ಪದ್ಯ ೩೬: ಅಶ್ವತ್ಥಾಮನು ಕೌರವನಿಗೆ ಏನನ್ನು ಹೇಳಿದನು?

ಇವೆ ಮಹಾಮಂತ್ರಾಸ್ತ್ರಸಂತತಿ
ಯಿವೆ ಮಹಾಧನುರಾಜ್ಯಸತ್ಕೃತಿ
ಸವನ ಸಾಪೇಕ್ಷಂಗಳಿವೆ ತ್ರೈರಥಿಕರೊಬ್ಬರಲಿ
ಅವನಿಪತಿ ನೀ ಸೇಸೆದಳಿ ಮಿ
ಕ್ಕವರು ಸೇನೆ ವಿರೋಧಿವರ್ಗಕೆ
ದಿವವೊ ಧರೆಯೋ ನೋಡಲಹುದೇಳೆಂದನಾ ದ್ರೌಣಿ (ಗದಾ ಪರ್ವ, ೪ ಸಂಧಿ, ೩೬ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ಮಾತನಾಡುತ್ತಾ, ಇಗೋ ಅಸ್ತ್ರಗಳೆಂಬ ಮಹಾ ಮಂತ್ರಗಳಿವೆ. ಮಹಾಧನಸ್ಸುಗಳೆಂಬ ತುಪ್ಪವಿದೆ. ಸವನಗಳು ಮೂವರಲ್ಲಿ ಒಬ್ಬೊಬ್ಬರಲ್ಲೂ ಇವೆ. ರಾಜ, ನೀನು ದೀಕ್ಷಿತನಾಗು. ಉಳಿದ ಪಾಂಡವರಿಗೂ ಅವರ ಸೇನೆಗೂ ಭೂಮಿವಶವಾಗುವುದೋ, ಸ್ವರ್ಗವೋ ನೋಡಬಹುದು ಎಂದು ನುಡಿದನು.

ಅರ್ಥ:
ಮಹಾ: ಶ್ರೇಷ್ಠ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಅಸ್ತ್ರ: ಶಸ್ತ್ರ; ಸಂತತಿ: ವಂಶ, ಪೀಳಿಗೆ; ಧನು: ಬಿಲ್ಲು; ಸತ್ಕೃತಿ: ಒಳ್ಳೆಯ ಕಾರ್ಯ; ಸವನ: ಯಜ್ಞ, ಯಾಗ, ಮಂಗಳ ಸ್ನಾನ; ಅಪೇಕ್ಷೆ: ಇಚ್ಛೆ, ಬಯಕೆ; ತ್ರೈ: ಮೂರು; ರಥಿಕ: ರಥದಲ್ಲಿ ಕುಳಿತು ಯುದ್ಧ ಮಾಡುವವನು; ಅವನಿಪತಿ: ರಾಜ; ಸೇಸೆದಳಿ: ದೀಕ್ಷಿತನಾಗು; ಸೇಸೆ: ಮಂಗಳಾಕ್ಷತೆ; ಮಿಕ್ಕ: ಉಳಿದ; ವಿರೋಧಿ: ವೈರಿ; ವರ್ಗ: ಗುಂಪು; ದಿವ: ಸ್ವರ್ಗ; ಧರೆ: ಭೂಮಿ; ನೋಡು: ವೀಕ್ಷಿಸು; ದ್ರೌಣಿ: ಅಶ್ವತ್ಥಾಮ;

ಪದವಿಂಗಡಣೆ:
ಇವೆ +ಮಹಾಮಂತ್ರ+ಅಸ್ತ್ರ+ಸಂತತಿ
ಇವೆ +ಮಹಾಧನು+ರಾಜ್ಯ+ಸತ್ಕೃತಿ
ಸವನ+ ಸಾಪೇಕ್ಷಂಗಳಿವೆ +ತ್ರೈರಥಿಕರ್+ಒಬ್ಬರಲಿ
ಅವನಿಪತಿ +ನೀ +ಸೇಸೆದಳಿ+ ಮಿ
ಕ್ಕವರು +ಸೇನೆ +ವಿರೋಧಿ+ವರ್ಗಕೆ
ದಿವವೊ +ಧರೆಯೋ +ನೋಡಲಹುದ್+ಏಳೆಂದನಾ +ದ್ರೌಣಿ

ಅಚ್ಚರಿ:
(೧) ದಿವವೊ, ಧರೆಯೋ – ಪದಗಳ ಬಳಕೆ

ಪದ್ಯ ೩೩: ಕೃಪ ಅಶ್ವತ್ಥಾಮರು ಕೌರವನಿಗೆ ಯಾವ ಅಭಯವನ್ನು ನೀಡಿದರು?

