ಪದ್ಯ ೧೬: ಎಷ್ಟು ವಸ್ತುಗಳನ್ನು ಸಾಗಿಸಲು ಮುಂದಾದರು?

ಮೆರೆವ ಗಜ ಹಯಶಾಲೆಯಲಿ ಮೈ
ಮುರಿಕ ವೃದ್ಧ ವ್ಯಾಧಿತಾವಳ್
ಮರಿಗುದುರೆ ಮರಿಯಾನೆ ತೆಗೆದವು ಲಕ್ಕ ಸಂಖ್ಯೆಯಲಿ
ಉರುವ ಭಂಡಾರದ ಮಹಾರ್ಥದ
ನೆರವಣಿಗೆ ಗಾಢಿಸಿತು ಬೀದಿಯ
ತೆರಹು ಕೆತ್ತವು ಹೊತ್ತ ಸರಕಿನ ಬಹಳ ಬಂಡಿಗಳ (ಗದಾ ಪರ್ವ, ೪ ಸಂಧಿ, ೧೬ ಪದ್ಯ)

ತಾತ್ಪರ್ಯ:
ಗಜಶಾಲೆ, ಹಯಶಾಲೆಗಳಲ್ಲಿ ಮುದಿ, ರೋಗಗ್ರಸ್ತ, ಮರಿಕುದುರೆ ಲಕ್ಷಗಟ್ಟಲೆ ಮರಿಯಾನೆಗಳನ್ನು ಹೊರಡಿಸಿಕೊಂಡು ಬಂದರು. ಭಂಡಾರದಿಂದ ಬಹುಬೆಲೆಯ ವಸ್ತುಗಳನ್ನು ತಂದರು. ಸರಕಿನ ಬಂಡಿಗಳು ದಾರಿಯಲ್ಲಿ ಸ್ಥಳವಿಲ್ಲದಂತೆ ಕಿಕ್ಕಿರಿದವು.

ಅರ್ಥ:
ಮೆರೆ: ಹೊಳೆ, ಪ್ರಕಾಶಿಸು; ಗಜ: ಆನೆ; ಹಯ: ಕುದುರೆ; ಶಾಲೆ: ಆಲಯ; ಮೈ: ತನು; ಮುರಿ: ಬಾಗು, ತಿರುವು; ವೃದ್ಧ: ವಯಸ್ಸಾದ, ಮುದುಕ; ವ್ಯಾಧಿ: ರೋಗ, ಖಾಯಿಲೆ; ಆವಳಿ: ಸಾಲು; ಮರಿ: ಚಿಕ್ಕ; ಕುದುರೆ: ಅಶ್ವ; ಆನೆ: ಗಜ; ತೆಗೆ: ಹೊರತಉ; ಲಕ್ಕ: ಲಕ್ಷ; ಸಂಖ್ಯೆ: ಎಣಿಕೆ; ಉರು: ವಿಶೇಷವಾದ; ಭಂಡಾರ: ಬೊಕ್ಕಸ, ಖಜಾನೆ; ಮಹಾರ್ಥ: ಬಹುಬೆಲೆಯ; ಎರವು: ಸಾಲ, ದೂರವಾಗು; ಗಾಢಿಸು: ತುಂಬು; ಬೀದಿ: ದಾರಿ; ತೆರಹು: ಎಡೆ, ಜಾಗ; ಕೆತ್ತು: ನಡುಕ, ಸ್ಪಂದನ; ಹೊತ್ತ: ಹೇರು; ಸರಕು: ಸಾಮಗ್ರಿ; ಬಹಳ: ತುಂಬ; ಬಂಡಿ: ರಥ;

ಪದವಿಂಗಡಣೆ:
ಮೆರೆವ+ ಗಜ +ಹಯಶಾಲೆಯಲಿ +ಮೈ
ಮುರಿಕ +ವೃದ್ಧ +ವ್ಯಾಧಿತ+ಆವಳಿ
ಮರಿಗುದುರೆ +ಮರಿಯಾನೆ +ತೆಗೆದವು +ಲಕ್ಕ +ಸಂಖ್ಯೆಯಲಿ
ಉರುವ +ಭಂಡಾರದ +ಮಹಾರ್ಥದನ್
ಎರವಣಿಗೆ +ಗಾಢಿಸಿತು +ಬೀದಿಯ
ತೆರಹು +ಕೆತ್ತವು +ಹೊತ್ತ +ಸರಕಿನ +ಬಹಳ +ಬಂಡಿಗಳ

ಅಚ್ಚರಿ:
(೧) ೧-೩ ಸಾಲುಗಳು ಮ ಕಾರದಿಂದ ಪ್ರಾರಂಭ

ಪದ್ಯ ೩೨: ದ್ರೋಣನು ಏನನ್ನು ತರಲು ಕೈಬೀಸಿದನು?

