ಪದ್ಯ ೭: ಸಾತ್ಯಕಿಯು ವ್ಯಾಸರಿಗೆ ಏನು ಹೇಳಿದ?

ದೇವ ನಿಮ್ಮಯ ಶಿಷ್ಯನೇ ಪರಿ
ಭಾವಿಸೆನು ತಾನರಿದೆನಾದಡೆ
ದೇವಕೀಸುತನಾಣೆ ಬಿಟ್ಟೆನು ಸಂಜಯನ ವಧೆಯ
ನೀವು ಬಿಜಯಂಗೈವುದೆನೆ ಬದ
ರಾವಳಿಮಂದಿರಕೆ ತಿರುಗಿದ
ನಾ ವಿಗಡಮುನಿ ಖೇದಕಲುಷಿತ ಸಂಜಯನ ತಿಳುಹಿ (ಗದಾ ಪರ್ವ, ೩ ಸಂಧಿ, ೭ ಪದ್ಯ)

ತಾತ್ಪರ್ಯ:
ಸಾತ್ಯಕಿಯು ವ್ಯಾಸರನ್ನು ಕಂಡು, ದೇವ, ಸಂಜಯನು ನಿಮ್ಮ ಶಿಷ್ಯನೆಂಬುದನ್ನು ಶ್ರೀಕೃಷ್ಣನಾಣೆಗೂ ನಾನರಿಯೆ, ಸಂಜಯನ ವಧೆಯನ್ನು ಕೈಬಿಟ್ಟಿದ್ದೇನೆ, ನೀವು ದಯಮಾಡಿಸಿರಿ ಎನ್ನಲು, ವೇದವ್ಯಾಸರು ದುಃಖಿತನಾಗಿದ್ದ ಸಂಜಯನನ್ನು ಸಂತೈಸಿ ಬದರಿಕಾಶ್ರಮಕ್ಕೆ ಹಿಂತಿರುಗಿದರು.

ಅರ್ಥ:
ದೇವ: ಭಗವಂತ; ಶಿಷ್ಯ: ವಿದ್ಯಾರ್ಥಿ; ಪರಿಭಾವಿಸು: ವಿಚಾರಮಾಡು; ಅರಿ: ತಿಳಿ; ಆಣೆ: ಪ್ರಮಾಣ; ಸುತ: ಮಗ; ಬಿಡು: ತೊರೆ; ವಧೆ: ಸಾವು; ಬಿಜಯಂಗೈ: ದಯಮಾಡಿಸು; ಮಂದಿರ: ಆಲಯ; ತಿರುಗು: ಹಿಂದಿರುಗು; ವಿಗಡ: ಶೌರ್ಯ, ಭಯಂಕರ; ಮುನಿ: ಋಷಿ; ಖೇದ: ದುಃಖ; ಕಲುಷಿತ: ಅಪವಿತ್ರವಾದ, ರೋಷಗೊಂಡ; ತಿಳುಹು: ತಿಳಿಸು, ಸಂತೈಸು;

ಪದವಿಂಗಡಣೆ:
ದೇವ +ನಿಮ್ಮಯ +ಶಿಷ್ಯನೇ +ಪರಿ
ಭಾವಿಸೆನು +ತಾನ್+ಅರಿದೆನಾದಡೆ
ದೇವಕೀಸುತನಾಣೆ +ಬಿಟ್ಟೆನು +ಸಂಜಯನ +ವಧೆಯ
ನೀವು +ಬಿಜಯಂಗೈವುದ್+ಎನೆ +ಬದ
ರಾವಳಿಮಂದಿರಕೆ+ ತಿರುಗಿದನ್
ಆ +ವಿಗಡಮುನಿ +ಖೇದ+ಕಲುಷಿತ+ ಸಂಜಯನ +ತಿಳುಹಿ

ಅಚ್ಚರಿ:
(೧) ವ್ಯಾಸರನ್ನು ಕರೆದ ಪರಿ – ವಿಗಡಮುನಿ, ದೇವ
(೨) ಸಂಜಯನ ಸ್ಥಿತಿಯನ್ನು ವಿವರಿಸುವ ಪರಿ – ಖೇದಕಲುಷಿತ
(೩) ದೇವ ಪದದ ಬಳಕೆ – ದೇವ, ದೇವಕೀಸುತ

ಪದ್ಯ ೬: ಸಂಜಯನ ಪ್ರಾಣವನ್ನು ಯಾರು ಕಾಪಾಡಿದರು?