ಅರಸ ಹೊರವಡು ಭೀಮಪಾರ್ಥರ
ಕರುಳ ಬೀಯವ ಭೂತ ನಿಕರಕೆ
ಬರಿಸುವೆವು ನೀ ನೋಡಲೊಡ್ಡುವೆವಸ್ತ್ರಸಂತತಿಯ
ಗರುವರಿಹರೇ ನೀರೊಳಾ ಹಿಮ
ಕರ ಮಹಾನ್ವಯ ಕೀರ್ತಿ ಜಲದೊಳು
ಕರಗದಿಹುದೇ ಕಷ್ಟವೃತ್ತಿಯದೆಂದರವನಿಪನ (ಗದಾ ಪರ್ವ, ೪ ಸಂಧಿ, ೩೩ ಪದ್ಯ)

ತಾತ್ಪರ್ಯ:
ಒಡೆಯ, ನೀರಿನಿಂದ ಹೊರಕ್ಕೆ ಬಾ, ನಿನ್ನೆದುರಿನಲ್ಲೇ ನಮ್ಮ ಅಸ್ತ್ರಗಳನ್ನೆಲ್ಲಾ ಒಡ್ಡಿ ಭೀಮಾರ್ಜುನರ ಕರುಳನ್ನು ಹೊರಗೆಳೆದು ಭೂತಗಳಿಗೆ ಬಡಿಸುತ್ತೇವೆ. ನಿನ್ನಂತಹ ಸ್ವಾಭಿಮಾನಿ ಶೂರರು ಎಲ್ಲಾದರೂ ನೀರಿನಲ್ಲಿ ಅಡಗಿಕೊಳ್ಳುವರೇ? ಚಂದ್ರವಂಶದ ಕೀರ್ತಿಯು ನಿನ್ನಿಂದಾಗಿ ನೀರಿನಲ್ಲಿ ಕರಗದಿರುವುದೇ?

ಅರ್ಥ:
ಅರಸ: ರಾಜ; ಹೊರವಡು: ಹೊರಗೆ ಬಾ; ಕರುಳು: ಪಚನಾಂಗ; ಬೀಯ: ಉಣಿಸು, ಆಹಾರ; ಭೂತ: ಬೇತಾಳ; ನಿಕರ: ಗುಂಪು; ಬರಿಸು: ತೃಪ್ತಿಪಡಿಸು; ನೋಡು: ವೀಕ್ಷಿಸು; ಒಡ್ಡು: ನೀಡು; ಅಸ್ತ್ರ: ಶಸ್ತ್ರ, ಆಯುಧ; ಸಂತತಿ: ಗುಂಪು; ಗರುವ: ಶ್ರೇಷ್ಠ, ಬಲಶಾಲಿ; ನೀರು: ಜಲ; ಹಿಮಕರ: ಚಂದ್ರ; ಮಹಾನ್ವಯ: ವಂಶ; ಕೀರ್ತಿ: ಯಶಸ್ಸು; ಜಲ: ನೀರು; ಕರಗು: ಮಾಯವಾಗು; ಕಷ್ಟ: ಕಠಿಣ; ವೃತ್ತಿ: ಸ್ಥಿತಿ; ಅವನಿಪ: ರಾಜ;

ಪದವಿಂಗಡಣೆ:
ಅರಸ+ ಹೊರವಡು +ಭೀಮ+ಪಾರ್ಥರ
ಕರುಳ +ಬೀಯವ +ಭೂತ +ನಿಕರಕೆ
ಬರಿಸುವೆವು +ನೀ +ನೋಡಲ್+ಒಡ್ಡುವೆವ್+ಅಸ್ತ್ರ+ಸಂತತಿಯ
ಗರುವರಿಹರೇ +ನೀರೊಳಾ +ಹಿಮ
ಕರ +ಮಹಾನ್ವಯ +ಕೀರ್ತಿ +ಜಲದೊಳು
ಕರಗದಿಹುದೇ +ಕಷ್ಟ+ವೃತ್ತಿಯದೆಂದರ್+ಅವನಿಪನ

ಅಚ್ಚರಿ:
(೧) ರೂಪಕದ ಪ್ರಯೋಗ – ಹಿಮಕರ ಮಹಾನ್ವಯ ಕೀರ್ತಿ ಜಲದೊಳು ಕರಗದಿಹುದೇ ಕಷ್ಟವೃತ್ತಿಯದೆಂದರವನಿಪನ
(೨) ಚಂದ್ರವಂಶ ಎಂದು ಕರೆಯುವ ಪರಿ – ಹಿಮಕರ ಮಹಾನ್ವಯ

ಪದ್ಯ ೬೮: ಘಟೋತ್ಕಚನು ಯಾರನ್ನು ನಾಶ ಮಾಡಿದನು?

ಒರಸಿದನು ರಣದಲಿ ಹಿಡಿಂಬಾ
ಸುರನ ಮಕ್ಕಳ ಚೈದ್ಯ ಮಾಗಧ
ನರಕ ಕಿಮ್ಮೀರಕ ಜಟಾಸುರಸೂನು ಸಂತತಿಯ
ಬರಲಿ ಕರ್ಣ ದ್ರೋಣರುಳಿದೀ
ಜರಡ ಜೋಡಿಸಬೇಡ ಭೀಮನ
ನರನ ಬಯಸುವರೆನ್ನೊಡನೆ ಕೈಮಾಡಹೇಳೆಂದ (ದ್ರೋಣ ಪರ್ವ, ೧೫ ಸಂಧಿ, ೬೮ ಪದ್ಯ)

ತಾತ್ಪರ್ಯ:
ಘಟೋತ್ಕಚನ ಯುದ್ಧದಲ್ಲಿ ಹಿಡಿಂಬ, ಶಿಶುಪಾಲ, ಜರಾಸಂಧ, ನರಕ, ಕಿಮ್ಮೀರ, ಜಟಾಸುರರ ಮಕ್ಕಳು ಅವರ ವಂಶದವರನ್ನು ನಾಶ ಮಾಡಿದನು. ಈ ಬಲಹೀನರನ್ನೇಕೆ ನನ್ನ ಮೇಲೆ ನುಗ್ಗಿಸುವಿರಿ, ಬರುವಂತಿದ್ದರೆ ಕರ್ಣ ದ್ರೋಣರು ಬರಲಿ, ಭೀಮಾರ್ಜುನರ ಮೇಲೆ ಯುದ್ಧಮಾಡ ಬಯಸುವವರು ನನ್ನ ಮೇಲೆ ಕೈಮಾಡಲಿ ಎಂದನು.

