ಪದ್ಯ ೧೨೫: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೧೪?

ಅಕಟ ಹಂಸೆಯ ಮರಿಯ ಮೋದುವ
ಬಕನ ತೆಗೆಸೈ ಗಿಡುಗನೆರಗುವ
ಶುಕನ ಶೋಕದ ಮಾಣಿಸೈ ವಾಣಿಯವೆ ಭಕುತರಲಿ
ಪ್ರಕಟಭೂತಗ್ರಹದ ಬಾಧೆಗೆ
ವಿಕಳೆ ನಿನ್ನಯ ಬಿರುದ ತಡೆದೆನು
ಭಕುತವತ್ಸಲನಹರೆ ಸಲಹೆಂದೊರಲಿದಳು ತರಳೆ (ಸಭಾ ಪರ್ವ, ೧೫ ಸಂಧಿ, ೧೨೫ ಪದ್ಯ)

ತಾತ್ಪರ್ಯ:
ಅಯ್ಯೋ ಕೃಷ್ಣ, ಹಂಸದ ಮರಿಯನ್ನು ಕುಕ್ಕುವ ಕೊಕ್ಕರೆಯನ್ನು ತೊಲಗಿಸು, ಗಿಡುಗನಿಂದ ಗಿಳಿಯನ್ನು ಸಂರಕ್ಷಿಸು, ಭಕ್ತರನ್ನು ಕಾಪಾಡುವೆ ಎಂದು ನೀನು ನುಡಿದಿಲ್ಲವೇ ಅದು ನಿನ್ನ ಕರ್ತವ್ಯ ವಲ್ಲವೇ, ಭೂತವು ಹಿಡಿದು ಬಾಧಿಸುತ್ತಿರುವುದರಿಂದ ನಿನ್ನ ಬಿರುದನ್ನು ನಿನಗೇ ತಿಳಿಸುತ್ತಿದ್ದೇನೆ, ಭಕ್ತವತ್ಸಲನೇ ಆಗಿದ್ದರೆ ನನ್ನನ್ನು ರಕ್ಷಿಸು ಎಂದು ದ್ರೌಪದಿಯು ಕೃಷ್ಣನಲ್ಲಿ ಮೊರೆಯಿಟ್ಟಳು.

ಅರ್ಥ:
ಅಕಟ: ಅಯ್ಯೋ; ಹಂಸ: ಮರಾಲ, ಬಿಳಿಯ ಪಕ್ಷಿ; ಮರಿ: ಶಿಶು; ಮೋದು: ಹೊಡೆ, ಅಪ್ಪಳಿಸು; ಬಕ: ಕೊಕ್ಕರೆ; ತೆಗೆ: ಹೋಗಲಾಡಿಸು; ಗಿಡುಗ: ಹದ್ದು; ಎರಗು: ಬೀಳು; ಶುಕ: ಗಿಳಿ; ಶೋಕ: ದುಃಖ; ಮಾಣಿಸು: ನಿಲ್ಲುವಂತೆ ಮಾಡು; ವಾಣಿ: ಮಾತು; ಭಕುತ: ಆರಾಧಕ; ಪ್ರಕಟ: ಸ್ಪಷ್ಟವಾದುದು, ಕಾಣುವಿಕೆ; ಭೂತ: ದೆವ್ವ, ಪಿಶಾಚಿ; ಬಾಧೆ: ತೊಂದರೆ; ವಿಕಳ: ಭ್ರಮೆ, ಭ್ರಾಂತಿ, ಖಿನ್ನತೆ; ಬಿರುದು: ಪದವಿ, ಪಟ್ಟ; ತಡೆ: ನಿಲ್ಲಿಸು; ವತ್ಸಲ: ಪ್ರೀತಿಸುವ; ಅಹರು: ಆಗುವರು; ಸಲಹು: ಕಾಪಾಡು; ಒರಲು: ಗೋಳಿಡು, ಕೂಗು; ತರಳೆ: ಯುವತಿ;

