ಪದ್ಯ ೨೨: ಯಜ್ಞಕುಂಡವನ್ನು ಹೇಗೆ ಯಾಗಕ್ಕಾಗಿ ಅನುವುಮಾಡಲಾಯಿತು?

ಆದುದನುಪಮ ಕುಂಡವಂತ
ರ್ವೇದಿಯ ಸಮೀಪದಲಿ ಹೊರೆಗಳ
ಶೋಧಿಸಿದ ಇಧ್ಮದ ಕುಶ ಸ್ಥಂಡಿಲದ ಸೀಮೆಯಲಿ
ಆದರಿಸಿ ಪರಿಚಾರಕರು ಸಂ
ಪಾದಿಸಿದ ಘೃತ ಚರು ಪುರೋಡಾ
ಶಾದಿ ಸಂಭಾರೌಘವನುವಾಯಿತ್ತು ನಿಮಿಷದಲಿ (ಸಭಾ ಪರ್ವ, ೮ ಸಂಧಿ, ೨೨ ಪದ್ಯ)

ತಾತ್ಪರ್ಯ:
ಯಜ್ಞಶಾಲೆಯ ಒಳಜಗಲಿಯ ಸಮೀಪದಲ್ಲಿ ಯಜ್ಞಕುಂಡವನ್ನು ನಿರ್ಮಿಸಿದರ್ಯು. ಇಧ್ಮ, ದರ್ಭೆ, ಅಕ್ಕಿಗಳನ್ನು ಅನುವಾಗಿ ಇಟ್ಟರು. ಋತ್ವಿಜರ ಪರಿಚಾರಕರು ತುಪ್ಪ, ಚರು, ಪುರೋಡಾಶಗಳನ್ನು ಸಿದ್ಧಪದಿಸಿದರು.

ಅರ್ಥ:
ಅನುಪಮ: ಉತ್ಕೃಷ್ಟವಾದುದು; ಕುಂಡ:ಹೋಮಕಾರ್ಯಕ್ಕಾಗಿ ನೆಲದಲ್ಲಿ ಮಾಡಿದ ಕುಣಿ; ಅಂತರ್ವೇದಿ: ಯಜ್ಞಶಾಲೆಯ ಒಳಜಗಲಿ; ಸಮೀಪ: ಹತ್ತಿರ; ಹೊರೆ:ರಕ್ಷಣೆ; ಶೋಧಿಸು: ಹುಡುಕು; ಸೀಮೆ: ಎಲ್ಲೆ; ಆದರಿಸು: ಗೌರವಿಸು; ಪರಿಚಾರಕ: ಸೇವಕ; ಸಂಪಾದಿಸು: ಗಳಿಸು; ಘೃತ: ತುಪ್ಪ; ಚರು:ಹವಿಸ್ಸನ್ನು ಮಾಡುವ ಪಾತ್ರೆ; ಆದಿ: ಮುಂತಾದ; ಸಂಭಾರ: ಸಾಮಗ್ರಿ; ಔಘ: ಗುಂಪು, ಸಮೂಹ; ಅನುವು: ಅವಕಾಶ; ನಿಮಿಷ: ಕ್ಷಣಗಳಲಿ, ಬೇಗನೆ;

ಪದವಿಂಗಡಣೆ:
ಆದುದ್+ಅನುಪಮ +ಕುಂಡವ್+ಅಂತ
ರ್ವೇದಿಯ +ಸಮೀಪದಲಿ +ಹೊರೆಗಳ
ಶೋಧಿಸಿದ+ ಇಧ್ಮದ+ ಕುಶ+ ಸ್ಥಂಡಿಲದ+ ಸೀಮೆಯಲಿ
ಆದರಿಸಿ+ ಪರಿಚಾರಕರು+ ಸಂ
ಪಾದಿಸಿದ +ಘೃತ +ಚರು +ಪುರೋಡಾ
ಶಾದಿ +ಸಂಭಾರ+ಔಘವನ್+ಅನುವಾಯಿತ್ತು+ ನಿಮಿಷದಲಿ

ಅಚ್ಚರಿ:
(೧) ಶೋಧಿಸಿ, ಆದರಿಸಿ, ಸಂಪಾದಿಸಿ – ಪ್ರಾಸ ಪದಗಳು
(೨) ೩, ೫ ಸಾಲಿನಲ್ಲಿ ೩ ಸಾಮಗ್ರಿಗಳನ್ನು ಹೆಸರಿಸಿರುವುದು