ಅರ್ಥ:
ಒರಸು: ನಾಶ; ರಣ: ಯುದ್ಧ; ಅಸುರ: ರಾಕ್ಷಸ; ಮಕ್ಕಳು: ಸುತ; ಸೂನು: ಮಗ; ಸಂತತಿ: ವಂಶ; ಬರಲಿ: ಆಗಮಿಸು; ಉಳಿದ: ಮಿಕ್ಕ; ಜರಡು: ಹುರುಳಿಲ್ಲದುದು; ಜೋಡಿಸು: ಕೂಡಿಸು; ನರ: ಅರ್ಜುನ; ಬಯಸು: ಇಚ್ಛಿಸು; ಕೈಮಾಡು: ಯುದ್ಧಮಾಡು;

ಪದವಿಂಗಡಣೆ:
ಒರಸಿದನು+ ರಣದಲಿ +ಹಿಡಿಂಬ
ಅಸುರನ +ಮಕ್ಕಳ +ಚೈದ್ಯ +ಮಾಗಧ
ನರಕ +ಕಿಮ್ಮೀರಕ +ಜಟಾಸುರ+ಸೂನು +ಸಂತತಿಯ
ಬರಲಿ+ ಕರ್ಣ+ ದ್ರೋಣರ್+ಉಳಿದೀ
ಜರಡ +ಜೋಡಿಸಬೇಡ +ಭೀಮನ
ನರನ +ಬಯಸುವರ್+ಎನ್ನೊಡನೆ +ಕೈಮಾಡ+ಹೇಳೆಂದ

ಅಚ್ಚರಿ:
(೧) ಮಕ್ಕಳು, ಸೂನು – ಸಮಾನಾರ್ಥಕ ಪದ
(೨) ಘಟೋತ್ಕಚನ ಬಲವನ್ನು ಹೇಳುವ ಪರಿ – ಬರಲಿ ಕರ್ಣ ದ್ರೋಣರುಳಿದೀಜರಡ ಜೋಡಿಸಬೇಡ

ಪದ್ಯ ೫೨: ಕರ್ಣನು ಅಭಿಮನ್ಯುವನ್ನು ಹೇಗೆ ಹಂಗಿಸಿದನು?

ಸಾರು ಸಾರಭಿಮನ್ಯು ಫಡ ಇ
ನ್ನಾರ ಬಸುರನು ಹೊಗುವೆ ನಿನ್ನವ
ರಾರ ಸಂತತಿ ಮಾಡಿಕೊಳಲಿ ಭವತ್ ಪರೋಕ್ಷದಲಿ
ಭೂರಿ ಬಲವನು ಸದೆವ ಗರ್ವವಿ
ದಾರ ಕೂಡೆ ಧರ್ನುಧರಾಗ್ರಣಿ
ವೀರ ಕರ್ಣ ಕಣಾ ಎನುತ ತೆಗೆದೆಚ್ಚನತಿರಥನ (ದ್ರೋಣ ಪರ್ವ, ೫ ಸಂಧಿ, ೫೨ ಪದ್ಯ
)

ತಾತ್ಪರ್ಯ:
ಕರ್ಣನು ಅಭಿಮನ್ಯುವನ್ನು ಸಂಭೋದಿಸುತ್ತಾ, ಹೋಗು ಅಭಿಮನ್ಯು ತೆರಳು, ಬದುಕಿಕೊಳ್ಳಲು ಇನ್ನಾರ ಹೊಟ್ಟೆಯೊಳಗೆ ಹೋಗುತ್ತೀ? ಸೈನ್ಯವನ್ನು ನಾಶಮಾಡಿದ ಗರ್ವವನ್ನು ಯಾರೆದುರು ತೋರಿಸುತ್ತೀ? ನಾನು ಅತ್ಯಂತ ಶ್ರೇಷ್ಠ ಧನುರ್ಧರನಾದ ಕರ್ಣ, ಎಂದು ಬಾಣಗಳನ್ನು ಅಭಿಮನ್ಯುವಿನ ಮೇಲೆ ಸುರಿಸಿದನು.

ಅರ್ಥ:
ಸಾರು: ಹರಡು, ಹೋಗು; ಫಡ: ತಿರಸ್ಕಾರದ ಮಾತು; ಬಸುರು: ಹೊಟ್ಟೆ; ಹೊಗು: ತೆರಳು; ಸಂತತಿ: ವಂಶ; ಪರೋಕ್ಷ: ಕಣ್ಣಿಗೆ ಕಾಣದಿರುವುದು; ಭೂರಿ: ಹೆಚ್ಚು, ಅಧಿಕ; ಬಲ: ಶಕ್ತಿ; ಸದೆ: ಕುಟ್ಟು, ಪುಡಿಮಾಡು; ಗರ್ವ: ಅಹಂಕಾರ; ಕೂಡೆ: ಜೊತೆ; ಅಗ್ರಣಿ: ಶ್ರೇಷ್ಠ; ವೀರ: ಶೂರ; ತೆಗೆ: ಹೊರತರು; ಎಚ್ಚು: ಬಾಣ ಪ್ರಯೋಗ ಮಾಡು; ಅತಿರಥ: ಪರಾಕ್ರಮಿ;