ಸೆಳೆದಡಾಯ್ಧವ ಸಂಜಯನ ಹೆಡ
ತಲೆಗೆ ಹೂಡಿದನರಿವ ಸಮಯಕೆ
ಸುಳಿದನಗ್ಗದ ಬಾದರಾಯಣನವನ ಪುಣ್ಯದಲಿ
ಎಲೆಲೆ ಸಾತ್ಯಕಿ ಲೇಸುಮಾಡಿದೆ
ಖಳನೆ ಸಂಜಯನೆಮ್ಮ ಶಿಷ್ಯನ
ಕೊಲುವುದೇ ನೀನೆನುತ ಕೊಂಡನು ಕೊರಳಡಾಯುಧವ (ಗದಾ ಪರ್ವ, ೩ ಸಂಧಿ, ೬ ಪದ್ಯ)

ತಾತ್ಪರ್ಯ:
ಸಾತ್ಯಕಿಯು ಕತ್ತಿಯನ್ನೆಳೆದು, ಸಂಜಯನ ತಲೆಯ ಹಿಂಭಾಗಕ್ಕೆ ಹೊಡೆಯಲು ಸನ್ನದ್ಧನಾದನು. ಆದರೆ ಅದೇ ಸಮಯಕ್ಕೆ ವೇದವ್ಯಾಸರು ಅಲ್ಲಿಗೆ ಬಂದು, ಸಾತ್ಯಕಿ ಒಳ್ಳೆಯ ಕೆಲಸಕ್ಕೆ ಕೈಹಾಕಿದ್ದೀಯ, ಸಂಜಯನು ದುಷ್ಟನೇ? ಅವನು ನಮ್ಮ ಶಿಷ್ಯ, ನೀನು ಅವನನ್ನು ಕೊಲ್ಲಬಹುದೇ ಎಂದು ಕೇಳಿ ಅಡಾಯುಧವನ್ನು ತಪ್ಪಿಸಿದನು.

ಅರ್ಥ:
ಸೆಳೆ: ಜಗ್ಗು, ಎಳೆ; ಅಡಾಯ್ದ: ಅಡ್ಡ ಬಂದು; ಹೆಡತಲೆ: ಹಿಂದಲೆ; ಹೂಡು: ಕಟ್ಟು; ಅರಿ: ಸೀಳು; ಸಮಯ: ಕಾಲ; ಸುಳಿ: ಕಾಣಿಸಿಕೊಳ್ಳು; ಅಗ್ಗ: ಶ್ರೇಷ್ಠ; ಪುಣ್ಯ: ಸದಾಚಾರ; ಲೇಸು: ಒಳಿತು; ಖಳ: ದುಷ್ಟ; ಶಿಷ್ಯ: ವಿದ್ಯಾರ್ಥಿ; ಕೊಲು: ಸಾಯಿಸು; ಕೊಂಡು: ಪಡೆದು; ಕೊರಳು: ಗಂಟಲು; ಅಡಾಯುಧ: ಮೇಲಕ್ಕೆ ಬಾಗಿದ ಕತ್ತಿ;

ಪದವಿಂಗಡಣೆ:
ಸೆಳೆದ್+ಅಡಾಯ್ಧವ+ ಸಂಜಯನ+ ಹೆಡ
ತಲೆಗೆ +ಹೂಡಿದನ್+ಅರಿವ +ಸಮಯಕೆ
ಸುಳಿದನ್+ಅಗ್ಗದ +ಬಾದರಾಯಣನ್+ಅವನ+ ಪುಣ್ಯದಲಿ
ಎಲೆಲೆ +ಸಾತ್ಯಕಿ +ಲೇಸು+ಮಾಡಿದೆ
ಖಳನೆ +ಸಂಜಯನ್+ಎಮ್ಮ +ಶಿಷ್ಯನ
ಕೊಲುವುದೇ +ನೀನೆನುತ +ಕೊಂಡನು+ ಕೊರಳ್+ಅಡಾಯುಧವ

ಅಚ್ಚರಿ:
(೧) ತಲೆಯ ಹಿಂಭಾಗ ಎಂದು ಹೇಳಲು – ಹೆಡತಲೆ ಪದದ ಪ್ರಯೋಗ
(೨) ಸಂಜಯನನ್ನು ರಕ್ಷಿಸಿದ ಪರಿ – ಖಳನೆ ಸಂಜಯನೆಮ್ಮ ಶಿಷ್ಯನಕೊಲುವುದೇ

ಪದ್ಯ ೫: ಅರ್ಜುನನು ಯಾರ ಶಿಷ್ಯನೆಂದು ಬೇಡನಿಗೆ ಹೇಳಿದನು?

