ಪದ್ಯ ೨೨: ಧರ್ಮಜನು ಅರ್ಜುನನಿಗೆ ಏನು ಹೇಳಿದ?

ಅಸಮ ಪದ್ಮವ್ಯೂಹವನು ಭೇ
ದಿಸುವನಾವನನೆನಲು ಕೇಳಿದು
ಶಿಶುತನದಲಾಹವಕೆ ನಡೆದನು ನಾವು ಬೇಡೆನಲು
ಹೊಸ ಮದದ ವನದಂತಿ ಕದಳಿಯ
ಕುಸುರಿದರಿದಂದದಲಿ ಘನಪೌ
ರುಷವ ಮಾಡಿದನೆಂದನವನೀಪಾಲನನುಜಂಗೆ (ದ್ರೋಣ ಪರ್ವ, ೮ ಸಂಧಿ, ೨೨ ಪದ್ಯ)

ತಾತ್ಪರ್ಯ:
ಅಸಾಮಾನ್ಯವಾದ ಪದ್ಮವ್ಯೂಹವನ್ನು ದ್ರೋಣನು ರಚಿಸಲು, ಅದನ್ನು ಭೇದಿಸಲು ನಮ್ಮಲ್ಲಿ ಯಾರಿಗೂ ತಿಳಿಯದ ಸಮಯದಲ್ಲಿ ತಾನು ಭೇದಿಸುವೆನೆಂದು ನಾವು ಬೇಡವೆಂದರೂ ಹುಡುಗತನದಿಂದ ಯುದ್ಧಕ್ಕೆ ಹೋದನು. ಆಗ ತಾನೇ ಮದಧಾರೆಯಿಳಿದ ಕಾಡಾನೆಯು ಬಾಳೆಯ ತೋಟಕ್ಕೆ ನುಗ್ಗಿದಂತೆ ಶತ್ರು ಸೈನ್ಯವನ್ನು ಕೊಚ್ಚಿಕೊಚ್ಚಿಕೊಂಡು ಪೌರುಷವನ್ನು ಮೆರೆದನು.

ಅರ್ಥ:
ಅಸಮ: ಸಮವಲ್ಲದ; ಭೇದ: ಮುರಿ; ಕೇಳು: ಪ್ರಶ್ನಿಸು; ಶಿಶು: ಮಗು; ಆಹವ: ಯುದ್ಧ; ನಡೆ: ಚಲಿಸು; ಬೇಡ: ತ್ಯಜಿಸು; ಹೊಸ: ನವೀನ; ಮದ: ಅಹಂಕಾರ, ಗರ್ವ; ವನ: ಕಾಡು; ದಂತಿ: ಆನೆ; ಕದಳಿ: ಬಾಳೆ; ಕುಸುರಿ: ನಾಜೂಕಾದ ಕೆಲಸ; ಅರಿ: ಸೀಳು; ಘನ: ಶ್ರೇಷ್ಠ; ಪೌರುಷ: ಪರಾಕ್ರಮ; ಅವನೀಪಾಲ: ರಾಜ; ಅನುಜ: ತಮ್ಮ;

ಪದವಿಂಗಡಣೆ:
ಅಸಮ +ಪದ್ಮವ್ಯೂಹವನು +ಭೇ
ದಿಸುವನ್+ಆವನನ್+ಎನಲು+ ಕೇಳಿದು
ಶಿಶುತನದಲ್+ಆಹವಕೆ +ನಡೆದನು +ನಾವು +ಬೇಡೆನಲು
ಹೊಸ +ಮದದ +ವನದಂತಿ +ಕದಳಿಯ
ಕುಸುರಿದ್+ಅರಿದಂದದಲಿ+ ಘನ+ಪೌ
ರುಷವ +ಮಾಡಿದನ್+ಎಂದನ್+ಅವನೀಪಾಲನ್+ಅನುಜಂಗೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹೊಸ ಮದದ ವನದಂತಿ ಕದಳಿಯ ಕುಸುರಿದರಿದಂದದಲಿ

ಪದ್ಯ ೮: ಅಭಿಮನ್ಯುವು ಆರು ರಥಿಕರನ್ನು ಹೇಗೆ ಹಂಗಿಸಿದನು?

