ಪದ್ಯ ೩೭: ಧರ್ಮಜನು ಪತ್ರದಲ್ಲಿ ಏನು ಬೇಡಿದನು?

ಮದುವೆಯೆಂಬುದು ನೆವ ನಿಜ ಶ್ರೀ
ಪದವ ತೋರಿಸಬೇಕು ವನವಾ
ಸದ ಪರಿಕ್ಲೇಶಾನು ಸಂತಾಪವನು ಬೀಳ್ಕೊಡಿಸಿ
ಕದಡು ಹೋಗಲು ಕಾಣಬೇಹುದು
ಹದುಳವಿಟ್ಟೆಮಗುಚಿತವಚನದ
ಹದವಳೆಯಲುತ್ಸಾಹ ಸಸಿಯನು ದೇವ ಸಲಹುವುದು (ವಿರಾಟ ಪರ್ವ, ೧೧ ಸಂಧಿ, ೩೭ ಪದ್ಯ)

ತಾತ್ಪರ್ಯ:
ದೇವ, ಮದುವೆಯೆಂಬುದೊಂದು ನೆಪ ಮಾತ್ರ, ನಿಮ್ಮ ಶ್ರೀಪಾದಗಳ ದರ್ಶನವನ್ನು ನೀಡಬೇಕು. ವನವಾಸ ಅಜ್ಞಾತವಾಸಗಳ ಕ್ಲೇಶದಿಂದಾಗಿರುವ ಸಂತಾಪವನ್ನು ಹೋಗಲಾಡಿಸಬೇಕು, ನಮ್ಮ ಮನಸ್ಸನ್ನು ಸಮಾಧಾನ ಪಡಿಸಬೇಕು, ಉಚಿತವಾದ ಮಾತುಗಳ ಹದಮಳೆಯನ್ನು ಕರೆದು ನಮ್ಮ ಉತ್ಸಾಹ ಸಸಿಯನ್ನು ಕಾಪಾಡಬೇಕು ಎಂದು ಧರ್ಮಜನು ಪತ್ರದಲ್ಲಿ ಬರೆದಿದ್ದನು.

ಅರ್ಥ:
ಮದುವೆ: ವಿವಾಹ; ನೆವ: ನೆಪ; ನಿಜ: ದಿಟ; ಶ್ರೀ: ಶ್ರೇಷ್ಠ; ಪದ: ಪಾದ; ತೋರಿಸು: ನೋಡು; ವನ: ಕಾಡು; ಪರಿ: ರೀತಿ; ಕ್ಲೇಶ: ದುಃಖ, ಸಂಕಟ; ಸಂತಾಪ: ವ್ಯಥೆ, ಅಳಲು; ಬೀಳ್ಕೊಡು: ತೆರಳು; ಕದಡು: ಕಲಕು, ಕಳವಳ; ಕಾಣು: ತೋರು; ಹದುಳ: ಸೌಖ್ಯ, ಕ್ಷೇಮ; ಹದವಳೆ: ಹದವಾದ ಮಳೆ; ಉಚಿತ: ಸರಿಯಾದ; ವಚನ: ಮಾತು; ಉತ್ಸಾಹ: ಹುರುಪು; ಸಸಿ: ಮೊಳಕೆ, ಅಂಕುರ; ಸಲುಹು: ಕಾಪಾಡು;

ಪದವಿಂಗಡಣೆ:
ಮದುವೆಯೆಂಬುದು+ ನೆವ +ನಿಜ +ಶ್ರೀ
ಪದವ +ತೋರಿಸಬೇಕು +ವನವಾ
ಸದ +ಪರಿಕ್ಲೇಶಾನು+ ಸಂತಾಪವನು+ ಬೀಳ್ಕೊಡಿಸಿ
ಕದಡು +ಹೋಗಲು +ಕಾಣಬೇಹುದು
ಹದುಳವಿಟ್ಟ್+ಎಮಗ್+ಉಚಿತ+ವಚನದ
ಹದವಳೆಯಲ್+ಉತ್ಸಾಹ +ಸಸಿಯನು +ದೇವ +ಸಲಹುವುದು

ಅಚ್ಚರಿ:
(೧) ಧರ್ಮಜನ ಬೇಡಿಕೆ – ಹದುಳವಿಟ್ಟೆಮಗುಚಿತವಚನದ ಹದವಳೆಯಲುತ್ಸಾಹ ಸಸಿಯನು ದೇವ ಸಲಹುವುದು