ಕಟಕಿಯೇಕೆ ಪುಳಿಂದ ನಾವು
ಬ್ಬಟೆಯ ತಪಸಿಗಳೆಂಬುದಿದು ಪರಿ
ಸ್ಫುಟವಲೇ ತಪ್ಪೇನು ನಿನ್ನೊಡನೆಂದು ಫಲವೇನು
ಜಟೆ ಮೃಗಾಜಿನ ಭಸ್ಮದೊಡನು
ತ್ಕಟದ ಧನುಶರ ಖಡ್ಗದಲಿ ಧೂ
ರ್ಜಟಿಯಿಹನು ನಾವವರ ಶಿಷ್ಯರು ಶಬರ ಕೇಳೆಂದ (ಅರಣ್ಯ ಪರ್ವ, ೭ ಸಂಧಿ, ೫ ಪದ್ಯ)

ತಾತ್ಪರ್ಯ:
ಎಲವೋ ಶಬರ ಕೇಳು, ಚುಚ್ಚುಮಾತುಗಳನ್ನೇಕೆ ನುಡಿಯುವೇ? ನಾನು ಉತ್ತಮ ತಪಸ್ವಿಯೆಂಬುದು ಅತಿ ಸ್ಪಷ್ಟವಾಗಿದೆಯಲ್ಲವೇ? ಜಟೆ, ಕೃಷ್ಣಾಜಿನ, ಭಸ್ಮಗಳೊಡನೆ ಬಿಲ್ಲು ಬಾಣ, ಖಡ್ಗಗಳನ್ನು ಧರಿಸಿದ ಶಿವನಿದ್ದಾನೆ, ನಾನು ಅವರ ಶಿಷ್ಯ ಎಂದು ಅರ್ಜುನನು ಹೇಳಿದನು.

ಅರ್ಥ:
ಕಟಕಿ:ವ್ಯಂಗ್ಯ, ಚುಚ್ಚು ಮಾತು; ಪುಳಿಂದ: ಬೇಡ; ಉಬ್ಬಟೆ: ಅತಿಶಯ, ಹಿರಿಮೆ; ತಪಸಿ: ಋಷಿ; ಸ್ಫುಟ: ಅರಳಿದುದು, ವಿಕಸಿತವಾದುದು; ತಪ್ಪು: ಸರಿಯಲ್ಲದ; ಒಡನೆ: ಜೊತೆ; ಫಲ: ಪ್ರಯೋಜನ; ಜಟೆ: ಕೂದಲು; ಮೃಗಾಜಿನ: ಜಿಂಕೆಯ ಚರ್ಮ; ಭಸ್ಮ: ವಿಭೂತಿ; ಉತ್ಕಟ: ಆಧಿಕ್ಯ, ಪ್ರಾಬಲ್ಯ; ಧನು: ಧನಸ್ಸು; ಶರ: ಬಾಣ; ಖಡ್ಗ: ಕತ್ತಿ; ಧೂರ್ಜಟಿ: ಶಿವ; ಶಿಷ್ಯ: ವಿದ್ಯಾರ್ಥಿ; ಶಬರ: ಬೇಟೆಗಾರ; ಕೇಳು: ಆಲಿಸು;

ಪದವಿಂಗಡಣೆ:
ಕಟಕಿಯೇಕೆ +ಪುಳಿಂದ +ನಾವ್
ಉಬ್ಬಟೆಯ +ತಪಸಿಗಳ್+ಎಂಬುದ್+ಇದು +ಪರಿ
ಸ್ಫುಟವಲೇ +ತಪ್ಪೇನು +ನಿನ್ನೊಡನೆಂದು +ಫಲವೇನು
ಜಟೆ +ಮೃಗಾಜಿನ +ಭಸ್ಮದೊಡನ್
ಉತ್ಕಟದ +ಧನುಶರ +ಖಡ್ಗದಲಿ +ಧೂ
ರ್ಜಟಿಯಿಹನು +ನಾವ್+ಅವರ +ಶಿಷ್ಯರು +ಶಬರ+ ಕೇಳೆಂದ

ಅಚ್ಚರಿ:
(೧) ಪುಳಿಂದ, ಶಬರ – ಸಮನಾರ್ಥಕ ಪದ
(೨) ಶಿವನನ್ನು ವರ್ಣಿಸುವ ಪರಿ – ಜಟೆ ಮೃಗಾಜಿನ ಭಸ್ಮದೊಡನುತ್ಕಟದ ಧನುಶರ ಖಡ್ಗದಲಿ ಧೂ
ರ್ಜಟಿಯಿಹನು

ಪದ್ಯ ೮೪: ಶಿಷ್ಯನ ಲಕ್ಷಣಗಳೇನು?