ಶಿಶುತನದ ಸಾಮರ್ಥ್ಯ ಸಾಕಿ
ನ್ನೆಸದಿರೆಲವೋ ಮರಳು ಮರಳೆಂ
ದಸಮಬಲರೈದಿದರು ಷಡುರಥರೊಂದು ಮುಖವಾಗಿ
ಎಸುಗೆ ನಿಮಗೆಂದಾಯ್ತು ನಿದ್ರೆಯ
ಮುಸುಕಿನಲಿ ಗೋಗ್ರಹಣದಲಿ ಜೀ
ವಿಸಿದ ಜಾಣರು ನೀವೆನುತ್ತಿದಿರಾದನಭಿಮನ್ಯು (ದ್ರೋಣ ಪರ್ವ, ೬ ಸಂಧಿ, ೮ ಪದ್ಯ)

ತಾತ್ಪರ್ಯ:
ಎಲೋ ಶಿಶುವೇ ನಿನ್ನ ಹುಡುಗತನದ ಸಾಮರ್ಥ್ಯ ಸಾಕು, ಇನ್ನು ಬಾಣಗಳನ್ನು ಬಿಡುವುದನ್ನು ನಿಲ್ಲಿಸು, ಹಿಂದಿರುಗು, ಎಂದು ಮೂದಲಿಸುತ್ತಾ ಆರು ಜನ ರಥಿಕರೂ ಅಭಿಮನ್ಯುವಿನ ಮೇಲೆ ಬಿದ್ದರು. ಅಭಿಮನ್ಯುವು ನಿಮಗೂ ಬಾಣ ಪ್ರಯೋಗ ಗೊತ್ತಿದೆಯೇ? ಗೋಗ್ರಹಣದಲ್ಲಿ ಸಮ್ಮೋಹನಾಸ್ತ್ರದ ನಿದ್ದೆಯಿಂದ ಮಲಗಿ ಪ್ರಾಣವುಳಿಸಿಕೊಂಡ ಜಾಣರು ನೀವಲ್ಲವೇ ಎನ್ನುತ್ತಾ ಆವರಿಗಿದಿರಾದನು.

ಅರ್ಥ:
ಶಿಶು: ಬಾಲಕ; ಸಾಮರ್ಥ್ಯ: ಶಕ್ತಿ; ಸಾಕು: ನಿಲ್ಲು; ಎಸು: ಬಾಣ ಪ್ರಯೋಗ ಮಾಡು; ಮರಳು: ಹಿಂದಕ್ಕೆ ಬರು, ಹಿಂತಿರುಗು; ಅಸಮ: ಸಮವಲ್ಲದ; ಐದು: ಬಂದು ಸೇರು; ಷಡುರಥ: ಆರು ರಥ; ಮುಖ: ಆನನ; ನಿದ್ರೆ: ಶಯನ; ಮುಸುಕು: ಹೊದಿಕೆ; ಯೋನಿ; ಗೋಗ್ರಹಣ: ಗೋವುಗಳನ್ನು ಸೆರೆಹಿಡಿಯುವುದು; ಜೀವಿಸು: ಬದುಕು; ಜಾಣ: ಬುದ್ಧಿವಂತ; ಇದಿರು: ಎದುರು;

ಪದವಿಂಗಡಣೆ:
ಶಿಶುತನದ +ಸಾಮರ್ಥ್ಯ +ಸಾಕಿನ್
ಎಸದಿರ್+ಎಲವೋ +ಮರಳು +ಮರಳೆಂದ್
ಅಸಮ+ಬಲರ್+ಐದಿದರು +ಷಡುರಥರೊಂದು +ಮುಖವಾಗಿ
ಎಸುಗೆ +ನಿಮಗೆಂದಾಯ್ತು +ನಿದ್ರೆಯ
ಮುಸುಕಿನಲಿ +ಗೋಗ್ರಹಣದಲಿ+ ಜೀ
ವಿಸಿದ +ಜಾಣರು +ನೀವೆನುತ್+ಇದಿರಾದನ್+ಅಭಿಮನ್ಯು

ಅಚ್ಚರಿ:
(೧) ಅಭಿಮನ್ಯುವು ಹಂಗಿಸುವ ಪರಿ – ನಿದ್ರೆಯಮುಸುಕಿನಲಿ ಗೋಗ್ರಹಣದಲಿ ಜೀವಿಸಿದ ಜಾಣರು

ಪದ್ಯ ೨೩: ಭೀಷ್ಮರಿಗೆ ಕೃಷ್ಣನು ಏನು ಹೇಳಿದನು?

