ಪದ್ಯ ೨೮: ಭೀಮನು ಹೇಗೆ ಕೌರವನನ್ನು ಪ್ರಚೋದಿಸಿದನು – ೫?

ಜಲವಹೊಕ್ಕನ ಹುಲ್ಲ ಕಚ್ಚಿದ
ಖಳನ ತರುಗಿರಿಶಿಖರದಲಿ ಕಾ
ಲ್ದೊಳಸಿದನ ವಲ್ಮೀಕಸಂಗತನನು ನಿರಾಯುಧನ
ಕೊಲುವುದನುಚಿತವೆಂಬ ಶಾಸ್ತ್ರವ
ತಿಳಿದು ನಂಬಿದೆ ನಿನ್ನನೊಬ್ಬನ
ಕೊಲುವುದಕೆ ಶ್ರುತಶಾಸ್ತ್ರರಾವಲ್ಲೆಂದನಾ ಭೀಮ (ಗದಾ ಪರ್ವ, ೫ ಸಂಧಿ, ೨೮ ಪದ್ಯ)

ತಾತ್ಪರ್ಯ:
ನೀರನ್ನು ಹೊಕ್ಕವನನ್ನು, ಹುಲ್ಲನ್ನು ಕಚ್ಚಿದ ನೀಚನನ್ನು, ಮರದ ಮೇಲೆ ಬೆಟ್ಟದ ಕೋಡುಗಲ್ಲಿನ ಮೇಲೆ ಕಾಲನ್ನು ಸಿಕ್ಕಿಸಿದವನನ್ನು, ಹುತ್ತವನ್ನೇರಿದವನನ್ನು, ಆಯುಧವಿಲ್ಲದವನನ್ನು ಕೊಲ್ಲುವುದು ಉಚಿತವಲ್ಲೆವೆಂಬ ಶಾಸ್ತ್ರವನ್ನು ನಂಬಿದ್ದರೆ ಕೇಳು, ನಿನ್ನನ್ನು ಕೊಲ್ಲುವುದಕ್ಕೆ ನಾವು ಶಾಸ್ತ್ರವನ್ನು ಕೇಳಿಲ್ಲ, ಅರಿತಿಲ್ಲ ಎಂದು ಭೀಮನು ಗರ್ಜಿಸಿದನು.

ಅರ್ಥ:
ಜಲ: ನೀರು; ಹೊಕ್ಕು: ಸೇರು; ಹುಲ್ಲು: ತೃಣ; ಕಚ್ಚು: ಕಡಿ, ನೋಯು; ಖಳ: ದುಷ್ಟ; ತರು: ಮರ; ಗಿರಿ: ಬೆಟ್ಟ; ಶಿಖರ: ತುದಿ; ಕಾಲು: ಪಾದ; ತೊಳಸಿದ: ಸಿಕ್ಕಿಸಿದ; ವಲ್ಮೀಕ: ಹುತ್ತ; ಸಂಗ: ಜೊತೆ; ನಿರಾಯುಧ: ಶಸ್ತ್ರವಿಲ್ಲದ ಸ್ಥಿತಿ; ಕೊಲು: ಸಾಯಿಸು; ಅನುಚಿತ: ಸರಿಯಲ್ಲದ; ಶಾಸ್ತ್ರ: ಧರ್ಮ ಗ್ರಂಥ; ತಿಳಿ: ಗೊತ್ತುಮಾಡು; ನಂಬು: ವಿಶ್ವಾಸವಿಡು; ಕೊಲು: ಸಾಯಿಸು; ಶ್ರುತ: ಕೇಳಿದ, ಆಲಿಸಿದ;

ಪದವಿಂಗಡಣೆ:
ಜಲವ+ಹೊಕ್ಕನ +ಹುಲ್ಲ +ಕಚ್ಚಿದ
ಖಳನ +ತರು+ಗಿರಿ+ಶಿಖರದಲಿ +ಕಾ
ಲ್ದೊಳಸಿದನ +ವಲ್ಮೀಕ+ಸಂಗತನನು+ ನಿರಾಯುಧನ
ಕೊಲುವುದ್+ಅನುಚಿತವೆಂಬ +ಶಾಸ್ತ್ರವ
ತಿಳಿದು +ನಂಬಿದೆ +ನಿನ್ನನೊಬ್ಬನ
ಕೊಲುವುದಕೆ+ ಶ್ರುತ+ಶಾಸ್ತ್ರರಾವಲ್ಲ್+ಎಂದನಾ +ಭೀಮ

ಅಚ್ಚರಿ:
(೧) ಶಾಸ್ತ್ರದ ಪ್ರಕಾರ ಯಾರನ್ನು ಕೊಲುವುದು ಅನುಚಿತ – ಜಲವಹೊಕ್ಕನ, ಹುಲ್ಲ ಕಚ್ಚಿದ ಖಳನ, ತರು ಗಿರಿ ಶಿಖರದಲಿ ಕಾಲ್ದೊಳಸಿದನ ವಲ್ಮೀಕಸಂಗತನನು ನಿರಾಯುಧನ ಕೊಲುವುದನುಚಿತ

ಪದ್ಯ ೫೪: ಘಟೋತ್ಕಚನು ಕೌರವನಿಗೆ ಏನೆಂದು ಉತ್ತರಿಸಿದನು?

