ಪದ್ಯ ೪೦: ಯಕ್ಷ ಧರ್ಮಜನ ಸಂವಾದ – ೪

ಧೃತಿಯುತ ಕ್ಷತ್ರಿಯನು ವೇದ
ವ್ರತಯುತ ಶ್ರೋತ್ರಿಯನಹಿಂಸಾ
ರತನು ಮಹಪುರುಷನು ಸುಧೀರನು ಸಾಧುಸೇವಕನು
ಸತತ ಪರರುಪಕಾರಿ ದೇವ
ಪ್ರತತಿ ವಲ್ಲಭ ಪರರ ಗುಣದು
ನ್ನತಿಯ ಸೈರಿಸದವನು ಕಷ್ಟನು ಯಕ್ಷ ಕೇಳೆಂದ (ಅರಣ್ಯ ಪರ್ವ, ೨೬ ಸಂಧಿ, ೪೦ ಪದ್ಯ)

ತಾತ್ಪರ್ಯ:
ಧೃತಿಯಿರುವವನೇ ಕ್ಷತ್ರಿಯ, ವೇದೋಕ್ತ ವ್ರತ ನಿರತನೇ ಶ್ರೋತ್ರಿ, ಅಹಿಂಸೆಯನ್ನು ಪಾಲಿಸುವವನೇ ಮಹಾಪುರುಷ, ಸಾಧು ಸೇವಕನೇ ಧೀರ, ಪರೋಪಕಾರನಿರತನು ದೇವತೆಗಳಿಎ ಪ್ರೀತಿಪಾತ್ರನು, ಪರರ ಸದ್ಗುಣಗಳನ್ನು ಸೈರಿಸದವನೇ ಕಷ್ಟ ಎಂದು ಧರ್ಮಜನು ಹೇಳಿದನು.

ಅರ್ಥ:
ಧೃತಿ: ಧೈರ್ಯ, ಧೀರತನ; ಕ್ಷತ್ರಿಯ: ನಾಲ್ಕು ವರ್ಣಗಳಲ್ಲಿ ಒಂದು; ವೇದ: ಆಗಮ, ಶೃತಿ; ವ್ರತ: ಆಚಾರ; ಶ್ರೋತ್ರಿ: ಬ್ರಾಹ್ಮಣ; ಅಹಿಂಸ: ಪರರಿಗೆ ನೋವ ಕೊಡದ ವ್ರತ; ಮಹಪುರುಷ: ಶ್ರೇಷ್ಠ; ಸುಧೀರ: ಪರಾಕ್ರಮಿ; ಸಾಧು: ಋಷಿ, ಮುನಿ, ಶುದ್ಧವಾದುದು; ಸೇವಕ: ದಾಸ; ಸತತ: ಯಾವಾಗಲು; ಪರ: ಬೇರೆ; ಉಪಕಾರ: ಸಹಾಯ, ನೆರವು; ದೇವ: ಸುರರು; ಪ್ರತತಿ: ಗುಂಪು, ಸಮೂಹ; ವಲ್ಲಭ: ಗಂಡ, ಪತಿ; ಗುಣ: ನಡತೆ, ಸ್ವಭಾವ; ಉನ್ನತಿ: ಮೇಲ್ಮೆ, ಹಿರಿಮೆ; ಸೈರಿಸು: ತಾಳ್ಮೆ, ಸಹನೆ; ಕಷ್ಟ: ಕಠಿಣವಾದದ್ದು; ಯಕ್ಷ: ಖಚರ; ಕೇಳು: ಆಲಿಸು;

ಪದವಿಂಗಡಣೆ:
ಧೃತಿಯುತ+ ಕ್ಷತ್ರಿಯನು +ವೇದ
ವ್ರತಯುತ+ ಶ್ರೋತ್ರಿಯನ್+ಅಹಿಂಸಾ
ರತನು+ ಮಹಪುರುಷನು +ಸುಧೀರನು +ಸಾಧು+ಸೇವಕನು
ಸತತ +ಪರರ್+ಉಪಕಾರಿ +ದೇವ
ಪ್ರತತಿ +ವಲ್ಲಭ +ಪರರ +ಗುಣದ್
ಉನ್ನತಿಯ +ಸೈರಿಸದವನು +ಕಷ್ಟನು +ಯಕ್ಷ +ಕೇಳೆಂದ