ಪದವಿಂಗಡಣೆ:
ಸಾರು +ಸಾರ್+ಅಭಿಮನ್ಯು +ಫಡ +ಇ
ನ್ನಾರ +ಬಸುರನು +ಹೊಗುವೆ +ನಿನ್ನವರ್
ಆರ +ಸಂತತಿ +ಮಾಡಿಕೊಳಲಿ+ ಭವತ್ +ಪರೋಕ್ಷದಲಿ
ಭೂರಿ +ಬಲವನು+ ಸದೆವ +ಗರ್ವವ್
ಇದಾರ +ಕೂಡೆ +ಧರ್ನುಧರಾಗ್ರಣಿ
ವೀರ +ಕರ್ಣ +ಕಣಾ+ ಎನುತ+ ತೆಗೆದ್+ಎಚ್ಚನ್+ಅತಿರಥನ

ಅಚ್ಚರಿ:
(೧) ಅಭಿಮನ್ಯುವನ್ನು ಹಂಗಿಸುವ ಪರಿ – ಸಾರು ಸಾರಭಿಮನ್ಯು ಫಡ ಇನ್ನಾರ ಬಸುರನು ಹೊಗುವೆ
(೨) ಕರ್ಣನು ಹೊಗಳಿಕೊಳ್ಳುವ ಪರಿ – ಧರ್ನುಧರಾಗ್ರಣಿ ವೀರ ಕರ್ಣ ಕಣಾ

ಪದ್ಯ ೨೦: ಭೀಷ್ಮರು ದುರ್ಯೋಧನನಿಗೆ ಏನೆಂದು ಹೇಳಿದರು?

ಬಂದರೇ ಪಾಂಡವರು ಸುದ್ದಿಯ
ತಂದರೇ ನಿನ್ನವರು ನಿನಗೇ
ನೆಂದು ಭಾಷೆಯ ಕೊಟ್ಟರೀ ಕರ್ಣಾದಿನಾಯಕರು
ಇಂದು ಸಂತತಿ ಗರುವರಲ್ಲಾ
ಬಂದರೇನಪರಾಧವೇ ಇ
ನ್ನೆಂದು ಪರಿಯಂತವರು ನವೆವರು ಎಂದನಾ ಭೀಷ್ಮ (ಭೀಷ್ಮ ಪರ್ವ, ೧ ಸಂಧಿ, ೨೦ ಪದ್ಯ)

ತಾತ್ಪರ್ಯ:
ಪಾಂಡವರು ಬಂದರೇ? ಆ ಸುದ್ದಿಯನ್ನು ನಿನ್ನವರು ತಿಳಿಸಿದರೇ? ಈ ಸುದ್ದಿಯನ್ನು ಕೇಳಿ ನಿನ್ನ ಆಪ್ತರಾದ ಕರ್ಣನೇ ಮೊದಲಾದ ನಾಯಕರು ನಿನಗೆ ಏನೆಂದು ಭಾಷೆಯನ್ನು ನೀಡಿದರು? ಎಷ್ಟೆ ಆಗಲಿ ಪಾಂಡವರು ಚಂದ್ರವಂಶದಲ್ಲಿ ಹುಟ್ಟಿದ ಸ್ವಾಭಿಮಾನಿಗಳು, ಇನ್ನೆಷ್ಟು ದಿನ ಅವರು ಕಷ್ಟದಿಂದ ದುಃಖಿಸುವುದು ಎಂದು ಭೀಷ್ಮರು ಕೇಳಿದರು.

ಅರ್ಥ:
ಬಂದು: ಆಗಮಿಸು; ಸುದ್ದಿ: ವಿಚಾರ; ಭಾಷೆ: ನುಡಿ, ಮಾತು; ಆದಿ: ಮೊದಲಾದ; ಸಂತತಿ: ವಂಶ, ಪೀಳಿಗೆ; ಗರುವ:ಹಿರಿಯ, ಶ್ರೇಷ್ಠ; ಅಪರಾಧ: ತಪ್ಪು; ಪರಿಯಂತ: ವರೆಗೆ, ತನಕ; ನವೆ: ದುಃಖಿಸು, ಕೊರಗು;

ಪದವಿಂಗಡಣೆ:
ಬಂದರೇ +ಪಾಂಡವರು +ಸುದ್ದಿಯ
ತಂದರೇ +ನಿನ್ನವರು +ನಿನಗೇ
ನೆಂದು +ಭಾಷೆಯ +ಕೊಟ್ಟರೀ +ಕರ್ಣಾದಿ+ನಾಯಕರು
ಇಂದು +ಸಂತತಿ +ಗರುವರಲ್ಲಾ
ಬಂದರೇನ್+ಅಪರಾಧವೇ +ಇ
ನ್ನೆಂದು +ಪರಿಯಂತವರು+ ನವೆವರು+ ಎಂದನಾ +ಭೀಷ್ಮ

ಅಚ್ಚರಿ:
(೧) ಬಂದರೇ, ತಂದರೇ – ಪ್ರಾಸ ಪದಗಳು

ಪದ್ಯ ೨೭: ಕೌರವನ ಸೈನ್ಯವು ಕರ್ಣನನ್ನು ಹೇಗೆ ಹೊಗಳಿತು?