ಪದವಿಂಗಡಣೆ:
ಅಕಟ +ಹಂಸೆಯ +ಮರಿಯ +ಮೋದುವ
ಬಕನ+ ತೆಗೆಸೈ+ ಗಿಡುಗನ್+ಎರಗುವ
ಶುಕನ+ ಶೋಕದ+ ಮಾಣಿಸೈ+ ವಾಣಿಯವೆ+ ಭಕುತರಲಿ
ಪ್ರಕಟ+ಭೂತಗ್ರಹದ+ ಬಾಧೆಗೆ
ವಿಕಳೆ+ ನಿನ್ನಯ+ ಬಿರುದ+ ತಡೆದೆನು
ಭಕುತ+ವತ್ಸಲನ್+ಅಹರೆ+ ಸಲಹೆಂದ್+ಒರಲಿದಳು +ತರಳೆ

ಅಚ್ಚರಿ:
(೧) ಉಪಮಾನಗಳ ಬಳಕೆ – ಹಂಸೆಯ ಮರಿಯ ಮೋದುವ ಬಕನ ತೆಗೆಸೈ ಗಿಡುಗನೆರಗುವ
ಶುಕನ ಶೋಕದ ಮಾಣಿಸೈ

ಪದ್ಯ ೨೭: ಸಭಾಮಂಟಪದ ರಚನೆ ಹೇಗಿತ್ತು?

ಅಲ್ಲಿ ವಿಮಳೋದ್ಯಾನ ವೀಧಿಗ
ಳಲ್ಲಿ ತಾವರೆಗೊಳದ ರಚನೆಗ
ಳಲ್ಲಿ ಹಂಸ ಮಯೂರ ಮಧುಕರ ಶುಕಪಿಕಾನೀಕ
ಅಲ್ಲಿ ಕೇಳೀಶೈಲ ಹಿಮಗೃಹ
ವಲ್ಲಿ ವಿವಿಧ ವಿಳಾಸ ರಚನೆಗ
ಳಲ್ಲಿ ಹೊಯ್ಕೈಯೆನಿಸಿ ಮೆರೆದುದು ಪಾಂಡವರ ಸಭೆಯ (ಸಭಾ ಪರ್ವ, ೧೪ ಸಂಧಿ, ೨೭ ಪದ್ಯ)

ತಾತ್ಪರ್ಯ:
ಸಭಾಭವನವನ್ನು ನೋಡಲು ಧರ್ಮರಾಯ, ಧೃತರಾಷ್ಟ್ರನೊಡನೆ ಬಂದನು. ಅಲ್ಲಿ ಉದ್ಯಾನವನಗಳು, ಸುಂದರವಾದ ಮಾರ್ಗಗಳು, ತಾವರೆಕೊಳಗಳು, ಹಂಸ, ನವಿಲು, ದುಂಬಿ, ಗಿಳಿ, ಕೋಗಿಲೆಗಳು ವಿಹರಿಸುತ್ತಿದ್ದವು. ಕೀಡಾಶೈಲ, ಹಿಮಗೃಹ ಇತ್ಯಾದಿ ವಿವಿಧ ರಚನೆಗಳಿದ್ದವು. ಆ ಸಭಾಭವನನು ಪಾಂಡವರ ಸಭೆಗೆ ಸರಿಸಾಟಿಯಾಗಿತ್ತು.

