ನೀರು; ಉರೆ: ಅತಿಶಯವಾಗಿ; ಸೇತು: ಸೇತುವೆ, ಸಂಕ; ಸಂಬಂಧ: ಸಂಪರ್ಕ, ಸಹವಾಸ; ಫಲ: ಪ್ರಯೋಜನ; ದುರಾಗ್ರಹ: ಹಟಮಾರಿತನ; ನಿಲಲಿ: ನಿಲ್ಲು, ತಡೆ; ಹಾಯಿಕು: ಕಳಚು, ತೆಗೆ; ಕೈದು: ಆಯುಧ; ಸಮಾಧಿ: ಏಕಾಗ್ರತೆ, ತನ್ಮಯತೆ; ಯೋಗ: ರೀತಿ, ವಿಧಾನ; ನಿಜ: ದಿಟ; ದೇಹ: ಶರೀರ; ನಿಸ್ಪೃಹ: ಆಸೆ ಇಲ್ಲದವ;

ಪದವಿಂಗಡಣೆ:
ಆದುದ್+ಅವಿವೇಕದಲಿ +ಸತ್ಪಥ
ವೈದಿಕ+ಅತಿಕ್ರಮಣವ್+ಇನ್ನು +ಗತ
ಉದಕದಲ್+ಉರೆ +ಸೇತು+ಸಂಬಂಧದಲಿ +ಫಲವೇನು
ಈ +ದುರಾಗ್ರಹ +ನಿಲಲಿ +ಹಾಯಿಕು
ಕೈದುವನು +ಸುಸಮಾಧಿ +ಯೋಗದಲ್
ಐದು +ನಿಜವನು +ದೇಹ +ನಿಸ್ಪೃಹನಾಗು +ನೀನೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗತೋದಕದಲುರೆ ಸೇತುಸಂಬಂಧದಲಿ ಫಲವೇನು

ಪದ್ಯ ೨೬: ದ್ರೌಪದಿ ದೇವಲೋಕದ ಮತ್ತಾರನ್ನು ತನ್ನ ಸಹಾಯಕ್ಕೆ ಬೇಡಿಕೊಂಡಳು?

ಅಂಧನೊಬ್ಬನೆ ಮಾವ ನೀವೇ
ನಂಧರಾದಿರೆ ಪಾಂಡು ಕರುಣಾ
ಸಿಂಧು ನೀ ಸೈರಿಸುವುದೇ ತನ್ನೀ ವಿಪತ್ತಿನಲಿ
ಅಂಧಕಾಸುರಮಥನ ನೀನೇ
ಬಂಧಿಸಿದೆಲಾ ಪೂರ್ವವರ ಸಂ
ಬಂಧವನು ನೀ ಸೆರಗ ಬಿಡಿಸೆಂದೊರಲಿದಳು ತರಳೆ (ಸಭಾ ಪರ್ವ, ೧೬ ಸಂಧಿ, ೨೬ ಪದ್ಯ)

ತಾತ್ಪರ್ಯ:
ಹೇ ಮಾವ ಪಾಂಡು ಮಹಾರಾಜರೇ, ಮಾವ ಧೃತರಾಷ್ಟ್ರ ಕುರುಡನಾದರೇ, ನೀವು ಕುರುಡರಾದಿರೇ? ನನಗೆ ಬಂದಿರುವ ಈ ವಿಪತ್ತನ್ನು ನೋಡಿ ನೀವು ಸುಮ್ಮನಿರುವಿರೇ? ಹೇ ಪರಮೇಶ್ವರ, ಅಂಧಕಾಸುರಮಥನ ಮಾಡಿ ಹಿಂದೆ ಧರೆಯನ್ನು ರಕ್ಷಿಸಿದವ, ಪಾಂಡವರ ನನ್ನ ಸಂಬಂಧವನ್ನು ಹಿಂದೆ ಏರ್ಪಡಿಸಿದವನು ನೀನೆ ಅಲ್ಲವೇ ನೀನಾದರೂ ನನ್ನ ಸೆರಗನ್ನು ಬಿಡಿಸು ಎಂದು ಗೋಳಿಟ್ಟಳು ದ್ರೌಪದಿ.

ಅರ್ಥ:
ಅಂಧ: ಕುರುಡ; ಕರುಣಾಸಿಂಧು: ದಯಾ ಸಾಗರ; ಸೈರಿಸು: ತಾಳು, ಸಹಿಸು; ವಿಪತ್ತು: ಕಷ್ಟ; ಮಥನ: ನಾಶಮಾಡಿದ; ಬಂಧಿಸು: ಕೂಡಿಸು; ಪೂರ್ವ: ಹಿಂದೆ; ವರ: ಶ್ರೇಷ್ಠ; ಸಂಬಂಧ: ಸಹವಾಸ, ಹೊಂದಾಣಿಕೆ; ಸೆರಗು: ವಸ್ತ್ರ, ಸೀರೆಯ ಭಾಗ; ಬಿಡಿಸು: ಕಳಚು, ಸಡಿಲಿಸು; ಒರಲು: ಗೋಳಿಡು; ತರಳೆ: ಯುವತಿ;

ಪದವಿಂಗಡಣೆ:
ಅಂಧನ್+ಒಬ್ಬನೆ +ಮಾವ +ನೀವೇನ್
ಅಂಧರಾದಿರೆ+ ಪಾಂಡು +ಕರುಣಾ
ಸಿಂಧು +ನೀ +ಸೈರಿಸುವುದೇ+ ತನ್ನೀ+ ವಿಪತ್ತಿನಲಿ
ಅಂಧಕಾಸುರಮಥನ +ನೀನೇ
ಬಂಧಿಸಿದೆಲಾ +ಪೂರ್ವ+ವರ+ ಸಂ
ಬಂಧವನು +ನೀ +ಸೆರಗ +ಬಿಡಿಸೆಂದ್+ಒರಲಿದಳು +ತರಳೆ

ಅಚ್ಚರಿ:
(೧) ಶಿವನನ್ನು ಅಂಧಕಾಸುರಮಥನ ಎಂದು ಕರೆದಿರುವುದು