ಸೋಲವಾಯಿತು ಕರ್ಣಗೆಂಬರ
ನಾಲಗೆಯ ಕೊಯ್ಯೆಲವೊ ಮಝ ಬಿ
ಲ್ಲಾಳು ರಾಯನ ಪಟ್ಟದಾನೆ ವಿರೋಧಿ ಸಂತತಿಯ
ಭಾಲದಕ್ಕರ ತೊಡೆಯಿತೋ ತೆಗೆ
ಕಾಳಗವನೆಂದಖಿಳ ಕುರುಬಲ
ಜಾಲ ಬೊಬ್ಬಿಡೆ ಕರ್ಣ ಮೆರೆದನು ಬಿಲ್ಲ ಬಲುಮೆಗಳ (ವಿರಾಟ ಪರ್ವ, ೯ ಸಂಧಿ, ೨೭ ಪದ್ಯ)

ತಾತ್ಪರ್ಯ:
ಕರ್ಣನ ಧನುರ್ವಿದ್ಯಾ ಕೌಶಲ್ಯವನ್ನು ಕಂಡು ಕೌರವ ಸೈನ್ಯವು ಕರ್ಣನು ಸೋತನೆನ್ನುವವರ ನಾಲಿಗೆಯನ್ನು ಕೊಯ್ದು ಹಾಕಿ, ಭಲೇ ಎಂಥ ಬಿಲ್ಲುಗಾರ! ಕೌರವನ ಪಟ್ಟದಾನೆ, ಅವನು ಸೋಲುವವನೇ? ಸುಳ್ಳು, ಅಗೋ ಅವನು ಬಿಡುತ್ತಿರುವ ಬಾಣಗಳಿಂದ ಶತ್ರು ಸಂತತಿಯ ಹಣೆ ಬರಹವೇ ಅಳಿಸಿಹೋಯಿತು, ಇನ್ನೇತರ ಯುದ್ಧ! ಸೈನ್ಯವು ಹಿಂದಿರುಗಲಿ, ಕೌರವನ ಸೈನ್ಯವು ಕರ್ಣನನ್ನು ಹೊಗಳಿತು.

ಅರ್ಥ:
ಸೋಲು: ಪರಾಭವ; ನಾಲಗೆ: ಜಿಹ್ವೆ; ಕೊಯ್ಯು: ಸೀಳು, ಕತ್ತರಿಸು; ಮಝ: ಭಲೇ; ಬಿಲ್ಲಾಳು: ಬಿಲ್ಲುಗಾರ; ರಾಯ: ರಾಜ; ಪಟ್ಟದಾನೆ: ಶ್ರೇಷ್ಠವಾದ ಗಜ; ವಿರೋಧಿ: ವೈರಿ; ಸಂತತಿ: ಕುಲ; ಭಾಳ: ಹಣೆ; ಅಕ್ಕರ: ಅಕ್ಷರ; ತೊಡೆ: ಶುಭ್ರಮಾಡು; ತೆಗೆ: ಹೊರತರು; ಕಾಳಗ: ಯುದ್ಧ; ಅಖಿಳ: ಎಲ್ಲಾ; ಜಾಲ: ಬಲೆ; ಬೊಬ್ಬಿಡು: ಆರ್ಭಟ; ಮೆರೆ: ಹೊಳೆ, ಪ್ರಕಾಶಿಸು; ಬಿಲ್ಲು: ಚಾಪ; ಬಲುಮೆ: ಪರಾಕ್ರಮ;

ಪದವಿಂಗಡಣೆ:
ಸೋಲವಾಯಿತು +ಕರ್ಣಗ್+ಎಂಬರ
ನಾಲಗೆಯ+ ಕೊಯ್ಯ್+ಎಲವೊ +ಮಝ +ಬಿ
ಲ್ಲಾಳು +ರಾಯನ +ಪಟ್ಟದಾನೆ +ವಿರೋಧಿ +ಸಂತತಿಯ
ಭಾಳದಕ್ಕರ +ತೊಡೆಯಿತೋ +ತೆಗೆ
ಕಾಳಗವನ್+ಎಂದ್+ಅಖಿಳ +ಕುರುಬಲ
ಜಾಲ +ಬೊಬ್ಬಿಡೆ +ಕರ್ಣ +ಮೆರೆದನು +ಬಿಲ್ಲ +ಬಲುಮೆಗಳ

ಅಚ್ಚರಿ:
(೧) ಕರ್ಣನನ್ನು ಹೊಗಳುವ ಪರಿ – ಮಝ ಬಿಲ್ಲಾಳು ರಾಯನ ಪಟ್ಟದಾನೆ ವಿರೋಧಿ ಸಂತತಿಯ
ಭಾಳದಕ್ಕರ ತೊಡೆಯಿತೋ

ಪದ್ಯ ೪೧: ಕರ್ಣನೇಕೆ ಬೆರಗಾದನು?