ಅರ್ಥ:
ವಿಮಳ: ನಿರ್ಮಲ; ವೀಧಿ: ಮಾರ್ಗ; ಉದ್ಯಾನ: ತೋಟ, ಉಪವನ; ತಾವರೆ: ಕಮಲ; ಕೊಳ: ಚಿಕ್ಕ ಸರೋವರ; ರಚನೆ: ನಿರ್ಮಾಣ; ಹಂಸ: ಒಂದು ಬಿಳಿಯ ಬಣ್ಣದ ಪಕ್ಷಿ, ಮರಾಲ; ಮಧುಕರ: ಜೀನು, ದುಂಬಿ; ಮಯೂರ: ನವಿಲು; ಶುಕ: ಗಿಣಿ; ಪಿಕಾನೀಕ: ಕೋಗಿಲೆ; ಶೈಲ: ಬೆಟ್ಟ; ಹಿಮ: ಮಂಜು; ಗೃಹ: ಮನೆ; ವಿವಿಧ: ಹಲವಾರು; ವಿಲಾಸ: ಕ್ರೀಡೆ, ವಿಹಾರ; ರಚನೆ: ನಿರ್ಮಾಣ; ಮೆರೆ: ಹೊಳೆ, ಪ್ರಕಾಶಿಸು; ಸಭೆ: ಓಲಗ;

ಪದವಿಂಗಡಣೆ:
ಅಲ್ಲಿ +ವಿಮಳ+ಉದ್ಯಾನ +ವೀಧಿಗಳ್
ಅಲ್ಲಿ +ತಾವರೆ +ಕೊಳದ +ರಚನೆಗಳ್
ಅಲ್ಲಿ +ಹಂಸ +ಮಯೂರ+ ಮಧುಕರ+ ಶುಕ+ಪಿಕಾನೀಕ
ಅಲ್ಲಿ+ ಕೇಳ್+ಈ+ಶೈಲ +ಹಿಮಗೃಹವ್
ಅಲ್ಲಿ +ವಿವಿಧ +ವಿಳಾಸ +ರಚನೆಗಳ್
ಅಲ್ಲಿ +ಹೊಯ್ಕೈ+ಎನಿಸಿ +ಮೆರೆದುದು +ಪಾಂಡವರ+ ಸಭೆಯ

ಅಚ್ಚರಿ:
(೧) ಅಲ್ಲಿ – ಎಲ್ಲಾ ಸಾಲುಗಳ ಮೊದಲ ಪದ
(೨) ಪಕ್ಷಿಗಳ ಹೆಸರು – ಹಂಸ, ಮಯೂರ, ಶುಕ, ಪಿಕಾನೀಕ

ಪದ್ಯ ೨೭: ಉದ್ಯಾನವನದ ಸೌಂದರ್ಯ ಹೇಗೆ ತನ್ನ ಚೆಲುವನ್ನು ತೋರುತ್ತಿತ್ತು?

ಲಲಿತ ಶುಕಚಯ ಚಂಚು ಪುಟದಿಂ
ದಳಿತ ಜಂಬೂ ಪಕ್ವಫಲ ರಸ
ಲುಳಿತ ನವಮಕರಂದ ಮಧುರೋರ್ಝರ ನಿವಾತದಲಿ
ತಳಿತ ಕಿನ್ನರ ಮಿಥುನ ಸುಖ ಪರಿ
ಮಿಳಿತ ಗೀತಶ್ರವಣ ಸನ್ನುತ
ಪುಳಿನಸುಪ್ತ ಮರಾಳವೆಸೆದುದು ಗಜಪುರೋದ್ಯಾನ (ಉದ್ಯೋಗ ಪರ್ವ, ೭ ಸಂಧಿ, ೨೭ ಪದ್ಯ)

ತಾತ್ಪರ್ಯ:
ಚೆಲುವಾದ ಗಿಣಿಗಳು ತಮ್ಮ ಕೊಕ್ಕಿನಿಂದ ರಸಭರಿತ ನೇರಳೆ ಹಣ್ಣಿಗೆ ಚುಚ್ಚಿ ಅದರಿಂದ ಹೊರಹೊಮ್ಮಿದ ಹೊಸ ಹಣ್ಣಿನ ರಸದ ಸಿಹಿಯು ಹೆಚ್ಚಾಗಿರುವ ಸೊಗಸು, ನವ ಕಿನ್ನರ ಜೋಡಿಗಳು ಸುಖದಿಂದ ಕೂಡಿದ ಸಮಯದಲ್ಲಿ ಪಕ್ಷಿಗಳ ಕಲರವವನ್ನು ಕೇಳುತ್ತಾ, ಮರಳಮೇಲೆ ಮಲಗಿದ ಹಂಸಪಕ್ಷಿಗಳ ಗುಂಪುಗಳನ್ನು ಉದ್ಯಾನವನು ತೋರುತ್ತಿತ್ತು.

