ಪದ್ಯ ೫೦: ಅರ್ಜುನನು ಹೇಗೆ ಮಾಯಾಜಾಲವನ್ನು ಭೇದಿಸಿದನು?

ಘೋರತರವದು ಬಳಿಕ ದುಷ್ಪ್ರತಿ
ಕಾರವಿತರರಿಗಿಂದು ಮೌಳಿಯ
ಸಾರತರ ಕೃಪೆಯಾಯ್ತಲೇ ಸರಹಸ್ಯಸಾಂಗದಲಿ
ಬಾರಿಸಿದುದಾವಂಗದಲಿ ಮಾ
ಯಾರಚನೆಯಾ ವಿವಿಧ ವಿವರಣ
ದಾರುಭಟೆಯಲಿ ಸೀಳಿ ಬಿಸುಟೆನು ಶಿಲ್ಪದಲಿ ಖಳರ (ಅರಣ್ಯ ಪರ್ವ, ೧೩ ಸಂಧಿ, ೫೦ ಪದ್ಯ)

ತಾತ್ಪರ್ಯ:
ಅದು ಘೋರತರವಾದ ಮಾಯೆ. ಇತರರಿಗೆ ಅದರ ಪ್ರತೀಕಾರ ತಿಳಿಯದು. ಶಿವನ ಮಹಾ ಕೃಪೆಯಿಂದ ನನಗೆ ಅದರ ರಹಸ್ಯವು ಸಂಪೂರ್ಣವಾಗಿ ತಿಳಿಯಿತು. ರಾಕ್ಷಸರು ಯಾವ ರೀತಿಯಿಂದ ಹೇಗೆ ಮಾಯೆಯನ್ನು ಮಾಡಿದ್ದರೋ, ಅದರ ವಿವರವನ್ನು ಭೇದಿಸಿ ಅವರ ಮಾಯಾ ಶಿಲ್ಪವನ್ನು ಸೀಳಿ ಹಾಕಿದೆನು.

ಅರ್ಥ:
ಘೋರ: ಉಗ್ರವಾದುದು; ಬಳಿಕ: ನಂತರ; ಪ್ರತಿಕಾರ: ಮಾಡಿದು ದಕ್ಕೆ ಪ್ರತಿಯಾಗಿ ಮಾಡುವುದು; ಇಂದುಮೌಳಿ: ಶಿವ; ಸಾರ: ಶ್ರೇಷ್ಠ, ತಿರುಳು; ಕೃಪೆ: ಕರುಣೆ; ರಹಸ್ಯ: ಗುಟ್ಟು; ಸಾಂಗ: ಸಮಗ್ರತೆ; ಬಾರಿಸು: ನಿವಾರಿಸು, ಹೊಡೆ; ಅಂಗ: ಶರೀರದ ಭಾಗ; ಮಾಯ: ಇಂದ್ರಜಾಲ; ರಚನೆ: ನಿರ್ಮಾಣ; ವಿವಿಧ: ಹಲವಾರು; ವಿವರಣ:ವರ್ಣಿಸುವುದು; ಆರುಭಟೆ: ಜೋರಾಗಿ ಕೂಗು; ಸೀಳು: ಕಡಿ; ಬಿಸುಟು: ಹೊರಹಾಕು; ಶಿಲ್ಪ: ಕುಶಲ ವಿದ್ಯೆ; ಖಳ: ದುಷ್ಟ;

ಪದವಿಂಗಡಣೆ:
ಘೋರತರವದು +ಬಳಿಕ +ದುಷ್ಪ್ರತಿ
ಕಾರವ್+ಇತರರಿಗ್+ಇಂದುಮೌಳಿಯ
ಸಾರತರ +ಕೃಪೆಯಾಯ್ತಲೇ +ಸರಹಸ್ಯ+ಸಾಂಗದಲಿ
ಬಾರಿಸಿದುದಾವ್+ಅಂಗದಲಿ +ಮಾ
ಯಾ+ರಚನೆ+ಆ +ವಿವಿಧ+ ವಿವರಣದ್
ಆರುಭಟೆಯಲಿ +ಸೀಳಿ +ಬಿಸುಟೆನು+ ಶಿಲ್ಪದಲಿ +ಖಳರ

ಅಚ್ಚರಿ:
(೧) ಶಿವನ ಕೃಪೆಯ ಬಗ್ಗೆ ತಿಳಿಸುವ ಪರಿ – ಇಂದುಮೌಳಿಯ ಸಾರತರ ಕೃಪೆಯಾಯ್ತಲೇ ಸರಹಸ್ಯಸಾಂಗದಲಿ

ಪದ್ಯ ೧೩: ಪಾಂಡವರ ಸಭಾಮಂಟಪವನ್ನು ಯಾರು ರಚಿಸಿದರು?