ಒಡಲೊಡವೆ ಮೊದಲಾದುವೆಲ್ಲವ
ಅಡೆಯದೊಪ್ಪಿಸಿ ಗುರುವಿನಂಘ್ರಿಯ
ಹಿಡಿದು ಭಜಿಸುತ ಕೊಟ್ಟ ಕೆಲಸಂಗಳೊಳನಿತುವನು
ಬಿಡದೆ ಮಾರುತ್ತರವನವರಿಗೆ
ಕೊಡದೆ ಭಯ ಭಕ್ತಿಯಲಿ ತಪ್ಪದೆ
ನಡೆಯ ಬಲ್ಲವನವನೆ ಶಿಷ್ಯನು ರಾಯ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೮೪ ಪದ್ಯ)

ತಾತ್ಪರ್ಯ:
ತನ್ನ ದೇಹ, ಐಶ್ವರ್ಯ ಮೊದಲಾದ ತನ್ನದೆಲ್ಲವನ್ನೂ ಗುರುವಿಗೆ ಒಪ್ಪಿಸಿ, ಅವನ ಪಾದಕಮಲಗಳನ್ನು ಹಿಡಿದು ಸೇವೆ ಮಾಡುತ್ತಾ ಅವನು ಕೊಟ್ಟ ಕೆಲಸಗಳೆಲ್ಲವನ್ನೂ ಎದುರುನುಡಿಯದೆ ಭಯ ಭಕ್ತಿಯಿಂದ ನಡೆಯಬಲ್ಲವನೇ ಶಿಷ್ಯ ಎಂದು ವಿದುರ ತಿಳಿಸಿದ್ದಾರೆ.

ಅರ್ಥ:
ಒಡಲು: ದೇಹ; ಒಡವೆ: ಆಭರಣ, ಐಶ್ವರ್ಯ; ಮೊದಲಾದು: ಮುಂತಾದ; ಎಲ್ಲ: ಸರ್ವ; ಅಡೆ: ಆಶ್ರಯ, ಭರ್ತಿ ಮಾಡು; ಒಪ್ಪಿಸು: ನೀಡು; ಗುರು: ಆಚಾರ್ಯ; ಅಂಘ್ರಿ: ಪಾದ; ಹಿಡಿ: ಬಂಧನ, ಗ್ರಹಿಸು; ಭಜಿಸು: ಆರಾಧಿಸು; ಕೊಟ್ಟ: ನೀಡಿದ; ಕೆಲಸ: ಕಾರ್ಯ; ಅನಿತು: ಅಷ್ಟು; ಬಿಡದೆ: ತೊರೆ, ತ್ಯಜಿಸು; ಮಾರು: ದೊಡ್ಡ; ಉತ್ತರ: ಪ್ರಶ್ನೆಗೆ ಕೊಡುವ ಮರುನುಡಿ, ಜವಾಬು; ಮಾರುತ್ತರ: ಎದುರುತ್ತರ; ಭಯ: ಹೆದರಿಕೆ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ತಪ್ಪದೆ: ಬಿಡದೆ; ನಡೆ: ಮುನ್ನಡೆಯುವ; ಬಲ್ಲವ: ತಿಳಿದವ; ಶಿಷ್ಯ: ವಿದ್ಯಾರ್ಥಿ; ರಾಯ: ರಾಜ;

ಪದವಿಂಗಡಣೆ:
ಒಡಳ್+ಒಡವೆ +ಮೊದಲಾದುವೆಲ್ಲವ
ಅಡೆಯದ್+ಒಪ್ಪಿಸಿ+ ಗುರುವಿನ್+ಅಂಘ್ರಿಯ
ಹಿಡಿದು +ಭಜಿಸುತ +ಕೊಟ್ಟ+ ಕೆಲಸಂಗಳೊಳ್+ಅನಿತುವನು
ಬಿಡದೆ +ಮಾರುತ್ತರವನ್+ಅವರಿಗೆ
ಕೊಡದೆ +ಭಯ+ ಭಕ್ತಿಯಲಿ +ತಪ್ಪದೆ
ನಡೆಯ +ಬಲ್ಲವನ್+ಅವನೆ +ಶಿಷ್ಯನು +ರಾಯ +ಕೇಳೆಂದ

ಅಚ್ಚರಿ:
(೧) ಶಿಷ್ಯನ ೫ ಲಕ್ಷಣಗಳನ್ನು ತಿಳಿಸುವ ಪದ್ಯ