ಮನ್ನಿಸುವಡೀ ಉಭಯರಾಯರು
ನಿನ್ನ ಮೊಮ್ಮಂದಿರುಗಳದರೊಳು
ನಿನ್ನ ಕುಣಿಕೆಯೊಳಿಹುದು ಕುಂತೀಸುತರ ಜೀವನವು
ನಿನ್ನನೇ ನಂಬಿಹರು ನೀನೇ
ಮುನ್ನ ಶಿಶುತನದಲ್ಲಿ ಸಲಹಿದೆ
ಮನ್ನಣೆಯ ನೀ ಬಲ್ಲೆಯೆಂದನು ದಾನವಧ್ವಂಸಿ (ಭೀಷ್ಮ ಪರ್ವ, ೭ ಸಂಧಿ, ೨೩ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಮಾತನಾಡುತ್ತಾ, ಕೌರವ ಪಾಂಡವರಿಬ್ಬರೂ ನಿನ್ನ ಮೊಮ್ಮಕ್ಕಳು. ಇವರಲ್ಲಿ ಪಾಂಡವರ ಜೀವನ ನಿನ್ನ ಕುಣಿಕೆಯಲ್ಲಿದೆ. ಅವರು ನಿನ್ನನ್ನೇ ನಂಬಿದ್ದಾರೆ, ಬಾಲ್ಯದಲ್ಲಿ ನೀನೇ ಅವರನ್ನು ಬೆಳೆಸಿದೆ, ಅವರನ್ನು ಹೇಗೆ ನಡೆಸಿಕೊಳ್ಳಬೇಕೆಂಬುದನ್ನು ನೀನೇ ಬಲ್ಲೆ, ಎಂದು ಭೀಷ್ಮನಿಗೆ ಕೃಷ್ಣನು ಹೇಳಿದನು.

ಅರ್ಥ:
ಮನ್ನಿಸು: ಗೌರವಿಸು; ಉಭಯ: ಎರಡು; ರಾಯ: ರಾಜ; ಮೊಮ್ಮಂದಿರು: ಮೊಮ್ಮಕ್ಕಳು; ಕುಣಿಕೆ: ಕೊನೆ, ತುದಿ; ಸುತ: ಮಕ್ಕಳು; ಜೀವನ: ಬದುಕು; ನಂಬು: ವಿಶ್ವಾಸವಿಡು; ಮುನ್ನ; ಮೊದಲು; ಶಿಶು: ಮಗು; ಸಲಹು: ಪೋಷಿಸು, ರಕ್ಷಿಸು; ಮನ್ನಣೆ: ಮರ್ಯಾದೆ; ಬಲ್ಲೆ: ತಿಳಿ; ದಾನವ: ರಾಕ್ಷಸ; ಧ್ವಂಸಿ: ಸಂಹಾರ ಮಾಡುವವ;

ಪದವಿಂಗಡಣೆ:
ಮನ್ನಿಸುವಡ್+ಈ+ ಉಭಯ+ರಾಯರು
ನಿನ್ನ +ಮೊಮ್ಮಂದಿರುಗಳ್+ಅದರೊಳು
ನಿನ್ನ +ಕುಣಿಕೆಯೊಳ್+ಇಹುದು+ ಕುಂತೀಸುತರ +ಜೀವನವು
ನಿನ್ನನೇ +ನಂಬಿಹರು +ನೀನೇ
ಮುನ್ನ +ಶಿಶುತನದಲ್ಲಿ+ ಸಲಹಿದೆ
ಮನ್ನಣೆಯ +ನೀ +ಬಲ್ಲೆಯೆಂದನು +ದಾನವ+ಧ್ವಂಸಿ

ಅಚ್ಚರಿ:
(೧) ಭೀಷ್ಮರನ್ನು ಭಾವನಾತ್ಮಕವಾಗಿ ಮರುಕಗೊಳಿಸುವ ಪರಿ – ನಿನ್ನ ಮೊಮ್ಮಂದಿರು, ನಿನ್ನ ಕುಣಿಕೆಯೊಳಿಹುದು ಕುಂತೀಸುತರ ಜೀವನವು, ನಿನ್ನನೇ ನಂಬಿಹರು, ನೀನೇ ಮುನ್ನ ಶಿಶುತನದಲ್ಲಿ ಸಲಹಿದೆ