ಅರ್ಥ:
ಲಲಿತ: ಚೆಲುವು, ಸೌಂದರ್ಯ; ಶುಕ: ಗಿಣಿ; ಚಯ: ಸಮೂಹ, ಗುಂಪು; ಚಂಚು: ಪಕ್ಷಿಯ ಕೊಕ್ಕು, ಹರಳು ಗಿಡ; ಪುಟ:ಪುಟಿಗೆ, ನೆಗೆತ; ದಳಿ: ಎಲೆ, ಪತ್ರ; ಜಂಬೂ: ನೇರಳೆ; ಪಕ್ವ: ಹಣ್ಣಾದ; ಫಲ: ಹಣ್ಣು; ರಸ: ಸಾರ; ಲುಳಿ: ಸೊಗಸು; ನವ: ಹೊಸ; ಮಕರಂದ: ಹೂವಿನರಸ; ಮಧುರ: ಸಿಹಿ, ಸವಿ; ಊರ್ಝ: ಹೆಚ್ಚಾದ; ನಿವಾತ: ಮನೆ, ಕವಚ, ಗಾಳಿಯ ಹೊಡೆತವಿಲ್ಲದಿರುವುದು; ತಳಿತ: ಚಿಗುರಿದ; ಕಿನ್ನರ: ದೇವತೆಗಳ ಒಂದುವರ್ಗ; ಮಿಥುನ: ಜೋಡಿ; ಸುಖ: ನಲಿವು; ಪರಿಮಿಳಿತ: ಕೂಡಿದ, ಸೇರಿದ; ಗೀತ: ಹಾಡು; ಶ್ರವಣ: ಕೇಳು; ಸನ್ನುತ: ಸ್ತುತಿಸಲ್ಪಟ್ಟವನು; ಪುಳಿನ: ಮರಳು; ಸುಪ್ತ: ಮಲಗಿದ; ಮರಾಳ: ಹಂಸಪಕ್ಷಿ; ಎಸೆ: ಶೋಭಿಸು; ಗಜಪುರಿ: ಹಸ್ತಿನಾಪುರ; ಉದ್ಯಾನ: ಉಪವನ;

ಪದವಿಂಗಡಣೆ:
ಲಲಿತ +ಶುಕಚಯ +ಚಂಚು +ಪುಟದಿಂ
ದಳಿತ +ಜಂಬೂ +ಪಕ್ವಫಲ+ ರಸಲ್
ಉಳಿತ +ನವ+ಮಕರಂದ +ಮಧುರ್+ಊರ್ಝರ +ನಿವಾತದಲಿ
ತಳಿತ +ಕಿನ್ನರ +ಮಿಥುನ +ಸುಖ +ಪರಿ
ಮಿಳಿತ +ಗೀತಶ್ರವಣ+ ಸನ್ನುತ
ಪುಳಿನ+ಸುಪ್ತ ಮರಾಳವೆಸೆದುದು +ಗಜಪುರ+ಉದ್ಯಾನ

ಅಚ್ಚರಿ:
(೧) ಲಲಿತ, ಉಳಿತ, ಮಿಳಿತ, ತಳಿತ, ದಳಿತ – ಪ್ರಾಸ ಪದಗಳು
(೨) ಶುಕ, ಮರಾಳ – ಪಕ್ಷಿಗಳ ಹೆಸರು

ಪದ್ಯ ೧೪: ಕೃಷ್ಣನು ಯಾವ ಮುನಿಗಳನ್ನು ಕಂಡನು?