ಖತಿಯಲುಗಿದನು ದಿವ್ಯ ಬಾಣ
ಪ್ರತತಿಯನು ರಥಸೂತ ಹಯ ಸಂ
ತತಿ ಶರಾಸನ ಕೇತು ದಂಡಚ್ಛತ್ರ ಚಾಮರವ
ಹುತವಹನೊಳೊಟ್ಟಿದನು ಸಮರ
ವ್ಯತಿಕರದೊಳಾಗ್ನೇಯ ಶರ ಚಿ
ಮ್ಮಿತು ಛಡಾಳಿಸಿ ಕೆಂಡಗೆದರಲು ಕರ್ಣ ಬೆರಗಾದ (ಅರಣ್ಯ ಪರ್ವ, ೨೦ ಸಂಧಿ, ೪೧ ಪದ್ಯ)

ತಾತ್ಪರ್ಯ:
ಚಿತ್ರಸೇನನು ದಿವ್ಯ ಶರಗಳಿಂದ ಕರ್ಣನ ರಥ, ಕುದುರೆಗಳು, ಬಿಲ್ಲು, ಧ್ವಜಸ್ಥಂಭ, ಛತ್ರ, ಚಾಮರಗಳನ್ನು ಸುಟ್ಟನು. ಅವನ ಆಗ್ನೇಯಾಸ್ತ್ರವು ಉರಿಯನ್ನು ಚಿಮ್ಮಿಸಿ ಎರಗಲು ಕರ್ಣನು ಬೆರಗಾದನು.

ಅರ್ಥ:
ಖತಿ: ಕೋಪ; ಅಲುಗು: ಅದುರು; ದಿವ್ಯ: ಶ್ರೇಷ್ಠ; ಬಾಣ: ಸರಳು; ಪ್ರತತಿ: ಗುಂಪು, ಸಮೂಹ; ರಥ: ಬಂಡಿ; ಸೂತ: ರಥವನ್ನು ನಡೆಸುವವನು, ಸಾರ; ಹಯ: ಕುದುರೆ; ಸಂತತಿ: ಗುಂಪು, ಸಮೂಹ; ಶರಾಸನ: ಬಾಣವು ನೆಲೆಸುವ ಸ್ಥಳ, ಬಿಲ್ಲು; ಕೇತು: ಬಾವುಟ; ದಂಡ: ಕೋಲು; ಛತ್ರ: ಕೊಡೆ; ಚಾಮರ: ಕುಂಚ; ಹುತವಹ: ಅಗ್ನಿ; ಸಮರ: ಯುದ್ಧ; ವ್ಯತಿಕರ: ಪರಸ್ಪರ ಕೊಡುಕೊಳ್ಳುವುದು; ಆಗ್ನೇಯ: ಅಗ್ನಿ; ಶರ: ಬಾಣ; ಚಿಮ್ಮು: ಹೊರಹಾಕು; ಛಡಾಳಿಸು: ಹೆಚ್ಚಾಗು, ಅಧಿಕವಾಗು; ಕೆಂಡ: ಉರಿಯುತ್ತಿರುವ ಇದ್ದಿಲು; ಕೆದರು: ಹರಡು; ಬೆರಗು: ಆಶ್ಚರ್ಯ;

ಪದವಿಂಗಡಣೆ:
ಖತಿಯಲ್+ಉಗಿದನು +ದಿವ್ಯ+ ಬಾಣ
ಪ್ರತತಿಯನು +ರಥಸೂತ +ಹಯ +ಸಂ
ತತಿ +ಶರಾಸನ +ಕೇತು +ದಂಡ+ಚ್ಛತ್ರ +ಚಾಮರವ
ಹುತವಹನೊಳ್+ಒಟ್ಟಿದನು +ಸಮರ
ವ್ಯತಿಕರದೊಳ್+ಆಗ್ನೇಯ +ಶರ +ಚಿ
ಮ್ಮಿತು +ಛಡಾಳಿಸಿ+ ಕೆಂಡ+ಕೆದರಲು +ಕರ್ಣ +ಬೆರಗಾದ

ಅಚ್ಚರಿ:
(೧) ಖತಿ, ಸಂತತಿ, ಪ್ರತತಿ – ಪ್ರಾಸ ಪದಗಳು

ಪದ್ಯ ೧೭: ದುರ್ಯೋಧನನು ಪಾಂಡವರೇ ಆಳಲಿ ಎಂದು ಏಕೆ ಹೇಳಿದ?

ನೊಂದರವರಗ್ಗಳಿಸಿ ಹೃದಯ ದೊ
ಳೊಂದಿ ಬೆರಸರು ತೆರಹು ಮರಹಿನೊ
ಳಂದಗೆಡಿಸಿದೊಡಲ್ಲದುಳುಹರು ನಿನ್ನ ಸಂತತಿಯ
ಒಂದು ಸತ್ತಿಗೆ ನಮ್ಮದಿಲ್ಲಿಗೆ
ನಿಂದುದೆನಿಸಲಿ ನಾವು ನಿಲಲವ
ರೊಂದು ಸತ್ತಿಗೆಯಾಗಿ ಸಲಹಲಿ ಸಕಲ ಭೂತಳವ (ಸಭಾ ಪರ್ವ, ೧೭ ಸಂಧಿ, ೧೭ ಪದ್ಯ)

ತಾತ್ಪರ್ಯ:
ತಂದೆಯ ಮನಸ್ಸನ್ನು ಕರಗಿಸಿದ ಮೇಲೆ, ದುರ್ಯೋಧನನು ಹೇಳುತ್ತಾ, ಪಾಂಡವರು ಬಹಳವಾಗಿ ನೊಂದಿದ್ದಾರೆ, ಹೃತ್ಪೂರ್ವಕವಾಗಿ ನಮ್ಮೊಡನೆ ವ್ಯವಹರಿಸುವುದಿಲ್ಲ. ಗುಪ್ತವಾಗಿಯೋ ಬಹಿರಂಗವಾಗಿಯೋ ನಮ್ಮನ್ನು ಹಾಳುಮಾಡದೆ ಬಿಡುವುದಿಲ್ಲ. ಆದುದರಿಂದ ನಮ್ಮ ಶ್ವೇತಚ್ಛತ್ರವು ಇಂದಿನಿಂದ ಇಲ್ಲದಂತಾಗಲಿ, ಅವರು ಭೂಮಿಯನ್ನು ಏಕಚ್ಛತ್ರದಡಿಯಲ್ಲಿ ಪಾಲಿಸಲಿ ಎಂದು ಹೇಳಿದನು.

