ಪದ್ಯ ೬: ಕೌರವವನನ್ನು ಕಂಡ ಸಂಜಯನ ಸ್ಥಿತಿ ಹೇಗಿತ್ತು?

ಕಂಡೆನರಸನ ನಿಬ್ಬರವ ಬಳಿ
ಕಂಡಲೆದುದತಿಶೋಕಶಿಖಿ ಕೈ
ಗೊಂಡುದಿಲ್ಲರೆಘಳಿಗೆ ಬಳಿಕೆಚ್ಚತ್ತು ಕಂದೆರೆದು
ಖಂಡಿಸಿದನೆನ್ನುಬ್ಬೆಯನು ಹುರಿ
ಗೊಂಡುದಾತನ ಸತ್ವವಾತನ
ದಂಡಿಯಲಿ ಬಹರಾರು ಸುರ ನರ ನಾಗಲೋಕದಲಿ (ಗದಾ ಪರ್ವ, ೪ ಸಂಧಿ, ೬ ಪದ್ಯ)

ತಾತ್ಪರ್ಯ:
ಸಂಜಯನು ಮಾತನಾಡುತ್ತಾ, ನಾನು ರಾಜನ ಕಳವಳವನ್ನು ನೋಡಿದೆ, ಅತಿಶಯ ಶೋಕಜ್ವಾಲೆಯಲ್ಲಿ ಬೆಂದಿದ್ದೆ. ಒಂದು ನಿಮಿಷ ಮೂರ್ಛಿತನಾಗಿ, ನಂತರ ಎಚ್ಚೆತ್ತು, ಕಣ್ಣುತೆರೆದು ನನ್ನ ಶೋಕವನ್ನು ನಿಲ್ಲಿಸಿದನು. ಅವನ ಸತ್ವ ಹುರಿಗೊಂಡಿತು. ಅವನಿಗೆ ಸ್ವರ್ಗ, ಮರ್ತ್ಯ, ಪಾತಾಳ ಲೋಕಗಳಲ್ಲಿ ಸಮರಾರಿದ್ದಾರೆ?

ಅರ್ಥ:
ಕಂಡು: ನೋಡು; ಅರಸ: ರಾಜ; ನಿಬ್ಬರ: ಅತಿಶಯ, ಹೆಚ್ಚಳ; ಬಳಿ: ಹತ್ತಿರ; ಅತಿ: ಬಹಳ: ಶೋಕ: ದುಃಖ; ಶಿಖಿ: ಬೆಂಕಿ; ಕೈಗೊಂಡು: ಪಡೆದು; ಅರೆ: ಅರ್ಧ; ಘಳಿಗೆ: ಸಮಯ; ಬಳಿಕ: ನಂತರ; ಎಚ್ಚತ್ತು: ಎಚ್ಚರನಾಗಿ; ಕಂದೆರೆದು: ಕಣ್ಣುಬಿಟ್ಟು; ಖಂಡಿಸು: ಕಡಿ, ಕತ್ತರಿಸು; ಉಬ್ಬೆ: ಸೆಕೆ, ಕಾವು; ಹುರಿ: ಕಾಯಿಸು, ತಪ್ತಗೊಳಿಸು; ಸತ್ವ: ಸಾರ; ದಂಡಿ: ಶಕ್ತಿ, ಸಾಮರ್ಥ್ಯ; ಬಹರು: ಆಗಮಿಸು; ಸುರ: ದೇವತೆ; ನರ: ಮನುಷ್ಯ; ನಾಗಲೋಕ: ಪಾತಾಳ;

ಪದವಿಂಗಡಣೆ:
ಕಂಡೆನ್+ಅರಸನ +ನಿಬ್ಬರವ +ಬಳಿ
ಕಂಡಲೆದುದ್+ಅತಿ+ಶೋಕಶಿಖಿ+ ಕೈ
ಗೊಂಡುದಿಲ್ಲ್+ಅರೆ+ಘಳಿಗೆ +ಬಳಿಕ್+ಎಚ್ಚತ್ತು +ಕಂದೆರೆದು
ಖಂಡಿಸಿದನ್+ಎನ್ನ್+ಉಬ್ಬೆಯನು +ಹುರಿ
ಗೊಂಡುದಾತನ +ಸತ್ವವ್+ಆತನ
ದಂಡಿಯಲಿ +ಬಹರಾರು +ಸುರ+ ನರ+ ನಾಗಲೋಕದಲಿ

ಅಚ್ಚರಿ:
(೧) ದುರ್ಯೋಧನನ ಪರಾಕ್ರಮ – ಆತನ ದಂಡಿಯಲಿ ಬಹರಾರು ಸುರ ನರ ನಾಗಲೋಕದಲಿ

ಪದ್ಯ ೬: ಯಾವ ನಾಣ್ಣುಡಿಯು ಧೃತರಾಷ್ಟ್ರನಿಗೆ ಹೋಲುತ್ತದೆ?