ಅಚ್ಚರಿ:
(೧) ಧೃತಿಯುತ, ವ್ರತಯುತ; ಪ್ರತತಿ, ಉನ್ನತಿ; ಕ್ಷತ್ರಿಯ, ಶ್ರೋತ್ರಿಯ – ಪ್ರಾಸ ಪದಗಳು

ಪದ್ಯ ೨೨: ಊರ್ವಶಿಯು ಏಕೆ ಕರಗಿದಳು?

ವಿಕಳಮತಿಯೋ ಮೇಣಿವ ನಪುಂ
ಸಕನೊ ಜಡನೋ ಶ್ರೋತ್ರಿಯನೊ ಬಾ
ಧಕನೊ ಖಳನೋ ಖೂಳನೋ ಮಾನವ ವಿಕಾರವಿದೊ
ವಿಕಟ ತಪಸಿನ ದೇವ ದೈತ್ಯರ
ಮಕುಟವಾಂತದು ವಾಮಪಾದವ
ನಕಟ ಕೆಟ್ಟೆನಲಾಯೆನುತ ಕರಗಿದಳು ನಳಿನಾಕ್ಷಿ (ಅರಣ್ಯ ಪರ್ವ, ೯ ಸಂಧಿ, ೨೨ ಪದ್ಯ)

ತಾತ್ಪರ್ಯ:
ಅರ್ಜುನನ ಭಾವನೆಯನ್ನು ಕಂಡು, ಊರ್ವಶಿಯು ಅರ್ಜುನನನ್ನು ನೋಡಿ, ಇವನೇನು ಮತಿಹೀನನೋ, ಅಥವ ನಪುಂಸಕನೋ, ತಿಳುವಳಿಕೆಯಿಲ್ಲದವನೋ, ಬ್ರಾಹ್ಮಣನೋ, ಪರರಿಗೆ ಬಾಧೆಕೊಡುವ ಸ್ವಭಾವದವನೋ, ನೀಚನೋ, ದುಷ್ಟನೋ, ಮಾನವಾಕಾರವಿರುವ ಇನ್ನೇನೋ? ಮಹಾ ತಪಸ್ಸನ್ನು ಮಾಡಿದ ದೇವ ದಾನವರು ಬಂದು ತಮ್ಮ ಕಿರೀಟವನ್ನು ಎಡಪಾದಕ್ಕೆ ಇಟ್ಟು ನನ್ನನ್ನು ಬೇಡಿಕೊಳ್ಳುತ್ತಿದ್ದರು, ಅಂತಹ ನಾನು ಈಗ ಕೆಟ್ಟೆನಲ್ಲಾ ಎಂದು ಚಿಂತಿಸುತ್ತಾ ಊರ್ವಶಿಯು ಕರಗಿಹೋದಳು.

ಅರ್ಥ:
ವಿಕಳ:ಭ್ರಮೆ, ಭ್ರಾಂತಿ; ಮತಿ: ಬುದ್ಧಿ; ಮೇಣ್: ಅಥವ; ನಪುಂಸಕ: ಕೊಜ್ಜೆ, ಷಂಡ, ಖೋಜಾ, ನಿರ್ವೀರ್ಯ; ಜಡ: ಆಲಸ್ಯ, ಅಚೇತನ; ಶ್ರೋತ್ರಿ: ಬ್ರಾಹ್ಮಣ; ಬಾಧಕ: ತೊಂದರೆ ಕೊಡುವವ; ಖಳ: ಕ್ರೂರ; ಖೂಳ: ದುಷ್ಟ; ಮಾನವ: ನರ; ವಿಕಾರ: ಕುರೂಪ; ವಿಕಟ: ವಿಕಾರ, ಸೊಕ್ಕಿದ; ತಪಸ್ಸು: ಧ್ಯಾನ; ದೇವ: ಸುರರು; ದೈತ್ಯ: ರಾಕ್ಷಸ; ಮಕುಟ: ಕಿರೀಟ; ವಾಮಪಾದ: ಎಡ ಕಾಲು; ಅಕಟ: ಅಯ್ಯೋ; ಕೆಟ್ಟೆ: ಹಾಳಾಗು; ಕರಗು: ನೀರಾಗಿಸು, ಕನಿಕರ; ನಳಿನಾಕ್ಷಿ: ಕಮಲದಂತ ಕಣ್ಣುಳ್ಳವಳು;