ಮರಳಿದಳು ತರಳಾಕ್ಷಿ ಮುರರಿಪು
ಬರುತಲಾ ಬಟ್ಟೆಯಲಿ ಕಂಡನು
ವರ ಭರದ್ವಾಜಾಖ್ಯ ಗೌತಮ ಕಣ್ವಮುನಿವರರ
ಉರಗಮಾಲಿ ಮತಂಗ ಗಾರ್ಗ್ಯಾಂ
ಗಿರಸ ನಾರದ ಶುಕ ಪರಾಶರ
ಪರಶುರಾಮ ಶ್ವೇತಕೇತು ಪ್ರಮುಖ ಮುನಿವರರ (ಉದ್ಯೋಗ ಪರ್ವ, ೭ ಸಂಧಿ, ೧೪ ಪದ್ಯ)

ತಾತ್ಪರ್ಯ:
ಚಂಚಲಕಣ್ಣುಳ್ಳವಳಾದ ದ್ರೌಪದಿಯು ಕೃಷ್ಣನ ಅಭಯವನ್ನು ಪಡೆದು ಮರಳಿದಳು. ಕೃಷ್ಣನು ತನ್ನ ಮಾರ್ಗದಲ್ಲಿ ಬರುತ್ತಾ ಶ್ರೇಷ್ಠರಾದ ಭರದ್ವಾಜ, ಗೌತಮ, ಕಣ್ವ, ಉರಗಮಾಲಿ, ಮತಂಗ, ಗಾರ್ಗ್ಯ, ಅಂಗಿರಸ, ನಾರದ, ಶುಕ, ಪರಾಶರ, ಪರಶುರಾಮ, ಶ್ವೇತಕೇತು ಮುನಿಗಳನ್ನು ಕಂಡನು.

ಅರ್ಥ:
ಮರಳು: ಹಿಂದಿರುಗು; ತರಳ:ಚಂಚಲವಾದ; ಅಕ್ಷಿ: ಕಣ್ಣು; ರಿಪು: ವೈರಿ; ಬಟ್ಟೆ: ಹಾದಿ, ಮಾರ್ಗ; ಬರುತ: ಆಗಮಿಸು; ಕಂಡನು: ನೋಡಿದನು; ಪ್ರಮುಖ: ಮುಖ್ಯ; ಮುನಿ: ಋಷಿ; ವರ: ಶ್ರೇಷ್ಠ; ಆಖ್ಯ: ಹೆಸರು

ಪದವಿಂಗಡಣೆ:
ಮರಳಿದಳು +ತರಳಾಕ್ಷಿ +ಮುರರಿಪು
ಬರುತಲಾ +ಬಟ್ಟೆಯಲಿ+ ಕಂಡನು
ವರ +ಭರದ್ವಾಜ+ಆಖ್ಯ+ ಗೌತಮ+ ಕಣ್ವಮುನಿವರರ
ಉರಗಮಾಲಿ +ಮತಂಗ +ಗಾರ್ಗ್ಯ+ಅಂ
ಗಿರಸ+ ನಾರದ +ಶುಕ +ಪರಾಶರ
ಪರಶುರಾಮ +ಶ್ವೇತಕೇತು+ ಪ್ರಮುಖ +ಮುನಿವರರ

ಅಚ್ಚರಿ:
(೧) ಮುನಿಗಳ ಹೆಸರುಳ್ಳ ಪದ್ಯ: ಭರದ್ವಾಜ, ಗೌತಮ, ಕಣ್ವ, ಉರಗಮಾಲಿ, ಮತಂಗ, ಗಾರ್ಗ್ಯ, ಅಂಗಿರಸ, ನಾರದ, ಶುಕ, ಪರಾಶರ, ಪರಶುರಾಮ, ಶ್ವೇತಕೇತು
(೨) ದ್ರೌಪದಿಯನ್ನು ತರಳಾಕ್ಷಿ ಎಂದು ಕರೆದಿರುವುದು

ಪದ್ಯ ೧೭: ಕುಮಾರವ್ಯಾಸನ ಹಿರಿಮೆಯೇನು?