ಅಹುದು ಸಂಜಯ ಶೋಕಶಿಖಿ ನೆರೆ
ದಹಿಸಿತೆನ್ನನು ಬೆಂದ ವಸ್ತುಗೆ
ದಹನವುಂಟೇ ಎಂಬ ನಾಣ್ಣುಡಿ ನಮ್ಮೊಳಾದುದಲಾ
ಮಿಹಿರಸುತ ಪರಿಯಂತ ಕಥೆ ನಿ
ರ್ವಹಿಸಿ ಬಂದುದು ಶಲ್ಯಕೌರವ
ರೆಹಗೆ ನೆಗಳಿದರದನು ವಿಸ್ತರವಾಗಿ ಹೇಳೆಂದ (ಶಲ್ಯ ಪರ್ವ, ೧ ಸಂಧಿ, ೬ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಉತ್ತರಿಸುತ್ತಾ, ಹೌದು ಸಂಜಯ, ನಿನ್ನ ಮಾತು ನಿಜ, ಶೋಕದ ಅಗ್ನಿ ನನ್ನನ್ನು ಚೆನ್ನಾಗಿ ದಹಿಸಿತು. ಸುಟ್ಟುಹೋದುದಕ್ಕೆ ಮತ್ತೆ ಸುಡುವುದುಂಟೇ ಎಂಬಗಾದೆ ನಮ್ಮಲ್ಲಿದೆ. ಕರ್ಣನ ಸಾವಿನ ವರೆಗಿನ ಕಥೆಯು ತಡೆಯಿಲ್ಲದೆ ಹೇಳಿದೆ, ಇನ್ನು ಶಲ್ಯ ದುರ್ಯೋಧನರು ಹೇಗೆ ಯುದ್ಧ ಮಾಡಿದರೆಂಬುದನ್ನು ಹೇಳು ಎಂದು ಕೇಳಿದನು.

ಅರ್ಥ:
ಶೋಕ: ದುಃಖ; ಶಿಖಿ: ಬೆಂಕಿ; ನೆರೆ: ಗುಂಪು; ಧೈಸು: ಸುಡು; ಬೆಂದು: ಸುಡು, ದಹಿಸು; ವಸ್ತು: ಸಾಮಗ್ರಿ; ದಹಿಸು: ಸುಡು; ನಾಣ್ಣುಡಿ: ಲೋಕಮಾತು; ಮಿಹಿರ: ಸೂರ್ಯ; ಸುತ: ಮಗ; ಪರಿಯಂತ: ವರೆಗಿನ; ಕಥೆ: ವಿಚಾರ; ನಿರ್ವಹಿಸು: ಪೂರೈಸು; ನೆಗಳು: ಆಚರಿಸು; ವಿಸ್ತರ: ಹಬ್ಬುಗೆ; ಹೇಳು: ತಿಳಿಸು; ಎಹಗೆ: ಹೇಗೆ;

ಪದವಿಂಗಡಣೆ:
ಅಹುದು +ಸಂಜಯ +ಶೋಕ+ಶಿಖಿ+ ನೆರೆ
ದಹಿಸಿತ್+ಎನ್ನನು +ಬೆಂದ +ವಸ್ತುಗೆ
ದಹನವುಂಟೇ +ಎಂಬ +ನಾಣ್ಣುಡಿ +ನಮ್ಮೊಳ್+ಆದುದಲಾ
ಮಿಹಿರಸುತ +ಪರಿಯಂತ +ಕಥೆ +ನಿ
ರ್ವಹಿಸಿ +ಬಂದುದು +ಶಲ್ಯ+ಕೌರವರ್
ಎಹಗೆ+ ನೆಗಳಿದರ್+ಅದನು +ವಿಸ್ತರವಾಗಿ+ ಹೇಳೆಂದ

ಅಚ್ಚರಿ:
(೧) ನಾಣ್ಣುಡಿ – ಬೆಂದ ವಸ್ತುಗೆ ದಹನವುಂಟೇ