ಪದವಿಂಗಡಣೆ:
ವಿಕಳಮತಿಯೋ +ಮೇಣ್+ಇವ +ನಪುಂ
ಸಕನೊ+ ಜಡನೋ +ಶ್ರೋತ್ರಿಯನೊ +ಬಾ
ಧಕನೊ+ ಖಳನೋ +ಖೂಳನೋ+ ಮಾನವ+ ವಿಕಾರವಿದೊ
ವಿಕಟ +ತಪಸಿನ +ದೇವ +ದೈತ್ಯರ
ಮಕುಟವಾಂತದು +ವಾಮಪಾದವನ್
ಅಕಟ+ ಕೆಟ್ಟೆನಲಾ+ಎನುತ +ಕರಗಿದಳು +ನಳಿನಾಕ್ಷಿ

ಅಚ್ಚರಿ:
(೧) ಅರ್ಜುನನನ್ನು ನೋಡಿದ ಬಗೆ – ವಿಕಳಮತಿ, ನಪುಂಸಕ, ಜಡ, ಶ್ರೋತ್ರಿ, ಬಾಧಕ, ಖಳ, ಖೂಳ, ವಿಕಾರ
(೨) ಊರ್ವಶಿಯ ಹಿರಿಮೆ – ವಿಕಟ ತಪಸಿನ ದೇವ ದೈತ್ಯರ ಮಕುಟವಾಂತದು ವಾಮಪಾದವ

ಪದ್ಯ ೧೧: ಯಾರೊಂದಿಗೆ ಮದುವೆ ಯಾಗುವುದು ಉತ್ತಮವೆಂದು ವಿಪ್ರಸಮೂಹ ಅಭಿಪ್ರಾಯಪಟ್ಟಿತು?

ಮದುವೆ ಬೇಕೇ ಶ್ರೋತ್ರಿಯ ಸ್ತೋ
ಮದಲಿ ಕನ್ಯಾರ್ಥಿಗಳು ನಾವೆಂ
ಬುದು ನಿಜಾನ್ವಯ ವಿದ್ಯೆಯಲಿ ಕೊಡುವುದು ಪರೀಕ್ಷೆಗಳ
ಮದುವೆಯಹುದಿದು ಸೌಖ್ಯ ಪುಣ್ಯ
ಪ್ರದವು ಭೂದೇವರಿಗೆ ನೀ ನೆನೆ
ದುದು ಭಗೀರಥಯತ್ನವೆಂದುದು ಭೂಸುರವ್ರಾತ (ಆದಿ ಪರ್ವ, ೧೫ ಸಂಧಿ, ೧೧ ಪದ್ಯ)

ತಾತ್ಪರ್ಯ:
ಬ್ರಾಹ್ಮಣ ವೇಷದಲ್ಲಿದ್ದ ಅರ್ಜುನನು ಎದ್ದುದನು ಕಂಡು ಆಶ್ಚರ್ಯ ಪಟ್ಟ ಆ ಬ್ರಾಹ್ಮಣ ವೃಂದ, ನಿಮಗೆ ಮದುವೆಯಾಗಲು ಇಷ್ಟವಿದ್ದರೆ, ನೀವು ಶ್ರೋತ್ರಿಯರಲ್ಲಿ ನಾವು ಕನ್ಯಾರ್ಥಿಗಳು, ಎಂದು ಹೇಳಿ ನಿಮ್ಮ ವಂಶದಲ್ಲಿ ಹಿಂದಿನಿಂದ ಅಭ್ಯಾಸ ಮಾಡಿ ಪರಂಪರೆಯಿಂದ ಬಂದ ವಿದ್ಯೆಗಳಲ್ಲಿ ನಿಮ್ಮ ನೈಪುಣ್ಯವನ್ನು ತೋರಿಸಿಕೊಳ್ಳಬೇಕು. ಹೀಗೆ ಮದುವೆಯಾಗುವುದು ಸುಖ ಪುಣ್ಯಗಳಿಗೆ ಕಾರಣವಾಗುತ್ತದೆ, ಈಗ ನೀವು ಮಾಡುತ್ತಿರುವುದು ಭಗೀರಥ ಪ್ರಯತ್ನ ಎಂದು ಹೇಳಿದರು.