ಮುರಹರನ ನೇಮದಲಿ ಮಯ ವಿ
ಸ್ತರಿಸಿದನು ಪದಿನಾಲ್ಕು ತಿಂಗಳು
ವರ ಸಭಾಮಂಟಪವನನಿಬರಿಗವ ಕೃತಜ್ಞನಲೆ
ಕಿರಣಲಹರಿಯ ವಿವಿಧ ರತ್ನೋ
ತ್ಕರದ ರಚನಾಶಿಲ್ಪವಿದು ದೇ
ವರಿಗಸಾಧ್ಯವು ಶಿವ ಶಿವಾಯೆನೆ ಮೆರೆದುದಾಸ್ಥಾನ (ಸಭಾಪರ್ವ, ೧ ಸಂಧಿ, ೧೩ ಪದ್ಯ)

ತಾತ್ಪರ್ಯ:
ಕೃಷ್ಣನ ನಿಯಮದಂತೆ ಖಾಂಡವವ ವನದ ದಹನದಲ್ಲಿ ಉಳಿದ ಮಯನು ಪಾಂಡವರಿಗಾಗಿ ಹದಿನಾಲ್ಕು ತಿಂಗಳಲ್ಲಿ ಒಂದು ಭವ್ಯವಾದ ಆಸ್ಥಾನ ಮಂಟಪವನ್ನು ನಿರ್ಮಿಸಿದನು. ವಿವಿಧ ರತ್ನಗಳ ಕಿರಣ ಸಮೂಹದಿಂದ ಹೊಳೆಯುತ್ತಿದ್ದ ಆ ಮಂಟಪವು ದೇವತೆಗಳಿಂದಲೂ ರಚಿಸಲಸಾಧ್ಯ ಎಂಬಂತಿತ್ತು.

ಅರ್ಥ:
ಮುರಹರ: ಕೃಷ್ಣ; ನೇಮ: ನಿಯಮ; ವಿಸ್ತರ: ವ್ಯಾಪ್ತಿ; ಪದಿನಾಲ್ಕು: ಹದಿನಾಲ್ಕು; ತಿಂಗಳು: ಮಾಸ; ವರ: ಶ್ರೇಷ್ಠ; ಮಂಟಪ: ಸಭಾಸ್ಥಾನ; ಅನಿಬರು: ಎಲ್ಲರು; ಕೃತಜ್ಞ:ಉಪಕಾರ ನೆನೆಯುವುದು; ಕಿರಣ:ಕಾಂತಿ; ಲಹರಿ: ಮನಸ್ಸಿನ ಒಲವು, ತೆರೆ; ವಿವಿಧ: ಹಲವಾರು; ರತ್ನ: ಮಾಣಿಕ್ಯ; ಉತ್ಕರ: ಸಮೂಹ; ರಚನ:ಮಾಡು, ಕ್ರಿಯೆ; ಶಿಲ್ಪ: ಲಲಿತಕಲೆ, ಕುಶಲವಿದ್ಯೆ; ದೇವರು: ಭಗವಂತ; ಅಸಾಧ್ಯ: ಮಾಡಲಾಗದ ಕಾರ್ಯ; ಮೆರೆ: ವಿಜೃಂಭಿಸು; ಆಸ್ಥಾನ: ದರ್ಬಾರು;

ಪದವಿಂಗಡಣೆ:
ಮುರಹರನ +ನೇಮದಲಿ +ಮಯ +ವಿ
ಸ್ತರಿಸಿದನು +ಪದಿನಾಲ್ಕು +ತಿಂಗಳು
ವರ+ ಸಭಾಮಂಟಪವನ್+ಅನಿಬರಿಗ್+ಅವ+ ಕೃತಜ್ಞನಲೆ
ಕಿರಣ+ಲಹರಿಯ +ವಿವಿಧ +ರತ್ನೋ
ತ್ಕರದ +ರಚನಾಶಿಲ್ಪವಿದು +ದೇ
ವರಿಗ್+ಅಸಾಧ್ಯವು +ಶಿವ +ಶಿವಾಯೆನೆ+ ಮೆರೆದುದಾಸ್ಥಾನ

ಅಚರಿ:
(೧) ಮಂಟಪದ ಸೌಂದರ್ಯದ ವರ್ಣನೆ: ಕಿರಣಲಹರಿಯ ವಿವಿಧ ರತ್ನೋತ್ಕರದ ರಚನಾಶಿಲ್ಪವಿದು, ದೇವರಿಗಸಾಧ್ಯವು