ತೆಗೆಸಿ ಚೂಣಿಯ ಬಲವ ದೀವ
ಟ್ಟಿಗರ ಕರೆ ಕರೆ ತೈಲಪೂರ್ಣದ
ತೊಗಲ ಕುನಿಕಿಲ ಬಂಡಿ ಕವಿಯಲಿ ಕೋಟಿ ಸಂಖ್ಯೆಯಲಿ
ಬಿಗಿದ ಮಳವೆಯನೆಣ್ಣೆಗೊಪ್ಪರಿ
ಗೆಗಳೊಳದ್ದಲಿ ಗಳೆಗಳಲಿ ಸೀ
ರೆಗಳ ಸುತ್ತಲಿಯೆಂದು ಕೈವೀಸಿದನು ಕಲಿ ದ್ರೋಣ (ದ್ರೋಣ ಪರ್ವ, ೧೫ ಸಂಧಿ, ೩೨ ಪದ್ಯ)

ತಾತ್ಪರ್ಯ:
ಮುಂಚೂಣಿಯ ಬಲವನ್ನು ತೆಗೆಸಿ, ದೀವಟಿಗೆಯವರನ್ನು ಕರೆಸು, ತೈಲ ತುಂಬಿದ ಚರ್ಮದ ಚೀಲಗಳ ಬಂಡಿಯು ಕ್ಟಿಗಟ್ಟಲೆ ಬರಲಿ, ಜೋಡಿಸಿ ಕಟ್ಟಿದ ಬಟ್ಟೆಗಳ ರಾಶಿಯನ್ನು ಎಣ್ಣೆಗೊಪ್ಪರಿಗೆಗಳಲ್ಲಿ ಅದ್ದಿ, ಗಳುಗಳಿಗೆ ತೈಲದ ಸೀರೆಗಳನ್ನು ಸುತ್ತಿ ಪಂಜುಗಳನ್ನು ಮಾಡಿರಿ ಎಂದು ದ್ರೋಣನು ಅಪ್ಪಣೆ ಮಾಡಿ ಕೈಬೀಸಿದನು.

ಅರ್ಥ:
ತೆಗೆಸು: ಹೊರತರು; ಚೂಣಿ: ಮುಂದಿನ ಸಾಲು, ಮುಂಭಾಗ; ಬಲ: ಶಕ್ತಿ, ಸೈನ್ಯ; ದೀವಟಿ: ಪಂಜು; ಕರೆ: ಬರೆಮಾಡು; ತೈಲ: ಎಣ್ಣೆ; ಪೂರ್ಣ: ತುಂಬ; ತೊಗಲು: ಚರ್ಮ, ತ್ವಕ್ಕು; ಕುನಿಕಿಲ: ಚೀಲ; ಬಂಡಿ: ರಥ; ಕವಿ: ಆವರಿಸು; ಕೋಟಿ: ಅಸಂಖ್ಯಾತ; ಸಂಖ್ಯೆ: ಎಣಿಕೆ; ಬಿಗಿ: ಗಟ್ಟಿ; ಮಳವೆ: ಮೂಟೆ, ಗಂಟು; ಅದ್ದು: ಒದ್ದೆ ಮಾಡು, ನೆನೆ; ಸೀರೆ: ಬಟ್ಟೆ, ವಸ್ತ್ರ; ಸುತ್ತು: ಆವರಿಸು; ಕೈವೀಸು: ಕೈಯನ್ನು ಅಲ್ಲಾಡಿಸು; ಕಲಿ: ಶೂರ;

ಪದವಿಂಗಡಣೆ:
ತೆಗೆಸಿ +ಚೂಣಿಯ +ಬಲವ +ದೀವ
ಟ್ಟಿಗರ+ ಕರೆ +ಕರೆ+ ತೈಲ+ಪೂರ್ಣದ
ತೊಗಲ +ಕುನಿಕಿಲ +ಬಂಡಿ +ಕವಿಯಲಿ +ಕೋಟಿ +ಸಂಖ್ಯೆಯಲಿ
ಬಿಗಿದ +ಮಳವೆಯನ್+ಎಣ್ಣೆಗ್+ಒಪ್ಪರಿ
ಗೆಗಳೊಳ್+ಅದ್ದಲಿ +ಗಳೆಗಳಲಿ +ಸೀ
ರೆಗಳ +ಸುತ್ತಲಿಯೆಂದು+ ಕೈವೀಸಿದನು +ಕಲಿ+ ದ್ರೋಣ

ಅಚ್ಚರಿ:
(೧) ದ್ರೋಣನ ಆಜ್ಞೆ – ಬಿಗಿದ ಮಳವೆಯನೆಣ್ಣೆಗೊಪ್ಪರಿಗೆಗಳೊಳದ್ದಲಿ ಗಳೆಗಳಲಿ ಸೀರೆಗಳ ಸುತ್ತಲಿಯೆಂದು