ಅರ್ಥ:
ಮದುವೆ: ವಿವಾಹ; ಬೇಕು: ವಾಂಛನೆ, ಬೇಡಿಕೆಗಳು; ಶ್ರೋತ್ರಿ:ವೈದಿಕ; ಸ್ತೋಮ: ಗುಂಪು; ಕನ್ಯ: ಹುಡುಗಿ; ನಿಜ: ಸತ್ಯ; ಅನ್ವಯ: ಕುಲ, ಅನುಯಾಯಿ, ವಂಶ; ವಿದ್ಯೆ: ಜ್ಞಾನ; ಪರೀಕ್ಷೆ: ಮೌಲ್ಯಮಾಪನ ಕ್ರಮ; ಸೌಖ್ಯ: ಸುಖ; ಪುಣ್ಯ:ಒಳ್ಳೆಯ; ಭೂ: ಭೂಮಿ; ದೇವರು: ದೇವತೆಗಳು; ಭೂದೇವರು: ಬ್ರಾಹ್ಮಣ; ಯತ್ನ: ಪ್ರಯತ್ನ; ಭೂಸುರ: ಬ್ರಾಹ್ಮಣ; ವ್ರಾತ: ಗುಂಪು;

ಪದವಿಂಗಡಣೆ:
ಮದುವೆ +ಬೇಕೇ +ಶ್ರೋತ್ರಿಯ +ಸ್ತೋ
ಮದಲಿ+ ಕನ್ಯಾರ್ಥಿಗಳು +ನಾವೆಂ
ಬುದು +ನಿಜಾನ್ವಯ +ವಿದ್ಯೆಯಲಿ +ಕೊಡುವುದು +ಪರೀಕ್ಷೆಗಳ
ಮದುವೆಯಹುದಿದು+ ಸೌಖ್ಯ+ ಪುಣ್ಯ
ಪ್ರದವು +ಭೂದೇವರಿಗೆ+ ನೀ+ ನೆನೆ
ದುದು +ಭಗೀರಥಯತ್ನ+ವೆಂದುದು +ಭೂಸುರ+ವ್ರಾತ

ಅಚ್ಚರಿ:
(೧) ಭೂದೇವರು, ಭೂಸುರ, ಶ್ರೋತ್ರಿ – ಬ್ರಾಹ್ಮಣ ಪದದ ಸಮನಾರ್ಥಕ ಪದಗಳು
(೨) ಸ್ತೋಮ, ವ್ರಾತ – ಸಮನಾರ್ಥಕ ಪದ
(೩) ಮದುವೆ – ೧, ೪ ಸಾಲಿನ ಮೊದಲ ಪದ
(೪) ನೆನೆದುದು, ವೆಂದುದು – ಜೋಡಿ ಪದಗಳು

ಪದ್ಯ ೨೩: ಎಂತಹ ಬ್ರಾಹ್ಮಣರು ದ್ರುಪದನ ಪಟ್ಟಣವನ್ನು ಸೇರಿದರು?