ತಿಣಿಕಿದನು ಫಣಿರಾಯ ರಾಮಾ
ಯಣದ ಕವಿಗಳ ಭಾರದಲಿ ತಿಂ
ತಿಣೀಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ
ಬಣಗು ಕವಿಗಳ ಲೆಕ್ಕಿಪನೆ ಸಾ
ಕೆಣಿಸದಿರು ಶುಕರೂಪನಲ್ಲವೆ
ಕುಣಿಸಿ ನಗನೇ ಕವಿ ಕುಮಾರವ್ಯಾಸನುಳಿದವರ (ಆದಿ ಪರ್ವ, ೧ ಸಂಧಿ, ೧೭ ಪದ್ಯ)

ತಾತ್ಪರ್ಯ:
ರಾಮಾಯಣವನ್ನು ಬರೆದ ಅನೇಕ ಕವಿಗಳ ಭಾರವನ್ನು ಹೊರಲು ಕಷ್ಟವಾಗಿ ಆದಿಶೇಷನು ತಿಣುಕುತ್ತಿದ್ದಾನೆ. ಶ್ರೀರಾಮನ ಚರಿತ್ರೆಯಲ್ಲಿ ಕಾಲಿಡುವುದಕ್ಕೂ ಜಾಗವಿಲ್ಲ. ಕುಮಾರವ್ಯಾಸನು ಕ್ಷುಲ್ಲಕರಾದ ಕವಿಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವನೇ? ಶುಕಮಹರ್ಷಿಯಂತಿರುವ ಅವನು ಉಳಿದವರನ್ನು ಕುಣಿಸಿ ನಗುವುದಿಲ್ಲವೇ?

ಅರ್ಥ:
ತಿಣಿಕು: ಹುಡುಕಾಡು; ಫಣಿ: ಹಾವು; ಕವಿ: ಕಾವ್ಯಗಳನ್ನು ರಚಿಸುವವ; ಭಾರ: ಹೆಚ್ಚಿನ ತೂಕ; ತಿಂತಿಣಿ:ಗುಂಪು; ಚರಿತೆ: ಕಥೆ; ಕಾಲು: ಪಾದ; ತೆರಪು: ಜಾಗ; ಬಣಗು:ಅಲ್ಪವ್ಯಕ್ತಿ; ಲೆಕ್ಕ: ಗಣನೆಗೆ ತೆಗೆದುಕೊ; ಕುಣಿಸು: ನರ್ತಿಸು; ನಗು: ಸಂತೋಷ; ಉಳಿದ: ಮಿಕ್ಕ;

ಪದವಿಂಗಡಣೆ:
ತಿಣಿಕಿದನು +ಫಣಿರಾಯ +ರಾಮಾ
ಯಣದ +ಕವಿಗಳ +ಭಾರದಲಿ +ತಿಂ
ತಿಣಿಯ +ರಘುವರ+ ಚರಿತೆಯಲಿ +ಕಾಲಿಡಲು +ತೆರಪಿಲ್ಲ
ಬಣಗು +ಕವಿಗಳ +ಲೆಕ್ಕಿಪನೆ +ಸಾ
ಕೆಣಿಸದಿರು +ಶುಕರೂಪನಲ್ಲವೆ
ಕುಣಿಸಿ +ನಗನೇ +ಕವಿ +ಕುಮಾರವ್ಯಾಸನ್+ಉಳಿದವರ

ಅಚ್ಚರಿ:
(೧) ತಿಣಿ – ಪದದ ಬಳಕೆ ೧, ೩ ಸಾಲಿನ ಮೊದಲ ಪದ
(೨) ಸಾಕೆಣಿಸದಿರು, ಕುಣೀಸಿ – ಕೆಣಿಸು, ಕುಣಿಸು – ಪದಗಳ ಬಳಕೆ