ಪದ್ಯ ೭೬: ಯಾರು ಸ್ವರ್ಗಕ್ಕೆ ಹೋಗಲು ಅರ್ಹರು?

ಭೂತದಯೆಯಲಿ ನಡೆವನೀ ತೋ
ರ್ಪಾತ ನಿರ್ಮಳ ಸತ್ಯಭಾಷಿತ
ನೀತ ಪರಹಿತನಿವ ಯಥಾಲಾಭೈಕ ಸಂತೋಷಿ
ಈತ ಶುಚಿರುಚಿಯೀತ ನಿಶ್ಚಲ
ನೀತ ನಿರ್ಭಯ ನೀತ ನಿಸ್ಪೃಹ
ನೀತರಾಗದ್ವೇಷರಹಿತನು ಪಾರ್ಥ ಕೇಳೆಂದ (ಅರಣ್ಯ ಪರ್ವ, ೮ ಸಂಧಿ, ೭೬ ಪದ್ಯ)

ತಾತ್ಪರ್ಯ:
ಪಾರ್ಥ ಸ್ವರ್ಗಕ್ಕೆ ಹೋಗುವವರನ್ನು ನೋಡು, ಇವನು ಎಲ್ಲಾ ಪ್ರಾಣಿಗಳಲ್ಲೂ ದಯೆ ತೋರಿಸುವವನು, ಇಲ್ಲಿ ಕಾಣುವವನು ನಿರ್ಮಲ ಮನಸ್ಸುಳ್ಳವನು, ಇವನು ಸತ್ಯವನ್ನೇ ನುಡಿಯುವವನು, ಇವನು ಪರಹಿತ, ಇವನು ಸಿಕ್ಕಷ್ಟರಲ್ಲೇ ಸಂತೋಷ ಪಟ್ಟವನು, ಇವನು ಶುಚಿ, ಇವನು ಉಜ್ವಲ ಗುಣವುಳ್ಳವನು, ಇವನು ಸುಖ ದುಃಖಗಳಿಂದ ಪೀಡಿತನಾಗದೆ ನಿಶ್ಚಲನಾಗಿದ್ದವನು. ಇವನು ಭಯರಹಿತ, ಇವನು ಪರರ ವಸ್ತುವಿಗಾಗಲಿ, ಧನಕ್ಕಾಗಲಿ, ಆಶೆ ಪಡದಿದ್ದವನು, ಇವನು ಬಯಕೆ ದ್ವೇಷಗಳಿಲ್ಲದಿದ್ದವನು ಎಂದು ಮಾತಲಿ ಅರ್ಜುನನಿಗೆ ತೋರಿಸಿದನು.

ಅರ್ಥ:
ಭೂತ: ಜಗತ್ತಿನ ಪ್ರಾಣಿವರ್ಗ; ದಯೆ: ಕರುಣೆ; ನಿರ್ಮಳ: ವಿಮಲ, ಶುದ್ಧ; ಸತ್ಯ: ದಿಟ; ಭಾಷಿತ: ಮಾತು; ಹಿತ: ಪ್ರಿಯಕರವಾದುದು; ಸಂತೋಷ: ಹರ್ಷ; ಪರ: ಬೇರೆ; ಹಿತ: ಒಳಿತು; ಲಾಭ: ಪ್ರಯೋಜನ; ಶುಚಿ: ನಿರ್ಮಲ; ರುಚಿ: ಕಾಂತಿ, ಪ್ರಕಾಶ, ಅಪೇಕ್ಷೆ; ನಿಶ್ಚಲ: ಸ್ಥಿರವಾದುದು; ನಿರ್ಭಯ: ಭಯವಿಲ್ಲದವ; ನಿಸ್ಪೃಹ: ಆಸೆ ಇಲ್ಲದವ; ರಾಗ: ಪ್ರೀತಿ, ಮೋಹ; ದ್ವೇಷ: ವೈರ; ರಹಿತ: ಇಲ್ಲದವ;

ಪದವಿಂಗಡಣೆ:
ಭೂತ+ದಯೆಯಲಿ +ನಡೆವನ್+ಈ +ತೋ
ರ್ಪಾತ +ನಿರ್ಮಳ +ಸತ್ಯಭಾಷಿತನ್
ಈತ+ ಪರಹಿತನಿವ+ ಯಥಾಲಾಭೈಕ+ ಸಂತೋಷಿ
ಈತ +ಶುಚಿರುಚಿ+ಈತ +ನಿಶ್ಚಲನ್
ಈತ +ನಿರ್ಭಯನ್ +ಈತ +ನಿಸ್ಪೃಹನ್
ಈತ+ರಾಗದ್ವೇಷ+ರಹಿತನು +ಪಾರ್ಥ+ ಕೇಳೆಂದ

ಅಚ್ಚರಿ:
(೧) ಸ್ವರ್ಗಕ್ಕೆ ಹೋಗುವ ಗುಣವುಳ್ಳವರು – ಸತ್ಯಭಾಷಿತ, ಭೂತದಯೆ, ನಿರ್ಮಳ, ಪರಹಿತ, ಶುಚಿರುಚಿ, ನಿಶ್ಚಲ, ನಿರ್ಭಯ, ನಿಸ್ಪೃಹ
(೨) ನ ಕಾರದ ಪದಪುಂಜ – ನಿಶ್ಚಲ ನೀತ ನಿರ್ಭಯ ನೀತ ನಿಸ್ಪೃಹ ನೀತರಾಗದ್ವೇಷರಹಿತನು