ಅರ್ಥ:
ನೊಂದು: ನೋವನ್ನು ಅನುಭವಿಸಿ; ಅಗ್ಗ: ಬಹಳ; ಹೃದಯ: ಎದೆ; ಬೆರಸು: ಕೂಡಿರುವಿಕೆ; ತೆರಹು: ಎಡೆ, ಜಾಗ, ತೆರೆ; ಮರಹು:ಮರವೆ, ವಿಸ್ಮೃತಿ; ಅಂದಗೆಡಿಸು: ಹಾಳುಮಾಡು; ಉಳುಹು: ಕಾಪಾಡು, ಸಂರಕ್ಷಿಸು; ಸಂತತಿ: ವಂಶ; ಸತ್ತು: ಇರುವಿಕೆ, ಅಸ್ತಿತ್ವ; ನಿಂದು: ನಿಲ್ಲಿಸು; ನಿಲಲು: ತಾಳು, ತಡೆ; ಸಲಹು: ಪಾಲಿಸು; ಸಕಲ: ಎಲ್ಲಾ; ಭೂತಳ: ಭೂಮಿ;

ಪದವಿಂಗಡಣೆ:
ನೊಂದರ್+ಅವರ್+ಅಗ್ಗಳಿಸಿ+ ಹೃದಯ+ ದೊಳ್
ಒಂದಿ +ಬೆರಸರು+ ತೆರಹು +ಮರಹಿನೊಳ್
ಅಂದ+ಕೆಸಿದೊಡಲ್ಲದ್+ಉಳುಹರು+ ನಿನ್ನ+ ಸಂತತಿಯ
ಒಂದು +ಸತ್ತಿಗೆ +ನಮ್ಮದ್+ಇಲ್ಲಿಗೆ
ನಿಂದುದ್+ಎನಿಸಲಿ +ನಾವು +ನಿಲಲ್+ಅವರ್
ಒಂದು +ಸತ್ತಿಗೆಯಾಗಿ +ಸಲಹಲಿ +ಸಕಲ +ಭೂತಳವ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸತ್ತಿಗೆಯಾಗಿ ಸಲಹಲಿ ಸಕಲ

ಪದ್ಯ ೧೨: ವೃಷಸೇನನನ್ನು ತಡೆಯಲು ಯಾರು ಬಂದರು?

ಅರಸ ಕೇಳೈ ಬಳಿಕ ಭೀಮನ
ತರಹರವನರಿದಾಚೆಯಲಿ ಸಂ
ವರಿಸಿಕೊಂಡನು ನಕುಳ ಬಿಟ್ಟನು ಸೂಠಿಯಲಿ ರಥವ
ತರುವಲಿಯೆ ನೀನಿದಿರಹುದೆ ಫಡ
ಸರಿಸವೇ ಭೀಮಂಗೆ ನೀನೆನು
ತರಿಭಟನ ಕೆಣಕಿದನು ಕೆದರಿದನಸ್ತ್ರ ಸಂತತಿಯ (ಕರ್ಣ ಪರ್ವ, ೨೦ ಸಂಧಿ, ೧೨ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಕೇಳು, ಭೀಮನಿಗಾದ ದುಸ್ಥಿತಿಯನ್ನು ನಕುಲನು ತಿಳಿದು ಸೈನ್ಯವನ್ನು ಗುಂಪುಗೂಡಿಸಿ ವೇಗದಿಂದ ರಥವನ್ನು ತಂದು ವೃಷಸೇನನೆದುರು ನಿಲ್ಲಿಸಿ, ಎಲವೋ ಬಾಲಕನೇ, ಭೀಮಂಗೆ ನೀನು ಸರಿಸಮಾನನೇ? ಅವನ ಮೇಲೆ ನಿನ್ನ ಯುದ್ಧವೇ? ಎಂದು ಬಾಣ್ಗಳನ್ನು ನಕುಲನು ವೃಷಸೇನನ ಮೇಲೆ ಬಿಟ್ಟನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ತರಹರ: ದುರವಸ್ಥೆ, ದುಃಸ್ಥಿತಿ; ಅರಿ:ತಿಳಿದು; ಆಚೆ: ಹೊರಗಡೆ; ಸಂವರಿಸು: ಸಂಗ್ರಹಿಸು; ಬಿಟ್ಟನು: ತೆರಳು; ಸೂಠಿ: ವೇಗ; ರಥ: ಬಂಡಿ; ತರುವಲಿ: ಹುಡುಗ, ಬಾಲಕ; ಇದಿರು: ಎದುರು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಸರಿಸವೇ: ಸಮಾನವೇ; ಅರಿಭಟ: ವೈರಿಯ ಸೈನಿಕ; ಕೆಣಕು: ರೇಗಿಸು; ಕೆದರು:ಹರಡು, ಚದರಿಸು; ಅಸ್ತ್ರ: ಆಯುಧ; ಸಂತತಿ: ಸಮೂಹ;