ಗಣಿತವಂತರ ನೆರವಿ ಸುಬ್ರಾ
ಹ್ಮಣರು ಸುಶ್ರೋತ್ರಿಯರು ವೈದಿಕ
ಗುಣದ ವಾಚಾಲಕರು ವಿಮಲ ಬ್ರಹ್ಮಋಷಿ ಸಮರು
ಪ್ರಣತ ಋಷಿಗಳು ಮುನಿವರರು ಸಂ
ದಣಿಸಿತಖಿಳ ದಿಗಂತರದ ಧಾ
ರುಣಿಯ ದೇವವ್ರಾತ ನೆರೆದುದು ದ್ರುಪದನಗರಿಯಲಿ (ಆದಿ ಪರ್ವ, ೧೨ ಸಂಧಿ, ೨೩ ಪದ್ಯ)

ತಾತ್ಪರ್ಯ:
ಸಾಮಾನ್ಯ ಜನರು, ಕಲಾವಿದರು ಸೇರಿದಂತೆ, ಜ್ಯೋತಿಷ್ಯರು, ಉತ್ತಮ ಬ್ರಾಹ್ಮಣರು, ವೇದಾಧ್ಯಾಯನ ಮಾಡಿದ ಬ್ರಾಹ್ಮಣರು, ವೇದಾಪಾರಂಗತರಾದ ಬ್ರಾಹ್ಮಣರು, ವೈದಿಕ ಧರ್ಮದ ಬಗ್ಗೆ ವಿವರಿಸುವಂತಹ ಬ್ರಾಹ್ಮಣರು, ನಿರ್ಮಲ ಬ್ರಹ್ಮಋಷಿಗಳಿಗೆ ಸರಿಸಮಾನರಾದವರು, ಬುದ್ಧಿವಂತರಾದ ಮುನಿವರ್ಯರು, ಹೀಗೆ ಇಡೀ ಬ್ರಾಹ್ಮಣ ಸಮೂಹವು ದಿಕ್ಕು ದಿಕ್ಕುಗಳಿಂದ ದ್ರುಪದ ಪಟ್ಟಣವನ್ನು ಸೇರಿದರು.

ಅರ್ಥ:
ಗಣಿತ: ಗಣನೆ, ಲೆಕ್ಕಾಚಾರ, ಜ್ಯೋತಿಷ್ಯ;ನೆರವಿ:ಸಮೂಹ, ಗುಂಪು; ಬ್ರಾಹ್ಮಣರು: ವಿಪ್ರ; ಶ್ರೋತ್ರ: ವೇದಾಧ್ಯಾಯನ ಮಾಡಿದ ಬ್ರಾಹ್ಮಣ; ವೈದಿಕ: ವೇದಪಾರಂಗತನಾದ ಬ್ರಾಹ್ಮಣ; ಗುಣ: ಸ್ವಭಾವ; ವಾಚಾಲಕ: ವಿವರಿಸುವ; ವಿಮಲ: ನಿರ್ಮಲ; ಋಷಿ: ಸನ್ಯಾಸಿ; ಸಮರು: ಸಮಾನರು; ಪ್ರಣತ: ವಿನೀತ, ಚತುರ; ಮುನಿ: ಋಷಿ; ಸಂದಣಿಸು: ಸೇರು; ಅಖಿಳ: ಎಲ್ಲಾ; ದಿಗಂತ: ದಿಕ್ಕು; ಧಾರುಣಿ: ಭೂಮಿ; ದೇವವ್ರಾತ: ದೇವತಾ ಸಮೂಹ; ನೆರೆದುದು: ಸೇರಿದುದು; ನಗರ: ಪಟ್ಟಣ;

ಪದವಿಂಗಡಣೆ:
ಗಣಿತವಂತರ+ ನೆರವಿ+ ಸುಬ್ರಾ
ಹ್ಮಣರು +ಸುಶ್ರೋತ್ರಿಯರು+ ವೈದಿಕ
ಗುಣದ+ ವಾಚಾಲಕರು+ ವಿಮಲ +ಬ್ರಹ್ಮಋಷಿ+ ಸಮರು
ಪ್ರಣತ +ಋಷಿಗಳು +ಮುನಿವರರು +ಸಂ
ದಣಿಸಿತ್+ಅಖಿಳ +ದಿಗಂತರದ +ಧಾ
ರುಣಿಯ +ದೇವವ್ರಾತ +ನೆರೆದುದು +ದ್ರುಪದನಗರಿಯಲಿ

ಅಚ್ಚರಿ:
(೧) ನೆರವಿ, ವ್ರಾತ; ಋಷಿ, ಮುನಿ – ಸಮಾನಾರ್ಥಕ ಪದಗಳು