ಪದ್ಯ ೩೯: ಅರ್ಜುನನ ಎದುರು ಗೆಲ್ಲಲು ಸಾಧ್ಯವೇ?

ಉರಿಯ ಸರಿಗೇರಿದ ಪತಂಗಕೆ
ಮರಳುದಲೆಯೇ ಮತ್ತೆ ರಣದಲಿ
ನರನೊಡನೆ ಕಳನೇರಿದಾತನ ಸತಿ ಸುವಾಸಿನಿಯೆ
ಅರಳ ಹೊಸ ಸಂಪದೆಯ ಮಧುವನು
ಮರಿಗೆ ತಹವೇ ತುಂಬಿಗಳು ಕೇ
ಳರಸ ಹರಿಬಕೆ ಹೊಕ್ಕ ಸುಭಟರ ಕಾಣೆ ನಾನೆಂದ (ಕರ್ಣ ಪರ್ವ, ೨೦ ಸಂಧಿ, ೩೯ ಪದ್ಯ)

ತಾತ್ಪರ್ಯ:
ಎಲೇ ಧೃತರಾಷ್ಟ್ರ ರಾಜನೇ, ಹಬ್ಬಿದ ಬೆಂಕಿಯ ಉರಿಯ ಎತ್ತರಕ್ಕೂ ಹಾರಿ ಒಳಗೆ ಹೊಕ್ಕ ಪಕ್ಷಿಯು ಹೊರಬರಲು ಸಾಧ್ಯವೇ? ಅರ್ಜುನನನ್ನು ವಿರೋಧಿಸಿ ನಿಂತ ವೀರನ ಹೆಂಡತಿಯು ಮುತ್ತೈದೆಯಾಗಿ ಉಳಿಯಲು ಸಾಧ್ಯವೇ? ಹೊಸದಾಗಿ ಅರಳಿದ ಸಂಪಿಗೆಯ ಮಕರಂದವನ್ನು ದುಂಬಿಗಳು ತಮ್ಮ ಮರಿಗಳಿಗೆ ತಂದುಕೊಟ್ಟಾವೇ? ಆ ಯುದ್ಧಕ್ಕೆ ಹೋದ ವೃಷಸೇನನ ಮನ್ನಣೆಯ ಸೈನಿಕರು ನನಗೆ ಕಾಣಲಾಗದು ಎಂದು ಸಂಜಯನು ಹೇಳಿದನು.

ಅರ್ಥ:
ಉರಿ: ಬೆಂಕಿ, ಜ್ವಾಲೆ; ಏರು: ಮೇಲೇಳು; ಪತಂಗ: ಹಕ್ಕಿ, ಪಕ್ಷಿ; ಮರಳು: ಹಿಂದಿರುಗು; ರಣ: ಯುದ್ಧ; ನರ: ಅರ್ಜುನ; ಕಳ: ರಣರಂಗ; ಸತಿ: ಹೆಂಡತಿ ಸುವಾಸಿನಿ: ಮುತ್ತೈದೆ; ಅರಳ: ವಿಕಸಿಸಿದ; ಹೊಸ: ನವೀನ; ಸಂಪದೆ: ಸಂಪಿಗೆ; ಮಧು:ಜೇನು; ಮರಿ: ಚಿಕ್ಕ; ತಹ: ಒಪ್ಪಂದ, ತಂದುಕೊಡು; ತುಂಬಿ: ದುಂಬಿ, ಜೇನು; ಕೇಳು: ಆಲಿಸು; ಅರಸ: ರಾಜ; ಹರಿಬ: ಕಾಳಗ, ಯುದ್ಧ; ಹೊಕ್ಕು: ಸೇರು; ಸುಭಟ: ಪರಾಕ್ರಮಿ; ಕಾಣೆ: ನೋಡಲಾಗದು;

ಪದವಿಂಗಡಣೆ:
ಉರಿಯ +ಸರಿಗೇರಿದ+ ಪತಂಗಕೆ
ಮರಳುದಲೆಯೇ +ಮತ್ತೆ +ರಣದಲಿ
ನರನೊಡನೆ +ಕಳನೇರಿದಾತನ+ ಸತಿ+ ಸುವಾಸಿನಿಯೆ
ಅರಳ+ ಹೊಸ +ಸಂಪದೆಯ +ಮಧುವನು
ಮರಿಗೆ+ ತಹವೇ+ ತುಂಬಿಗಳು +ಕೇಳ್
ಅರಸ +ಹರಿಬಕೆ+ ಹೊಕ್ಕ +ಸುಭಟರ+ ಕಾಣೆ +ನಾನೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಉರಿಯ ಸರಿಗೇರಿದ ಪತಂಗಕೆ ಮರಳುದಲೆಯೇ; ರಣದಲಿ
ನರನೊಡನೆ ಕಳನೇರಿದಾತನ ಸತಿ ಸುವಾಸಿನಿಯೆ; ಅರಳ ಹೊಸ ಸಂಪದೆಯ ಮಧುವನು
ಮರಿಗೆ ತಹವೇ ತುಂಬಿಗಳು