ಪದವಿಂಗಡಣೆ:
ಅರಸ +ಕೇಳೈ +ಬಳಿಕ+ ಭೀಮನ
ತರಹರವನ್+ಅರಿದ್+ಆಚೆಯಲಿ+ ಸಂ
ವರಿಸಿಕೊಂಡನು +ನಕುಳ+ ಬಿಟ್ಟನು +ಸೂಠಿಯಲಿ +ರಥವ
ತರುವಲಿಯೆ +ನೀನ್+ಇದಿರಹುದೆ+ ಫಡ
ಸರಿಸವೇ+ ಭೀಮಂಗೆ +ನೀನೆನುತ್
ಅರಿಭಟನ+ ಕೆಣಕಿದನು+ ಕೆದರಿದನ್+ಅಸ್ತ್ರ+ ಸಂತತಿಯ

ಅಚ್ಚರಿ:
(೧) ಅರಸ, ಅರಿಭಟ, ಅರಿದು, ಆಚೆ, ಅಸ್ತ್ರ – ಅ ಕಾರದ ಪದಗಳ ಬಳಕೆ
(೨) ವೃಷಸೇನನ ಬಗ್ಗೆ ತಿರಸ್ಕಾರದ ನುಡಿ – ಫಡ

ಪದ್ಯ ೮೦: ಗೃಹಸ್ಥೆಯ ಲಕ್ಷಣವೇನು?

ಇರುಳು ಹಗಲನವರತ ಪತಿ ಪರಿ
ಚರಿಯವನು ಮಾಡುತ್ತ ಪರಪುರು
ಷರನು ನೆನೆಯದೆ ಹಲವು ಸಂತತಿಗಳಿಗೆ ತಾಯಾಗಿ
ಇರುತ ದೇವ ಬ್ರಾಹ್ಮರನು ತಾ
ನಿರುತ ಸತ್ಕರಿಸುತ್ತಲಂತಃ
ಪುರದಲೆಸೆಯೆ ಗೃಹಸ್ಥೆಯೆನಿಸುವಳರಸ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೮೦ ಪದ್ಯ)

ತಾತ್ಪರ್ಯ:
ಹಗಲು ರಾತ್ರಿ ಎನದೆ ಸದಾ ಪತಿಯ ಸೇವೆ ಮಾಡುತ್ತಾ, ಪರಪುರುಷರನ್ನು ನೆನೆಯದೆ ಹಲವು ಮಕ್ಕಳಿಗೆ ಜನ್ಮನೀಡಿ, ನಿತ್ಯವೂ ದೇವ ಬ್ರಾಹ್ಮಣರನ್ನು ಸತ್ಕರಿಸುತ್ತಾ ಅಂತಃಪುರದಲ್ಲಿರುವವಳು ಗೃಹಸ್ಥೆಯೆನಿಸುತ್ತಾಳೆ ಎಂದು ಗೃಹಸ್ಥೆಯ ಲಕ್ಷಣವನ್ನು ಸನತ್ಸುಜಾತರು ಧೃತರಾಷ್ಟ್ರನಿಗೆ ತಿಳಿಸಿದರು.

ಅರ್ಥ:
ಇರುಳು: ರಾತ್ರಿ; ಹಗಲು: ಬೆಳಗ್ಗೆ; ಅನವರತ: ಯಾವಾಗಲು; ಪತಿ: ಗಂಡ; ಪರಿಚರಿಯ: ಸೇವೆ; ಮಾಡು: ಆಚರಿಸು; ಪರ: ಬೇರೆ; ಪುರುಷ: ಗಂಡು; ನೆನೆ: ಜ್ಞಾಪಿಸು; ಹಲವು: ಬಹಳ; ಸಂತತಿ: ಮಕ್ಕಳು; ತಾಯಿ: ಮಾತೆ; ಇರುತ: ಜೀವಿಸುತ; ದೇವ: ಸುರ; ಬ್ರಾಹ್ಮರ: ವಿಪ್ರ; ನಿರುತ: ಧರ್ಮ, ಶ್ರದ್ಧೆ; ಸತ್ಕರಿಸು: ಗೌರವಿಸು; ಅಂತಃಪುರ: ಹೆಂಗಸರ ವಾಸಸ್ಥಾನ; ಎಸೆ: ಶೋಭಿಸು; ಗೃಹಸ್ಥೆ: ಹೆಂಡತಿ; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಇರುಳು +ಹಗಲ್+ಅನವರತ +ಪತಿ +ಪರಿ
ಚರಿಯವನು +ಮಾಡುತ್ತ +ಪರಪುರು
ಷರನು +ನೆನೆಯದೆ +ಹಲವು +ಸಂತತಿಗಳಿಗೆ+ ತಾಯಾಗಿ
ಇರುತ+ ದೇವ +ಬ್ರಾಹ್ಮರನು +ತಾ
ನಿರುತ+ ಸತ್ಕರಿಸುತ್ತಲ್+ಅಂತಃ
ಪುರದಲ್+ಎಸೆಯೆ +ಗೃಹಸ್ಥೆ+ಯೆನಿಸುವಳ್+ಅರಸ+ ಕೇಳೆಂದ

ಅಚ್ಚರಿ:
(೧) ಇರುತ, ನಿರುತ – ಪ್ರಾಸ ಪದಗಳ ಬಳಕೆ
(೨) ಇರುಳು ಹಗಲು – ವಿರುದ್ಧ ಪದಗಳು