ಮರಳು ಕೌರವ ಜಂಗಮ ಸ್ಥಾ
ವರದ ದೇಹಕೆ ನೆಳಲಹುದು ದಿನ
ಕರನ ದೇಹಕೆ ನೆಳಲು ಶ್ರುತವೋ ದೃಷ್ಟವೋ ನಿನಗೆ
ಸುರ ನಿಶಾಚರ ಮರ್ತ್ಯರೊಳು ತಾ
ನೆರವ ಬಯಸುವುದುಂಟೆ ಹರಿಯಂ
ತಿರಲಿ ಚೈತನ್ಯಾತ್ಮನಾತನ ಮಾತದೇಕೆಂದ (ದ್ರೋಣ ಪರ್ವ, ೧೫ ಸಂಧಿ, ೫೪ ಪದ್ಯ)

ತಾತ್ಪರ್ಯ:
ಘಟೋತ್ಕಚನು ಗರ್ಜಿಸುತ್ತ ಎಲೈ ಕೌರವ ಹಿಂದಿರುಗು, ಸುಮ್ಮನೆ ಹೋಗು, ಸ್ಥಾವರ, ಜಂಗಮ ವಸ್ತುಗಳಿಗೆ ನೆರಳಿರುತ್ತದೆ, ಆದರೆ ಸೂರ್ಯನ ದೇಹಕ್ಕೆ ನೆರಳಿರುವುದನ್ನು ನೋಡಿದೆಯಾ ಅಥವ ಕೇಳಿದೆಯಾ? ಸುರ, ದೆವ್ವ, ಮಾನವರ ನೆರವನ್ನು ನಾನು ಬಯಸುವುದುಂಟೇ? ೈನ್ನು ಶ್ರೀಕೃಷ್ಣ, ಅವನು ಚಿನ್ಮಾತ್ರನಾದ ಆತ್ಮ, ಅವನ ಮಾತೇಕೆ ಎಂದು ಕೌರವನಿಗೆ ಹೇಳಿದನು.

ಅರ್ಥ:
ಮರಳು: ಹಿಂದಿರುಗು; ಜಂಗಮ: ಚಲಿಸುವ; ಸ್ಥಾವರ: ನಿಂತಿರುವ; ದೇಹ: ತನು, ಒಡಲು; ನೆಳಲು: ನೆರಳು, ಆಶ್ರಯ; ದಿನಕರ: ಸೂರ್ಯ; ಶ್ರುತ: ಕೇಳು; ದೃಷ್ಟ: ನೋಡು; ಸುರ: ದೇವತೆ; ನಿಶಾಚರ: ದೆವ್ವ, ದಾನವ; ಮರ್ತ್ಯ: ಭೂಲೋಕ; ಬಯಸು: ಆಸೆಪಡು; ಹರಿ: ಕೃಷ್ಣ; ಚೈತನ್ಯ: ಶಕ್ತಿ, ಸಾಮರ್ಥ್ಯ; ಮಾತು: ವಾಣಿ; ಎರವು: ಸಾಲ;

ಪದವಿಂಗಡಣೆ:
ಮರಳು +ಕೌರವ +ಜಂಗಮ +ಸ್ಥಾ
ವರದ +ದೇಹಕೆ +ನೆಳಲಹುದು +ದಿನ
ಕರನ +ದೇಹಕೆ +ನೆಳಲು+ ಶ್ರುತವೋ +ದೃಷ್ಟವೋ +ನಿನಗೆ
ಸುರ +ನಿಶಾಚರ +ಮರ್ತ್ಯರೊಳು +ತಾನ್
ಎರವ +ಬಯಸುವುದುಂಟೆ +ಹರಿ+ಯಂ
ತಿರಲಿ +ಚೈತನ್ಯ+ಆತ್ಮನ್+ಆತನ +ಮಾತದ್+ಏಕೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ದಿನಕರನ ದೇಹಕೆ ನೆಳಲು ಶ್ರುತವೋ ಧೃಷ್ಟವೋ ನಿನಗೆ
(೨) ಸ್ಥಾವರ, ಜಂಗಮ – ವಿರುದ್ಧ ಪದಗಳು